More

    ಡಾ. ಶ್ರೀಕಂಠ ಕೂಡಿಗೆಗೆ ಜಿಎಸ್‌ಎಸ್ ಪುರಸ್ಕಾರ

    ಶಿವಮೊಗ್ಗ: ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದಿಂದ ನೀಡಲಾಗುವ ಈ ಸಾಲಿನ ಜಿಎಸ್‌ಎಸ್ ಪುರಸ್ಕಾರಕ್ಕೆ ಕುವೆಂಪು ವಿವಿ ನಿವೃತ್ತ ಕುಲಸಚಿವ, ಸಾಹಿತಿ ಡಾ. ಶ್ರೀಕಂಠ ಕೂಡಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆಯನು ಒಳಗೊಂಡಿದೆ. ಫೆ.28ರ ಸಂಜೆ 6ಕ್ಕೆ ಕರ್ನಾಟಕ ಸಂಘದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು.

    ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉಪಸ್ಥಿತರಿರುತ್ತಾರೆ. ಪ್ರಾಧ್ಯಾಪಕ ಡಾ.ಶ್ರೀಪತಿ ಹಳಗುಂದ ಉಪನ್ಯಾಸ ನೀಡಲಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಚನ್ನೇಶ್ ಹೊನ್ನಾಳಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾವಿದೆ ಸಂಗೀತಾ ಹುಂಚ ಜಿಎಸ್‌ಎಸ್ ರಚನೆಯ ಗೀತೆಗಳನ್ನು ಹಾಡಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ.ಕಿರಣ ಆರ್.ದೇಸಾಯಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಪ್ರಧಾನ ಕಾರ್ಯದರ್ಶಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಜ.10ರಂದು ಏರ್ಪಡಿಸಿದ್ದ ಜಿಎಸ್‌ಎಸ್ ಕವಿತೆಗಳ ಗಾಯನ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
    ಸಂಚಾಲಕ ವಿನಯ್ ಶಿವಮೊಗ್ಗ, ಟ್ರಸ್ಟಿಗಳಾದ ಕರಿಸಿದ್ದಪ್ಪ ಎಸ್.ಕುಂಬಾರ, ಎಸ್.ಮುರುಗೇಶ್ ಇದ್ದರು.
    ಬಹುಮುಖಿ ಕೂಡಿಗೆ: ಡಾ.ಶ್ರೀಕಂಠ ಕೂಡಿಗೆ ತೀರ್ಥಹಳ್ಳಿ ತಾಲೂಕು ಕೂಡಿಗೆ ಗ್ರಾಮದವರು. ಕುವೆಂಪು ವಿವಿಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳಿಂದ ಕೂಡಿಗೆ ಮೇಷ್ಟ್ರು ಎಂದೇ ಪ್ರೀತಿ ಪಡೆದುಕೊಂಡವರು. ಕನ್ನಡ ಭಾರತಿಯನ್ನು ಕಟ್ಟಿ ಬೆಳೆಸಿದವರಲ್ಲಿ ಇವರೂ ಒಬ್ಬರು. ವಿವಿಯ ಕುಲಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಲಾವಣಿಗಳು ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದವರು. ಅನೇಕ ಜಾನಪದ ಕೃತಿಗಳನ್ನೂ ಇವರು ರಚಿಸಿದ್ದಾರೆ. ಕಥಾ ಸಂಕಲನ, ಸಾಹಿತ್ಯ ವಿಮರ್ಶೆಯಲ್ಲೂ ಕೆಲಸ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ಪುರಸ್ಕಾರ ಇವರಿಗೆ ಒಲಿದು ಬಂದಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವವೂ ಲಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts