More

    ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ

    ಪ್ರವೀಣ್‌ರಾಜ್ ಕೊಲ ಕಡಬ
    ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಆಲಂಕಾರು ಗ್ರಾಮದ ಬುಡೇರಿಯಾ, ಚಾಮೆತ್ತಡ್ಕ ನಿವಾಸಿಗಳ ಕಳೆದ 10 ವರ್ಷಗಳ ಸಮಸ್ಯೆಗೆ ಈ ವರ್ಷ ಮುಕ್ತಿ ದೊರಕಿದೆ.

    ಪ್ರತಿ ವರ್ಷದ ಮಾರ್ಚ್ ಅಂತ್ಯಕ್ಕೆ ಚಾಮೆತ್ತಡ್ಕ, ಪೊಸೋನಿ, ಬುಡೇರಿಯಾ ಭಾಗದ 53ಕ್ಕೂ ಅಧಿಕದ ಮನೆಯ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಪ್ರತೀ ಬೇಸಿಗೆ ಸಂದರ್ಭ ಕುಡಿಯುವ ನೀರಿಗಾಗಿ 2 ಕಿ.ಮೀ. ದೂರದಲ್ಲಿರುವ ಕುಮಾರಧಾರ ನದಿಗೆ ತೆರಳಬೇಕಾದ ಅನಿವಾರ್ಯತೆಯಿತ್ತು. ಆದರೆ ಈ ವರ್ಷ ನೀರಿಗಾಗಿ ಉದ್ಭವವಾಗಿರುವ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆದು ಶುದ್ಧ ಕುಡಿಯುವ ನೀರು ಮನೆ ಮನೆಗೆ ಸರಬರಾಜಾಗಲಿದೆ.

    ನೀರಿನ ಅಭಾವ ಸಂಭವಿಸಿದಾಗ ಈ ಭಾಗದ ಜನತೆ ಕುಮಾರಧಾರ ನದಿಯನ್ನು ಸೇರುವ ಕಿರು ನದಿಯ ಹೊಗೆಯಲ್ಲಿ ಗುಂಡಿಯನ್ನು ತೋಡಿ ನೀರಿನ ಮೂಲವನ್ನು ಶೋಧಿಸುತ್ತಿದ್ದರು. ಹೀಗೆ ತೋಡಿದ ಗುಂಡಿಯಲ್ಲಿ ಸಿಕ್ಕಿದ ನೀರನ್ನು ಮೂರರಿಂದ ನಾಲ್ಕು ದಿನ ಬಳಸದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ನೀರು ಕೆಲ ದಿನಗಳ ನಂತರ ತಿಳಿಯಾದ ಬಳಿಕ ಗೃಹ ಬಳಕೆಗೆ ಈ ಭಾಗದ ನಿವಾಸಿಗಳು ಬಳಸುತ್ತಿದ್ದರು. ಈಗ ಗ್ರಾಮ ಪಂಚಾಯಿತಿಯ ಮುತುವರ್ಜಿಯಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಿಂದ ನಿರ್ಮಾಣವಾದ ನೂತನ ನೀರಿನ ಟ್ಯಾಂಕ್‌ನಿಂದಾಗಿ ಈ ಭಾಗದ ಜನತೆ ನೀರಿನ ಅಭಾವದಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸುವಂತಾಗಿದೆ.

    ಸಾಂಕ್ರಾಮಿಕ ರೋಗದ ಭೀತಿ
    ನದಿ ಕಿನಾರೆಯಲ್ಲಿ ಗುಂಡಿ ತೋಡಿ ಸಿಕ್ಕಿದಂತಹ ನೀರನ್ನು ದಿನ ಬಳಕೆಗೆ ಉಪಯೋಗಿಸುತ್ತಿದ್ದ ಪರಿಣಾಮ ಈ ಭಾಗದ ಜನತೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದರು. ಗುಂಡಿಗೆ ಯಾವುದೇ ಅಡೆ ತಡೆಗಳಿಲ್ಲದ ಪರಿಣಾಮ ಕಾಡು ಪ್ರಾಣಿಗಳು ಸೇರಿದಂತೆ ನಾಯಿಗಳು, ದನಕರುಗಳು ಗುಂಡಿಯ ನೀರನ್ನು ಬಂದು ಸೇವಿಸುತ್ತಿದ್ದವು. ಪರಿಣಾಮ ಅಪಾಯಕಾರಿ ಸಾಂಕ್ರಾಮಿಕ ರೋಗದ ಭೀತಿ ಈ ಭಾಗದ ಜನತೆಯನ್ನು ಕಾಡುತ್ತಿತ್ತು. ಈಗ ಕುಡಿಯುವ ನೀರಿಗೆ ವ್ಯವಸ್ಥೆ ಸ್ಥಳೀಯಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಕಲ್ಪಿಸುವುದರ ಪರಿಣಾಮ ಈ ಎಲ್ಲ ಭೀತಿಗಳಿಗೆ ಪೂರ್ಣ ವಿರಾಮ ನೀಡಿದೆ.

    ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಟ್ಯಾಂಕನ್ನು ಈ ಭಾಗದ ಅತೀ ಎತ್ತರದ ಪ್ರದೇಶವಾದ ಬಾರ್ಕುಲಿಯ ಗುಡ್ಡೆಯ ಮೇಲ್ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ. 12 ಅಡಿ ಅಗಲ ಹಾಗೂ 16 ಅಡಿ ಎತ್ತರದ ಟ್ಯಾಂಕನ್ನು ಈಗಾಗಲೇ ನಿರ್ಮಿಸಲಾಗಿದೆ. ಜತೆಗೆ 53 ಮನೆಗಳಿಗೆ ನೀರು ಸರಬರಾಜಿಗಾಗಿ ಪೈಪ್ ಅಳವಡಿಸಲಾಗಿದೆ. ಬೇಸಿಗೆ ಬಿಸಿ ಕೆಲ ದಿನಗಳಲ್ಲಿ ಕಾವೇರುತ್ತಿದ್ದಂತೆ ನೀರನ ಅಭಾವ ಈ ಭಾಗದಲ್ಲಿ ಉಲ್ಭಣಿಸಿದ್ದು ನೀರಿನ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಕಾಮಗಾರಿಯನ್ನು ಶೀಘ್ರವೇ ಮುಗಿಸಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಬೇಕೆಂದು ಟೆಂಡರುದಾರರಿಗೆ ಸೂಚಿಸಲಾಗಿದೆ. ಕಾಮಗಾರಿ ಮುಗಿದ ತಕ್ಷಣ ಫಲಾನುಭವಿಗಳಿಗೆ ನೀರು ಸರಬರಾಜುಗೊಳಿಸಲಾಗುವುದು.
    ಸುನಂದ ಬಾರ್ಕುಲಿ ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ

    ಕುಡಿಯುವ ನೀರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ ಎಂಬುವುದು ಈ ಭಾಗದ ಜನತೆಯ ಬಹು ವರ್ಷಗಳ ಬೇಡಿಕೆಯಾಗಿತ್ತು. ಇದಕ್ಕಾಗಿ ಜಿಲ್ಲಾ ಪಂಚಾಯಿತಿ ಕಳೆದ ವರ್ಷದ ಕ್ರಿಯಾ ಯೋಜನೆಯಲ್ಲಿ 5 ಲಕ್ಷ ರೂ. ಮತ್ತು ಈ ವರ್ಷದ ಕ್ರಿಯಾ ಯೋಜನೆಯಲ್ಲಿ 3 ಲಕ್ಷ ರೂ. ಒಟ್ಟು 8 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದೆ. ಈಗಾಗಲೇ ಕೊಳವೆ ಬಾವಿ ನಿರ್ಮಿಸಲಾಗಿದ್ದು, ಪೈಪ್‌ಲೈನ್‌ನ ಕಾಮಗಾರಿ ಪೂರ್ಣಗೊಂಡಿದೆ. ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲಾಗಿದೆ. ಈಗ ಟ್ಯಾಂಕ್‌ನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಟ್ಯಾಂಕ್‌ಗೆ ನೀರು ತುಂಬಿಸಿ ಮನೆ ಮನೆಗಳಿಗೆ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗುವುದು.
    ಪ್ರಮೀಳಾ ಜನಾರ್ದನ್ ಜಿಲ್ಲಾ ಪಂಚಾಯಿತಿ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts