More

    ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ವಿದೇಶಗಳನ್ನು ನೋಡಲೆಂದೇ ಗಗನಸಖಿ ಆಗುವವರಿದ್ದಾರೆ. ಆದರೆ ಈತ ಗಗನಸಖಿ(ಖ) ಅಲ್ಲ, ಆದರೂ ದೇಶದಿಂದ ದೇಶಕ್ಕೆ ಹಾರಾಡುವ ಗಗನಸುಖಿ. ತಾನಷ್ಟೇ ಅಲ್ಲ, ಕನ್ನಡಿಗರೂ ಕುಳಿತಲ್ಲೇ ವಿಶ್ವವನ್ನು ನೋಡುವಂತಾಗಬೇಕು ಎಂದು ವಿಶ್ವಪರ್ಯಟನೆಗೆ ಹೊರಟಿರುವ ಇವರು, ಜಗತ್ತಿನ ಅಷ್ಟೂ ದೇಶಗಳ ದರ್ಶನ ಮಾಡಿಸಲು ಮುಂದಾಗಿದ್ದಾರೆ. ಸದ್ಯ ಉಜ್ಬೇಕಿಸ್ತಾನದಲ್ಲಿದ್ದು ಅಲ್ಲಿಂದಲೇ ವಿಜಯವಾಣಿ ಜತೆ ಮಾತಾಡಿದ್ದಾರೆ. ಇವರ ಈ ಹಿಂದಿನ ಸಂದರ್ಶನದ ಮುಂದುವರಿದ ಭಾಗ ಇಲ್ಲಿದೆ.

    | ರವಿಕಾಂತ ಕುಂದಾಪುರ

    ಸೆಕೆಂಡ್ ಪಿಯುಸಿಯಲ್ಲೂ ಫೇಲಾದ್ರೆ?

    ಡಾಕ್ಟರ್​ ಬ್ರೋ (ಗಗನ್ ಶ್ರೀನಿವಾಸ್-Dr Bro ಕನ್ನಡ) ಅವರ ಈಗಿನ ಸುತ್ತಾಟ ನೋಡಿದವರಲ್ಲಿ ಅನೇಕರು ‘ಇದೆಂಥ ಓವರ್ ಕಾನ್ಫಿಡೆನ್ಸ್?!’ ಎಂದು ಅಚ್ಚರಿ ವ್ಯಕ್ತಪಡಿಸಿದರೂ ಅತಿಶಯೋಕ್ತಿಯೇನಲ್ಲ. ಏಕೆಂದರೆ ಗಗನ್ ಅವರದು ಓದಿನ ದಿನಗಳಲ್ಲೇ ಓವರ್ ಕಾನ್ಫಿಡೆನ್ಸ್. ‘ನಾನು ಓದಿನಲ್ಲಿ ಅವರೇಜ್ ಆಗಿದ್ರೂ ಆಗ ಓವರ್ ಕಾನ್ಫಿಡೆನ್ಸ್​ನಿಂದ ಪಿಯುಸಿ ಸೈನ್ಸ್ ತಗೊಂಡೆ. ಮೊದಲ ವರ್ಷವೇ ಫೇಲಾದೆ. ‘ಮತ್ತೆ ಪರೀಕ್ಷೆ ಬರಿ, ಪಾಸಾಗ್ತಿʼ ಎಂದು ಲೆಕ್ಚರರ್ಸ್ ಹೇಳಿದ್ರೂ ‘ಎರಡನೇ ವರ್ಷವೂ ಫೇಲಾದ್ರೆ?ʼಎಂಬ ಭಯ ಇತ್ತು. ಸೆಕೆಂಡ್ ಪಿಯುಸಿ ಫೇಲ್ ಅಂತ ಅನಿಸಿಕೊಳ್ಳೋದು ನನಗೆ ತೀರಾ ಅವಮಾನ ಅನಿಸಿತು. ಹಾಗಾಗಿ ಮತ್ತೆ ಕಾಮರ್ಸ್ ತಗೊಂಡು ಮೊದಲಿಂದ ಪಿಯುಸಿ ಅಭ್ಯಾಸ ಮಾಡಿದೆ. ಬಳಿಕ ವಿ.ವಿ.ಪುರ ಕಾಲೇಜಲ್ಲಿ 2021ರಲ್ಲಿ ಬಿಕಾಂ ಕಂಪ್ಲೀಟ್ ಮಾಡಿದೆ ಎಂದು ತಮ್ಮ ಪದವಿ ಬಗ್ಗೆ ತಿಳಿಸಿದರು ಗಗನ್.

    ಯಾರದ್ದೋ ಮನೆಯಲ್ಲಿ ವಾಸ್ತವ್ಯ!

    ದೇಶದಿಂದ ದೇಶಕ್ಕೆ ಸುತ್ತುವ ಡಾ.ಬ್ರೋ. ವಾಸ್ತವ್ಯಕ್ಕೆ ಏನು ಮಾಡುತ್ತಾರೆ ಎಂಬ ಕುತೂಹಲ ಸಹಜ. ಕೈಗೆಟುಕುವ ದರದಲ್ಲಿ ಹೋಟೆಲ್ ರೂಮ್ ಸಿಕ್ಕರೆ ಹೋಟೆಲ್​​ನಲ್ಲಿ, ಅಷ್ಟು ಹಣ ಇಲ್ಲ ಎಂದಾದರೆ ಸುರಕ್ಷಿತ ಸ್ಥಳ ನೋಡಿ ಟೆಂಟ್ ಹಾಕಿಕೊಂಡು ರಾತ್ರಿ ಕಳೆಯುವುದು ಗಗನ್ ಪರಿಪಾಠ. ಆದರೆ ವಾಸ್ತವ್ಯಕ್ಕೆ ಅವರು ಕಂಡುಕೊಂಡ ಇನ್ನೊಂದು ಮಾರ್ಗದ ಬಗ್ಗೆ ಹೀಗೆನ್ನುತ್ತಾರೆ. ‘ಟ್ರಾವೆಲ್ ಮಾಡ್ತ ಮಾಡ್ತ ನನಗೆ ಕೌಚ್ ಸರ್ಫಿಂಗ್ ಬಗ್ಗೆ ಗೊತ್ತಾಯಿತು. ಆ ಆ್ಯಪ್​ ಮೂಲಕ ಸರ್ಚ್ ಮಾಡುತ್ತೇನೆ. ಇದು ಹೇಗೆ ಎಂದರೆ ಕೆಲವರು ತಮ್ಮ ಮನೆಯಲ್ಲೇ ಟೂರಿಸ್ಟ್​ಗಳಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. ಅದಕ್ಕೆ ಪ್ರತಿಯಾಗಿ ಪ್ರವಾಸಿಗರು ಅವರಿಗೆ ಏನಾದರೂ ಸ್ಕಿಲ್ ಹೇಳಿಕೊಡಬೇಕು, ಇಲ್ಲವೇ ಏನಾದರೂ ಹೊಸ ವಿಷಯ ತಿಳಿಸಿಕೊಡಬೇಕು. ನಾನು ಅಂಥ ಕಡೆ ಉಳಿದು ಭರತನಾಟ್ಯ ಇತ್ಯಾದಿ ತಿಳಿಸಿಕೊಡುತ್ತೇನೆ ಅಥವಾ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ’ ಎನ್ನುತ್ತಾರೆ ಗಗನ್.

    ಇದು ಸುರಕ್ಷಿತವೇ? ಏಕೆಂದರೆ ಅಂಥ ಮನೆಗಳಿಗೆ ಬರುವವರು ಕೆಟ್ಟವರಿರಿಬಹುದು ಅಥವಾ ಆ ಥರದ ಮನೆಗಳಲ್ಲಿ ಕೆಟ್ಟವರೂ ಇರಬಹುದು? ಹೇಗೆ? ಎಂದು ಕೇಳಿದರೆ ಅದಕ್ಕೆ ಗಗನ್ ಉತ್ತರವಿದು. ‘ನಿಜ.. ಆ ಸಾಧ್ಯತೆ ಇರುತ್ತದೆ. ಆದರೆ ಸಾಮಾನ್ಯವಾಗಿ ಎಲ್ಲರೂ ಒಳ್ಳೆಯವರೇ ಇರುತ್ತಾರೆ ಮತ್ತು ಇದು ಸಂಪೂರ್ಣ ಒಂದು ನಂಬಿಕೆ ಮೇಲೆ ನಡೆಯುವ ವಿಧಾನ. ಇನ್ನು ಹೀಗೆ ಅವಕಾಶ ಮಾಡಿಕೊಡುವವರಿಗೆ ಒಂದು ರೆಫರೆನ್ಸ್ ಇರುತ್ತದೆ. ಅವರು ಬೇರೆ ದೇಶಗಳಿಗೆ ಹೋದಾಗ ಅದರಿಂದ ಅಲ್ಲಿ ಉಳಿಯಲು ಅವರಿಗೆ ಸುಲಭದ ಅವಕಾಶ ಸಿಗುತ್ತದೆ. ಈ ಥರದ ಶೇರಿಂಗ್ ಭಾರತದಲ್ಲಿ, ಬೆಂಗಳೂರಿನಲ್ಲೂ ಇದೆ’ ಎಂಬ ಮಾಹಿತಿ ನೀಡುತ್ತಾರೆ ಡಾ.ಬ್ರೋ.

    'ನಮಸ್ಕಾರ ದೇವರು' ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!ಕರೆನ್ಸಿ ಖಾಲಿಯಾದಾಗ…

    ಕೆಲವೊಂದು ದೇಶಗಳಲ್ಲಿ ಅಲ್ಲಿಯದ್ದೇ ಪ್ರತ್ಯೇಕ ಕರೆನ್ಸಿ ಇರುತ್ತದೆ. ಭಾರತದ ರೂಪಾಯಿ ಅಲ್ಲಿ ವಹಿವಾಟಿಗೆ ಬರುವುದಿಲ್ಲ. ಅಂಥ ಕಡೆ ಏನು ಮಾಡುತ್ತೀರಿ? ಎಂದು ಕೇಳಿದರೆ, ಭಾರತದ ಹೋಟೆಲಿಗರನ್ನು ನೆನಪಿಸಿಕೊಳ್ಳುತ್ತಾರೆ ಗಗನ್. ‘ಆಯಾ ದೇಶದ ಕರೆನ್ಸಿ ಪಡೆಯಲು ಮನಿ ಎಕ್ಸ್​ಚೇಂಜ್​ ಸೆಂಟರ್ ಇರುತ್ತದೆ. ಆದರೆ ಅಲ್ಲಿ ಹೋದರೆ ಕಮಿಷನ್​ಗೆ ಅಂತಲೇ ತುಂಬಾ ಹಣ ವ್ಯಯವಾಗಿ ಹೋಗುತ್ತದೆ. ನನ್ನ ಮಿತಿಯ ಸಂಪನ್ಮೂಲದಲ್ಲಿ ಹಾಗೆ ಕಮಿಷನ್​ಗೆ ಅಂತ ಜಾಸ್ತಿ ಹಣ ಕೊಡಲು ಸಾಧ್ಯವಿರುವುದಿಲ್ಲ. ಅದಕ್ಕಾಗಿ ನಾನು ಇಂಡಿಯನ್ ರೆಸ್ಟೋರೆಂಟ್​​ಗಳಿಗೆ ಹೋಗುತ್ತೇನೆ. ಯಾವುದೇ ದೇಶಕ್ಕೆ ಹೋದರೂ ಸಾಮಾನ್ಯವಾಗಿ ಇಂಡಿಯನ್ ರೆಸ್ಟೋರೆಂಟ್ ಇರುತ್ತದೆ, ಅಲ್ಲಿ ಹೋಗಿ ನಾನು ಭಾರತೀಯ ಎಂದು ಪರಿಚಯ ಮಾಡಿಕೊಳ್ಳುತ್ತೇನೆ. ಅಲ್ಲಿ ಅವರ ವಿಶ್ವಾಸ ಗಳಿಸಿ, ಅವರ ಖಾತೆಗೆ ನನ್ನ ಹಣ ಕಳಿಸಿ ಅವರಿಂದ ಅಲ್ಲಿಯ ಕರೆನ್ಸಿ ರೂಪದಲ್ಲಿ ಹಣ ಪಡೆಯುತ್ತೇನೆ’ ಎನ್ನುತ್ತಾರೆ ಗಗನ್.

    ಯಾವುದೋ ದೇಶ, ಹೇಗೋ-ಏನೋ?!

    ‘ಗೊತ್ತೇ ಇರದ ದೇಶದಲ್ಲಿ ಗೊತ್ತಿರುವವರೂ ಇರದ ಗೊತ್ತಿಲ್ಲದ ಜಾಗದಲ್ಲಿ ಓಡಾಡುವಾಗ ಭಯ ಕಾಡುವುದಿಲ್ಲವೇ? ಏನಾದರೂ ಆದರೆ?’ ಎಂಬ ಕುತೂಹಲ ಸಹಜ. ಈ ಪ್ರಶ್ನೆಗೆ ಗಗನ ಹೀಗೆನ್ನುತ್ತಾರೆ.. ‘ಹಾಗೇನೂ ಇಲ್ಲ.. ಏನಾದರೂ ಆಗುವುದಿದ್ದರೆ ಭಾರತದಲ್ಲೂ ಆಗಬಹುದಲ್ವಾ? ಕರ್ನಾಟಕದಲ್ಲಿ, ಬೆಂಗಳೂರಿನಲ್ಲೂ ಆಗಬಹುದಲ್ವಾ? ಎಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದಾದ್ದರಿಂದ ಆ ಬಗ್ಗೆ ಜಾಸ್ತಿ ಭಯವಿಲ್ಲ..ʼ

    'ನಮಸ್ಕಾರ ದೇವರು' ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!ವಿಚಿತ್ರವಾಗಿ ನೋಡ್ತಾರೆ!

    ಹೋದಲ್ಲೆಲ್ಲ ಹೀಗೆ ವಿಡಿಯೋ ಮಾಡಲು ಅವಕಾಶ ಇರುವುದಿಲ್ಲ. ಯಾಕೆ ನನ್ನ ವಿಡಿಯೋ ಮಾಡ್ತಿದ್ದಿ? ಅಂತ ಯಾರು ಬೇಕಾದರೂ ತಕರಾರು ತೆಗೆಯಬಹುದು. ಅಂಥದ್ದೇನಾದ್ರೂ ನಡೆದಿದ್ಯಾ ಎಂಬದುಕ್ಕೆ, ಹೌದು ಎನ್ನುತ್ತಾರೆ. ನಾನು ಹೀಗೆ ಸೆಲ್ಫಿ ಸ್ಟಿಕ್ ಹಿಡಿದುಕೊಂಡು ವಿಡಿಯೋ ಮಾಡುತ್ತ ಹೋಗುವಾಗ ಕೆಲವರು ನನ್ನನ್ನು ವಿಚಿತ್ರವಾಗಿ ನೋಡುತ್ತಾರೆ. ನಾನು ಸಾಮಾನ್ಯವಾಗಿ ಸುಮ್ಮನೆ ವಿಡಿಯೋ ಮಾಡುತ್ತೇನೆ. ಕೆಲವರು ಗದರುತ್ತಾರೆ, ಅದಕ್ಕೆ ನಾನು ಸಮಾಧಾನದಿಂದಲೇ ಉತ್ತರಿಸುತ್ತೇನೆ. ನನ್ನ ಉದ್ದೇಶ ಒಳ್ಳೆಯದೇ ಇರುವುದರಿಂದ ಯಾವುದೇ ಸಮಸ್ಯೆ ಆಗಿಲ್ಲ. ಎಷ್ಟೋ ಸಲ ಸಿಟ್ಟಿನಿಂದ ಮಾತಾಡಿದವರೇ ನಾನು ವಿವರಿಸಿ ಹೇಳಿದ ಮೇಲೆ ನಕ್ಕು ಖುಷಿಯಿಂದ ಕಳಿಸಿಕೊಟ್ಟಿದ್ದಿದೆ. ವಿದೇಶಗಳಲ್ಲಿ ಇದಕ್ಕೆ ಅಂಥ ವಿರೋಧಗಳಿರಲ್ಲ. ಆದರೆ ಭಾರತದಲ್ಲಿ ಇದಿನ್ನೂ ಅಷ್ಟು ರೂಢಿಯಾಗಿಲ್ಲ. ವಿಡಿಯೋ ಮಾಡುತ್ತ ಹೋಗುವಾಗ ಒಂಥರ ವಿಚಿತ್ರವಾಗಿ ನೋಡುತ್ತಾರೆ ಎಂಬುದು ಗಗನ್ ಅನಿಸಿಕೆ.

    ನಮಸ್ಕಾರ ದೇವರು…

    ನಿಮ್ಮ ಎಲ್ಲ ಪೋಸ್ಟ್​​ಗಳೂ ‘ನಮಸ್ಕಾರ ದೇವರು’ ಅಂತಲೇ ಶುರುವಾಗುತ್ತವೆ, ದೇವ್ರು ದೇವ್ರು ಅಂತನೇ ಇರ್ತೀರಿ ಯಾಕೆ? ಎಂಬುದಕ್ಕೆ ಉತ್ತರ ಸರಳ. ಡಾ.ರಾಜಕುಮಾರ್ ಅವರು ಅಭಿಮಾನಿ ದೇವರುಗಳೇ ಎಂದು ಕರೆದಿಲ್ವೇ, ಅದೇ ಥರ ಗಗನ್ ಕೂಡ ತಮ್ಮ ವೀಕ್ಷಕರನ್ನು ನಮಸ್ಕಾರ ದೇವರು ಅಂತಲೇ ಸಂಬೋಧಿಸುತ್ತಿದ್ದಾರೆ. ‘ಯಾವುದೋ ಹಳ್ಳಿಯ ಹುಡುಗ ನಾನು, ಇಂದು ಯಾವುದೋ ದೇಶದಲ್ಲಿ ಹೀಗೆ ಸುತ್ತಾಡಲು ಸಾಧ್ಯವಾಗಿದ್ದು ವೀಕ್ಷಕರಿಂದ. ಅವರು ಹೀಗೆ ನೋಡಿ ಪ್ರೋತ್ಸಾಹಿಸಿದ್ದರಿಂದಲೇ ನನಗೂ ಇಷ್ಟೆಲ್ಲ ಸಾಧ್ಯವಾಯಿತು. ಅವರೆಲ್ಲ ನನಗೆ ದೇವರಿದ್ದ ಹಾಗೆ, ಅದಕ್ಕೆ ನಮಸ್ಕಾರ ದೇವರು ಎಂದೇ ಕರೆಯುತ್ತೇನೆ’ ಎನ್ನುತ್ತಾರೆ ಗಗನ್.

    ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts