More

    ಸಂಗೀತ, ನಾಟಕ ಯಾವಾಗ?

    ಹರೀಶ್ ಮೋಟುಕಾನ, ಮಂಗಳೂರು

    ಕರಾವಳಿಯಲ್ಲಿ ಯಕ್ಷಗಾನ ಪ್ರದರ್ಶನ ಆರಂಭಕ್ಕೆ ಸಮಯ ನಿಗದಿಯಾದ ಬೆನ್ನಲ್ಲೇ ರಂಗಭೂಮಿ, ಸಂಗೀತ ರಸಮಂಜರಿ ಕಲಾವಿದರಲ್ಲೂ ಹೊಸ ನಿರೀಕ್ಷೆ ಮೂಡಿದೆ. ಕಲೆಯನ್ನೇ ನಂಬಿರುವ ಸಾವಿರಾರು ನಾಟಕ, ಸಂಗೀತ ಕಲಾವಿದರ ಬದುಕು ಸಂಕಷ್ಟದಲ್ಲಿದ್ದು, ಯಕ್ಷಗಾನ ಕಲಾವಿದರಿಗೆ ಅವಕಾಶ ಕಲ್ಪಿಸಿದ ಮಾದರಿಯಲ್ಲೇ ನಮಗೂ ಅವಕಾಶ ಕಲ್ಪಿಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.

    ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ 40ಕ್ಕೂ ಅಧಿಕ ತುಳು ನಾಟಕ ತಂಡಗಳಿವೆ. 35ಕ್ಕೂ ಅಧಿಕ ಸಂಗೀತ ರಸಮಂಜರಿ ತಂಡಗಳಿವೆ. ಕರೊನಾ ಲಾಕ್‌ಡೌನ್ ಘೋಷಣೆ ಸಮಯದಲ್ಲಿ ನಿಗದಿಯಾಗಿದ್ದ ಸಾವಿರಕ್ಕೂ ಅಧಿಕ ನಾಟಕ ಪ್ರದರ್ಶನ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮಗಳು ರದ್ದುಗೊಂಡಿದ್ದವು. ಇದರಿಂದ ಕಲೆಯನ್ನೇ ನಂಬಿ ಬದುಕುವ ಮಂದಿ ಆದಾಯವಿಲ್ಲದೆ ಕಷ್ಟದಲ್ಲಿದ್ದಾರೆ.
    ಕಲಾವಿದರ ಪೈಕಿ ಕೆಲವರು ಮಾತ್ರ ಉದ್ಯೋಗಸ್ಥರು. ಉಳಿದವರಿಗೆ ನಾಟಕದಿಂದಲೇ ಬದುಕು. ಅದರಲ್ಲೂ ಮಹಿಳಾ ಕಲಾವಿದರಿಗೆ ರಂಗಭೂಮಿಯೇ ಆಧಾರ. ಪ್ರದರ್ಶನ ಮುಗಿಯುತ್ತಿದ್ದಂತೆ ಸಂಭಾವನೆ ಕೈ ಸೇರುವ ಕಾರಣ ಕಲಾವಿದರ ಬದುಕಿಗೆ ಕೊಂಚ ಭದ್ರತೆ ಇತ್ತು. ಕರೊನಾ ಮಹಾಮಾರಿ ಅದನ್ನು ಕಸಿದುಕೊಂಡಿದೆ.

    ಬುಕಿಂಗ್ ಗೊಂದಲ
    ನಾಟಕ, ಸಂಗೀತ ರಸಮಂಜರಿ ತಂಡಗಳಿಗೆ ಮುಂದಿನ ವರ್ಷದ ಪ್ರದರ್ಶನಕ್ಕೆ ಈ ಸಮಯದಲ್ಲೇ ಬುಕ್ಕಿಂಗ್ ಇರುತ್ತವೆ. ಆದರೆ ಆರಂಭದ ಬಗ್ಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಸಿಗದ ಕಾರಣ, ನಾಟಕ, ಸಂಗೀತ ತಂಡಗಳ ಮುಖ್ಯಸ್ಥರು ಗೊಂದಲದಲ್ಲಿದ್ದಾರೆ. ಬುಕಿಂಗ್ ನಿರಾಕರಿಸಿದರೆ ಅವಕಾಶ ಕೈ ತಪ್ಪುವ ಸಾಧ್ಯತೆ. ಬುಕಿಂಗ್ ಮಾಡಿಸಿಕೊಂಡರೆ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ ಏನು ಮಾಡುವುದು ಎನ್ನುವ ಗೊಂದಲ. ಜಿಲ್ಲಾಡಳಿತ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಕಲಾವಿದರು ಒತ್ತಾಯಿಸಿದ್ದಾರೆ.

    ಸಂಕಷ್ಟದಲ್ಲಿ ಕೋಸ್ಟಲ್‌ವುಡ್
    ತುಳು ಚಿತ್ರರಂಗದಲ್ಲೂ ಚಿತ್ರೀಕರಣಗೊಂಡು ಐದಾರು ಸಿನಿಮಾಗಳು ಬಿಡುಗಡೆಗೆ ಬಾಕಿಯಾಗಿವೆ. ಸ್ಥಗಿತಗೊಂಡಿದ್ದ ಹತ್ತರಷ್ಟು ಸಿನಿಮಾಗಳು ಮತ್ತೆ ಸರ್ಕಾರದ ನಿಯಮಾವಳಿ ಅನುಸರಿಸಿ ಶೂಟಿಂಗ್ ಆರಂಭಿಸಿವೆ. ಬಂಡವಾಳ ಹೂಡಿದ ನಿರ್ಮಾಪಕರು ಆತಂಕದಲ್ಲಿದ್ದಾರೆ. ಚಿತ್ರ ಮಂದಿರಗಳು ಅ.15ರಿಂದ ತೆರವುಗೊಂಡರೂ ಕರೊನಾ ಕಡಿಮೆಯಾಗದ ಕಾರಣ ಜನ ಥಿಯೇಟರ್‌ಗಳಿಗೆ ಬರಲು ಹಿಂದೇಟು ಹಾಕುವ ಸಾಧ್ಯತೆ ಇದೆ ಎಂಬ ಆತಂಕ ಸಿನಿಮಾ ವಲಯದಲ್ಲಿದೆ.

    ಕರೊನಾದಿಂದ ನಾಟಕ ತಂಡಗಳು ಸಾಕಷ್ಟು ನಷ್ಟ ಅನುಭವಿಸಿವೆ. ಮಾರ್ಚ್, ಏಪ್ರಿಲ್‌ನಲ್ಲಿ ನಿಗದಿಯಾಗಿದ್ದ ಎಲ್ಲ ನಾಟಕಗಳು ರದ್ದಾಗಿದ್ದವು. ಗಣೇಶ ಚತುರ್ಥಿ, ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲೂ ನಾಟಕಗಳಿರಲಿಲ್ಲ. ಮುಂದಿನ ದಿನಗಳಲ್ಲಿ ನಾಟಕಗಳಿಗೆ ಬುಕಿಂಗ್‌ಗಳು ಬರುತ್ತಿವೆ. ಆದರೆ ಪ್ರದರ್ಶನಕ್ಕೆ ಅವಕಾಶ ಸಿಗದ ಕಾರಣ, ಗೊಂದಲದಲ್ಲಿದ್ದೇವೆ. ನಿರ್ಧಾರ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದೇವೆ.
    ದೇವದಾಸ್ ಕಾಪಿಕಾಡ್, ನಟ, ನಿರ್ದೇಶಕ

    ನಿಯಮಾವಳಿ ಪ್ರಕಾರ 200ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಮುಂದಿನ ದಿನಗಳಲ್ಲಿ ಕರೊನಾ ಪ್ರಕರಣಗಳು ಕಡಿಮೆಯಾಗುವಾಗ ನಿಯಮ ಸಡಿಲವಾಗಲಿದೆ. ಶೀಘ್ರದಲ್ಲೇ ನಾಟಕ, ಸಂಗೀತ ರಸಮಂಜರಿ ಕಲಾವಿದರ ಸಭೆ ನಡೆಸಿ, ಬೇಡಿಕೆಗಳಿಗೆ ಸ್ಪಂದಿಸಿ ಅವಕಾಶ ಕೊಡಲಾಗುವುದು.
    ಕೋಟ ಶ್ರೀನಿವಾಸ ಪೂಜಾರಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರು

    ವೈನ್‌ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಚಿತ್ರಮಂದಿರಗಳಿಗೆ ಅವಕಾಶ ನೀಡುವ ಸರ್ಕಾರ ನಾಟಕ, ಸಂಗೀತ, ಭರತನಾಟ್ಯ ಮೊದಲಾದ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ. ಯಕ್ಷಗಾನಕ್ಕೆ ಅವಕಾಶ ನೀಡಿದಂತೆ ಇತರ ಕಲೆಗಳ ಪ್ರದರ್ಶನಕ್ಕೂ ಅವಕಾಶ ಸಿಗಬೇಕು.
    ವಿಜಯಕುಮಾರ್ ಕೊಡಿಯಾಲ್‌ಬೈಲ್, ಚಿತ್ರ ನಿರ್ದೇಶಕ

    ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 350ರಷ್ಟು ಸಂಗೀತ ಕಲಾವಿದರು ನಮ್ಮ ಒಕ್ಕೂಟದಲ್ಲಿದ್ದಾರೆ. ಕರೊನಾ ಬಳಿಕ ಕಾರ್ಯಕ್ರಮ ಇಲ್ಲದೆ ಸಂಗೀತ ವೃತ್ತಿಯನ್ನು ನಂಬಿರುವವರಿಗೆ ಸಮಸ್ಯೆಯಾಗಿದೆ. ಮಾರ್ಗಸೂಚಿ ನೀಡಿ ಆದಷ್ಟು ಬೇಗ ನಮಗೂ ಅವಕಾಶ ಮಾಡಿಕೊಡಬೇಕು.
    ಮೊಹಮ್ಮದ್ ಇಕ್ಬಾಲ್,  ಅಧ್ಯಕ್ಷರು, ಕರಾವಳಿ ಸಂಗೀತ ಕಲಾವಿದ ಒಕ್ಕೂಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts