More

    ಗ್ರಾಮೀಣಾಭಿವೃದ್ಧಿ ವಿವಿ ಕುಲಪತಿಯಾಗಿ ಡಾ. ವಿಷ್ಣುಕಾಂತ್

    ಗದಗ: ನಗರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ವಿಷ್ಣುಕಾಂತ್ ಚಟಪಳ್ಳಿ ಅವರು ನೇಮಕಗೊಂಡಿದ್ದಾರೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ ಕಾರ್ಯನಿರ್ವಹಿಸಿದ ಜಿ. ತಿಮ್ಮೇಗೌಡ ಅವರು 2019ರ ಅಗಸ್ಟ್ ತಿಂಗಳಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಅಲ್ಲಿಂದ ವಿಶ್ವವಿದ್ಯಾಲಯದ ಪ್ರೊಫೆಸರ್ ಸುರೇಶ ನಾಡಗೌಡರ ಅವರು ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಿಮ್ಮೇಗೌಡ ಅವರ ಸ್ಥಾನಕ್ಕೆ ವಿಷ್ಣುಕಾಂತ ಚಟಪಳ್ಳಿ ಅವರನ್ನು ನೇಮಿಸಿ ರಾಜ್ಯಪಾಲ ವಜೂಬಾಯಿ ವಾಲಾ ಮಂಗಳವಾರ ಆದೇಶ ಹೊರಡಿಸಿದ್ದಾರೆ.

    ಬೆಂಗಳೂರಿನಲ್ಲಿ ಡಾ. ವಿಷ್ಣುಕಾಂತ್ ಚಟಪಳ್ಳಿ ಅವರಿಗೆ ಪ್ರಭಾರಿ ಕುಲಪತಿ ಸುರೇಶ ನಾಡಗೌಡ ಅವರು ಅಧಿಕಾರ ಹಸ್ತಾಂತರಿಸಿದರು. ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರದಿಂದ ನೂತನ ಕುಲಪತಿ ಕಾರ್ಯವನ್ನು ಆರಂಭಿಸಲಿದ್ದಾರೆ.

    ಡಾ. ವಿಷ್ಣುಕಾಂತ್ ಚಟಪಳ್ಳಿ ಅವರು ಬಿಇ, ಎಂಇ, ಪಿಎಚ್​ಡಿ, ಡಿಲಿಟ್ ಪದವೀಧರರಾಗಿದ್ದಾರೆ. ಚಿತ್ರದುರ್ಗದ ಎಸ್​ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಹಿರಿಯ ಉಪನ್ಯಾಸಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಪಿಇಎಸ್ ತಾಂತ್ರಿಕ ಮಹಾವಿದ್ಯಾಲಯದ ಫ್ರೊಫೆಸರ್ ಮತ್ತು ಡೀನ್, ಬೆಂಗಳೂರಿನ ಅಮೃತ ಇಂಜಿನಿಯರಿಂಗ್ ಕಾಲೇಜ್​ನ ನಿರ್ದೇಶಕರಾಗಿ, ಕರ್ನಾಟಕ ಸ್ಕಿಲ್ ಡೆವಲಪ್​ವೆುಂಟ್ ಕಾಪೋರೇಷನ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಂತರ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರೊಫೆಸರ್, ನಂತರ ರಿಜಿಸ್ಟ್ರಾರ್, ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲಿಯೇ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಚೇರ್ಮನ್ ಆಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ನ್ಯಾಕ್ (ನ್ಯಾಷನಲ್ ಅಸೆಸ್​ವೆುಂಟ್ ಆಂಡ್ ಅಕ್ರಿಡೇಷನ್ ಕೌನ್ಸಿಲ್)ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

    ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಿದೆ. ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಉತ್ತಮ ಕೆಲಸ ಮಾಡಲಾಗುವುದು.
    | ಡಾ.ವಿಷ್ಣುಕಾಂತ ಚಟಪಳ್ಳಿ, ನೂತನ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts