More

    ಆಗುಂಬೆ, ಕುದುರೆಮುಖ ಅರಣ್ಯದಲ್ಲಿ ಡ್ರೋನ್ ನಿಷೇಧ

    ಅವಿನ್ ಶೆಟ್ಟಿ ಉಡುಪಿ

    ಅತ್ಯಮೂಲ್ಯ ಸಸ್ಯ ಸಂಪತ್ತು, ವನ್ಯಜೀವಿಗಳ ತಾಣವಾಗಿರುವ ಪಶ್ಚಿಮಘಟ್ಟ ವ್ಯಾಪ್ತಿ ಆಗುಂಬೆ ಘಾಟಿ, ಅರಣ್ಯ ಪ್ರದೇಶ ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಡ್ರೋನ್ ಕ್ಯಾಮರಾಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ. ಡ್ರೋನ್ ಪರಿಕರಗಳನ್ನು ಬಳಸಿಕೊಂಡು ಚಿತ್ರೀಕರಣ ನಡೆಸಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಕುದುರೆಮುಖ ವನ್ಯಜೀವಿ ವಿಭಾಗ ಎಚ್ಚರಿಕೆ ನೀಡಿದೆ.

    ಪ್ರವಾಸೋದ್ಯಮ ಚಟುವಟಿಕೆ ಪ್ರೋತ್ಸಾಹ, ಫೋಟೋಗ್ರಫಿ ಡ್ರೋನ್ ಹೊಂದಿರುವ ಯುವಕರು ಮೋಜು ಮಾಡುವ ಉದ್ದೇಶದಿಂದ ಆಗುಂಬೆ ಸೇರಿದಂತೆ ಹಲವೆಡೆ ಡ್ರೋನ್ ಕ್ಯಾಮೆರಗಳನ್ನು ಬಳಸಿ ಚಿತ್ರೀಕರಿಸಿ, ಡಿಜೆ ಹಿನ್ನೆಲೆ ಸಂಗೀತ ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದರು. ಇತ್ತೀಚೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಕೆಲವು ವಿಡಿಯೋಗಳನ್ನು ನೋಡಿದ ಪರಿಸರಪ್ರೇಮಿಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಕ್ರೀನ್‌ಶಾಟ್ ಪಡೆದು ತನಿಖೆ ನಡೆಸಿದ ಇಲಾಖೆ ಅಧಿಕಾರಿಗಳು ಇದು ಎರಡು ವರ್ಷದ ಹಿಂದಿನ ಹಳೆಯ ವಿಡಿಯೋ ಆಗಿದ್ದು, ಎಚ್ಚರಿಕೆ ಕೊಡಲಾಗಿದೆ. ಮುಂದೆ ಈ ರೀತಿ ಮರುಕಳಿಸಿದ್ದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ವನ್ಯಜೀವಿ ತಜ್ಞರು, ಆಸಕ್ತರು, ವನ್ಯಜೀವಿ ಫೋಟೊಗ್ರಫಿ ಮಾಡುವರು ಪ್ರಾಣಿ, ಪಕ್ಷಿಗಳು, ಪಶ್ಚಿಮಘಟ್ಟ ಅರಣ್ಯದ ಬಗ್ಗೆ ಕಾಡಿನ ಒಳಗೆ ಸಾಕ್ಷೃಚಿತ್ರ ಮಾಡುವ ಉದ್ದೇಶ ಹೊಂದಿದ್ದಲ್ಲಿ ಡ್ರೋನ್ ಕ್ಯಾಮರಾ ಮತ್ತು ಫೋಟೊಗ್ರಫಿಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕುದುರೆಮುಖ ವನ್ಯಜೀವಿ ವಿಭಾಗದ ಮುಖ್ಯಸ್ಥರಿಂದ ಅನುಮತಿ ಪಡೆಯಬೇಕು. ಯಾವುದೇ ಸ್ಥಳದಲ್ಲಿ ಡ್ರೋನ್ ಬಳಕೆಗೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಶನ್ (ಡಿಜಿಸಿಎ) ಅನುಮತಿ ಪಡೆಯುವುದು ಕಡ್ಡಾಯ. ಅದರಂತೆ ಅರಣ್ಯ ವ್ಯಾಪ್ತಿಗೂ ಈ ನಿಯಮ ಅನ್ವಯ ಎಂದು ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ವಾರಾಂತ್ಯ ವಿಶೇಷ ಕಾರ್ಯಚರಣೆ
    ಆಗುಂಬೆ ಘಾಟಿ ಸೇರಿದಂತೆ ಇನ್ನಿತರೆ ವನ್ಯಜೀವಿಗಳ ತಾಣದಲ್ಲಿ ರಸ್ತೆ ಬದಿ ವನ್ಯಜೀವಿಗಳಿಗೆ ಆಹಾರ ನೀಡುವ ಕ್ರಮವನ್ನು ತಪ್ಪಿಸುವ ಸಲುವಾಗಿ ಪ್ರತಿ ಶನಿವಾರ, ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಡಿಸಿಎಫ್ ರುದ್ರನ್ ತಿಳಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಮಾಹಿತಿ ಫಲಕವನ್ನು ಅಳವಡಿಸಲಾಗಿದೆ. ವಾರಂತ್ಯಗಳಲ್ಲಿ ಪ್ರವಾಸೀಗರ ಸಂಖ್ಯೆ ಹೆಚ್ಚಿರುವುದರಿಂದ ಕಾರ್ಯಚರಣೆ ಕೈಗೊಂಡಿದ್ದು, ಪ್ರಾಣಿಗಳಿಗೆ ಆಹಾರ ನೀಡುವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ವನ್ಯಜೀವಿ ಆಸ್ಪತ್ರೆ ಪ್ರಸ್ತಾಪ ಸದ್ಯಕ್ಕಿಲ್ಲ
    ಕುದುರೆಮುಖ-ಆಗುಂಬೆ ಭಾಗದಲ್ಲಿ ವನ್ಯಜೀವಿ ಆಸ್ಪತ್ರೆ ಪ್ರಸ್ತಾಪ ಸದ್ಯಕ್ಕಿಲ್ಲ. ಜತೆಗೆ ಇದರ ಅಗತ್ಯವು ಇಲ್ಲ ಎಂದು ವನ್ಯಜೀವಿ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಪ್ರಾಣಿಗಳು ಅಪಘಾತ ಸಂಭವಿಸಿ ಗಾಯಾಳುಗಳಾಗುವ ಪ್ರಕರಣ ತೀರ ಕಡಿಮೆ ಇದೆ ಎಂದು ತಿಳಿಸಿದ್ದಾರೆ.

    ವನ್ಯಜೀವಿ, ಪರಿಸರ ಸೂಕ್ಷ್ಮ ಪರಿಸರದಲ್ಲಿ ಅನುಮತಿ ಇಲ್ಲದೆ ಡ್ರೋನ್ ಬಳಸುವಂತಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿದ್ದ ವೀಡಿಯೋಗಳನ್ನು ಪರಿಶೀಲಿಸಿ, ತನಿಖೆ ನಡೆಸಲು ಸೂಚನೆ ನೀಡಲಾಗಿದ್ದು, ಇದು ಹಳೆಯ ವಿಡಿಯೋಗಳೆಂದು ತಿಳಿದು ಬಂದಿದೆ. ಕಾಡಿನೊಳಗೆ ಫೋಟೋಗ್ರಫಿ ಬಳಕೆಗೆ ಅನುಮತಿ ಕಡ್ಡಾಯವಾಗಿದ್ದು, ಡ್ರೋನ್ ಬಳಕೆಗೆ ಡಿಜಿಸಿಎ ಅನುಮತಿ ಇದ್ದರೆ ಮಾತ್ರ ಪರಿಶೀಲಿಸಲಾಗುತ್ತದೆ.
    ರುದ್ರನ್, ಡಿಸಿಎಫ್, ಕುದುರೆಮುಖ ವನ್ಯಜೀವಿ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts