More

    ಅಂಕವಿಕಲೆ ಮೂಕರೋದನೆಗೆ ಬೇಕಿದೆ ನೆರವು

    ವಿಶಾಲಕುಮಾರ ಶಿಂಧೆ ದೋರನಹಳ್ಳಿ: ಕಿತ್ತು ತಿನ್ನುವ ಬಡತನದ ಮಧ್ಯೆಯೂ ಸಂಸಾರವನ್ನು ಚೆನ್ನಾಗಿ ಸಾಗಿಸುತ್ತಿದ್ದ ತಂದೆ ಸಾವು, ಲಕ್ವಾ (ಪಾರ್ಶ್ವವಾಯು)ಗೆ ತುತ್ತಾಗಿ ಹಾಸಿಗೆ ಹಿಡಿದ ತಾಯಿ, ಅಂಗವಿಕಲ ಮಗಳು. ಇಂಥ ಕರುಣಾಜನಕ ಸ್ಥಿತಿಯಲ್ಲಿ ದಿನದೂಡುತ್ತಿರುವ ಕುಟುಂಬ.

    ಮಾರ್ಥಂಡಪ್ಪ ಪಾಲ್ಕಿ (೬೮) ಜ.೨೩ರಂದು ಅನಾರೋಗ್ಯದಿಂದ ಕೊನೆಯುಸಿರೆಳೆದ ಬಳಿಕ ಕುಟುಂಬ ಅಕ್ಷರಶಃ ಬೀದಿಗೆ ಬಂದಿದೆ. ಗ್ರಾಮದ ಆದಿಲ್ ಶಾಹಿ ಮಸೀದಿ ಏರಿಯಾದ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿರುವ ನತದೃಷ್ಟ ರೈತ ಕುಟುಂಬ ನೆರವಿನ ಹಸ್ತದ ನಿರೀಕ್ಷೆಯಲ್ಲಿದೆ.

    ಮಾರ್ಥಂಡಪ್ಪ ಮತ್ತು ಯಮನಮ್ಮ ದಂಪತಿಗೆ ನಾಲ್ವರು ಹೆಣ್ಮಕ್ಕಳು. ಮೂವರನ್ನು ಕೂಲಿ-ನಾಲಿ ಮಾಡಿ ಮದುವೆ ಮಾಡಿಕೊಡಲಾಗಿದೆ. ಆದರೆ ಕೊನೆಯ ಮಗಳು ನಾಗಮ್ಮ (೨೭)ಳ ಎರಡು ಕಾಲುಗಳು ಜನ್ಮತಃ ಪೋಲಿಯೋದಿಂದ ನಿಶ್ಯಕ್ತವಾಗಿದೆ. ಇನ್ನು ಹೊಲಗಳನ್ನು ಲೀಜಿಗೆ ಹಾಕಿಕೊಂಡು ಕೃಷಿ ಮಾಡುತ್ತಿದ್ದ ಮಾರ್ಥಂಡಪ್ಪ ಅಪಾರ ನಷ್ಟ ಕಂಡು ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಇದರಿಂದಾಗಿ ತನ್ನ ಒಂದು ಎಕರೆ ಜಮೀನು, ಖಾಲಿ ನಿವೇಶನ ಮಾರಿದರೂ ಸಾಲ ಪೂರ್ಣ ಪ್ರಮಾಣದಲ್ಲಿ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ.

    ಉಳಿದ ಸಾಲ ತೀರಿಸುವ ಚಿಂತೆ ಮಧ್ಯೆ ವಿಧಿ ಹೆಂಡತಿ ಯಮನಮ್ಮಳನ್ನು ಲಕ್ವಾಗೆ ತುತ್ತಾಗಿಸಿ ಹಾಸಿಗೆ ಹಿಡಿಸಿತು. ಇನ್ನೊಂದೆಡೆ ಅಂಕವಿಕಲ ಮಗಳು. ಇಬ್ಬರನ್ನು ಸಂಬಂಧಿಕರ ಮನೆಯಲ್ಲಿ ಇರಿಸಿ ಕೂಲಿ ಮಾಡಿಕೊಂಡಿದ್ದ ಮಾರ್ಥಂಡಪ್ಪ ಗುಪ್ತಾಂಗ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ. ದುರಾದೃಷ್ಟ ಎಂದರೆ ಶಸ್ತçಚಿಕಿತ್ಸೆ ಬಳಿಕ ಆರೋಗ್ಯವಾಗಿದ್ದ ಮಾರ್ಥಂಡಪ್ಪ ಕಳೆದ ಜ.೨೩ರಂದು ಹೃದಯಾಘಾತದಿಂದ ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್​ನಲ್ಲಿ ಪ್ರಾಣ ಬಿಟ್ಟಿದ್ದಾನೆ.

    ತಂದೆ ಕಳೆದುಕೊಂಡು, ಲಕ್ವಾದಿಂದ ಹಾಸಿಗೆ ಬಿಟ್ಟು ಮೇಲೇಳದ ತಾಯಿ ಆರೈಕೆ ಮಾಡಲಾಗದೆ ಸಾಲ ತೀರಿಸುವ ಚಿಂತೆಯಲ್ಲಿರುವ ಅಂಗವಿಕಲ ಮಗಳು ನಾಗಮ್ಮಳ ಮೂಕರೋದನೆ ಹೇಳತೀರದು. ಸಂಬಂಧಿಕರ ಮನೆಯಲ್ಲಿರುವ ಅವರು ಇನ್ನೆರಡು ತಿಂಗಳಲ್ಲಿ ಆ ಮನೆ ತೊರೆಯುವ ಸ್ಥಿತಿ ಎದುರಾಗಿದೆ. ತೀವ್ರ ಸಂಕಷ್ಟದಲ್ಲಿರುವ ಕುಟುಂಬಕ್ಕೆ ತುರ್ತಾಗಿ ಒಂದು ಮನೆ ಜತೆಗೆ ಸರ್ಕಾರ ಅಥವಾ ದಾನಿಗಳ ಸಹಾಯಹಸ್ತ ಬೇಕಿದೆ.

    ಸುಮಾರು ಹತ್ತು ವರ್ಷದಿಂದ ಕೃಷಿ ಮಾಡುತ್ತಿದ್ದ ಮಾರ್ಥಂಡಪ್ಪಗೆ ಬೆಳೆ ಕೈ ಕೊಟ್ಟಿದ್ದವು. ಹೆಂಡತಿ-ಮಗಳ ಆರೈಕೆ, ಸಾಲದ ಚಿಂತೆ ಇಕ್ಕಟ್ಟಿಗೆ ಸಿಲುಕಿಸಿತ್ತು. ಆತನ ಸಾವಿನಿಂದ ಬೀದಿಪಾಲಾಗಿರುವ ಈ ಕುಟುಂಬಕ್ಕೆ ಸರ್ಕಾರ, ಶಾಸಕ-ಸಂಸದರ ನೆರವು ಬೇಕಿದೆ.
    | ಸಣ್ಣ ಭೀಮಣ್ಣ ಯಮನೂರು ದೋರನಹಳ್ಳಿ ಗ್ರಾಮಸ್ಥ

    ದೋರನಹಳ್ಳಿಯ ಮಾರ್ಥಂಡಪ್ಪ ಪಾಲ್ಕಿ ಕುಟುಂಬದ ದಯನೀಯ ಸ್ಥಿತಿ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಆತನ ಮನೆಗೆ ಭೇಟಿ ನೀಡಿ ಕುಟುಂಬದ ಸಮಸ್ಯೆ ಆಲಿಸಿ ಅಗತ್ಯ ನೆರವಿಗೆ ಕ್ರಮ ಕೈಗೊಳ್ಳಲಾಗುವುದು.
    | ಉಮಾಕಾಂತ ಹಳ್ಳೆ ತಹಸೀಲ್ದಾರ್ ಶಹಾಪುರ

    ಖಾತೆ ವಿವರ
    ಹೆಸರು: ನಾಗಮ್ಮ ತಂದೆ ಮಾರ್ಥಂಡಪ್ಪ
    ಖಾತೆ ಸಂ. ೧೧೦೪೨೧೦೧೦೫೦೨೦೬
    ಐಎಫ್‌ಎಸ್‌ಸಿ: ಪಿಕೆಜಿಬಿ೦೦೧೧೦೪೨
    ದೋರನಳ್ಳಿ ಶಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts