More

    ಧಾರ್ಮಿಕ ಸತ್ಕ್ರಾಂತಿಯ ಮಹಾಪುರುಷ ಶ್ರೀಜಗದ್ಗುರು ರೇಣುಕಾಚಾರ್ಯರು; ಶ್ರೀರಂಭಾಪುರಿ ಜಗದ್ಗುರುಗಳ ಅಭಿಮತ

    ಬೆಂಗಳೂರು: ಅಸ್ಪೃಶ್ಯತೆಯನ್ನು ನಿವಾರಿಸಿ ಸಮಾಜದಲ್ಲಿ ಸರ್ವರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ಸತ್ಕ್ರಾಂತಿಗೆ ಮುನ್ನುಡಿ ಬರೆದ ಮೊದಲಿಗರು ಶ್ರೀಜಗದ್ಗುರು ರೇಣುಕಾಚಾರ್ಯರು ಎಂದು ಬಾಳೆಹೊನ್ನೂರಿನ ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದ್ದಾರೆ. ನಗರದ ಆನಂದರಾವ್ ವೃತ್ತದಲ್ಲಿರುವ ಶ್ರೀಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಸಮಾಜದಲ್ಲಿರುವ ಮೇಲುಕೀಳು ಎಂಬ ತಾರತಮ್ಯವನ್ನು ಹೋಗಲಾಡಿಸಿ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರಿಗೂ ಭಗವಂತನನ್ನು ಅರ್ಚಿಸಲು ಸಮಾನ ಅವಕಾಶವಿದ್ದು, ಎಲ್ಲ ವರ್ಗದ ಜನರಿಗೆ ಸಂಸ್ಕಾರ ನೀಡುವುದಕ್ಕಾಗಿ 18 ಜಾತಿ ಜನಾಂಗಗಳಿಗೆ ಪ್ರತ್ಯೇಕವಾದ ಮಠಗಳನ್ನು ನಿರ್ಮಿಸುವ ಮೂಲಕ ಯುಗ ಯುಗಗಳ ಹಿಂದೆಯೇ ಧಾರ್ಮಿಕ ಸತ್ಕ್ರಾಂತಿಯನ್ನು ಮಾಡಿದ ಮಹಾಪುರುಷ ಶ್ರೀಜಗದ್ಗುರು ರೇಣುಕಾಚಾರ್ಯರು. ನೆರೆಯ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಸ್ವಯಂಭು ಸೋಮೇಶ್ವರ ಶಿವಲಿಂಗದಿಂದ ಆವಿರ್ಭವಿಸಿದ ಶ್ರೀಜಗದ್ಗುರು ರೇಣುಕಾಚಾರ್ಯರು ಮಾಡಿದ ಸಾಮಾಜಿಕ ಕ್ರಾಂತಿಯ ಕುರುಹುಗಳನ್ನು ಇಂದಿಗೂ ಕಾಣಬಹುದು.

    ಹಿಂದುಳಿದ ಕಬ್ಬಿಗರ ಕುಲದಲ್ಲಿ ಹುಟ್ಟಿದ ಅಗಸ್ತ್ಯ ಮಹರ್ಷಿಗೆ ಶಿವಾದ್ವೆತ ಸಿದ್ಧಾಂತವನ್ನು ಬೋಧಿಸಿದ ಶ್ರೀರೇಣುಕಾಚಾರ್ಯರು ಮಲಯಾಚಲದ ಭದ್ರಾನದಿ ತೀರದಲ್ಲಿ ಶ್ರೀರಂಭಾಪುರಿ ಪೀಠವನ್ನು ಸಂಸ್ಥಾಪನೆ ಮಾಡಿ ಮಾನವ ಕುಲಕೋಟಿಗೆ ಧಾರ್ಮಿಕ ಸಂಸ್ಕಾರವನ್ನು ನೀಡುವ ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಅಂದು ರೇಣುಕಾಚಾರ್ಯರು ಬೆಳಗಿದ ಧರ್ಮ ದೀವಿಗೆಯು ನಿರಂತರವಾಗಿ ಇಂದಿಗೂ ಸಮಾಜದಕ್ಕೆ ಜ್ಞಾನದ ಬೆಳಕನ್ನು ನೀಡುತ್ತಿದೆ.

    ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ನೀಡುವ ಸಂಸ್ಕಾರ ಜೀವನ ಪರ್ಯಂತ ಸತ್ಫಲ ನೀಡುತ್ತದೆ. ಶ್ರೀಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅಂತಹ ಸಂಸ್ಕಾರ ಪಡೆಯುತ್ತಿದ್ದಾರೆ. ದೇಶ, ಧರ್ಮದ ಬಗ್ಗೆ ಅಭಿಮಾನವಿಲ್ಲದವನ ಹೃದಯ ಸುಡುಗಾಡು ಎಂಬ ಕವಿ ಕುವೆಂಪು ಅವರ ಮಾತನ್ನು ಯಾರೂ ಮರೆಯಬಾರದು ಎಂದು ಡಾ.ವೀರಸೋಮೇಶ್ವರ ಜಗದ್ಗುರುಗಳು ವಿವರಿಸಿದರು.

    ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಖಂಡಿಮಠ್ ಅವರು ಸಾಮಾಜಿಕ ನೆಲೆಗಟ್ಟಿನಲ್ಲಿ ರೇಣುಕಾಚಾರ್ಯರ ಕೊಡುಗೆಗಳ ಕುರಿತು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ಡೀನ್ ಡಾ. .ಸಿ.ವಾಲಿಯವರು ಶ್ರೀಜಗದ್ಗುರು ರೇಣುಕರ ಕ್ರಾಂತಿಗಳ ಕುರಿತು ಉಪನ್ಯಾಸ ನೀಡಿದರು. ಎಸ್‌ಜೆಆರ್ ವಿದ್ಯಾಸಂಸ್ಥೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಪಿಎಚ್‌ಡಿ ಪಡೆದ ಸಂಸ್ಥೆಯ ಉಪನ್ಯಾಸಕರಿಗೆ, ಉತ್ತಮವಾಗಿ ಕಾರ್ಯನಿರ್ವಹಿಸುವ ಸಿಬ್ಬಂಧಿಗಳು ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಹೊಸದಾಗಿ ಆರಂಭಿಸಿರುವ ‘ಶ್ರೀಜಗದ್ಗುರು ರೇಣುಕ ಸಿರಿ’ ಪ್ರಶಸ್ತಿಗೆ ಭಾಜನರಾದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಅನಾರೋಗ್ಯದ ಕಾರಣಕ್ಕೆ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಅವರು ಆಸ್ಪತ್ರೆಯಿಂದ ಮರಳಿದ ನಂತರ ಮನೆಗೆ ಹೋಗಿ ಪ್ರಶಸ್ತಿ ನೀಡುವಂತೆ ಜಗದ್ಗುರುಗಳು ಸೂಚಿಸಿದರು. 

    ಸಿದ್ದರಬೆಟ್ಟ ಕ್ಷೇತ್ರದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಶ್ರೀಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಯು.ಎಂ.ಬಸವರಾಜ, ವಿದ್ವಾಂಸರಾದ ಡಾ.ಸಿ.ಶಿವಕುಮಾರಸ್ವಾಮಿ, ಶ್ರೀರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಪಿ.ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

    ಧಾರ್ಮಿಕ ಸತ್ಕ್ರಾಂತಿಯ ಮಹಾಪುರುಷ ಶ್ರೀಜಗದ್ಗುರು ರೇಣುಕಾಚಾರ್ಯರು; ಶ್ರೀರಂಭಾಪುರಿ ಜಗದ್ಗುರುಗಳ ಅಭಿಮತ

    ಸಂಶೋಧನಾ ಕೇಂದ್ರ ಸ್ಥಾಪನೆಗೆ ಚಿಂತನೆ:

    ಶ್ರೀಜಗದ್ಗುರು ರೇಣುಕಾಚಾರ್ಯರ ಆದರ್ಶ ಮೌಲ್ಯಗಳ ಬಗ್ಗೆ ಜನರಿಗೆ ಹೆಚ್ಚು ಪರಿಚಯವಿಲ್ಲದಿರುವುದರಿಂದ ವ್ಯಾಪಕವಾಗಿ ಪ್ರಚಾರ ಮಾಡುವ ಅಗತ್ಯವಿದ್ದು, ಶ್ರೀಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಚಿಂತನೆ ಇದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು. ಜೊತೆಗೆ ವಿದ್ಯಾಸಂಸ್ಥೆಯ ಪ್ರಧಾನ ಶಾಖೆಯ ನೈರುತ್ಯ ಭಾಗದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರ ಶಿಲಾಮಯ ಮಂದಿರವನ್ನು ಸ್ಥಾಪಿಸುವ ಉದ್ದೇಶವಿದೆ ಎಂದರು.

    ಕುವೆಂಪು ವಿವಿಯಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯ ಅಧ್ಯಯನ ಕೇಂದ್ರಕ್ಕೆ ಈಗಾಗಲೇ ರಾಜ್ಯಪಾಲರಿಂದ ಅನುಮೋದನೆ ದೊರೆತಿದ್ದು, ಸರ್ಕಾರ ಇನ್ನೂ ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ. ಲೋಕಸಭೆ ಚುನಾವಣೆಯ ನಂತರ ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

    ಧಾರ್ಮಿಕ ಸತ್ಕ್ರಾಂತಿಯ ಮಹಾಪುರುಷ ಶ್ರೀಜಗದ್ಗುರು ರೇಣುಕಾಚಾರ್ಯರು; ಶ್ರೀರಂಭಾಪುರಿ ಜಗದ್ಗುರುಗಳ ಅಭಿಮತ

    ಸಿದ್ಧಾಂತ ಶಿಖಾಮಣಿ ಗ್ರಂಥ ಬಿಡುಗಡೆ:

    ನಾಡುಕಂಡ ಶ್ರೇಷ್ಠ ವಿದ್ವಾಂಸ ಡಾ.ಜಚನಿಯವರು ಬರೆದಿರುವ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಕನ್ನಡಾನುವಾದದ ಕೃತಿಯನ್ನು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಮರುಮುದ್ರಣವಾದ ಕೃತಿಯನ್ನು ಹಿರಿಯ ವಿದ್ವಾಂಸ ಡಾ.ಸಿ.ಶಿವಕುಮಾರಸ್ವಾಮಿ ಸಂಪಾದಿಸಿದ್ದು, 1380 ಶ್ಲೋಕಗಳಿಂದ ಕೂಡಿದೆ.

    ಜಾತಿ, ಮತ, ಪಂಥವನ್ನು ಮೀರಿದ ಎಲ್ಲ ಜನಾಂಗದವರಿಗೆ ಬೇಕಾದ ತತ್ವಾದರ್ಶಗಳ ಸಾರ ಶ್ರೀಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿದೆ. ದಶಧರ್ಮ ಸೂತ್ರದ ಆಧಾರದಲ್ಲಿ ಶಿವಾದ್ವೆತ ಸಿದ್ಧಾಂತವನ್ನು ಜಗದ್ಗುರು ರೇಣುಕರು ಅಗಸ್ತ್ಯ ಮಹಾಮುನಿಗೆ ಬೋದಿಸಿದ್ದು, ರೇಣುಕ ಗೀತೆ, ರೇಣುಕಾಗಸ್ತ್ಯ ಸಂವಾದ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts