ಕಳಸ: ಸಂಸ್ಕೃತಿ ಆಚಾರ ವಿಚಾರಗಳ ಆಧಾರದಲ್ಲಿ ಭಾರತ ನಿಂತಿದ್ದು, ನಮ್ಮ ಸಂಸ್ಕೃತಿ, ಭಾಷೆ, ಧರ್ಮವನ್ನು ಮಕ್ಕಳಿಗೆ ಕಲಿಸಿದರೆ ಮಾತ್ರ ನಮ್ಮವರಾಗಿ ಉಳಿಯುತ್ತಾರೆ ಎಂದು ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಶನಿವಾರ ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದ ರಜತ ಮಹೋತ್ಸವ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿ, ನಮ್ಮ ಸಂಪ್ರದಾಯಕ್ಕೆ ಇಂಗ್ಲಿಷ್ ವ್ಯಾಮೋಹ ಅಡ್ಡಿಪಡಿಸಿದೆ. ಮೂರು ವರ್ಷಗಳ ನಂತರ ನೀಡುವ ಶಿಕ್ಷಣದ ಮೇಲೆ ಆ ಮಗುವಿನ ಭವಿಷ್ಯ ನಿಲ್ಲಲಿದೆ. ಪ್ರಬೋಧಿನಿಯಂತ ವಿದ್ಯಾಕೇಂದ್ರಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದರೆ ಅನಾಥಾಶ್ರಮಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಹೇಳಿದರು.
ಬ್ರಿಟಿಷರು ನಮ್ಮಲ್ಲಿ ಒಡಕು ಮೂಡಿಸಿ ನಮ್ಮನ್ನು ಆಳಲು ತೊಡಗಿದರು. ಮೆಕಾಲೆ ಎನ್ನುವ ಅಧಿಕಾರಿ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಇಂಗ್ಲಿಷ್ ಭಾಷೆಯನ್ನು ತಂದು ದೇಶದ ಜನರಲ್ಲಿ ಇಂಗ್ಲಿಷ್ ವ್ಯಾಮೋಹ ಬೆಳೆಸಿ ಅದರ ಮೂಲಕ ನಮ್ಮ ಸಂಸ್ಕೃತಿ ನಾಶ ಪಡಿಸುವ ವ್ಯವಸ್ಥಿತ ಸಂಚು ನಡೆಸಿದ ಎಂದರು.
ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ. ಜಿ.ಭೀಮೆಶ್ವರ ಜೋಷಿ ಮಾತನಾಡಿ, ನಮ್ಮ ಮಕ್ಕಳು ಇಂಜಿನಿಯರ್, ವೈದ್ಯರಾಗಿ ಹಣ ಮಾಡುವ ಯಂತ್ರಗಳಾಗಬೇಕು ಎನ್ನುವ ಆಸೆ ಬಿಟ್ಟು ನನ್ನ ಮಗ ಪ್ರಾಮಾಣಿಕವಾಗಿ ಭಾರತೀಯನಾಗಿ, ಈ ದೇಶದ ಉತ್ತಮ ಪ್ರಜೆಯಾಗಿ ಇರಬೇಕು ಎನ್ನುವ ಆಸೆ ಇರಬೇಕು. ಆಂಗ್ಲ ಮಾಧ್ಯಮ ಶಾಲೆಗಳು ಮಕ್ಕಳನ್ನು ವಿದ್ಯೆಯ ಯಂತ್ರಗಳನ್ನಾಗಿ ಮಾಡುತ್ತಿವೆ ಹೊರತು ಒಬ್ಬ ಭಾರತೀಯನಾಗಿ ಮಾಡುತ್ತಿಲ್ಲ ಎಂದು ಹೇಳಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ, ವಿದ್ಯಾಕೇಂದ್ರ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಹೊರನಾಡಿನ ರಾಜಲಕ್ಷ್ಮೀ ಬಿ. ಜೋಷಿ, ಶಕ್ತಿಗಣಪತಿ ಸೇವ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಕೆ.ಟಿ.ಅನಂತ ರಾವ್, ವಿದ್ಯಾಕೇಂದ್ರದ ಕಾರ್ಯದರ್ಶಿ ರಾಘವೇಂದ್ರ ಭಟ್, ಖಜಾಂಚಿ ಬಾಲಕೃಷ್ಣ, ಬಿ.ಆರ್.ಲಕ್ಷ್ಮ್ಮ ಗೌಡ ಇತರರು ಇದ್ದರು.