More

    ಬೇಬಿ ಬೆಟ್ಟದಲ್ಲಿ ದನಗಳ ಜಾತ್ರೆಗೆ ಚಾಲನೆ

    ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಐತಿಹಾಸಿಕ, ಪುರಾಣ ಪ್ರಸಿದ್ಧ ಭಾರಿ ದನಗಳ ಜಾತ್ರೆಗೆ ಶುಕ್ರವಾರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು.

    ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶಿವರಾತ್ರಿ ದಿನದಂದು ವಿವಿಧ ಇಲಾಖೆಗಳ ವಸ್ತುಪ್ರದರ್ಶನವನ್ನೂ ಉದ್ಘಾಟಿಸಲಾಯಿತು.

    ತಾಲೂಕಿನ ಬೇಬಿ ಬೆಟ್ಟದ ಜಾತ್ರಾ ಮಾಳದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಮೃತಮಹಲ್ ಕಾವಲ್ ಪ್ರದೇಶದಲ್ಲಿ ಪ್ರಾರಂಭಿಸಿದ ಬೇಬಿ ಬೆಟ್ಟದ ಜಾತ್ರೆ ಅಂದಿನಿಂದ ಇಂದಿನವರೆಗೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ.

    ಹಳೇ ಮೈಸೂರು ಪ್ರಾಂತ್ಯದಲ್ಲಿ ಬೇಬಿ ಬೆಟ್ಟದ ದನಗಳ ಜಾತ್ರೆ ಸಾಕಷ್ಟು ಪ್ರಸಿದ್ಧಿಯಾಗಿದ್ದು, ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ರೈತರು ರಾಸುಗಳನ್ನು ಪ್ರದರ್ಶನ ಮಾಡುವುದರ ಜತೆಗೆ ಮಾರಾಟ ಮಾಡುತ್ತಾರೆ. ಜಾತ್ರೆಯಲ್ಲಿ ಬಹುಪಾಲು ದೇಸಿ ಹಸುಗಳ ಮಾರಾಟ ಮತ್ತು ಪ್ರದರ್ಶನ ಇರಲಿದೆ. ಅಕ್ಕರೆಯಿಂದ ಸಾಕಿದ ರಾಸುಗಳನ್ನು ಕೆಲವರು ಪ್ರದರ್ಶನ ಮತ್ತು ಬಹುಮಾನಕ್ಕಾಗಿ ಮಾತ್ರ ಸೀಮಿತಗೊಳಿಸಿದರೆ, ಕೆಲ ರೈತರು ಮಾರಾಟ ಮಾಡುವ ಮಾಡುತ್ತಾರೆ.

    ಜಾತ್ರೆಯಲ್ಲಿ ಒಂದು ಜೋಡಿ ಎತ್ತು 50,00 ದಿಂದ 8 ಲಕ್ಷ ರೂ.ವರೆಗೂ ಮಾರಾಟವಾಗುತ್ತದೆ. ಹಾಲು ಹಲ್ಲಿನ ಜೋಡಿ ಕರು, ಎರಡು ಹಲ್ಲಿನ ಜೋಡಿ ಎತ್ತುಗಳು, ನಾಲ್ಕು ಹಲ್ಲಿನ ಜೋಡಿ ಎತ್ತು, ಆರು ಹಲ್ಲಿನ ಜೋಡಿ ಎತ್ತು, ಬಾಯಿಗೂಡಿದ ಜೋಡಿ ಎತ್ತು, ಹಾಲು ಹಲ್ಲಿನ ಜೋಡಿ ಕಡಸು, ಎರಡು, ನಾಲ್ಕು, ಆರು ಹಲ್ಲಿನ ಜೋಡಿ ಕಡಸು, ಹಾಲು ಹಲ್ಲಿನ ಬೀಜದ ಹೋರಿ ಹಾಗೂ ಎರಡು, ನಾಲ್ಕು ಮತ್ತು ಆರು ಹಲ್ಲಿನ ಬೀಜದ ಹೋರಿ… ಹೀಗೆ ಹಲವು ರೀತಿಯ ರಾಸುಗಳು ಕಾಣಸಿಗುತ್ತವೆ.

    ಶೃಂಗಾರಗೊಂಡಿರುವ ಬೇಬಿ ಬೆಟ್ಟ: ಜಾತ್ರೆ ಹಿನ್ನೆಲೆಯಲ್ಲಿ ಬೇಬಿ ಬೆಟ್ಟದ ಕ್ಷೇತ್ರ ದೇವತೆಗಳಾದ ಮಲೆ ಮಹದೇಶ್ವರ, ಸಿದ್ದೇಶ್ವರ ದೇವಸ್ಥಾನ, ಮಂಟಪ, ಬೆಟ್ಟದ ಮೆಟ್ಟಿಲುಗಳು, ಮಠಕ್ಕೆ ಸುಣ್ಣ-ಬಣ್ಣ ಬಳಿಯಲಾಗಿದೆ. ಜಾತ್ರಾ ಮಾಳವನ್ನು ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗಿದ್ದು, ತಳಿರು-ತೋರಣದೊಂದಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

    ಮೂಲಸೌಕರ್ಯ ವ್ಯವಸ್ಥೆ: ಜಾತ್ರೆಗೆ ಆಗಮಿಸುವವರಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ದಾಸೋಹ ವ್ಯವಸ್ಥೆಯನ್ನು ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಮಾಡಿದ್ದಾರೆ. ಉಳಿದಂತೆ ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ 8 ಟ್ಯಾಂಕರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ವಿದ್ಯುತ್ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಲಾಗಿದ್ದು, ಸಂಚಾರಕ್ಕೆ ತೊಂದರೆಯಾಗದಂತೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳಿಗೆ ಡಾಂಬರೀಕರಣ ಹಾಗೂ ಹಳ್ಳ ಮುಚ್ಚುವ ಕೆಲಸ ಮಾಡಲಾಗಿದೆ. ಜಾತ್ರೆಗೆ ಆಗಮಿಸುವ ಮಹಿಳೆಯರು, ಮಕ್ಕಳಿಗೆ ತೊಂದರೆಯಾಗದಂತೆ ತಾತ್ಕಾಲಿಕ ಶೌಚಗೃಹಗಳನ್ನೂ ನಿರ್ಮಿಸಲಾಗಿದೆ.

    ಜಾತ್ರೆಯ ಯಶಸ್ಸಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೆಚ್ಚಿನ ಕಾಳಜಿ ತೋರಿದ್ದು, ಜಾತ್ರಾ ವ್ಯಾಪ್ತಿಗೆ ಬರುವ ಎಂಟು ಗ್ರಾಪಂ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಇದರೊಂದಿಗೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದ್ದು, ಜಾತ್ರೆಯಲ್ಲಿ ಯಾವುದೇ ಲೋಪದೋಷವಾಗದಂತೆ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸಲಹೆ ನೀಡಲಾಗಿದೆ. ಉಚಿತ ಸಾಮೂಹಿಕ ಸರಳ ವಿವಾಹ ದಿನದಂದು 10 ಸಾವಿರ ಜನರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts