More

    ಅಕಾಲಿಕ ಮಳೆಗೆ ಕಂಗಾಲಾದ ಜನ

    ಮಂಗಳೂರು/ಉಡುಪಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದ.ಕ, ಉಡುಪಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಮುಂದುವರಿದ್ದು, ಕೃಷಿ ಸಹಿತ ವ್ಯಾಪಕ ಹಾನಿಗೆ ಕಾರಣವಾಗುತ್ತಿದೆ. ಬುಧವಾರವೂ ಮಧ್ಯಾಹ್ನದವರೆಗೆ ಘಟ್ಟದ ತಪ್ಪಲು ಪ್ರದೇಶ, ಗ್ರಾಮಾಂತರ ಭಾಗಗಳಲ್ಲಿ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.

    ಮಂಗಳೂರು ನಗರದ ಪಡೀಲ್, ಕೊಟ್ಟಾರಚೌಕಿ-ಮಾಲೆಮಾರ್ ಪ್ರದೇಶದಲ್ಲಿ ಕೃತಕ ನೆರೆಯಿಂದಾಗಿ ಮನೆ, ಅಂಗಡಿ, ಹೋಟೆಲ್‌ಗಳು ಕೆಲ ಗಂಟೆಗಳ ಕಾಲ ಜಲಾವೃತಗೊಂಡಿತ್ತು. ನಗರದ ಅಲ್ಲಲ್ಲಿ ಆವರಣಗೋಡೆಗಳು ಕುಸಿದು ಬಿದ್ದಿವೆ. ಉಡುಪಿ ಕೆಳ ಪರ್ಕಳ ಜೋಯಿಸರ ಕಾಂಪೌಂಡ್ ಬಳಿ ಮರ ಬಿದ್ದು, ಕೆಲಕಾಲ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿತ್ತು.

    ಘಟ್ಟದ ತಪ್ಪಲು ಪ್ರದೇಶಗಳಲ್ಲೂ ದಿನವಿಡೀ ಉತ್ತಮ ಮಳೆಯಾಗಿದ್ದು, ರಸ್ತೆ, ಕಿರು ಸೇತುವೆಗಳೂ ನೀರಿನಲ್ಲಿ ಮುಳುಗಿವೆ. ಭತ್ತ, ಅಡಕೆ, ರಬ್ಬರ್ ಸಹಿತ ಸಹಿತ ಕೃಷಿ ಭೂಮಿಯಲ್ಲಿ ನೀರು ನಿಂತು ರೈತರು ಕಂಗಾಲಾಗುವಂತೆ ಮಾಡಿದೆ. ಮಧ್ಯಾಹ್ನ ಬಳಿಕ ಮಳೆಯ ಪ್ರತಾಪ ಕಡಿಮೆಯಾಗಿದೆ.

    ಬದಲಾದ ಅಲರ್ಟ್: ಈ ಮೊದಲು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದರೂ, ಬುಧವಾರ ಬೆಳಗ್ಗೆ ‘ರೆಡ್’ ಆಗಿ ಬದಲಿಸಿತ್ತು. ಗುರುವಾರ ಮುಂಜಾನೆ 8.30ರವರೆಗೆ ರೆಡ್ ಅಲರ್ಟ್ ಇರಲಿದ್ದು, ಬಳಿಕ ಆರೆಂಜ್ ಅಲರ್ಟ್ ಮುಂದುವರಿಯಲಿದೆ.

    ಮೀನುಗಾರಿಕೆಗೆ ಅಡ್ಡಿ: ಸಮುದ್ರ ತೀರದಲ್ಲಿ ಭಾರಿ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸಮುದ್ರದಲ್ಲಿ ಗಂಟೆಗೆ 45-55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರಿಗೆ ಎಚ್ಚರಿಕೆ ಮುಂದುವರಿದೆ. ಗುರುವಾರವೂ ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚಿಸಿದೆ. ಈ ನಡುವೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದೆ ನೂರಾರು ಸಂಖ್ಯೆಯ ಬೋಟ್‌ಗಳು ಮಂಗಳೂರು, ಮಲ್ಪೆ ಬಂದರುಗಳಲ್ಲಿ ಲಂಗರು ಹಾಕಿವೆ. ಆಳಸಮುದ್ರಕ್ಕೆ ಮೀನುಗಾರಿಕೆಗೆ ಹೋಗಿದ್ದ ದೋಣಿಗಳೂ ವಾಪಸಾಗಿವೆ ಎಂದು ಮುಖಂಡರು ತಿಳಿಸಿದ್ದಾರೆ. ಕೇರಳ, ತಮಿಳುನಾಡಿನ 50ಕ್ಕೂ ಅಧಿಕ ಮೀನುಗಾರಿಕೆ ಬೋಟುಗಳು ಮಲ್ಪೆ ಬಂದರನ್ನು, ಮಲ್ಪೆ, ಕುಂದಾಪುರದ ನೂರಾರು ಬೋಟುಗಳು ಕಾರವಾರ, ಗೋವಾ ಬಂದರುಗಳಲ್ಲಿ ಲಂಗರು ಹಾಕಿವೆ ಎಂದು ಮೀನುಗಾರರು ತಿಳಿಸಿದ್ದಾರೆ.

    ನೇತ್ರಾವತಿ, ಕುಮಾರಧಾರಾ ನೀರಿನ ಮಟ್ಟ ಹೆಚ್ಚಳ
    ಉಪ್ಪಿನಂಗಡಿ: ನಿರಂತರ ಮಳೆಯಿಂದ ನೇತ್ರಾವತಿ ಹಾಗೂ ಕುಮಾರಧಾರಾ ನದಿ ನೀರಿನ ಮಟ್ಟದಲ್ಲಿ ಬುಧವಾರ ಭಾರಿ ಹೆಚ್ಚಳವಾಗಿದ್ದು, 28.3 ಮೀಟರ್ ದಾಖಲಾಗಿದೆ. ಸಹಸ್ರಲಿಂಗೇಶ್ವರ ದೇವಾಲಯದ ಬಳಿ ಅಳವಡಿಸಲಾದ ಮಾಪನದ ಪ್ರಕಾರ ಅಪಾಯದ ಮಟ್ಟ 31.5 ಮೀಟರ್ ಆಗಿದೆ. ಪೆರಿಯಶಾಂತಿ – ಕೊಕ್ಕಡ ರಸ್ತೆಯಲ್ಲಿ ಚರಂಡಿಗೆ ಮಣ್ಣು ಜರಿದು ಬಿದ್ದ ಪರಿಣಾಮ ರಸ್ತೆ ಜಲಾವೃತಗೊಂಡು ವಾಹನ ಸಂಚಾರ ಕೆಲ ಸಮಯ ಸ್ಥಗಿತಗೊಂಡಿತು. ಪರಿಣಾಮ ಸುಬ್ರಹ್ಮಣ್ಯ- ಧರ್ಮಸ್ಥಳ ಕ್ಷೇತ್ರದ ಯಾತ್ರಾರ್ಥಿಗಳ ನೂರಾರು ವಾಹನಗಳು ಅರ್ಧ ಗಂಟೆ ರಸ್ತೆಯಲ್ಲೇ ಬಾಕಿಯಾದವು.

    ಎಲ್ಲಿ ಅಧಿಕ ಮಳೆ?: ಬುಧವಾರ ಬೆಳಗ್ಗಿನಿಂದ ಸಾಯಂಕಾಲವರೆಗಿನ ಮಾಹಿತಿಯಂತೆ ದ.ಕ ಜಿಲ್ಲೆಯ ಶಿರಾಡಿಯಲ್ಲಿ ಅತ್ಯಧಿಕ 70 ಮಿ.ಮೀ. ಮಳೆ ಸುರಿದಿದೆ. ಶಿಬಾಜೆಯಲ್ಲಿ 60.5 ಮಿ.ಮೀ ಮಳೆಯಾಗಿದೆ. ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಮಂಗಳೂರು ತಾಲೂಕಿನಲ್ಲಿ 146.9, ಬಂಟ್ವಾಳ 138.5, ಬೆಳ್ತಂಗಡಿ 120.2, ಪುತ್ತೂರು 103, ಸುಳ್ಯ 74 ಮಿ.ಮೀ. ಸಹಿತ ದ.ಕ ಜಿಲ್ಲೆಯಲ್ಲಿ ಸರಾಸರಿ 116.5 ಮಿ.ಮೀ. ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ ಸರಾಸರಿ 117 ಮಿ.ಮೀ. ಮಳೆ ದಾಖಲಾಗಿದೆ. ಬಳ್ಕೂರು ಗ್ರಾಮದಲ್ಲಿ ಅತ್ಯಧಿಕ 37 ಸೆಂ.ಮೀ, ಕೋಣಿ ಗ್ರಾಮದಲ್ಲಿ 32.5 ಸೆಂ.ಮೀ. ಮಳೆ ಬಿದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts