More

    ಸಾರಕಿ ಪಾರ್ಕ್‌ನಲ್ಲಿ ಜೋಡಿ ಕೊಲೆ

    ಬೆಂಗಳೂರು: ಜೆ.ಪಿ ನಗರದ ಸಾರಕಿ ಪಾರ್ಕ್‌ನಲ್ಲಿ ಗುರುವಾರ ಸಂಜೆ ಜೋಡಿ ಕೊಲೆಯಾಗಿದೆ.
    ಜೆ.ಪಿ ನಗರ ಸಮೀಪದ ಶಾಂಕಾಂಬರಿನಗರ ನಿವಾಸಿ ಅನುಷಾ(೨೫) ಮತ್ತು ಗೊರಗುಂಟೆ ಪಾಳ್ಯ ನಿವಾಸಿ ಸುರೇಶ್(೪೫) ಕೊಲೆಯಾದವರು.
    ಸಂಜೆ ೪.೧೫ ಸಮಯದಲ್ಲಿ ಪರಿಚಿತ ಯುವತಿಯಾದ ಅನುಷಾಳನ್ನು ಸುರೇಶ್ ಚಾಕುವಿನಿಂದ ಇರಿದುಕೊಂದಿದ್ದು, ಅನುಷಾಳ ತಾಯಿ ಗೀತಾ ಸಿಮೆಂಟ್ ಇಟ್ಟಿಗೆಯಿಂದ ಸುರೇಶ್ ತಲೆಗೆ ಹೊಡೆದಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಅನುಷಾ ಮತ್ತು ಸುರೇಶ್ ಕೆಲಸ ಮಾಡುವಾಗ ಪರಿಚಯವಾಗಿದ್ದು, ಕಳೆದ ಐದು ವರ್ಷದಿಂದ ಇಬ್ಬರು ಸಲುಗೆಯಿಂದ ಇದ್ದರು. ಅನುಷಾ ವೃದ್ಧರ ಆರೈಕೆ ಮಾಡುವ ಕೆಲಸ ಮಾಡಿಕೊಂಡಿದ್ದರು. ಸುರೇಶ್ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಸುರೇಶ್‌ಗೆ ಮದುವೆಯಾಗಿ ಮಕ್ಕಳಿದ್ದಾರೆ. ಆದರೆ ಸುರೇಶ್ ಹಾಗು ಅನುಷಾ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಆದರೆ ಅನುಷಾಗೆ ಸಂಬಂಧ ಮುಂದುವರಿಸುವುದು ಇಷ್ಟವಿರಲಿಲ್ಲ. ಹೀಗಾಗಿ ಸುರೇಶ್‌ನನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಸಂಪರ್ಕ ಕಡಿತ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದಳು. ಈ ವೇಳೆ ಆಕೆ ತನ್ನ ಸಂಪರ್ಕ ನಿಲ್ಲಿಸುವಂತೆ ಹೇಳಿದ್ದಾಳೆ. ಅನುಷಾ ತನ್ನ ಕೈ ತಪ್ಪಿ ಹೋಗುತ್ತಾಳೆ ಎಂದು ಕೋಪಗೊಂಡಿದ್ದ ಸುರೇಶ್ ಆಕೆಗೆ ಚಾಕುವಿನಿಂದ ಇರಿದಿದ್ದ. ಸುರೇಶ್ ಚಾಕು ಹಾಕುತ್ತಿದ್ದಾಗ ಬೇಡ ಎಂದು ತಡೆದಿದ್ದ ಅನುಷಾ ತಾಯಿ ಗೀತಾ ತಡೆಯಲು ಯತ್ನಿಸಿದರು. ಇದನ್ನು ಲೆಕ್ಕಿಸದೆ ಅನುಷಾಗೆ ಚಾಕು ಇರಿದಿದ್ದ. ಇದರಿಂದ ಕೋಪಗೊಂಡ ಅವರು ಅಲ್ಲಿಯೇ ಇದ್ದ ಸಿಮೆಂಟ್ ಇಟ್ಟಿಗೆಯನ್ನು ಸುರೇಶ್ ತಲೆಮೇಲೆ ಹಾಕಿದ್ದರು. ಚಾಕುವಿನಿಂದ ಇರಿತಕ್ಕೊಳಗಾಗಿದ್ದ ಅನುಷಾ ಮತ್ತು ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಜೆ.ಪಿ ನಗರ ಪೊಲೀಸರು ಪರಿಶೀಲನೆ ನಡೆಸಿ ಅನುಷಾ ತಾಯಿ ಗೀತಾ ಅವರನ್ನು ವಶಕ್ಕೆ ಪಡೆದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಜೆ.ಪಿ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಠಾಣೆ ಮೆಟ್ಟಿಲೇರಿದ್ದ ಪ್ರಕರಣ:
    ಇಬ್ಬರ ಪ್ರೇಮ ಪುರಾಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಗುರುವಾರ ಸಹ ಬೆಳಗ್ಗೆ ಪೊಲೀಸ್ ಠಾಣೆಯಲ್ಲಿ ರಾಜೀ ಪಂಚಾಯಿತಿ ನಡೆದಿತ್ತು. ಅದಾದ ಬಳಿಕವೂ ಸುರೇಶ್ ಹಾಗೂ ಅನುಷಾ ಪಾರ್ಕ್‌ನಲ್ಲಿ ಕೊನೇ ಭೇಟಿಗೆ ನಿರ್ಧರಿಸಿದರು. ಮನೆಯಿಂದ ಮಗಳು ಅವಸರದಲ್ಲಿ ಹೋಗುತ್ತಿರುವುದನ್ನು ಗಮನಿಸಿದ ತಾಯಿ ಗೀತಾ ಮಗಳಿಗೆ ಗೊತ್ತಾಗದಂತೆ ಆಕೆ ಹಿಂದಿಯೇ ಹಿಂಬಾಲಿಸಿಕೊಂಡು ಬಂದಿದ್ದು, ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆಯುತ್ತಿರುವುದನ್ನು ನೋಡಿ ಮಧ್ಯ ಪ್ರವೇಶಿದ್ದಾಗ ಆರೋಪಿ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ಮಗಳಿಗೆ ಇರಿದಿದ್ದರಿಂದ ಕೋಪಗೊಂಡು ಇಟ್ಟಿಗೆಯಿಂದ ಸುರೇಶ್ ತಲೆಗೆ ಹೊಡೆದಿದ್ದು ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts