More

    ಅಮೃತ ಭಾರತ: ಹೋರಾಟಕ್ಕೆ ಕೆಚ್ಚು ತುಂಬಿದ ಭಾರತ

    ಅಮೃತ ಭಾರತ: ಹೋರಾಟಕ್ಕೆ ಕೆಚ್ಚು ತುಂಬಿದ ಭಾರತ|ಡಾ.ಎನ್​.ಎಸ್​. ರಂಗರಾಜು

    ಭಾರತದ ಸ್ವಾತಂತ್ರ ಹೋರಾಟದಲ್ಲಿ ದೇಶದ ಪ್ರತಿಯೊಂದು ರಾಜ್ಯಗಳು ಭಾಗವಹಿಸಿರುವುದು ಇತಿಹಾಸವಾಗಿದೆ. ವಿವಿಧ ರಾಜ್ಯಗಳಲ್ಲಿ ವಿವಿಧ ಭಾಷೆಗಳು ಮತ್ತು ಸಂಸತಿಗಳಿದ್ದರೂ ಎಲ್ಲರದ್ದೂ ಒಂದೇ ಗುರಿಯಾಗಿತ್ತು.

    ಈ ನಿಟ್ಟಿನಲ್ಲಿ ಇಂದಿನ ಕರ್ನಾಟಕ, ಅಂದರೆ ಆಗಿನ ಮೈಸೂರು ರಾಜ್ಯದ ಪಾತ್ರವೂ ಪ್ರಮುಖ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹವರ ಹೋರಾಟಗಳು ಅನಂತರದ ಚಳವಳಿಗಳಿಗೆ ನಾಂದಿಯಾದವು. ಗಾಂಧೀಜಿ ಅವರು ಮೈಸೂರು ಸಂಸ್ಥಾನದ ಉದ್ದಗಲಕ್ಕೂ ಪ್ರವಾಸ ಮಾಡಿ ಎಲ್ಲ ವರ್ಗದ ಜನರನ್ನು ಹುರಿದುಂಬಿಸಿ ಅಹಿಂಸಾ ಮಾರ್ಗದಲ್ಲಿ ಅಸಹಕಾರ ಚಳವಳಿಗಳಲ್ಲಿ ಭಾಗವಹಿಸಲು ಪ್ರೇರೇಪಿಸಿದರು. ಗಾಂಧಿಯವರು 1915 ರಿಂದ 1937 ರವರೆಗಿನ ಅವಧಿಯಲ್ಲಿ ಕರ್ನಾಟಕಕ್ಕೆ 16 ಸಾರಿ ಭೇಟಿ ಕೊಟ್ಟಿದ್ದರು. ಅದರಲ್ಲಿ 5 ಸಾರಿ ಮೈಸೂರು ಸಂಸ್ಥಾನಕ್ಕೆ ಬಂದಿದ್ದರು. ಗಾಂಧೀಜಿ ದಣ ಆಫ್ರಿಕಾದಲ್ಲಿದ್ದಾಗ ಡಿ.ವಿ.ಗುಂಡಪ್ಪನವರು ಸುಮಾರು 1600 ರೂ. ದೇಣಿಗೆ ಸಂಗ್ರಹಿಸಿ ಕಳಿಸಿದ್ದರು. ದಿವಾನ್​ ಸರ್​ ಎಂ.ವಿಶ್ವೇಶ್ವರಯ್ಯ ಸಹ ವೈಯಕ್ತಿಕವಾಗಿ 200 ರೂ. ತಲುಪಿಸಿದ್ದರು.

    ಮೈಸೂರು ಭಾಗದ ಚಳವಳಿಗಳು
    ಗಾಂಧಿಯವರಿಂದ ಪ್ರಭಾವಿತರಾಗಿ ಜನರು ಎರಡು ಸಾರಿ ಮೈಸೂರಿನ ರಂಗಾಚಾರ್ಯರ ಪುರಭವನದಲ್ಲಿ ನಿಧಿ, ಒಡವೆ ಸಂಗ್ರಹಿಸಿದರು. ವಿಶೇಷವಾಗಿ ಹೆಣ್ಣು ಮಕ್ಕಳು ಹೆಚ್ಚು ಒಡವೆ ನೀಡಿದ್ದರು. ಮೈಸೂರು ನಗರದ ಮತ್ತು ಜಿಲ್ಲೆಯ ಜನರು ಶಾಂತಿಯುತ ಹರತಾಳಗಳಲ್ಲಿ ಭಾಗವಹಿಸುತ್ತಿದ್ದುದಲ್ಲದೇ ಸೆರೆವಾಸವನ್ನೂ ಅನುಭವಿಸಿದ್ದರು. ತಗಡೂರು ರಾಮಚಂದ್ರರಾಯರು, ಎಂ.ಎನ್​.ಜೋಯಿಸ್​, ತುಳಸಿದಾಸ್​ ದಾಸಪ್ಪ, ಅವರ ತಾಯಿ ಯಶೋದರಮ್ಮ ದಾಸಪ್ಪ, ಮರಿಮಲ್ಲಪ್ಪ ಪ್ರೌಢಶಾಲಾ ಪ್ರಿನ್ಸಿಪಾಲರಾದ ವೆಂಕಟಕೃಷ್ಣಯ್ಯ ಮತ್ತು ವಿದ್ಯಾರ್ಥಿಗಳು, ಪಾಲಹಳ್ಳಿ ಸೀತಾರಾಮಯ್ಯ ಇನ್ನೂ ಅನೇಕರು ಕ್ರೈಸ್ತಮತ ಪ್ರಚಾರಕರ ವಿರುದ್ಧ ಸಹ ಚಳವಳಿ ನಡೆಸಿದರು.

    1921ರಲ್ಲಿ ನಾಗಪುರದಲ್ಲಿ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್​ ಸಮಿತಿಯನ್ನು ಪ್ರಾರಂಭಿಸಿದ ಮೇಲೆ ಅದರ ಶಾಖೆಗಳು ಕರ್ನಾಟಕದಾದ್ಯಂತ ತೆರೆದುಕೊಂಡವು.

    ಸ್ವದೇಶಿ ಚಳವಳಿ
    ಮುದಿವೀಡು ಕೃಷ್ಣರಾವ್​ ಅವರು ಮೈಸೂರಿನಲ್ಲಿ ಮಾಡಿದ ಭಾಷಣದಿಂದ ಪ್ರೇರಣೆಗೊಂಡು ಜನರು ವಿದೇಶಿ ಬಟ್ಟೆ, ವಸ್ತುಗಳನ್ನು ಸುಡತೊಡಗಿದರು. ತಗಡೂರು ರಾಮಚಂದ್ರರಾಯರು ಮುಂಚೆ ಒಂದು ಬಂಡಿಯಲ್ಲಿ ವಿದೇಶಿ ಬಟ್ಟೆಗಳು ಮತ್ತು ವಸ್ತುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದರು. ನಂತರದಲ್ಲಿ, ಜನರೆಲ್ಲ ಆಶ್ಚರ್ಯ ಪಡುವಂತೆ ತಮ್ಮ ಬಂಡಿಸಹಿತ ವಸ್ತು ಸುಟ್ಟು ಅಸಹಕಾರ ಮತ್ತು ಸ್ವದೇಶಿ ಆಂದೋಲನದಲ್ಲಿ ತೊಡಗಿಸಿಕೊಂಡರು. ಅ1925ರಲ್ಲಿ ತಗಡೂರಿನಲ್ಲಿ ಖದ್ದಾರ್​ ಸಹಕಾರ ಸಂವನ್ನು ಸ್ಥಾಪಿಸಿದರು. ಇದು ಸುತ್ತಲಿನ ಹಳ್ಳಿಯ ಜನರಿಗೆ ಜೀವನಾಧಾರವಾಗಿ ಬೆಳೆಯಿತು.

    1919ರ, ಏಪ್ರಿಲ್​ ತಿಂಗಳಲ್ಲಿ ತಗಡೂರು ರಾಮಚಂದ್ರರಾಯರು ತಮ್ಮ ಹುಟ್ಟೂರು, ನಂಜನಗೂಡು ತಾಲೂಕಿನ ತಗಡೂರಿನಲ್ಲಿ ಸ್ವರಾಜ್ಯಮಂದಿರವನ್ನು ಸ್ಥಾಪಿಸಿದರು. ಈ ಪ್ರದೇಶದಲ್ಲಿ ಹರಿಜನರನ್ನು ಮತಾಂತರ ಮಾಡಲಾಗುತ್ತಿತ್ತು. ರಾಮಚಂದ್ರರಾಯರು ಇದನ್ನು ತಡೆಯತೊಡಗಿದರು. ಇವರ ಜತೆ ಇನ್ನೂ ಹಲವರು ಸೇರಿಕೊಂಡು 1920ರಿಂದ 1930 ರ ದಶಕದಲ್ಲಿ ನಿರಂತರ ಕಾರ್ಯಕ್ರಮ ರೂಪಿಸಿದ್ದರು. ರಾಮಚಂದ್ರರಾಯರು ಮೊದಲ ಬಾರಿಗೆ ಹರಿಜನರನ್ನು ತಿ.ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಾಲಯಕ್ಕೆ ಕರೆದುಕೊಂಡು ಹೋದರು. ಕಣಿಯಾರ್​ ಜಾತಿಯವರು ಸಾಮಾಜಿಕ ಬಹಿಷ್ಕಾರಗಳಿಂದ ಹೊರಬರಲು ಹೋರಾಡಿದರು.

    ಬೆಳಗಾವಿ ಕಾಂಗ್ರೆಸ್ಸಿನ ಡಾ.ಎನ್​.ಎಸ್​.ಹರ್ಡಿಕರ್​ ಮೈಸೂರಿನಲ್ಲಿ ಹಿಂದೂಸ್ಥಾನಿ ಸೇವಾದಳವನ್ನು ಹುಟ್ಟಿಹಾಕಿದರು. ವಾರದಲ್ಲಿ ಒಂದು ದಿನ ರಾಷ್ಟ್ರಧ್ವಜ ಹಾರಿಸುವುದು ಇತ್ಯಾದಿಗಳನ್ನು ನಡೆಸಲಾಗುತ್ತಿತ್ತು. ಈ ಕಾರ್ಯಕ್ರಮಗಳನ್ನು ಸರ್ಕಾರ ನಿಷೇಧಿಸಿದಾಗ ಆಯ್ದ ಕೆಲವರ ಮನೆಯ ಅಂಗಳದಲ್ಲಿ ಆಯೋಜಿಸುತ್ತಿದ್ದರು.

    ಸೈಮನ್​ ಕಮಿಷನ್​ ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ತಗಡೂರು ರಾಮಚಂದ್ರರಾಯರು “ಸೈಮನ್​ ಕಮಿಷನ್​ಗೆ ಧಿಕ್ಕಾರ’ ಎಂಬ ಪುಸ್ತಕ ಬರೆದು ಪ್ರಕಟಿಸಿ ಮೈಸೂರಿನಲ್ಲಿ ಭಾಷಣ ಮಾಡಿ 15 ದಿನಗಳ ಕಾಲ ಸೆರೆವಾಸ ಅನುಭವಿಸಿದರು. 1928ರಲ್ಲಿ ಇದು ಮೊದಲ ರಾಜಕೀಯ ಕೈದಿಯ ಸೆರೆವಾಸವಾಗಿತ್ತು.

    ಅಖಿಲ ಭಾರತ ಕಾಂಗ್ರೆಸ್​ ಸಮಿತಿಯ ಕರೆಯ ಮೇರೆಗೆ ಎಂ.ಎನ್​.ಜೋಯಿಸ್​, ಎನ್​.ವಿ.ರಾಜಗೋಪಾಲ ಅವರು ಜನವರಿ 26, 1930ರಂದು ಮೈಸೂರಿನಲ್ಲಿ ರಾಷ್ಟ್ರಧ್ವಜ ಹಾರಿಸಿದರು. ಎನ್​.ಡಿ.ಶ್ರೀರಂಗಾಚಾರ್​ ಮೈಸೂರು ನಗರ ವಿದ್ಯಾರ್ಥಿ ಸಂವನ್ನು ಸ್ಥಾಪಿಸಿದರೆ, ಮೇ 1931ರಲ್ಲಿ ಸೇವಾದಳ ಕಾರ್ಯಕರ್ತರಾದ ರಂಗನಾಥ ನಾಯಕ್​ ಕರ್ನಾಟಕ ವ್ಯಾಯಾಮ ಶಿಕ್ಷಣ ಶಿಬಿರವನ್ನು ಮೈಸೂರಿನಲ್ಲಿ ಪ್ರಾರಂಭಿಸಿ ವಿವಿಧ ಸತ್ಯಾಗ್ರಹಗಳ ಬಗ್ಗೆ ಕಾರ್ಯಾಗಾರ ನಡೆಸಿದರು. ಇದರ ಸಮಾರೋಪ ಭಾಷಣ ಮಾಡಲು ಜವಾಹರ್​ಲಾಲ್​ ನೆಹರು ಅವರು ಪತ್ನಿ, ಮಗಳೊಂದಿಗೆ ಬಂದಿದ್ದರು.

    05-01-1934ರಂದು ಗಾಂಧೀಜಿ ಮೈಸೂರು, ತಗಡೂರು, ಬದನವಾಳು ಮತ್ತು ನಂಜನಗೂಡಿಗೆ ಭೇಟಿ ಕೊಟ್ಟು ಅಸ್ಪಶ್ಯತೆಯನ್ನು ತೊಡೆದು ಹಾಕುವ ಭಾಷಣಗಳನ್ನು ಮಾಡಿ ಹರಿಜನರ ಹುಂಡಿಗೆ ಹಣ ಸಂಗ್ರಹಿಸಿ ಸತ್ಯಾಗ್ರಹಿಗಳನ್ನು ಹುರಿದುಂಬಿಸಿದರು.

    ಚಳವಳಿಯ ಪ್ರಯೋಗಶಾಲೆ
    ಮೈಸೂರು ನಗರದ ಜನರು ಎಲ್ಲ ರೀತಿಯ ಅಸಹಕಾರ ಚಳವಳಿ ಕೈಗೊಂಡರು. ಮೈಸೂರು ಅಸಹಕಾರ ಚಳವಳಿ ಪ್ರಯೋಗಶಾಲೆಯಂತಾಗಿತ್ತು. ಮಹಾರಾಜ ಕಾಲೇಜು ಮತ್ತು ಹಾಸ್ಟೆಲ್​ ಅನ್ನು ಸ್ವರಾಜ್ಯ ಭವನ್​ ಎಂದು ಕರೆಯುತ್ತಿದ್ದರು. ಮೈಸೂರಿನ ಅನೇಕ ಕಾಲೇಜು ಮತ್ತು ಹೈಸ್ಕೂಲ್​ ವಿದ್ಯಾರ್ಥಿಗಳು ಸಕ್ರಿಯವಾಗಿ ಚಳವಳಿಗಳಲ್ಲಿ ಭಾಗವಹಿಸಿದ್ದರು. ಮೈಸೂರಿನ ಕೆ.ಆರ್​. ಮಿಲ್​ನ ನೌಕರರು ಸಹ ಭಾಗಿಯಾಗಿದ್ದರು. “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯ ಭಾಗವಾಗಿ ಅನೇಕರು ಬಂಧನಕ್ಕೆ ಒಳಗಾಗಿದ್ದರೂ ವಿದ್ಯಾರ್ಥಿ ಸಮೂಹದ ಹೋರಾಟ ಮಾತ್ರ ನಿಲ್ಲಲಿಲ್ಲ. ಹನ್ನೊಂದು ವಾರಗಳ ಕಾಲ ನಡೆದ ಈ ಚಳವಳಿ ಕರ್ನಾಟಕದ ವಿದ್ಯಾರ್ಥಿಗಳ ಚಳವಳಿಯಲ್ಲಿ ಒಂದು ದಾಖಲೆಯಾಗಿದೆ.

    ಬರಹದಿಂದ ಪ್ರೇರಣೆ
    ಕರ್ನಾಟಕದಲ್ಲಿ ರಾಷ್ಟ್ರೀಯತೆ ಚಳವಳಿ ಚಿಗುರಲು ಇಂಗ್ಲಿಷ್​ ಮತ್ತು ಪಾಶ್ಚಾತ್ಯ ಶಿಕ್ಷಣಗಳೂ ಮುಖ್ಯ ಕಾರಣ. ಇಲ್ಲಿಯ ಗುಡಿ ಕೈಗಾರಿಕೆಗಳ ನಾಶದಿಂದ ಜನ ನರಳಿ ಕೆರಳಿದ್ದು ಇನ್ನೊಂದು ಕಾರಣ. ಆಲೂರು ವೆಂಕಟರಾಯರು, ಗಳಗನಾಥ, ಶಾಂತಕವಿ, ಕೆರೂರು ವಾಸುದೇವಾಚಾರ್ಯ, ಸುಬೋಧ ರಾಮರಾಯ, ಬಿ.ವೆಂಕಟಾಚಾರ್ಯ ಮತ್ತಿತರರು ಆರಂಭ ಹಂತದಲ್ಲಿ ತಮ್ಮ ಬರಹಗಳಿಂದ ರಾಷ್ಟ್ರೀಯ ಭಾವನೆಗಳನ್ನು ಬಿತ್ತಿದರು.

    1885ರಲ್ಲಿ ಮುಂಬೈನಲ್ಲಿ ನಡೆದ ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​ ಅಧಿವೇಶನಕ್ಕೆ ಕರ್ನಾಟಕದಿಂದ ಮೊಟ್ಟ ಮೊದಲಿಗೆ ಬೆಳಗಾವಿ ಮತ್ತು ಬಳ್ಳಾರಿ ಕಡೆಯ ಎರಡು ತಂಡಗಳು ಹೋಗಿದ್ದವು. 1907ರಲ್ಲಿ ಸೂರತ್​ ಕಾಂಗ್ರೆಸ್​ ಅಧಿವೇಶನಕ್ಕೆ ಧಾರವಾಡದಿಂದ ಆಲೂರು ವೆಂಕಟರಾಯರು ಮತ್ತು ಅಣ್ಣಾಚಾರ್ಯ ಹೊಸಕೇರಿ, ವಿಜಾಪುರದಿಂದ ಶ್ರೀನಿವಾಸರಾವ್​ ಕೌಜಲಗಿ, ಬೆಳಗಾವಿಯಿಂದ ಗಂಗಾಧರರಾವ್​ ದೇಶಪಾಂಡೆ ಹೋಗಿದ್ದರು.

    ಮುಂಬೈ ಪ್ರಾಂತ್ಯ ರಾಜಕೀಯ ಸಮ್ಮೇಳನವು 1916ರಲ್ಲಿ ಬೆಳಗಾವಿಯಲ್ಲಿ ಹಾಗೂ 1918ರಲ್ಲಿ ಬಿಜಾಪುರದಲ್ಲಿ ನಡೆದಾಗ ಎರಡಕ್ಕೂ ಗಾಂಧೀಜಿ ಬಂದಿದ್ದರು. ಹೈದರಾಬಾದ್​- ಕರ್ನಾಟಕ ಪ್ರದೇಶದಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವಲ್ಲಿ ಆರ್ಯ ಸಮಾಜ ಮುಖ್ಯವಾದ ಪಾತ್ರ ವಹಿಸಿತ್ತು. ಚಿಂಚೋಳಿ, ಕಲ್ಬುರ್ಗಿ, ರಾಯಚೂರು ಮತ್ತು ಕಾಕನೂರುಗಳಲ್ಲಿ ರಾಷ್ಟ್ರೀಯ ಶಾಲೆಗಳು ಆರಂಭಗೊಂಡವು.

    1920ರಲ್ಲಿ ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯ ರಾಜಕೀಯ ಸಮ್ಮೇಳನದ ಅಧ್ಯಕ್ಷತೆಯನ್ನು ಮೈಸೂರಿನ ಮಾಜಿ ದಿವಾನ್​ ವಿ.ಪಿ.ಮಾಧವರಾವ್​ ವಹಿಸಿದ್ದರು. ಅಲ್ಲಿ ತೆಗೆದುಕೊಂಡ ರ್ನಿಣಯ ಫಲವಾಗಿ 800ರಷ್ಟು ಪ್ರತಿನಿಧಿಗಳು ಅದೇ ವರ್ಷ ನಾಗಪುರದಲ್ಲಿ ನಡೆದ ಕಾಂಗ್ರೆಸ್​ ಅಧಿವೇಶನಕ್ಕೆ ಹೋದರು. ಅಲ್ಲಿ ಪ್ರತ್ಯೇಕ ಪ್ರದೇಶ ಕಾಂಗ್ರೆಸ್​ ಸಮಿತಿ ಸ್ಥಾಪಿಸಿಕೊಳ್ಳಲು ಅನುಮತಿ ದೊರೆತು, “ಕರ್ನಾಟಕದ ಸಿಂಹ’ ಎನಿಸಿಕೊಂಡಿದ್ದ ಗಂಗಾಧರರಾವ್​ ಮೊದಲ ಅಧ್ಯಕ್ಷರಾದರು. ಅದರಡಿಯಲ್ಲಿ ಇಡೀ ಮೈಸೂರು ಸಂಸ್ಥಾನವನ್ನು ಒಂದು ಜಿಲ್ಲೆಯಾಗಿ ಪರಿಗಣಿಸಿ ಜಿಲ್ಲಾ ಕಾಂಗ್ರೆಸ್​ ಸಮಿತಿಯನ್ನು ಜಸ್ಟಿಸ್​ ಸೆಟ್ಟೂರ್​ ಅಧ್ಯಕ್ಷತೆಯಲ್ಲಿ ಸ್ಥಾಪಿಸಿದರು.

    ಅಸಹಕಾರ ಚಳವಳಿ
    ಅಸಹಕಾರ ಚಳವಳಿಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಚೇರಿ, ಶಾಲೆ, ಕಾಲೇಜು, ಕೋರ್ಟ್​ಗಳನ್ನು ತ್ಯಜಿಸಿ ಭಾರಿ ಸಂಖ್ಯೆಯ ಜನ ಹೊರಬಂದರು. ಬೆಳಗಾವಿ, ವಿಜಾಪುರ,ಗದಗ, ಮಂಗಳೂರು, ಹೊನ್ನಾವರ, ಶಿರಸಿ, ಧಾರವಾಡ ಮುಂತಾದೆಡೆಗಳಲ್ಲಿ ನೂರಾರು ಜನರು ವಕೀಲ ವೃತ್ತಿ ಬಿಟ್ಟು ರಾಷ್ಟ್ರೀಯ ಚಳವಳಿಯಲ್ಲಿ ಧುಮುಕಿದರು.

    1921-22ರಲ್ಲಿ ವಿದೇಶಿ ವಸ್ತುಗಳ ತ್ಯಜಿಸುವ ಸಭೆ, ಮೆರವಣಿಯಲ್ಲಿ ಭಾಗವಹಿಸಿದ್ದ 70 ಜನರನ್ನು ಬಂಧಿಸಲಾಯಿತು. ಮದ್ಯದಂಗಡಿಯ ಮುಂದೆ ಪಿಕೆಟಿಂಗ್​ಗಾಗಿ ಜನ ಮುತ್ತಿದಾಗ ಧಾರವಾಡದಲ್ಲಿ 1921 ಜುಲೈ 1ರಲ್ಲಿ ಗೋಲಿಬಾರ್​ ನಡೆದು ಮಾಲಿಕಸಾಬ, ಗೌಸ್​ ಸಾಬ ಮತ್ತು ಚುಗ್ತಾಯಿ ಎಂಬವರು ಹುತಾತ್ಮರಾದರು. ಆಗ ಆರ್​.ಆರ್​.ದಿವಾಕರ್​, ವಾಮನರಾವ್​, ಜಠಾರ್​ ಸೇರಿದಂತೆ 29 ಜನರನ್ನು ಬಂಧಿಸಿ, ಜೈಲು ಶಿಕ್ಷೆ ವಿಧಿಸಲಾಯಿತು. ನವಲಗುಂದದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ 1921ರಲ್ಲಿ ಗಂಗಾಧರರಾವ್​ ದೇಶಪಾಂಡೆ ಅವರನ್ನು ಬಂಧಿಸಲಾಯಿತು. ಉತ್ತರ ಕನ್ನಡದ ಸಿದ್ದಾಪುರದ ಚೌಡನಾಯಕ ಎಂಬ ರೈತ ಮೊದಲ ರಾಜಕೀಯ ಬಂಧಿ ಆದರು. ಶಿರಸಿಯಲ್ಲಿ ಹೆಡ್ಮಾಸ್ಟರ್​ ಹುದ್ದೆಗೆ ರಾಜೀನಾಮೆ ನೀಡಿ ಅಲ್ಲಿನ ನ್ಯಾಷನಲ್​ ಸ್ಕೂಲೊಂದನ್ನು ಸೇರಿದ್ದ ತಿಮ್ಮನಾಯಕ ಕೂಡ ಜೈಲು ಸೇರಿದರು. ಆದರೆ, ರಾಷ್ಟ್ರೀಯತೆಯನ್ನು ಬಿತ್ತುವ ಕಾರ್ಯವು ಶಾಲೆಗಳಲ್ಲಿ ನಡೆದುಕೊಂಡು ಬಂದಿತು.

    ಮಂಗಳೂರಿನಲ್ಲಿ 1921ರಲ್ಲಿ ಕಾರ್ನಾಡ ಸದಾಶಿವರಾಯರು ಸ್ಥಾಪಿಸಿದ ಶಾಲೆ, ಧಾರವಾಡದಲ್ಲಿ ಆಲೂರರ ಶಾಲೆ, ಹುಬ್ಬಳ್ಳಿಯಲ್ಲಿ ಬುರ್ಸೆ ಅವರ ಶಾಲೆ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 50 ಇಂಥ ಶಾಲೆ ಶಾಲೆಗಳಿದ್ದವು. ಬೆಳಗಾವಿ, ಬಾಗಲಕೋಟೆ, ವಿಜಾಪುರ ಶಾಲೆಗಳೂ ಇದೇ ಗುಂಪಿಗೆ ಸೇರಿದ್ದವು.

    ನಿಷೇಧಾಜ್ಞೆಯನ್ನು ಮುರಿದಿದ್ದಕ್ಕಾಗಿ ಬಳ್ಳಾರಿಯಲ್ಲಿ ಟೇಕೂರು ನಾರಾಯಣ ಶಾಸಿ, ಕಲ್ಲೂರು ಸುಬ್ಬರಾವ್​ ಮತ್ತು ಸಾಂಗ್ಲಿ ಭೀಮಸೇನರಾವ್​ ಅವರು ಆರು ತಿಂಗಳ ಶಿಕ್ಷೆಗೆ ಗುರಿ ಆದರು. ಬೆಳಗಾವಿ ಮತ್ತು ಗೋಕಾಕ್​ಗಳಲ್ಲೂ ಇದೇ ವಿದ್ಯಮಾನ.

    1930ರ ಆಗಸ್ಟ್​ನಲ್ಲಿ ಹಾವೇರಿಯಲ್ಲಿ ಹರ್ಡೇಕರ ಮಂಜಪ್ಪ ನೇತೃತ್ವದಲ್ಲಿ ಸೇರಿದ್ದ ವೀರಶೈವ ಮಹಾಸಭಾ, ವೀರಶೈವರು ಕಾಂಗ್ರೆಸ್​ ಸೇರಬೇಕೆಂದು ರ್ನಿಣಯ ಕೈಗೊಂಡಿತು. 1930ರಲ್ಲಿ ಕಾನೂನು ಭಂಗ ಚಳವಳಿಯು ಕರ್ನಾಟಕದಲ್ಲಿ ಒಂದಿಲ್ಲೊಂದು ಬಗೆಯ ಪ್ರತಿರೋಧಕ್ಕೆ ದಾರಿ ಮಾಡಿಕೊಟ್ಟಿತು; ನೂರಾರು ಮಂದಿ ಜೈಲು ಸೇರಿದರು.
    (ಲೇಖಕರು ನಿವೃತ್ತ ಪ್ರಾಧ್ಯಾಪಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts