More

    ಡಾ. ಸಿದ್ಧನಗೌಡ ನಿಧನಕ್ಕೆ ಸಚಿವರು, ಸಾಹಿತಿ-ಗಣ್ಯರ ಸಂತಾಪ

    ಬೆಳಗಾವಿ: ಗಡಿನಾಡಿನ ಕನ್ನಡದ ಸೇನಾನಿ, ಕನ್ನಡಾಭಿಮಾನಿ, ಪಂಚಭಾಷಾ ಪರಿಸರದಲ್ಲಿ ಕನ್ನಡ ಕಟ್ಟಿಬೆಳೆಸಿದ ನಾಡಾಭಿಮಾನಿ, ಬೆಳಗಾವಿಯಲ್ಲಿ ಕನ್ನಡದ ಉಳಿವಿಗಾಗಿ ಬದುಕಿನುದ್ದಕ್ಕೂ ಶ್ರಮಿಸಿದ ಹಿರಿಯ ಜೀವಿ ಡಾ. ಸಿದ್ಧನಗೌಡ ಪಾಟೀಲ ಅವರ ಅಗಲಿಕೆಗೆ ಸಚಿವರು, ಸಾಹಿತಿಗಳು, ಕನ್ನಡ ಹೋರಾಟಗಾರರು ಹಾಗೂ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

    ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸಂತಾಪ ವ್ಯಕ್ತಪಡಿಸಿದ್ದು, ಪ್ರಪ್ರಥಮ ಕನ್ನಡದ ಮೇಯರ್ ಆಗಿ ಸೇವೆ ಸಲ್ಲಿಸಿದ್ದ ಡಾ. ಸಿದ್ಧನಗೌಡ ಪಾಟೀಲ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಮರಾಠಿ ಪ್ರಾಬಲ್ಯದ ವೇಳೆ ಕನ್ನಡಪರ ಹೋರಾಟ ನಡೆಸಿ ಬೆಳಗಾವಿಯಲ್ಲಿ ಕನ್ನಡದ ಕಂಪು ಪಸರಿಸಲು ಅವರು ನೀಡಿದ ಕೊಡುಗೆ ಅಪಾರ. ಬೆಳಗಾವಿ ಜನತೆ ಕನ್ನಡದ ಕಟ್ಟಾಳುವನ್ನು ಕಳೆದುಕೊಂಡು ದುಃಖಿತವಾಗಿದೆ ಎಂದಿದ್ದಾರೆ.

    ಕೆಎಲ್‌ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು, ಬೆಳಗಾವಿ ಪಾಲಿಕೆಗೆ ಕನ್ನಡಿಗನೋರ್ವ ಮೇಯರ್ ಆಗಿ ಇತಿಹಾಸ ಸೃಷ್ಟಿಸಿದ ಕೀರ್ತ ಡಾ. ಸಿದ್ದನಗೌಡ ಪಾಟೀಲರಿಗೆ ಸಲ್ಲುತ್ತದೆ. ಕೆಎಲ್‌ಇ ಸಂಸ್ಥೆಯ ಗಿಲಗಂಚಿ ಅರಟಾಳ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದ ಬ.ಗಂ. ತುರಮರಿ, ಎಸ್.ಡಿ. ಇಂಚಲ, ಡಾ. ಡಿ.ಎಸ್. ಕರ್ಕಿ ಇವರ ಮಾರ್ಗದರ್ಶನದಲ್ಲಿ ಕನ್ನಡದ ದೀಕ್ಷೆ ತೊಟ್ಟವರು ಅವರು. ಕೆಎಲ್‌ಇ ಸಂಸ್ಥೆಯ ಅಭಿಮಾನಿಗಳೂ ಆಗಿದ್ದ ಅವರ ನಿಧನದ ಸುದ್ದಿ ತೀವ್ರ ದುಃಖ ತರಿಸಿದೆ ಎಂದು ಹೇಳಿದ್ದಾರೆ.

    ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಬೆಳಗಾವಿಯಲ್ಲಿ ಕನ್ನಡ ಭಾಷಿಕರೋರ್ವರು ಪ್ರಥಮ ಬಾರಿಗೆ ಮಹಾಪೌರರಾಗಿ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಅವರದ್ದು. ನಾಡು, ನುಡಿ ಹಾಗೂ ಗಡಿ ವಿಷಯದ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಡಾ. ಸಿದ್ಧನಗೌಡ ಪಾಟೀಲ ಅವರ ಕುಟುಂಬಕ್ಕೆ ದೇವರು ದುಃಖ ಸಹಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.

    ಬೆಳಗಾವಿಯ ಕನ್ನಡಿಗರ ಧ್ವನಿಯಾಗಿದ್ದ ಸಿದ್ಧ್ದನಗೌಡರು ಕನ್ನಡಿಗರು ತಲೆಎತ್ತಿ ಓಡಾಡುವಂಥ ವಾತಾವರಣ ನಿರ್ಮಿಸಿದರು. ಬೆಳಗಾವಿ ನಾಡಹಬ್ಬ ಎಂದರೆ ಸಿದ್ಧನಗೌಡ ಪಾಟೀಲರು ಎನ್ನುವಷ್ಟರ ಮಟ್ಟಿಗೆ ಅವರು ಗಮನ ಸೆಳೆದಿದ್ದರು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ಹಾನಿಯನ್ನುಂಟುಮಾಡಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಹಾಗೂ ಪದಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts