More

    ಮಣ್ಣು, ಕಸ ಮತ್ತೆ ಚರಂಡಿಗೆ

    ಹರೀಶ್ ಮೋಟುಕಾನ ಮಂಗಳೂರು
    ಮಹಾನಗರಪಾಲಿಕೆ ನಡೆಸಿದ ಕಾಟಾಚಾರದ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಚರಂಡಿಯಲ್ಲಿ ಕೊಚ್ಚಿ ಹೋಗುತ್ತಿದೆ. ಅವ್ಯವಸ್ಥಿತ ಕಾಮಗಾರಿಯ ಕಡೆಗೆ ನಿಗಾ ವಹಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವೈಫಲ್ಯ ಇದಕ್ಕೆ ಕಾರಣ.

    ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಪಾಲಿಕೆ ಚರಂಡಿ ಹೂಳೆತ್ತುವ ಕಾಮಗಾರಿ ಕೈಗೊಳ್ಳುತ್ತದೆ. ತರಾತುರಿಯಲ್ಲಿ ಕಾಮಗಾರಿ ನಡೆಸಿ, ಚರಂಡಿಯಿಂದ ತೆಗೆದ ಕಸ, ಮಣ್ಣು ಚರಂಡಿ ಪಕ್ಕದಲ್ಲೇ ವಾರಗಟ್ಟಲೆ ಬಿಟ್ಟು ಹೋಗುತ್ತಾರೆ. ಧಾರಾಕಾರ ಮಳೆ ಬಂದಾಗ ಅವು ಮತ್ತೆ ಚರಂಡಿ, ತೋಡುಗಳಿಗೆ ಸೇರುತ್ತದೆ.

    ಲಕ್ಷಾಂತರ ರೂ. ವಿನಿಯೋಗಿಸಿ ನಡೆಸಿದ ಕಾಮಗಾರಿ ನೀರಲ್ಲಿಟ್ಟ ಹೋಮದಂತಾಗಿದೆ. ತೆಗೆದ ಹೂಳು ಮತ್ತೆ ಚರಂಡಿಗೆ ಸೇರುವುದಾದರೆ ಕಾಮಗಾರಿಗೆ ಸಾರ್ವಜನಿಕರ ಹಣ ಪೋಲು ಮಾಡುವುದು ಯಾಕೆ? ಒಂದು ಕಡೆಯ ಚರಂಡಿಯ ಹೂಳು, ಕಸ ತೆಗೆದ ತಕ್ಷಣ ಅದನ್ನು ಸಾಗಾಟ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.
    ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 1.5 ಮೀಟರ್‌ಗಿಂತಲೂ ಹೆಚ್ಚು ಎತ್ತರವಿರುವ ಸುಮಾರು 180 ಕಿ.ಮೀ. ಉದ್ದದ 37 ಪ್ರಮುಖ ಚರಂಡಿಗಳಿವೆ. 1800 ಕಿ.ಮೀ. ಉದ್ದದ 1.5 ಮೀಟರ್‌ಗಿಂತ ಕಡಿಮೆ ಎತ್ತರದ ಚರಂಡಿಗಳಿವೆ. ಹೆಚ್ಚಿನ ವಾರ್ಡ್‌ಗಳಲ್ಲಿ ಚರಂಡಿಗಳ ಹೂಳೆತ್ತುವ ಪ್ರಕ್ರಿಯೆ ನಡೆಯುತ್ತಿದೆ.

    ಮುಳುಗಡೆ ಭೀತಿ: ಮಳೆಗಾಲದಲ್ಲಿ ನಗರ ಹಾಗೂ ಹೊರವಲಯದ ತಗ್ಗು ಪ್ರದೇಶಗಳು ಪ್ರತಿ ವರ್ಷವೂ ಮುಳುಗಡೆಯಾಗುವುದು ಸಾಮಾನ್ಯ. ಕುದ್ರೋಳಿ, ಅಳಕೆ, ಪಂಪ್‌ವೆಲ್, ಕೂಳೂರು ಮುಂತಾದ ಕಡೆ ಧಾರಾಕಾರ ಮಳೆಯಾದ ಸಂದರ್ಭ ಮುಳುಗಡೆಯಾಗುತ್ತದೆ. ಅಂಗಡಿ, ಮನೆಗಳಿಗೆ ನೀರು ನುಗ್ಗುತ್ತದೆ. ಸಕಾಲದಲ್ಲಿ ಸಮರ್ಪಕ ಚರಂಡಿ ಕಾಮಗಾರಿ ನಡೆಸದೆ ಇರುವುದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ.

    ಮ್ಯಾನ್‌ಹೋಲ್ ಉಕ್ಕುತ್ತಿವೆ: ಮಳೆಗಾಲದಲ್ಲಿ ನಗರದ ಬಹುತೇಕ ಕಡೆ ಮ್ಯಾನ್‌ಹೋಲ್‌ಗಳು ಬ್ಲಾಕ್ ಆಗಿ ಕೊಳಚೆ ನೀರು ಉಕ್ಕುತ್ತದೆ. ಕಸ, ಕಡ್ಡಿಗಳು ಸಿಲುಕಿಕೊಂಡು ಬ್ಲಾಕ್ ಆಗುತ್ತದೆ. ಕದ್ರಿ, ಬಂಟ್ಸ್‌ಹಾಸ್ಟೆಲ್, ಅಂಬೇಡ್ಕರ್ ವೃತ್ತದ ಬಳಿ, ಆಗ್ನೆಸ್ ಕಾಲೇಜು ಬಳಿ, ಬಿಜೈ ಬಳಿ ಹೆಚ್ಚಾಗಿ ಮ್ಯಾನ್‌ಹೋಲ್‌ಗಳು ಬ್ಲಾಕ್ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಚರಂಡಿ ಹೂಳು ತುಂಬಿ ಮಳೆ ನೀರು ಚರಂಡಿಯಿಂದ ಉಕ್ಕಿ ರಸ್ತೆಯ ಮೇಲೆ ಹರಿಯುತ್ತದೆ. ಕಸ, ಮಣ್ಣು, ಕಲ್ಲು ರಸ್ತೆಯ ಮೇಲೆ ನಿಲ್ಲುತ್ತದೆ. ಇದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತದೆ. ಮಳೆಗಾಲ ಆರಂಭಗೊಳ್ಳುವುದಕ್ಕಿಂತ ಮುಂಚಿತವಾಗಿಯೇ ಚರಂಡಿ ಹೂಳೆತ್ತುವ ಕಾಮಗಾಗಿ ಪೂರೈಸಬೇಕು. ತೆಗೆದ ಹೂಳನ್ನು ಬೇರೆಡೆಗೆ ಸಾಗಿಸಬೇಕು. ಸಾರ್ವಜನಿಕ ಹಣ ಪೋಲಾಗದಂತೆ ಸಂಬಂಧಪಟ್ಟವರು ಎಚ್ಚರ ವಹಿಸಬೇಕು.
    ಪ್ರಸಾದ್ ಎ.ಎಸ್., ಮಂಗಳೂರು, ಸಾರ್ವಜನಿಕ

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚರಂಡಿಗಳ ಹೂಳೆತ್ತುವ ಕಾಮಗಾರಿ ನಡೆಯುತ್ತಿವೆ. ತೆಗೆದ ಹೂಳು, ಕಸವನ್ನು ಸೂಕ್ತ ಜಾಗಕ್ಕೆ ಕೊಂಡೊಯ್ದು ವಿಲೇವಾರಿ ಮಾಡಬೇಕು. ವಾರಗಟ್ಟಲೆ ತೆಗೆದು ಹಾಕಿದಲ್ಲೇ ಇದ್ದರೆ ಅದನ್ನು ತಕ್ಷಣ ತೆಗೆಯಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು.
    ಪ್ರೇಮಾನಂದ ಶೆಟ್ಟಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts