More

    ಕೈಕೊಟ್ಟ ಕುಡಿವ ನೀರು ಯೋಜನೆ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಇಲ್ಲಿನ ಪುರಸಭಾ ವ್ಯಾಪ್ತಿಯ ಜನರಿಗೆ ದಿನದ 24 ಗಂಟೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಸುವ ಉದ್ದೇಶವನ್ನಿಟ್ಟುಕೊಂಡು ಅನುಷ್ಠಾನಗೊಂಡಿರುವ ಸಮಗ್ರ ಕುಡಿಯುವ ನೀರಿನ ಯೋಜನೆ ಎರಡೇ ವರ್ಷಕ್ಕೆ ಕೈಕೊಟ್ಟಿದೆ. ಬಂಟ್ವಾಳ ಪುರಸಭೆಗೆ ಹಸ್ತಾಂತರಗೊಳ್ಳುವ ಮೊದಲೇ ಬರೊಬ್ಬರಿ 53 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಯೋಜನೆಯ ಕಳಪೆ ಕಾಮಗಾರಿ ಚಿತ್ರಣಗಳು ಅನಾವರಣಗೊಂಡಿವೆ.

    ಬಂಟ್ವಾಳ ಪುರಸಭೆಯ ಬಹುಭಾಗ ನೇತ್ರಾವತಿ ನದಿ ತೀರದಲ್ಲೇ ಇದ್ದರೂ ಕುಡಿಯುವ ನೀರಿನ ಸಮಸ್ಯೆ ಇಲ್ಲಿನ ಜನತೆಯನ್ನು ಹಲವು ವರ್ಷಗಳಿಂದ ಕಾಡುತ್ತಲೇ ಇದೆ. ಇದಕ್ಕೆ ಪರಿಹಾರಾರ್ಥವಾಗಿ ನೇತ್ರಾವತಿ ನದಿ ನೀರನ್ನು ಬಳಸಿಕೊಂಡು, ಮುಂದಿನ 30 ವರ್ಷದ ಅವಧಿಯ ಜನಸಂಖ್ಯೆಯ ಅನುಗುಣವಾಗಿ ಶಾಶ್ವತ ನೀರಾವರಿ ಒದಗಿಸುವ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2017ರ ಅಕ್ಟೋಬರ್ ತಿಂಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಆದರೆ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತುಕೊಂಡಿರುವ ಕ.ನ.ನೀ.ಸ. ಮತ್ತು ಒ.ಮಂ.ಯ ನಿರ್ಲಕ್ಷೃ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಎರಡೇ ವರ್ಷದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಂಡಿವೆ. ಹಲವಾರು ಲೋಪ ದೋಷಗಳಿರುವ ಯೋಜನೆಯನ್ನು ಬಂಟ್ವಾಳ ಪುರಸಭೆಗೆ ಹಸ್ತಾಂತರಿಸುವ ತವಕದಲ್ಲಿದೆ ಒಳಚರಂಡಿ ಮಂಡಳಿ.
    *ನ್ಯೂನ್ಯತೆಗಳ ಸರಮಾಲೆ: ಸಮಗ್ರ ಕುಡಿಯುವ ನೀರಿನ ಯೋಜನೆಯಲ್ಲಿ ಆರಂಭದ ಹಂತದಲ್ಲೇ ಸಾಕಷ್ಟು ನ್ಯೂನ್ಯತೆಗಳು ಗೋಚರಿಸಿದ್ದು, ಅಸಮರ್ಪಕ ಕಾಮಗಾರಿಗಳನ್ನು ನಡೆಸಿರುವುದು ಎದ್ದು ಕಾಣುತ್ತಿದೆ. ನದಿ ಕಿನಾರೆ ಬಳಿಯ ಜ್ಯಾಕ್‌ವೆಲ್‌ನ ಫ್ಲೋ ಮೀಟರ್ ಕನೆಕ್ಷನ್ ಆಗಿಲ್ಲ. ಜಕ್ರಿಬೆಟ್ಟು ರೇಚಕ ಸ್ಥಾವರದ ಕ್ಲಾರಿಫ್ಲೋಕೇಟರ್ ಬ್ರಿಡ್ಜ್‌ನ ನಾಲ್ಕು ಪ್ಯಾಡಲ್‌ಗಳು ಆರಂಭದಿಂದಲೂ ಕಾರ್ಯಾಚರಿಸುತ್ತಿಲ್ಲ. ಒಂದು ಪೆಡಲ್‌ನ ಮೋಟಾರ್ ದುರಸ್ತಿಗೆ ಕೊಂಡು ಹೋಗಿ ಮರು ಜೋಡನೆಯಾಗಿಲ್ಲ. ಪ್ಯಾನಲ್ ಬೋರ್ಡಿನಲ್ಲಿ ವಿದ್ಯುತ್ ಶಾಕ್ ಹೊಡೆಯುತ್ತಿದೆ. ಸೇಪ್ಟಿ ಗ್ಲೌಸ್ ಹಾಗೂ ಗ್ರೌಂಡ್ ರಬ್ಬರ್ ಮ್ಯಾಟ್ ವ್ಯವಸ್ಥೆ ಇಲ್ಲದೆ ಸಿಬ್ಬಂದಿ ಇಲ್ಲಿ ಕೆಲಸ ಮಾಡಲು ಭಯಪಡುವಂತಾಗಿದೆ. ಈ ಅವ್ಯವಸ್ಥೆಯಿಂದಾಗಿ ಜ್ಯಾಕ್‌ವೆಲ್‌ನಿಂದ ಪಂಪ್ ಆದ ನದಿ ನೀರು ಸರಿಯಾಗಿ ಶುದ್ಧೀಕರಣಗೊಳ್ಳುತ್ತಿಲ್ಲ. ಇನ್ನು ಕ್ಲೋರಿನ ಗ್ಯಾಸ್ ಮುಗಿದು ಒಂದೂವರೆ ವರ್ಷ ಕಳೆದಿದೆ.

    5.50 ಲಕ್ಷ ಹಾಗೂ 5 ಲಕ್ಷ ಲೀಟರ್ ಸಾಮರ್ಥ್ಯದ ಬ್ಯಾಕ್ ವಾಶ್ ಟ್ಯಾಂಕ್‌ಗಳಿಗೆ 20 ಅಶ್ವಶಕ್ತಿಯ 1 ಮೋಟರ್ ಇದ್ದು ವಾಶ್‌ಗೆ ಮತ್ತು ವಿತರಣಾ ಕೊಳವೆಗೆ ನೀರು ವಿತರಿಸಲು ನೀರು ಸಾಕಾಗುತ್ತಿಲ್ಲ. ಫಿಲ್ಟರ್ ಗೇಟ್‌ವಾಲ್ ಹಾಳಾಗಿದೆ. ಕ್ಲೋರಿನ್ ಯುನಿಟ್‌ನ ತಾಮ್ರದ ಪೈಪ್ ತುಂಡಾಗಿದೆ. ಆಲಂ ಹಾದು ಹೋಗುವ ಪೈಪ್ ಹಾಗೂ ಫಿಲ್ಟರ್‌ನಲ್ಲಿ ಸೋರಿಕೆಯಾಗುತ್ತಿದೆ. ಏರಿಯೇಟರ್‌ಗೆ ಅಳವಡಿಸಿದ ಟೈಲ್ಸ್‌ಗಳು ಕಳಚಿ ಹೋಗಿವೆ. ಹಳೇ ರೇಚಕ ಸ್ಥಾವರಕ್ಕೆ ಅಳವಡಿಸಿದ ಗೇಟ್‌ವಾಲ್ ಕೂಡ ಹಾಳಾಗಿದೆ. ಬ್ಯಾಕ್‌ವಾಶ್ ಗೇಟ್‌ವಾಲ್ ತುಕ್ಕು ಹಿಡಿದು ಜಾಮ್ ಆಗಿದೆ. ಇದನ್ನು ತಿರುಗಿಸಲು ಸಿಬ್ಬಂದಿ ಪರದಾಡಬೇಕು.

    ಆಲಂ ಮಿಕ್ಸರ್ ಮೋಟಾರ್‌ಗೆ ಅಳವಡಿಸಿದ ಪ್ಯಾನಲ್ ಬೋರ್ಡಿನಲ್ಲಿ ವಿದ್ಯುತ್ ಶಾಕ್ ಬರುತ್ತಿದ್ದು ಚಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಬೋರ್ಡುಗಳೆಲ್ಲಾ ಎರಡೇ ವರ್ಷಕ್ಕೆ ತುಕ್ಕು ಹಿಡಿದಿದೆ. ಬಲ್ಕ್ ಮೀಟರ್ ಡಿಸ್ಪ್ಲೆಗೆ ಇನ್ನೂ ಸಂಪರ್ಕವೇ ಕೊಟ್ಟಿಲ್ಲ. ಮುಂಭಾಗದ ಗೇಟ್ ಚಲನಶೀಲತೆ ಕಳೆದುಕೊಂಡಿದೆ. ಶುದ್ಧೀಕರಣ ಘಟಕದ ಬಾಗಿಲು ಮುರಿದು ಬಿದ್ದಿದ್ದು ಇನ್ನೂ ಅಳವಡಿಸುವ ಗೋಜಿಗೆ ಹೋಗಿಲ್ಲ. ಬಿದಿರನ ಪಟ್ಟಿಯನ್ನು ರಚಿಸಿ ತಾತ್ಕಾಲಿಕ ಬಾಗಿಲು ರಚಿಸಿರುವುದು ಒಳಚರಂಡಿ ಮಂಡಳಿಯ ದಯಾನೀಯ ಸ್ಥಿತಿಗೆ ನಿದರ್ಶನ!

    ನಿಗದಿತ ಆಳದಲ್ಲಿ ಪೈಪ್‌ಲೈನ್ ಅಳವಡಿಸಿಲ್ಲ
    ಪಾಣೆಮಂಗಳೂರು ಪೇಟೆ, ಬೊಂಡಾಲ ರಸ್ತೆ, ನಿತ್ಯಾನಂದ ರಸ್ತೆ, ಜಕ್ರಿಬೆಟ್ಟು, ಪಲ್ಲಮಜಲು, ಕುರ್ಸುಗುಡ್ಡೆ ಮೊದಲಾದ ಪ್ರದೇಶದಲ್ಲಿ ನಿಗದಿತ ಆಳದಲ್ಲಿ ಪೈಪ್‌ಲೈನನ್ನು ಅಳವಡಿಸಿಲ್ಲ. ಈ ಎಲ್ಲ ಸಮಸ್ಯೆಗಳ ಬಗ್ಗೆ ಬಂಟ್ವಾಳ ಪುರಸಭೆಯಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಕಾರ್ಯನಿರ್ವಹಿಸಿದ 3 ಮಂದಿ ಮುಖ್ಯಾಧಿಕಾರಿಗಳು ಲಿಖಿತ ದೂರು ನೀಡಿದರೂ ಕ.ನ.ನೀ.ಸ. ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಕ್ಯಾರೇ ಎಂದಿಲ್ಲ. ದಿನದ 24 ಗಂಟೆ ನೀರು ಕೊಡುತ್ತೇವೆ ಎಂದಿರುವ ಮಂಡಳಿಗೆ 6 ಗಂಟೆಯೂ ಸರಿಯಾಗಿ ನೀರು ವಿತರಿಸಲು ಸಾಧ್ಯವಾಗುತ್ತಿಲ್ಲ.

    ಕೈಕೊಟ್ಟಿರುವ ಪಂಪ್: ಜಕ್ರಿಬೆಟ್ಟುವಿನ ನೇತ್ರಾವತಿ ನದಿ ಬಳಿ ಇರುವ ಮೂಲಸ್ಥಾವರದ ಜ್ಯಾಕ್‌ವೆಲ್‌ನ 215 ಅಶ್ವಶಕ್ತಿಯ ಪಂಪ್‌ನ ಕನೆಕ್ಟಿಂಗ್ ಟರ್ಮಿನಲ್ ಹಾಳಾಗಿ ಹತ್ತು ತಿಂಗಳು ಕಳೆದಿವೆ. ಇದರಿಂದಾಗಿ ಒಂದು ಪಂಪ್ ಹತ್ತು ತಿಂಗಳಿನಿಂದ ನೀರು ಪೂರೈಸುತ್ತಿಲ್ಲ. ಜಕ್ರಿಬೆಟ್ಟುವಿನ ಶುದ್ಧೀಕರಣ ಘಟಕದಲ್ಲಿರುವ 75 ಎಚ್.ಪಿ. ಹಾಗೂ 20 ಎಚ್.ಪಿ.ಯ ಎರಡು ಪಂಪ್‌ಗಳು ಕೈಕೊಟ್ಟಿವೆ. ಪಂಪ್ ದುರಸ್ತಿಪಡಿಸಿಕೊಡುವಂತೆ ಈಗಾಗಲೇ ಹಲವು ಬಾರಿ ಬಂಟ್ವಾಳ ಪುರಸಭೆಯಿಂದ ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಸಕಾರಾತ್ಮಕ ಸ್ಪಂದನೆ ನೀಡಿಲ್ಲ. ಸದ್ಯಕ್ಕೆ ಸ್ಥಾವರದಲ್ಲಿ 215 ಎಚ್.ಪಿ.ಯ ಒಂದು ಪಂಪ್ ಮಾತ್ರ ಚಾಲನೆಯಲ್ಲಿದ್ದು, ಅದರಲ್ಲಿ ಏನಾದರೂ ತಾಂತ್ರಿಕ ದೋಷ ಕಂಡುಬಂದರೆ ಪುರಸಭಾ ವ್ಯಾಪ್ತಿಗೆ ನೀರಿನ ಸರಬರಾಜು ಸ್ಥಗಿತಗೊಳ್ಳಲಿದೆ.

    ಸಮಗ್ರ ಕಡಿಯುವ ನೀರಿನ ಯೋಜನೆಯಡಿ ಜಕ್ರಿಬೆಟ್ಟು ರೇಚಕ ಸ್ಥಾವರದ ಪಂಪ್‌ಗಳು ಹಾಗೂ ನದಿ ಕಿನಾರೆ ಬಳಿ ಜ್ಯಾಕ್‌ವೆಲ್ ಪಂಪ್‌ಗಳು ಹಾಳಾಗಿದ್ದು, ದುರಸ್ತಿಪಡಿಸುವಂತೆ ಕ.ನ.ನೀ.ಸ ಮತ್ತು ಒ.ಮಂ.ಗೆ ಒತ್ತಾಯಿಸಲಾಗಿದೆ. ಆದರೆ ಈವರೆಗೆ ದುರಸ್ತಿಯಾಗಿಲ್ಲ. 215 ಅಶ್ವಶಕ್ತಿಯ ಪಂಪ್‌ಗಳ ಪೈಕಿ ಒಂದು ಪಂಪ್ ಮಾತ್ರ ಪ್ರಸ್ತುತ ಚಾಲನೆಯಲ್ಲಿದ್ದು ಅದೂ ನಿಲುಗಡೆಯಾದಲ್ಲಿ ಬಂಟ್ವಾಳ ಪುರಸಭೆಗೆ ನೀರು ಪೂರೈಸಲು ಅಸಾಧ್ಯ. ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮಂಡಳಿಯ ಅಧಿಕಾರಿಗಳು ಗಮನ ವಹಿಸಬೇಕಾಗಿದೆ.
    ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts