More

    ಸಾಲಶೂಲದಲ್ಲಿ ಡಜನ್ ದೇಶ; ಲಂಕೆಯ ಹಾದಿಯಲ್ಲಿ ಹೆಜ್ಜೆ, ಆರ್ಥಿಕ ಪತನದ ಭೀತಿ..

    ಕೋವಿಡ್ ಸಾಂಕ್ರಾಮಿಕ ಹಾಗೂ ರಷ್ಯಾ-ಯೂಕ್ರೇನ್ ಯುದ್ಧ ಸೇರಿದಂತೆ ಅನೇಕ ಕಾರಣಗಳಿಗಾಗಿ ಹಲವು ದೇಶಗಳು ಆರ್ಥಿಕವಾಗಿ ದಿವಾಳಿಯಾಗುವ ಹಾದಿಯಲ್ಲಿವೆ. ಇಂತಹ ರಾಷ್ಟ್ರಗಳ ಕುರಿತ ಒಂದಿಷ್ಟು ವಿವರ ಇಲ್ಲಿದೆ.

    ಪ್ರಸ್ತುತ ವರ್ಷದಲ್ಲಿ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ದೇಶಗಳ ಕರೆನ್ಸಿಗಳ ಮೌಲ್ಯವೂ ಕುಸಿತ ಕಂಡಿದೆ. ಸಾಲದ ಪ್ರಮಾಣ ವ್ಯಾಪಕವಾಗಿ ಹೆಚ್ಚಿದೆ. ಲೆಬನಾನ್, ಶ್ರೀಲಂಕಾ, ರಷ್ಯಾ, ಸುರಿನಾಮ್ ಮತ್ತು ಜಾಂಬಿಯಾ ಈಗಾಗಲೇ ಸುಸ್ತಿದಾರ ದೇಶಗಳಾಗಿವೆ. ಬೆಲಾರಸ್ ಕೂಡ ಮುಳುಗುತ್ತಿದೆ. ಹೆಚ್ಚುತ್ತಿರುವ ಸಾಲದ ವೆಚ್ಚ, ಹಣದುಬ್ಬರದಿಂದಾಗಿ ಕನಿಷ್ಠ ಒಂದು ಡಜನ್ ರಾಷ್ಟ್ರಗಳು ಆರ್ಥಿಕ ಕುಸಿತದ ಭೀತಿ ಎದುರಿಸುತ್ತಿರುವ ಅಪಾಯದ ವಲಯದಲ್ಲಿವೆ.

    ಈ ದೇಶಗಳು ಒಟ್ಟಾರೆಯಾಗಿ ಅಂದಾಜು 400 ಶತಕೋಟಿ ಡಾಲರ್ (32 ಲಕ್ಷ ಕೋಟಿ ರೂಪಾಯಿ) ಸಾಲ ಮಾಡಿಕೊಂಡಿವೆ ಎಂದು ವಿಶ್ಲೇಷಕರು ಲೆಕ್ಕ ಹಾಕುತ್ತಾರೆ. ಅರ್ಜೆಂಟೀನಾವು 150 ಶತಕೋಟಿ ಡಾಲರ್​ಗಿಂತ (12 ಲಕ್ಷ ಕೋಟಿ ರೂ.)ಗಿಂತ ಹೆಚ್ಚಿನ ಸಾಲ ಹೊಂದಿದೆ, 40 ರಿಂದ 45 ಶತಕೋಟಿ ಡಾಲರ್​ನೊಂದಿಗೆ ಈಕ್ವೆಡಾರ್ ಮತ್ತು ಈಜಿಪ್ತ್ ನಂತರದ ಸಾಲಿನಲ್ಲಿವೆ. ವಿಶೇಷವಾಗಿ ಜಾಗತಿಕ ಮಾರುಕಟ್ಟೆಗಳು ಶಾಂತವಾಗಿದ್ದರೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬೆಂಬಲದೊಂದಿಗೆ ಸಾಲಗಳನ್ನು ಹೊಂದಿದ್ದರೆ ಅನೇಕ ದೇಶಗಳು ಈ ಬಿಕ್ಕಟ್ಟಿನಿಂದ ಪಾರಾಗಬಹುದಾಗಿದೆ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ. ಆರ್ಥಿಕ ಬಿಕ್ಕಟ್ಟಿನಿಂದ ಅಪಾಯದತ್ತ ಸಾಗುತ್ತಿರುವ ದೇಶಗಳ ವಿವರ ಈ ರೀತಿ ಇದೆ.

    ಯೂಕ್ರೇನ್​: ರಷ್ಯಾದ ಆಕ್ರಮಣದ ಪರಿಣಾಮವಾಗಿ ಯೂಕ್ರೇನ್ 20 ಶತಕೋಟಿ ಡಾಲರ್​ಗೂ ಹೆಚ್ಚಿನ ಸಾಲವನ್ನು ಪುನರ್​ರಚಿಸಬೇಕಾಗುತ್ತದೆ ಎಂದು ಮಾರ್ಗನ್ ಸ್ಟಾನ್ಲಿ ಮತ್ತು ಅಮುಂಡಿ ರೀತಿಯ ಬೃಹತ್ ಹೂಡಿಕೆ ಸಂಸ್ಥೆಗಳು ಎಚ್ಚರಿಸಿವೆ. 1.2 ಶತಕೋಟಿ ಡಾಲರ್ ಬಾಂಡ್ ಪಾವತಿ ಬಾಕಿ ಇದ್ದು, ಸೆಪ್ಟಂಬರ್​ನಲ್ಲಿ ಬಿಕ್ಕಟ್ಟು ತಲೆದೋರಲಿದೆ. ನೆರವಿನ ಹಣ ಮತ್ತು ಮೀಸಲು ಮೂಲಕ ಸಮರ್ಥವಾಗಿ ಸಾಲ ಮರುಪಾವತಿಸಬಹುದಾಗಿದೆ. ಆದರೆ, ಯೂಕ್ರೇನಿನ ಅತಿದೊಡ್ಡ ರಾಷ್ಟ್ರಿಯ ತೈಲ ಮತ್ತು ನೈಸರ್ಗಿಕ ಅನಿಲ ಕಂಪನಿಯು ಎರಡು ವರ್ಷಗಳವರೆಗೆ ಸಾಲ ವಿನಾಯಿತಿ ಕೇಳಿದ್ದು, ಇದನ್ನು ಸರ್ಕಾರ ಅನುಮೋದಿಸುವುದು ಶಂಕಾಸ್ಪದವಾಗಿದೆ ಎಂದು ಹೂಡಿಕೆದಾರರು ಅಂದಾಜಿಸಿದ್ದಾರೆ.

    ಟುನಿಶಿಯಾ: ಸಾಲಕ್ಕಾಗಿ ಐಎಂಎಫ್ ಬಳಿ ಕೈಚಾಚುವ ದೇಶಗಳ ಸಮೂಹವನ್ನೇ ಆಫ್ರಿಕಾ ಹೊಂದಿದೆ. ಆದರೆ, ಈ ಪೈಕಿ ಟುನಿಶಿಯಾ ಅತ್ಯಂತ ಅಪಾಯದಲ್ಲಿದೆ. ಅಂದಾಜು ಶೇ.10ರಷ್ಟು ಬಜೆಟ್ ಕೊರತೆಯನ್ನು ಇದು ಎದುರಿಸುತ್ತಿದೆ. ವಿಶ್ವದಲ್ಲೇ ಅತ್ಯಧಿಕ ಸಾರ್ವಜನಿಕ ವಲಯದ ವೇತನ ಪಾವತಿ ಈ ದೇಶದ್ದಾಗಿದೆ. ಅಧಿಕಾರದ ಮೇಲಿನ ಹಿಡಿತವನ್ನು ಬಲಪಡಿಸುವ ಅಧ್ಯಕ್ಷ ಕೈಸ್ ಸೈಯದ್ ಅವರ ಪ್ರಯತ್ನದಿಂದಾಗಿ ಐಎಂಎಫ್ ಕಾರ್ಯಕ್ರಮಗಳನ್ನು ಮುಂದುವರಿಸುವುದು ಕಠಿಣವಾಗಬಹುದು ಎಂಬ ಆತಂಕಗಳಿವೆ. ಮೂವರು ಅಗ್ರಗಣ್ಯ ಸುಸ್ತಿದಾರ ದೇಶಗಳ ಪಟ್ಟಿಯಲ್ಲಿ ಯೂಕ್ರೇನ್ ಮತ್ತು ಎಲ್ ಸಾಲ್ವಡಾರ್ ಜೊತೆಗೆ ಟುನಿಶಿಯಾ ಕೂಡ ಇರಲಿದೆ ಎಂದು ಮಾರ್ಗನ್ ಸ್ಟಾನ್ಲಿ ಸಂಸ್ಥೆ ಅಂದಾಜಿಸಿದೆ. ಐಎಂಎಫ್ ಜತೆಗೆ ಒಪ್ಪಂದ ಅನಿವಾರ್ಯವಾಗುತ್ತದೆ ಎಂದು ಟುನಿಶಿಯಾದ ಕೇಂದ್ರೀಯ ಬ್ಯಾಂಕ್ ಮುಖ್ಯಸ್ಥ ಮಾರೂವಾನ್ ಅಬಾಸ್ಸಿ ಹೇಳಿದ್ದಾರೆ.

    ಈಕ್ವೆಡಾರ್: ಲ್ಯಾಟಿನ್ ಅಮೆರಿಕದ ಈ ದೇಶವು ಎರಡು ವರ್ಷಗಳ ಹಿಂದೆ ಸುಸ್ತಿದಾರನಾಗಿದೆ. ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಅಧ್ಯಕ್ಷ ಗಿಲ್ಲೆರ್ವೆ ಲಾಸ್ಸೊ ಅವರನ್ನು ಪದಚ್ಯುತಗೊಳಿಸುವ ಪ್ರಯತ್ನದಿಂದ ಅದು ಬಿಕ್ಕಟ್ಟಿಗೆ ಸಿಲುಕಿದೆ. ಸರ್ಕಾರವು ಇಂಧನ ಮತ್ತು ಆಹಾರದ ಸಬ್ಸಿಡಿ ನೀಡಿದ್ದು, ಅಪಾರ ಸಾಲವನ್ನು ಹೊಂದಿದೆ.

    ನೈಜೀರಿಯಾ: ಮುಂದಿನ ವರ್ಷದಲ್ಲಿ 500 ಮಿಲಿಯನ್ ಡಾಲರ್ ಬಾಂಡ್ ಪಾವತಿಯನ್ನು ಈ ದೇಶ ಮಾಡಬೇಕಾಗಿದ್ದು, ಜೂನ್​ನಿಂದ ಸುಧಾರಿಸುತ್ತಿರುವ ಮೀಸಲುಗಳಿಂದ ಇದು ಸಾಧ್ಯವಾಗಬಹುದಾಗಿದೆ. ಸಾಲದ ಮೇಲೆ ಬಡ್ಡಿಯನ್ನು ಪಾವತಿಸಲು ಈ ದೇಶವು ತನ್ನ ಆದಾಯದ ಶೇ. 30ರಷ್ಟನ್ನು ಖರ್ಚು ಮಾಡುತ್ತಿದೆ.

    ಕೀನ್ಯಾ: ಕೀನ್ಯಾ ತನ್ನ ಆದಾಯದ ಶೇ. 30ರಷ್ಟು ಭಾಗವನ್ನು ಬಡ್ಡಿ ಪಾವತಿಗೆ ಖರ್ಚು ಮಾಡುತ್ತದೆ. ಅದರ ಬಾಂಡ್​ಗಳು ಅರ್ಧದಷ್ಟು ಮೌಲ್ಯವನ್ನು ಕಳೆದುಕೊಂಡಿವೆ. ಈಗಾಗಲೇ ನೀಡಿರುವ 2 ಬಿಲಿಯನ್ ಡಾಲರ್ ಬಾಂಡ್​ನ ಮರುಪಾವತಿ ಸಮಸ್ಯೆಯು 2024ರಲ್ಲಿ ಬರಲಿದೆ. ಸಾಲದ ಪ್ರಮಾಣ ಮತ್ತು ಸಾಲದ ಹೊರೆಗಳನ್ನು ಸ್ಥಿರಗೊಳಿಸುವ ವಿಷಯದಲ್ಲಿನ ಹಣಕಾಸಿನ ಸವಾಲುಗಳ ಕಾರಣದಿಂದಾಗಿ ಕೀನ್ಯಾ, ಈಜಿಪ್ತ್, ಟುನಿಶಿಯಾ ಮತ್ತು ಘಾನಾ ಹೆಚ್ಚು ದುರ್ಬಲವಾಗಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ

    ಘಾನಾ: ಅಪಾರ ಪ್ರಮಾಣದ ಸಾಲದಿಂದಾಗಿ ಘಾನಾದ ಸಾಲ-ಜಿಡಿಪಿ (ಒಟ್ಟು ದೇಶಿಯ ಉತ್ಪನ್ನ) ಅನುಪಾತವು ಶೇ. 85ಕ್ಕೆ ಏರಿದೆ. ಈ ದೇಶದ ಕರೆನ್ಸಿ ಸೆಡಿ ಈ ವರ್ಷ ತನ್ನ ಮೌಲ್ಯದ ಕಾಲು ಭಾಗದಷ್ಟು ಕುಸಿತ ಕಂಡಿದೆ. ಈಗಾಗಲೇ ದೇಶದ ತೆರಿಗೆ ಆದಾಯದ ಅರ್ಧದಷ್ಟು ಭಾಗ ಸಾಲದ ಬಡ್ಡಿ ಪಾವತಿಗೆ ಖರ್ಚಾಗುತ್ತಿದೆ. ಹಣದುಬ್ಬರ ಶೇ. 30ರ ಸಮೀಪಕ್ಕೆ ಬರುತ್ತಿದೆ.

    ಈಜಿಪ್ತ್: ದೇಶವು ಅಂದಾಜು ಶೇ. 95ರಷ್ಟು ಸಾಲ-ಜಿಡಿಪಿ ಅನುಪಾತ ಹೊಂದಿದೆ. ಈ ವರ್ಷದಲ್ಲಿ ಅಂತಾರಾಷ್ಟ್ರೀಯ ನಗದು ದೊಡ್ಡ ಪ್ರಮಾಣದಲ್ಲಿ ಹೊರಹೋಗಿದ್ದು, ಇದು 11 ಶತಕೋಟಿ ಡಾಲರ್ (88,000 ಸಾವಿರ ಕೋಟಿ ರೂಪಾಯಿ) ಎಂದು ಜೆಪಿ ಮಾರ್ಗನ್ ಸಂಸ್ಥೆ ಅಂದಾಜಿಸಿದೆ. ಮುಂದಿನ ಐದು ವರ್ಷಗಳಲ್ಲಿ ಪಾವತಿಸಲು ಈಜಿಪ್ತಿಗೆ 8 ಲಕ್ಷ ಕೋಟಿ ರೂಪಾಯಿ ಸಾಲ ಬೇಕಾಗುತ್ತದೆ ಎಂದು ಎಫ್​ಐಎಂ ಪಾರ್ಟನರ್ಸ್ ಸಂಸ್ಥೆ ಹೇಳಿದೆ. ಈಜಿಪ್ತ್ ಪೌಂಡ್ ಕರೆನ್ಸಿ ಶೇ. 15 ರಷ್ಟು ಅಪಮೌಲ್ಯಗೊಂಡಿದೆ.

    ಬೆಲಾರಸ್: ಪಾಶ್ಚಿಮಾತ್ಯ ನಿರ್ಬಂಧಗಳಿಂದಾಗಿ ಕಳೆದ ತಿಂಗಳು ರಷ್ಯಾ ಸುಸ್ತಿದಾರ ಆಗುವಂತಾಯಿತು. ಯೂಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾವನ್ನು ಬೆಂಬಲಿಸಿದ ಬೆಲಾರಸ್ ಕೂಡ ಈಗ ಇಂತಹುದೇ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ.

    ಅರ್ಜೆಂಟೀನಾ: ಸುಸ್ತಿದಾರರ ಪೈಕಿ ವಿಶ್ವದಾಖಲೆ ಹೊಂದಿದೆ ಅರ್ಜೆಂಟೀನಾ. ಅಲ್ಲಿನ ಕರೆನ್ಸಿ ಪೆಸೊ ಈಗ ಕಪ್ಪು ಮಾರುಕಟ್ಟೆಯಲ್ಲಿ ಶೇ. 50ರಷ್ಟು ರಿಯಾಯಿತಿಯಲ್ಲಿ ವಹಿವಾಟು ನಡೆಸುತ್ತಿದೆ. ಈ ದೇಶದ ಮೀಸಲು ಸಂಗ್ರಹ ಕಡಿಮೆ ಆಗಿದೆ. 2024ರ ನಂತರ ದೇಶದ ಸಾಲ ಇನ್ನಷ್ಟು ಹೆಚ್ಚಲಿದೆ ಎನ್ನಲಾಗಿದೆ.

    ಪಾಕಿಸ್ತಾನ: ಪಾಕಿಸ್ತಾನವು ಈ ವಾರ ಐಎಂಎಫ್ ಜತೆ ನಿರ್ಣಾಯಕ ಒಪ್ಪಂದ ಮಾಡಿಕೊಂಡಿದೆ. ಆದರೆ, ಈ ಒಪ್ಪಂದ ಹೆಚ್ಚು ಕಾಲ ಉಪಯೋಗಕ್ಕೆ ಬರಲು ಸಾಧ್ಯವಿಲ್ಲ. ಇಂಧನ ಆಮದು ಬೆಲೆಗಳ ಹೆಚ್ಚಳವು ಪಾವತಿಗಳ ಸಮತೋಲನದ ಬಿಕ್ಕಟ್ಟಿನ ಅಂಚಿಗೆ ಪಾಕಿಸ್ತಾನವನ್ನು ತಳ್ಳಲಿದೆ. ವಿದೇಶಿ ಕರೆನ್ಸಿ ಮೀಸಲು 9.8 ಶತಕೋಟಿ ಡಾಲರ್​ಗೆ (78,400 ಕೋಟಿ ರೂಪಾಯಿ) ಕುಸಿದಿದೆ. ಇದು ಐದು ವಾರಗಳ ಆಮದು ಪಾವತಿಗೂ ಸಾಕಾಗುವುದಿಲ್ಲ. ಪಾಕಿಸ್ತಾನಿ ರೂಪಾಯಿಯು ದಾಖಲೆ ಪ್ರಮಾಣದಲ್ಲಿ ಅಪಮೌಲ್ಯ ಹೊಂದಿದೆ. ಆದಾಯದ ಶೇ. 40ರಷ್ಟು ಭಾಗವನ್ನು ಸಾಲ ಮರುಪಾವತಿಗಾಗಿ ವ್ಯಯಿಸುತ್ತಿರುವುದರಿಂದ ನೂತನ ಸರ್ಕಾರ ಖರ್ಚುವೆಚ್ಚವನ್ನು ತೀವ್ರಗತಿಯಲ್ಲಿ ಕಡಿತಗೊಳಿಸುವುದು ಅನಿವಾರ್ಯವಾಗಿದೆ.

    ಇಥಿಯೋಪಿಯಾ: ಜಿ-20 ಒಕ್ಕೂಟದ ಸಾಮಾನ್ಯ ಚೌಕಟ್ಟಿನ ಕಾರ್ಯಕ್ರಮದಡಿ ಸಾಲ ಪರಿಹಾರವನ್ನು ಪಡೆಯುವ ಮೊದಲ ದೇಶಗಳಲ್ಲಿ ಒಂದಾಗಲು ಇಥಿಯೋಪಿಯಾ ಯೋಜಿಸಿದೆ. ದೇಶದಲ್ಲಿ ನಡೆಯುತ್ತಿರುವ ಅಂತರ್ಯುದ್ಧದ ಪರಿಣಾಮವಾಗಿ ಪ್ರಗತಿ ಕುಂಠಿತಗೊಂಡಿದೆ. ಆದರೆ, ಈ ಮಧ್ಯೆ ಅದು ತನ್ನ ಏಕೈಕ 1 ಬಿಲಿಯನ್ ಅಂತಾರಾಷ್ಟ್ರೀಯ ಬಾಂಡ್ ಸೇವೆಯನ್ನು ಮುಂದುವರಿಸಿದೆ.

    ಎಲ್ ಸಾಲ್ವಡಾರ್: ಬಿಟ್​ಕಾಯಿನ್ ಅನ್ನು ಕಾನೂನುಬದ್ಧ ಗೊಳಿಸಿದೆ. ಇದೇ ವೇಳೆ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರಿಂದ ಐಎಂಎಫ್ ನೆರವಿನ ಬಾಗಿಲು ಮುಚ್ಚುವಂತಾಗಿದೆ. ಆರು ತಿಂಗಳುಗಳಲ್ಲಿ ಪಕ್ವವಾಗುವ 800 ಮಿಲಿಯನ್ ಡಾಲರ್ ಬಾಂಡ್​ಗಳಿಗೆ ಶೇ. 30ರಷ್ಟು ರಿಯಾಯಿತಿ ನೀಡುತ್ತಿದೆ. ಅಲ್ಲದೆ, ದೀರ್ಘಾವಧಿಯ ಬಾಂಡ್​ಗಳಿಗೆ ಶೇ. 70ರಷ್ಟು ರಿಯಾಯಿತಿ ನೀಡಿ ವಹಿವಾಟು ನಡೆಸುವ ಹಂತಕ್ಕೆ ಈ ದೇಶದ ನಂಬಿಕೆ ಕುಸಿದಿದೆ.

    ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts