More

    ಮೋದಿ ಮುಂದಿರುವ ಸವಾಲು ಮತ್ತು ಪರಿಹಾರ; ಡಾ.ಕೆ.ಎಸ್​. ನಾರಾಯಣಾಚಾರ್ಯರ ಅಂಕಣ

    ಮೋದಿ ಮುಂದಿರುವ ಸವಾಲು ಮತ್ತು ಪರಿಹಾರ; ಡಾ.ಕೆ.ಎಸ್​. ನಾರಾಯಣಾಚಾರ್ಯರ ಅಂಕಣ

    ಯಾರೇ ತಿಳಿಯದೇ ಇರುವ ವ್ಯಕ್ತಿ, ಪ್ರಶ್ನೆ, ಸಂದರ್ಭಗಳನ್ನು ‘ಯಕ್ಷ’ ಎಂದು ಸಾಮಾನ್ಯವಾಗಿ ಹೇಳಿಬಿಡುವುದು ವೇದಾಂತದ ಪರಿಭಾಷೆ. ದೇವಾಸುರ ಯುದ್ಧದಲ್ಲಿ ವಿಜಯ ತನ್ನದೇ ಎಂದು ಜಂಭಪಡುತ್ತಿದ್ದ ಇಂದ್ರ, ಅಗ್ನಿ, ವಾಯುಗಳ ಗರ್ವ ಬಿಡಿಸಿದ್ದು ‘ಯಕ್ಷ’! ಇದು ‘ಭಗವಂತ’ ಎಂದು ಉಮಾ ಹೈಮವತೀ ಉಪದೇಶಿಸಿದಳು ಎಂಬುದು ಕೇನೋಪನಿಷತ್ತಿನ ನಿರೂಪಣೆ. ಮಹಾಭಾರತ ವನಪರ್ವದ ವಿಷ ಸರೋವರದ ರಕ್ಷಕ, ಉಳಿದ ಪಾಂಡವರನ್ನು ಸಾಯಿಸಿ, ಯುಧಿಷ್ಠಿರನಿಂದ ಧರ್ಮಪ್ರಶ್ನೆಗಳಿಗೆ ಉತ್ತರ ಪಡೆದ ಯಕ್ಷ, ಯಮರೂಪೀ ಧರ್ಮರಾಜ ಎಂಬುದು. ಇಂದಿಗೂ ಪರಿಹಾರ ಕಾಣದ ಪ್ರಶ್ನೆಗಳಿಗೆ ‘ಯಕ್ಷಪ್ರಶ್ನೆ’ ರೂಢಿಯಲ್ಲಿದೆ. ಇದನ್ನು ಕವಿ ಬೇಂದ್ರೆ ತಮ್ಮದೇ ರೀತಿಯಲ್ಲಿ ‘ಯಾವನೋ ತಿಳಿಯದವ’ ಎಂಬಲ್ಲಿ ‘XY’ ಎಂದು ಹೇಳುವಂತೆ, ತಿರುವು ಮುರುವಾಗಿಸಿದರೆ ‘YX=ಯಕ್ಷ’ ಎಂದು ತಮಾಷೆಯಾಗಿ ಹೇಳುತ್ತಿದ್ದರು. ಈಗ ಭಾರತ, ವಿಶ್ವದ ಪಾಲಿಗೆ ನಮ್ಮ ಮೋದಿ ‘ಯಕ್ಷ’ರಾಗಿ ಒದಗಿ ಬಂದಿರುತ್ತಾರೆ. ಭಾಜಪದ ಘಟಾನುಘಟಿ ಆಡ್ವಾಣಿ, ಯಶವಂತ್ ಸಿನ್ಹಾ, ಅರುಣ್ ಶೌರಿಯವರಿಗೇ ಈ ತ್ರಿವಿಕ್ರಮ ಇನ್ನೂ ಅರ್ಥವಾಗಿಲ್ಲ! ಇದು ಭಾರತದ ಪಾಲಿಗೆ ‘ಬಲಿಹರಣ’, ತ್ರೖೆಲೋಕ್ಯ ಸಂರಕ್ಷಣೆಯ ಸಂದರ್ಭ. ನನ್ನಂತೆ ಕೋಟಿ, ಕೋಟಿ ಭಾರತೀಯರ ಶ್ರದ್ಧೆ, ಭರವಸೆ, ಆಕಾಂಕ್ಷೆ ಈ ಮೋದಿ ಉದಯದಲ್ಲಿ. ಮೋದಿಯವರ ತ್ರಿವಿಕ್ರಮಾವತಾರದ ಒಂದು ಪಾದ ಈಗ ಕಾಂಗ್ರೆಸ್​ನ ಮೇಲಿದ್ದು, ಈಗ ಬಲಿ ಸ್ತ್ರೀರೂಪದಲ್ಲಿ ಇರುವುದು ಅಭಿನವ ಚರಿತ್ರೆ.

    ‘ಶುಕ್ರನೀತಿಗೆ ಅಂದೇ ಒಕ್ಕಣ್ಣು’ ಎಂದು ಬೇಂದ್ರೆ ‘ನಾಕುತಂತಿ’ಯ ‘ಇಂದ್ರ-ಪಟ್ಟ’ ಕವನದಲ್ಲಿ ಬರೆದರು. ‘ಇಂದ್ರಪಟ್ಟ’ ಈಗ ‘ಇಂದ್ರ ಪರಿಭವ ಪಟ್ಟ’ ಎಂಬರ್ಥವಾಗಿ, ಕಾಂಗ್ರೆಸ್ಸನ್ನು ಯಾರು ನಿರ್ಣಾಯಕವಾಗಿ ಸಾಯಿಸಬೇಕೆಂಬ ಸ್ಪರ್ಧೆ ಅವರವರಲ್ಲೇ ಎದ್ದಿದೆ. ಇರಲಿ. ಅಮೆರಿಕದಲ್ಲಿರುವ ಭಾರತೀಯ ಮೂಲಕ ಅನೇಕ ಯುವ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ, ನನ್ನ ಮೊಮ್ಮಕ್ಕಳಂತೆ, ಮೋದಿ ಬಗ್ಗೆ ಕೆಲವು ಆಕ್ಷೇಪಗಳು, ಸವಾಲುಗಳ ಅರಿವು, ಅವರದೇ ಹಿನ್ನೆಲೆಯಲ್ಲಿ. ಅಮೆರಿಕದ ವಾರ್ತಾ, ಪ್ರಸಾರ, ದೃಶ್ಯವಾಹಿನಿಗಳ ಜಾಹೀರುಗಳ ಹಿನ್ನೆಲೆಯಲ್ಲಿ ಹೀಗಿವೆ-‘ಮೋದಿ ಕೃಷಿ ಭಾಗವನ್ನು ನಿರ್ಲಕ್ಷಿಸಿ, ಕಾಪೋರೇಟ್ ಸೆಕ್ಟರ್ ಎಂಬ ಬೃಹತ್ ಉದ್ದಿಮೆದಾರರ ಪರವಾಗಿ ನೀತಿ ರೂಪಿಸಿದ್ದಾರೆ. ರೈತರ ಆತ್ಮಹತ್ಯೆ ನಿಂತಿಲ್ಲ. ರೋಗ ನಿಯಂತ್ರಣ ಆಗುತ್ತಿಲ್ಲ. ದಕ್ಷಿಣ ಭಾರತದ ಜಿಡಿಪಿ, ಜಿಎಸ್​ಟಿ ಹಣವನ್ನೆಲ್ಲ ಉತ್ತರಪ್ರದೇಶ, ಬಿಹಾರದಲ್ಲಿ ಸುರಿಯುತ್ತಿದ್ದಾರೆ. ಆರೆಸ್ಸೆಸ್ ವಶವಾಗಿದ್ದಾರೆ. ಸರ್ವಾಧಿಕಾರಿ ಧೋರಣೆ ಇದೆ. ಯುವ ನಾಯಕರಿಗೆ ಅವಕಾಶ ಸಿಗುತ್ತಿಲ್ಲ. ಹಳೆಯ ತಿಮಿಂಗಲಗಳನ್ನೂ ಭಾಜಪದಲ್ಲೇ ನಿಯಂತ್ರಿಸಲು ಆಗುತ್ತಿಲ್ಲ. ಆರ್ಥಿಕ ಸುಧಾರಣೆ ಮೋಸವಾಗಿದೆ. ಕಪು್ಪಹಣ ನಿಯಂತ್ರಣವಾಗಿಲ್ಲ. ವಿದೇಶಿ ಸಂಚಾರದಲ್ಲೇ ಕಾಲ ಕಳೆಯುತ್ತಿದ್ದಾರೆ. ‘ಹಿಂದುತ್ವ’ ಜಪ ಬಿಟ್ಟು, ಹಿಂದೂ ಅಭಿವೃದ್ಧಿಯೂ ಆಗಿಲ್ಲ. ಮತೀಯ ಉಗ್ರಶಕ್ತಿಗಳ ಶಾಶ್ವತ ನಿಗ್ರಹವೂ ಆಗಿಲ್ಲ. ಭಾರತ ಚರಿತ್ರೆ, ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲ. ಚೀನಾವನ್ನು ಎದುರು ಹಾಕಿಕೊಂಡದ್ದು ಸರಿಯಲ್ಲ. ಪಾಕ್, ಕಾಶ್ಮೀರ ನೀತಿಗಳು ವಿಫಲವಾಗಿ, ಭಯೋತ್ಪಾದಕತೆ ಹೆಚ್ಚುತ್ತಿದೆ…’ ಹೀಗೆ. ಇದೆಲ್ಲ ಸೋನಿಯಾರ ಪ್ರಚಾರದ ಫಲ ಎಂಬುದನ್ನು ಕಾಣಿರಿ. ಜನಾಭಿಪ್ರಾಯ ಮೂಡಿಸಲು ಕೃತಕ ಪ್ರಚಾರ ಸಂಸ್ಥೆಗಳೇ ಅಲ್ಲಿವೆ. ಆದರೂ ಈಗ ಈ ಪಟ್ಟಿಯನ್ನು ಕ್ರಮವಾಗಿ ಪರಿಶೀಲಿಸೋಣ.

    ಕೃಷಿ ಎಂಬುದು ಇಂದು ಇಂಡಸ್ಟ್ರಿ ಆಗಿದೆ. ಹೌದೆ? ಗೊಬ್ಬರ, ಕೃಷಿ ಉಪಕರಣಗಳು, ರಾಸಾಯನಿಕ, ತಂತ್ರಜ್ಞಾನಗಳ ಬೆಂಬಲವಿಲ್ಲದೆ ಎತ್ತು, ನೇಗಿಲು ಹಿಡಿದು ಉಳುವ, ಕೊಯ್ಲು ಮಾಡುವ, ಒಕ್ಕಣೆ, ದಾಸ್ತಾನು, ವಿತರಣೆ ಮಾಡುವ ಕಾಲ ಹೋಯ್ತು. ಬೃಹತ್ ಉದ್ದಿಮೆಗಳಲ್ಲವೇ? ಹೇಗೆ ಮಾಡುತ್ತೀರಿ? ದಲ್ಲಾಳಿ-ಬೃಹತ್ ದಲ್ಲಾಳಿಗಳು-ಶರದ್ ಪವಾರ್, ಅಮರೀಂದರ್ ಸಿಂಗ್​ರಂಥ ತಿಮಿಂಗಿಲಗಳಿಗೆ ಕಡಿವಾಣ ಹಾಕಲು ಕಾಯ್ದೆ ಬಂದು, ಅಂಥವರು ಮೂಢ ರೈತರಿಂದಲೇ ಚಳವಳಿಯನ್ನು ಮಾಡಿಸಿ ಸುಸ್ತಾಗಿದ್ದಾರೆ. ಅವರ ಕೋಪ ಫಲ ಈ ಅಪಪ್ರಚಾರ. ಎರಡನೆಯದಾಗಿ ಚುನಾವಣೆಗೆ ಹಣ ಬೇಕು. ಗ್ರಾಮ ಪಂಚಾಯ್ತಿ ಚುನಾವಣೆಗೂ ಕೋಟಿ ಹಣ ಬೇಕೆಂಬ ವಿಷಮ ಪರಿಸ್ಥಿತಿ ಮಾಡಿದ್ದು ಕಾಂಗ್ರೆಸ್! ರಕ್ತ ಬೀಜಾಸುರನ ಹನಿ ರಕ್ತ ಹೀರುವ ಚಾಮುಂಡಿಯ ನಾಲಿಗೆ ಇನ್ನೂ ದೂರ ಚಾಚಿ ಹೊರಬರಬೇಕಾಗಿದೆ. ಅಡ್ಡಿ? ಸೋನಿಯಾ, ಲಾಲು, ಪುತ್ರ ತೇಜಸ್ವಿ, ಮಮತಾ, ಅಖಿಲೇಶ್, ಪವಾರ್, ಗೌಡ, ಕಾಮ್ರೇಡರು, ‘ದ್ರವಿಡರು’ ಇಂಥ ಕಾಲಕಂಟಕರು.

    ರೈತರ ಆತ್ಮಹತ್ಯೆಗೆ ಕಾರಣ, ಕೇಂದ್ರದ ಸಹಾಯಧನ, ಪ್ರೋತ್ಸಾಹ ಮೊತ್ತ ನೇರವಾಗಿ ಅವರಿಗೇ ತಲುಪಲು ಈ ಪ್ರಭೃತಿಗಳು ಅಡ್ಡ. ಅವರ ಸೇನೆ, ವಿರಾಧ, ಕಬಂಧ, ಮಾರೀಚ, ಸುಬಾಹುಗಳ ವ್ಯಾಪ್ತಿ ರಾಷ್ಟ್ರಾದ್ಯಂತ ಹರಡಿದೆ. ಚಾಣಕ್ಯನ ತಪಶ್ಶಕ್ತಿ! ಒಂದೇ ದಿನಕ್ಕೆ ಚಂದ್ರಗುಪ್ತನಿಗೆ ಪಟ್ಟ ಕಟ್ಟಲಾಯಿತೆ? ನವನಂದರ ನಿಗ್ರಹ, ನೇಣು ಆಗಬೇಡವೇನಿರಯ್ಯ? ಈಗ ‘ಒಂಬತ್ತು’=ನವ, ಈಗ ಯಾರು? ತಿಳಿಯಿತಲ್ಲ? ರೋಗ ನಿಯಂತ್ರಣದಲ್ಲಿ ಭಾರತವೇ ಅಗ್ರಸ್ಥಾನದಲ್ಲಿದೆ! ರೋಗಿಗಳು ಪ್ರಮಾಣಪತ್ರ ಕೊಡಬೇಕೆ?

    ‘ದಕ್ಷಿಣದ ತೆರಿಗೆ ಹಣವೆಲ್ಲ ಉತ್ತರ ಪ್ರದೇಶ, ಬಿಹಾರಕ್ಕೆ ಸುರಿಯಲ್ಪಡುತ್ತಿದೆ’ ಎಂಬ ಆಕ್ಷೇಪಕ್ಕೆ ಉತ್ತರ. ಮೊದಲನೆಯದಾಗಿ, ಇವು ಉತ್ತರಪ್ರದೇಶ, ಬಿಹಾರ ಇಂಥವು ಕೇಂದ್ರಕ್ಕೆ, ಮೋದಿಗೆ ವೋಟು ತರುವ ರಾಜ್ಯಗಳು. ಕರ್ನಾಟಕ? ಇದು ಗಾಳಿಗಿಂಗಿಟ್ಟಳೆ. ಟರ್ನ್ ಕೋಟ್ಸ್-ಯಾವಾಗ ಯಾವ ಪಕ್ಷ ಇಲ್ಲಿರುತ್ತದೋ?- ಮಾಮೂಲು ಕೇಂದ್ರ ವಿರುದ್ಧ ಪಕ್ಷಗಳೇ ಹಾವಳಿ ಮಾಡಿವೆ. ತಮಿಳುನಾಡು, ಕೇರಳಗಳೂ ಅಭಿವೃದ್ಧಿಗೆ ಅಡ್ಡಿ! ‘ಹಿಂದೂ ವಿರುದ್ಧ’ ಚಳವಳಿ ತಕರಾರು? ಅಲ್ಲಿ ಹಣ ಹೇಗೆ ಸುರಿಯುತ್ತೀರಿ? ‘ಅಲ್ಲಲ್ಲಿನ ಜಿಡಿಪಿ, ಜಿಎಸ್​ಟಿ ಅಲ್ಲಲ್ಲಿಗೇ ಸೇರಬೇಕು’ ಎಂಬುದಾದರೆ ಕೇಂದ್ರ ಏಕೆ ಬೇಕು? ಒಂದು ಕುಟುಂಬವೆನ್ನಿ. ನೀವು ತಂದೆ. ನಿಮ್ಮ ನಾಲ್ವರು ಪುತ್ರರಲ್ಲಿ ಇಬ್ಬರು ಸ್ಥಿತಿವಂತರು , ಇನ್ನಿಬ್ಬರು ಅದೃಷ್ಟಹೀನರಾದರೆ ಕುಟುಂಬದ ರಕ್ಷಣಾ ನೀತಿ, ಎಲ್ಲಿ ಒತ್ತು ಕೊಡುತ್ತದೆ? ಇಲ್ಲಿ ‘ಸಮತಾ’ ಎಂಬುದು Arithmetic equality ಆಗಬಾರದು. ಅದನ್ನು ಋಗ್ವೇದದ ‘ಭಿಕ್ಷ ಆಂಗಿರಸ’ ಸೂಕ್ತ ವಿವರಿಸುತ್ತದೆ. ನನ್ನ ವೇದ ಸಂಸ್ಕೃತಿ ಪರಿಚಯದ Vol-1ರಲ್ಲಿ ‘ಅನ್ನದಾನದ ಮಹಿಮೆ’ ಅಧ್ಯಾಯ ನೋಡಿ. ಇಲ್ಲಿ ಕಮ್ಯುನಿಸಂ ಪರಿಹಾರವಲ್ಲ. ಸೋಷಿಯಲಿಸಂ ಅವಾಸ್ತವವಾದ! ಸ್ಟಾಲಿನ್ನನ ರಷ್ಯಾ, ಮಾವೋದ ಚೀನಾ, ಹೇಗಾಗಿವೆ! ಇನ್ನೂ ಭ್ರಾಂತಿಯೇ? ಚಿಲ್ಲರೆ ಬುದ್ಧಿಯವರಿಗೆ ಸಮಗ್ರ ಭಾರತಾಭಿವೃದ್ಧಿಯ ದೃಷ್ಟಿ ಹೇಗೆ ಬರಬೇಕು? ಗ್ರಾಮ ಪಂಚಾಯ್ತಿ ಅಧ್ಯಕ್ಷ ಚರಂಡಿ ಕಂಟ್ರಾಕ್ಟರ್​ಗಳನ್ನು ಮೇಲೆ ಏರಿಸಿದರೆ ಕಾಣುವುದೇನು? ಬಸವಣ್ಣನವರ ‘ಅಂದಣವನೇರಿದ ಸೊಣಗ’ ಮಾತು ನೆನಪಾಗುತ್ತದೆ. ಸೊಣಗ=ಶುನಕ=ನಾಯಿ! ಅದಕ್ಕೆ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಿದರೂ ಅದರ ದೃಷ್ಟಿ ರಸ್ತೆ ಬದಿಯ ವಸ್ತುವನ್ನೇ ನೋಡುತ್ತಿರುತ್ತದೆ! ಮೊದಲನೆಯದು ಮೋದಿ ಸ್ವತಂತ್ರ ಚಿಂತಕರು. ಆರೆಸ್ಸೆಸ್ಸನ್ನು ಅವರು ಜೀರ್ಣ ಮಾಡಿಕೊಂಡು, ಆ ಬೆಂಬಲದ ಸಣ್ಣವರನ್ನೂ ದೂರವಿಟ್ಟಿದ್ದಾರೆ!

    ರೈತರ ಆತ್ಮಹತ್ಯೆಗೆ ಕಾರಣ, ದಲ್ಲಾಳಿಗಳು ಅಂತ ತೋರಿಸಿಯಾಗಿದೆ. ಲಂಚ ವ್ಯಾಪಕವಾದದ್ದು ಕಾಂಗ್ರೆಸ್ ಕಾಲದಲ್ಲೇ. ರೂಪಾಯಿ ಅಪನಾಣ್ಯೀಕರಣಕ್ಕೆ ಅಬ್ಬರಿಸಿ, ಆಕ್ಷೇಪ ಮಾಡಿದವರೂ ಕಾಂಗ್ರೆಸ್ಸಿಗರೇ! ಹೊಡೆತ ಬಿದ್ದುದು ಅವರಿಗೇ! ಇನ್ನೂ ಆಗುವುದಿದೆ. ವಿದೇಶೀ ಸಂಚಾರಕ್ಕೆ ಮೋದಿ ಹೋಗಿ ಬರುವುದು ಕಡಲೆಪುರಿ ತಿನ್ನಲು, ಮೋಜಿಗೆ, ವಿಹಾರಕ್ಕೆ ಅಲ್ಲ. ಹೌದೆ, ರಾಹುಲ್ ಸಾಹೇಬ್ರೆ? ಸೋನಿಯಾ ಜೀ? ಕಪು್ಪಹಣ ರಕ್ಷಣೆ, ಪರಿಶೀಲನೆಗೆ? ಏನಿರಯ್ಯ? ಅಲ್ಲಿ ಭಾರತ ಸಂಬಂಧ ವೃದ್ಧಿ ಮಾಡುತ್ತ, ಭಾರತ ವಿರೋಧಿಗಳ ವಿರುದ್ಧ-ಚೀನಾ, ಪಾಕ್, ಇರಾಕ್, ಸೌದಿ, ಇರಾನ್-ವಿರಳ ಚಕ್ರವ್ಯೂಹ ಮಾಡಿದ್ದಾರೆ. ‘ಮಲಬಾರ್’ ಜಲವ್ಯೂಹ ಆಗಿರುವುದು ತಿಳಿಯದೇ? ಸಮಸ್ಯೆಗಳು ತುಂಬ ಇವೆ. 73 ವರ್ಷದ ಕೊಳೆ, ಕ್ರಿಮಿಕೀಟಗಳ ಹೊಲಸು, ಸಾಂಕ್ರಾಮಿಕ ರೋಗಗಳ ಉಗಮ ಸ್ಥಾನ ಈ ಕಾಂಗ್ರೆಸ್ಸು ಮತ್ತು ಎಲ್ಲ ಎಡಪಂಥೀಯರ ಸರ್ಕಾರಗಳು. ನೀವೇ ಆ ಸರ್ಕಾರಗಳ ಬ್ಯಾಲೆನ್ಸ್​ಶೀಟ್ ಹಾಕಿ ನೋಡಿಕೊಳ್ಳಿ. ನಿಜವಾದ ಸಮಸ್ಯೆಗಳು ಬೇರೆಯೇ ಇವೆ. ಅಮೆರಿಕದ ಪತ್ರಿಕೆಗಳು, ಟಿವಿಗಳು ಇಲ್ಲಿನ ಒಳಶತ್ರುಗಳ ಎಂಜಲು ತಿಂದು ಕಾಶ್ಮೀರ ಸಮಸ್ಯೆ ತೀರಿದ ಬಗ್ಗೆ ಅಬ್ಬರ ಮಾಡುತ್ತ ‘ಮಾನವ ಹಕ್ಕು’ ಎಂಬ ಭಯೋತ್ಪಾದಕರ ಪರವಾದ ನಾಗಾಸ್ತ್ರ ಪ್ರಯೋಗ ಮಾಡುತ್ತಿವೆ. ಅಮೆರಿಕದ ಭಾವೀ ಅಧ್ಯಕ್ಷ, ಉಪಾಧ್ಯಕ್ಷೆಯರ ಹೇಳಿಕೆಗಳೇ ಹಾಗಿವೆ. ಪಾಕ್ ನಿರ್ವರ್ತೃಗಳಾದ ಒಳಶತ್ರು-ಕಾಂಗ್ರೆಸ್ಸಿಗರು ನಾಶದ ಅಂಚಿನಲ್ಲಿದ್ದಾರೆ. ಅವರಿಗೆ ಹೊರಗಿನ ಅಬ್ಬರ ಧ್ವನಿಬೇಕು. ಫಾರೂಕ್, ಮುಫ್ತಿ, ಗಿಲಾನಿ, ಇನ್ನಿತರ ಅತೃಪ್ತ, ಕೊಳ್ಳೆಗಾರರ ಕೂಟವೊಂದು ಇದೀಗ ತಯಾರಾಗಿದೆ. ಈ ಮುಳ್ಳು ಬೇರುಸಹಿತ ಸುಡಲ್ಪಟ್ಟಾಗ ಚಾಣಕ್ಯಸಿದ್ಧಿಯಾಗುತ್ತದೆ. ಕಾಶ್ಮೀರ ಸೃಷ್ಟಿ ಇರಲಿ. ಪಾಕ್ ಸೃಷ್ಟಿ ಇದು ಬೇತಾಳವಾಗಿದೆ. ಅಮೆರಿಕಕ್ಕೂ ಗೊತ್ತಿದೆ. ಇದು ಭಯೋತ್ಪಾದಕತೆಯ ಕುದಿಯುವ ಕಡಾಯಿ ಅಂತ. ಪ್ರಶ್ನೆ ಎರಡು: ಭಯೋತ್ಪಾದನೆಯ ನಾಶ! ಈಗ ಚುನಾಯಿತ ಅಮೆರಿಕಾಧ್ಯಕ್ಷರು ಎತ್ತ ವಾಲುತ್ತಾರೋ, ನೋಡಬೇಕಾಗಿದೆ. ಪ್ರಶ್ನೆ ಮೂರು: ಚೀನಾ! ಅದರ ವಿಶ್ವಾಕ್ರಮಣ ಹೊಂಚು! ಕಾಂಗ್ರೆಸ್ಸು ಎಂದಿನಂತೆ ಭಾರತ ಹಿತಾಸಕ್ತಿಯ ವಿರುದ್ಧ ಅಂದರೆ ಪ್ರಶ್ನೆ ನಾಲ್ಕು: ಕಾಂಗ್ರೆಸ್ಸಿನ ನಾಶವಾಗಬೇಕು. ಐದು: ಮಮತಾ ಉಗ್ರವಾದಿಗಳ ಸಂರಕ್ಷಕರು. ಇದು ಕುಪ್ರಸಿದ್ಧ. ಈಗ ಮೋದಿ ಸೆಣಸಬೇಕಾಗಿರುವುದು ಮಮತಾ, ಕಾಶ್ಮೀರ ಪುಂಡರು, ಮಹಾರಾಷ್ಟ್ರದ ಹಿಂದೂನಾಶ ಸೇನೆ! ಇಂಥವು. ಎಲ್ಲಿಯ ಬಾಳಾ ಠಾಕ್ರೆ? ಎಲ್ಲಿಯ ಉದ್ಧವ್ ಠಾಕ್ರೆ? ನಾನು ಅನೇಕ ಸಲ ಮುಂಬೈಗೆ ಹೋಗಿದ್ದೇನೆ. ಅಲ್ಲಲ್ಲಿ ಜನ ಹೇಳುತ್ತಾರೆ- ‘ಬಾಳಾ ಠಾಕ್ರೆ ಇಲ್ಲದಿದ್ದರೆ, ಮುಂಬೈ ಪಾಕ್ ವಶವಾಗುತ್ತಿತ್ತು’ ಅಂತ. ಈಗ ಆಗಿದೆ ಹೆಚ್ಚು ಕಡಿಮೆ! ಫಿಲ್ಮಸಿಟಿ- ಬಾಲಿವುಡ್ ಹೀರೋ-ಹೀರೋಯಿನ್​ಗಳ ದಾರುಣ ಡ್ರಗ್ ಚರಿತ್ರೆ, ಅದರ ಮೂಲ ಇಬ್ರಾಹಿಂ ದಾವೂದ್, ಅದರ ಗುರಿ ರಿಪಬ್ಲಿಕ್​ನಂಥ ಟಿವಿ ವಾಹಿನಿಯ ನಾಶ, ಅರ್ನಬ್ ಗೋಸ್ವಾಮಿ ಮೇಲೆ ಕೋರ್ಟ್ ಖಟ್ಲೆ- ಇಂಥವು! ಅಮೆರಿಕದಲ್ಲಿನ ನಮ್ಮ ಹುಡುಗರು ಇದನ್ನೇಕೆ ಗಮನಿಸಲೊಲ್ಲರು? ಭಯೋತ್ಪಾದನೆಯ ನಿಗ್ರಹ, ನಾಶ ಆಗದೆ, ಯಾವ ಕೃಷಿ ನೀತಿಯೂ, ಉದ್ದಿಮೆ ನೀತಿಯೂ ಸಫಲವಾಗುವುದಿಲ್ಲ! ನಾಶದ ಆ ಮೂಲ ಜೆಎನ್​ಯುು ಇರಬಹುದು, ಕರ್ನಾಟಕದ ನೀತಿಗಳು ಇರಬಹುದು, ಬಂಡೆ, ಕಾಡು ಗಿರಿ ದುರ್ಗಗಳು ಇರಬಹುದು, ವಿದೇಶೀ ಮೂಲ ಮತಗಳೂ, ಅವುಗಳ ಪ್ರಸಾರ ಕೇಂದ್ರಗಳೂ ಇರಬಹುದು. ಪ್ರಿಯಾರಿಟಿ ಈಗ ರಾಷ್ಟ್ರಪ್ರೇಮ ವರ್ಧನೆಗೆ! ಅಪಹಾಸ್ಯಕಾರರು ಲಘುವಾಗಿ ಪರಿಗಣಿಸುತ್ತಾರೆ.

    ಕರ್ನಾಟಕದಲ್ಲಿ ಈಗ ‘ಮರಾಠಾ ಸಮುದಾಯ ಅಭಿವೃದ್ಧಿ ನಿಗಮ’ ಸ್ಥಾಪನೆಯ ಮಾತು ಇದೆ. ಬಿಜೆಪಿಯ ಒಳಶತ್ರುಗಳು- ಹೊರಗಿಂದ ಬಂದ, ಗಡಿ ಭಾಗದ ಮರಾಠೀ ಆಸಕ್ತಿ- ಬಿಜಿನೆಸ್ ಇಂಟರೆಸ್ಟ್ ಇರುವ ಶಾಸಕರು, ವೋಟಿನ ಸಲುವಾಗಿ ತೋಡಿರುವ ಈ ಹಳ್ಳದಲ್ಲಿ ಮುಖ್ಯಮಂತ್ರಿ ಬೀಳಬಾರದು. ಬಿದ್ದರೆ -‘ಸಮುದಾಯ’ ಹೆಸರಲ್ಲಿ ಮುಸ್ಲಿಂ ಸಮುದಾಯ ಅಭಿವೃದ್ಧಿ ನಿಗಮದ ಬೇಡಿಕೆ ಬರುತ್ತದೆ. ಖಂಡಿತ! ಅದು ಭಾಜಪ ನಾಶಕ್ಕೆ ವಲಸಿಗರು ತೋಡಲಿರುವ ಬಹಳ ದೊಡ್ಡ ಹಳ್ಳ! ಈ ‘ಹಳ್ಳದಾರರಿಗೆ’ ರಾಷ್ಟ್ರಮೌಲ್ಯ, ಧ್ಯೇಯ, ಏನೂ ಇರುವುದಿಲ್ಲ. ಭಾರತದಾದ್ಯಂತ ಇರುವ ಒಳಶತ್ರುಗಳೆಲ್ಲದರ ಸೂತ್ರ ಒಂದೇ- ‘ರಾಜಕಾರಣದಲ್ಲಿ ಮಿತ್ರರೂ ಶತ್ರುಗಳೂ ಇರುವುದಿಲ್ಲ’ ಅಂತ. ಬೇರೇನು? ‘ಸ್ವಾರ್ಥ’. ಅದನ್ನೇ ಅಂದು ಭೀಷ್ಮ‘ಅರ್ಥಸ್ಯ ಪುರುಷೋ ದಾಸಃ’ ಎಂದು ಸೂತ್ರ್ರಲ್ಲಿ ಹೇಳಿದ್ದು, ‘ಕೌರವರ ಕಡೆಯೂ ಇಲ್ಲ, ಪಾಂಡವರ ಕಡೆಯೂ ಇಲ್ಲ, ಅರ್ಥ ದಾಸ್ಯ’ ಎಂದರೆ ಶ್ರೀಕೃಷ್ಣನಿಗೆ ತಿಳಿಯಿತು. ಈ ‘ನೆಲೆಸಿಗರು ವಲಸಿಗರು, ಮನೆಯಿಲ್ಲದವರು, ಬೆಲೆ ಕಳಕೊಂಡವರು’ ಎಂಬ ಕೃತಕ ವರ್ಗೀಕರಣದಲ್ಲಿರುವುದೇ ದೇಶನಾಶ ಪಾತ್ರ! ಭಾಜಪದಲ್ಲಿ ಎಲ್ಲವೂ ಸರಿಯಾಗಿಲ್ಲ! ಯಾರು ಯಾರೆಂತಲೇ ತಿಳಿಯದ ಮಹಾಭಾರತ ಸ್ಥಿತಿ. ಶಲ್ಯ? ಅತ್ತ ಏಕೆ ನಿಂತ? ಕೃತವರ್ಮನೋ? ದ್ರೋಣಾಶ್ವತ್ಥಾಮರೋ? ಯಾರಿಗೂ ಊಹೆಗೆ ಬಾರದ ವಿಜಯಲಕ್ಷ್ಮಿ, ಶ್ರೀಕೃಷ್ಣನ ಮೂಲಕ ಧರ್ಮಕ್ಕೆ ಒಲಿದಳು. ಪಾಶ್ಚಾತ್ಯ ರಾಜಕಾರಣವೆಲ್ಲ ಕುತಂತ್ರ! ಚೀನಾ? ಅದೇ! ಭಾರತದಲ್ಲಿ ಈವರೆಗೆ? ಅದೇ! ಧಮೋದಯದ ಕಾಲ ಬರುತ್ತಿರುವುದಾದರೆ, ಕಪಟಿಗಳ ಮುಸುಕು ಹರಿಯಬೇಕು! ಪಾರುಮಾಡುವ ಶ್ರೀಕೃಷ್ಣ ಈಗ ಎಲ್ಲಿದ್ದಾನೆ? ವೋಟುದಾರರ ಕೈಗಳಲ್ಲಿ! ನಿಮ್ಮ ಕೈ ಎತ್ತ?

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts