More

    ಧರ್ಮಕ್ಷೇತ್ರಗಳಿಂದ ಜನಮಂಗಳ ಕಾರ್ಯ : ಡಾ.ಡಿ.ವೀರೇಂದ್ರ ಹೆಗ್ಗಡೆ

    ಬೆಳ್ತಂಗಡಿ: ಧರ್ಮಕ್ಷೇತ್ರಗಳು ಧರ್ಮ ಪ್ರಭಾವನೆ, ಆಧ್ಯಾತ್ಮಿಕ ಜಾಗೃತಿ ಹಾಗೂ ಸಾಮಾಜಿಕ ಸಂಘಟನೆಯೊಂದಿಗೆ ಜನಮಂಗಳ ಕಾರ್ಯಗಳಿಗೆ ಪ್ರೇರಣೆ ನೀಡುತ್ತವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
    ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡ ಹಿನ್ನೆಲೆಯಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹಾಗೂ ತಂಡದಿಂದ ಮಂಗಳವಾರ ಧರ್ಮಸ್ಥಳ ಬೀಡಿನಲ್ಲಿ(ಹೆಗ್ಗಡೆಯವರ ನಿವಾಸ) ಅಭಿನಂದನೆ ಸ್ವೀಕರಿಸಿ ಮಾತನಾಡಿದರು. 1982ರಲ್ಲಿ ಧರ್ಮಸ್ಥಳದಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿಯ ಪ್ರಥಮ ಮಹಾಮಸ್ತಕಾಭಿಷೇಕ ಸವಿನೆನಪಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಉಜಿರೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರ ಪ್ರಾರಂಭಿಸಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯಿಂದ ನೆಲ, ಜಲ ಹಾಗೂ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನದೊಂದಿಗೆ ಗ್ರಾಮರಾಜ್ಯದ ಮೂಲಕ ರಾಮರಾಜ್ಯ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ಯೋಜನೆಯ 45,000 ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರದ 588 ಶಾಖೆಗಳು ದೇಶದೆಲ್ಲೆಡೆ ಸೇವೆ ಸಲ್ಲಿಸುತ್ತಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಮೂಲ್ಯ ಕೊಡುಗೆ ನೀಡುತ್ತಿವೆ ಎಂದರು.
    ಕರಾವಳಿ ಜನರಿಗೆ ಹೆಮ್ಮೆ
    ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಡಾ.ವೀರೇಂದ್ರ ಹೆಗ್ಗಡೆಯವರು ಸಮಾಜಕ್ಕೆ ನೀಡಿದ ಕೊಡುಗೆ, ಸಮಾಜದಲ್ಲಿ ತಂದ ಪರಿವರ್ತನೆ ಪರಿಗಣಿಸಿ ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಇದು ಕರಾವಳಿ ಭಾಗದ ಜನರಿಗೆ ಹೆಮ್ಮೆ ತರುವ ವಿಷಯ ಎಂದರು.
    ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್, ಸುರೇಶ್ ಮಡಿವಾಳ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್.ಕೋಟ್ಯಾನ್, ಜಿಪಂ ಮಾಜಿ ಸದಸ್ಯ ಉದಯ ಎಸ್.ಕೋಟ್ಯಾನ್, ಹೆಬ್ರಿ ತಾಪಂ ಮಾಜಿ ಅಧ್ಯಕ್ಷ ರಮೇಶ್ ಶಿವಪುರ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಯುವಮೋರ್ಚಾ ತಾಲೂಕು ಅಧ್ಯಕ್ಷ ಸುಹಾಸ್ ಮುಟ್ಲುಪ್ಪಾಡಿ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಉದ್ಯಮಿ ಶರತ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

    ಬಾಹುಬಲಿ ಮಹಾಮಸ್ತಕಾಭಿಷೇಕ, ಭಜನಾ ತರಬೇತಿ ಕಮ್ಮಟ, ಸತ್ಯನಾರಾಯಣ ಪೂಜೆ, ದೇವಾಲಯಗಳ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಮೊದಲಾದ ಧಾರ್ಮಿಕ ಕಾರ್ಯಗಳು ಹೆಚ್ಚು ನಡೆಯಬೇಕು. ಇವುಗಳು ಸಾಮಾಜಿಕ ಸಂಘಟನೆಯೊಂದಿಗೆ ಜನರಲ್ಲಿ ಧರ್ಮಜಾಗೃತಿ, ಶಿಸ್ತು, ಸಂಯಮ, ಸ್ವಚ್ಛತೆ, ಪರೋಪಕಾರ, ಸೇವಾ ಮನೋಭಾವ ಮೊದಲಾದ ಮಾನವೀಯ ಮೌಲ್ಯಗಳನ್ನು ಮೂಡಿಸುತ್ತವೆ.
    | ಡಾ.ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಧರ್ಮಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts