More

    ನೀರಿಗಾಗಿ ಕಂಪ್ಲಿ ಪುರಸಭೆಗೆ ಮುತ್ತಿಗೆ ಹಾಕಿದ ವಾರ್ಡ್ ನಿವಾಸಿಗಳು, ಸಾಥ್ ನೀಡಿದ ಸದಸ್ಯರು

    ಕಂಪ್ಲಿ: ಕುಡಿವ ನೀರು ಸಮರ್ಪಕ ಪೂರೈಕೆಗೆ ಒತ್ತಾಯಿಸಿ ವಿವಿಧ ವಾರ್ಡ್‌ಗಳ ನಿವಾಸಿಗಳು ಬುಧವಾರ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 3ನೇ ವಾರ್ಡ್ ಹಳೇ ಗಣೇಶ್ ಟಾಕೀಸ್ ಪ್ರದೇಶದಲ್ಲಿ 8 ದಿನಗಳಿಂದ ನೀರು ಸರಬರಾಜು ಆಗಿಲ್ಲ. 3 ಇಂಚಿನ ಪೈಪ್‌ನಲ್ಲಿ ಪೂರೈಸುವ ನೀರು ಎಲ್ಲೆಡೆ ಪೂರೈಕೆಯಾಗುತ್ತಿಲ್ಲ ಎಂದು ಸ್ಥಳೀಯರಾದ ಜಿ.ಮಹಾದೇವಪ್ಪ, ಕೆ.ಸಿದ್ದಪ್ಪ, ಎಂ.ಗೋಪಾಲ್, ಶಾಂತಸ್ವಾಮಿ, ಸತ್ಯಪ್ಪ ಸೇರಿ ಇತರರು ಗೋಳು ತೋಡಿಕೊಂಡರು.

    17ನೇ ವಾರ್ಡ್‌ನ ಹಳೇ ಮತ್ತು ಹೊಸ ಪೈಪ್‌ಲೈನ್‌ಗಳಲ್ಲಿ ಅನೇಕ ದಿನಗಳಿಂದ ನೀರು ಬರುತ್ತಿಲ್ಲ. ಸ್ಥಳೀಯರು ಬಿಂದಿಗೆ ಹಿಡಿದು ಓಡಾಡುವಂತಾಗಿದೆ ಎಂದು ಪುರಸಭೆ ಸದಸ್ಯ ಸಿ.ಆರ್.ಹನುಮಂತ ಸಮಸ್ಯೆ ವಿವರಿಸಿದರು. ಎರಡನೇ ವಾರ್ಡ್‌ನ ಲಕ್ಷ್ಮಿ ಟಾಕೀಸ್ ಪ್ರದೇಶದಲ್ಲಿ 20 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಸ್ಥಳೀಯರು ನಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಪುರಸಭೆ ಸದಸ್ಯೆ ನಿರ್ಮಲಾ ವಸಂತ ಆಕ್ರೋಶ ವ್ಯಕ್ತಪಡಿಸಿದರು.

    ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ರಮೇಶ್ ಬಡಿಗೇರ ಪ್ರತಿಕ್ರಿಯಿಸಿ, ಕೋಟೆಯ ನೀರು ಎತ್ತುವ 30 ಎಚ್‌ಪಿ ಮೋಟಾರ್ ಭಾನುವಾರದಿಂದ ದುರಸ್ತಿಗೆ ಬಂದಿದ್ದು, ಸರಿಪಡಿಸಲಾಗುತ್ತಿದೆ. ಇನ್ನು ಮೂರ‌್ನಾಲ್ಕು ದಿನಗಳಲ್ಲಿ ಹೊಸ ಮೋಟಾರ್ ಬರಲಿದೆ. ಒಡೆದ ಪೈಪ್‌ಗಳನ್ನು ಶೀಘ್ರ ದುರಸ್ತಿ ಮಾಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಸ್ಥಳೀಯರು ಪ್ರತಿಭಟನೆ ಕೈ ಬಿಟ್ಟರು. ಪುರಸಭೆ ಜೆಇ ಗೋಪಾಲ್, ಪುರಸಭೆ ಸದಸ್ಯ ವಿ.ಎಲ್.ಬಾಬು, ಸ್ಥಳೀಯರಾದ ಭಟ್ಟ ಪ್ರಸಾದ, ಆಟೋ ರಾಘವೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts