More

    ನಿರ್ಲಕ್ಷ್ಯ ಧೋರಣೆ ಬೇಡ; ಸುರಕ್ಷಾ ಕ್ರಮಗಳೇ ಅಸ್ತ್ರ…

    ಕರ್ನಾಟಕ ಕರೊನಾ ಆಪತ್ತಿನಿಂದ ಹೊರಬರುತ್ತಿದೆ ಎಂಬುವಷ್ಟರಲ್ಲೇ ಸೋಂಕಿನ ಎರಡನೇ ಅಲೆ ಕಾಣಿಸಿಕೊಂಡು ಪರಿಸ್ಥಿತಿ ಮತ್ತೆ ಬಿಗಡಾಯಿಸಿದೆ. ಮಹಾರಾಷ್ಟ್ರ, ಪಂಜಾಬ್, ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ಕೋವಿಡ್ ಹಾವಳಿ ಹೆಚ್ಚಿದ ಬೆನ್ನಲ್ಲೇ, ರಾಜ್ಯದಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗುರುವಾರ ಕರ್ನಾಟಕದಲ್ಲಿ 2,523 ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 18,207ಕ್ಕೆ ಹೆಚ್ಚಿದೆ. ಬೆಂಗಳೂರು ನಗರ, ಕಲಬುರಗಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎರಡನೇ ಅಲೆ ತೀವ್ರತೆ ಪಡೆದುಕೊಂಡಿದೆ. ಒಂದಿಷ್ಟು ನಿರ್ಲಕ್ಷ್ಯ ವಹಿಸಿದರೂ ಮಹಾರಾಷ್ಟ್ರದ ಪರಿಸ್ಥಿತಿ ತಲೆದೋರುವ ಆತಂಕವನ್ನು ತಜ್ಞರೇ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಅನಿವಾರ್ಯವಾಗಿ ಲಾಕ್​ಡೌನ್ ಮಾಡಲಾಗಿದೆ.

    ಕಳೆದ ವರ್ಷದ ಲಾಕ್​ಡೌನ್ ಕಹಿನೆನಪು ಮತ್ತು ನಷ್ಟದ ಹೊಡೆತದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಆರ್ಥಿಕ ಚಟುವಟಿಕೆಗಳನ್ನು ಅಬಾಧಿತವಾಗಿ ಮುಂದುವರಿಸುವ ಅವಶ್ಯಕತೆ ಇರುವುದರಿಂದ ರಾಜ್ಯ ಸರ್ಕಾರ ಮತ್ತೆ ಲಾಕ್​ಡೌನ್ ವಿಧಿಸುವ ಬಗ್ಗೆ ಒಲವು ಹೊಂದಿಲ್ಲ. ಹೀಗಾಗಿ, ಸೋಂಕು ಪ್ರಸರಣ ಹೆಚ್ಚದಂತೆ ಮತ್ತು ಆರೋಗ್ಯ ಸುರಕ್ಷತೆಯನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವ ಜವಾಬ್ದಾರಿ ನಾಗರಿಕರ ಮೇಲೇ ಹೆಚ್ಚಿದೆ.

    ಈ ನಡುವೆ, ಏಪ್ರಿಲ್-ಮೇ ತಿಂಗಳಲ್ಲಿ ಹಬ್ಬ, ಉತ್ಸವ, ಜಾತ್ರೆಗಳ ಭರಾಟೆ ಇರುವುದರಿಂದ ಜನಸಮೂಹ ಒಟ್ಟುಗೂಡುವುದನ್ನು ತಡೆಯುವುದು ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಬ್ಬಗಳ ಸಾರ್ವಜನಿಕ ಆಚರಣೆಯನ್ನು ನಿಷೇಧಿಸಿ, ಆದೇಶ ಹೊರಡಿಸಿದೆ. ಹೋಳಿ, ಯುಗಾದಿ, ಶಬ್ ಎ ಬಾರಾತ್, ಗುಡ್ ಫೈŠಡೆ ಸೇರಿ ಮುಂತಾದ ಹಬ್ಬಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವಂತಿಲ್ಲ. ಈ ಹಬ್ಬಗಳ ಪ್ರಯುಕ್ತ ಯಾವುದೇ ಮೈದಾನ, ಉದ್ಯಾನ, ಮಾರುಕಟ್ಟೆ, ಪ್ರಾರ್ಥನಾ ಮಂದಿರಗಳಲ್ಲಿ ಜನರು ಸೇರುವಂತಿಲ್ಲ. ನಿಯಮ ಮೀರಿದರೆ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೋಳಿ ಹಬ್ಬಕ್ಕಂತೂ ಉತ್ತರ ಕರ್ನಾಟಕ ಭಾಗದಲ್ಲಿ ಸಾವಿರಾರು ಜನರು ಒಟ್ಟುಗೂಡುವುದು ವಾಡಿಕೆ. ಅಲ್ಲದೆ, ಈ ಹಬ್ಬ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂದು ವಾರದವರೆಗೂ ನಡೆಯುತ್ತದೆ. ಆದರೆ, ಈ ಬಾರಿಯ ಪರಿಸ್ಥಿತಿ ಭಿನ್ನವಾಗಿದೆ. ಕರೊನಾ ಸೋಂಕಿನ ಹಾವಳಿ ಯಾವೆಲ್ಲ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂಬ ಅನುಭವ ಈಗ ಜನಸಾಮಾನ್ಯರಿಗೂ ಆಗಿದೆ. ಹಾಗಾಗಿ, ಹಬ್ಬಗಳನ್ನು ಮನೆ, ಕುಟುಂಬದ ಮಟ್ಟಿಗೆ ಸಾಂಕೇತಿಕವಾಗಿ ಆಚರಿಸಿಕೊಳ್ಳುವುದು ಕ್ಷೇಮ. ಲಸಿಕೆ ಬಂದಾಗಿದೆ, ಈಗೇಕೆ ಭಯ ಎಂದು ನಿರ್ಲಕ್ಷ್ಯ ವಹಿಸಿ ಓಡಾಡಿದರೆ, ಸುರಕ್ಷಾ ಕ್ರಮಗಳನ್ನು ಕಡೆಗಣಿಸಿದರೆ ನಾವೇ ಅಪಾಯವನ್ನು ಆಹ್ವಾನಿಸಿಕೊಂಡಂತೆ ಎಂಬುದನ್ನು ಮರೆಯುವಂತಿಲ್ಲ. ಈಗಾಗಲೇ ಅದೆಷ್ಟೋ ಜನರು ಕರೊನಾ ಹೊರಟು ಹೋಗಿದೆ ಎಂಬಂತೆ ಮುಖಗವಸು ಹಾಕಿಕೊಳ್ಳದೆ, ಸುರಕ್ಷಿತ ಅಂತರ ಕಾಪಾಡಿಕೊಳ್ಳದೆ ಓಡಾಡುತ್ತಿದ್ದಾರೆ. ಇಂಥ ಮೈಮರೆಯುವಿಕೆಗೆ ದೊಡ್ಡ ಬೆಲೆ ತೆರಬೇಕಾಗಿ ಬರಬಹುದು. ಕರೊನಾ ವಿರುದ್ಧ ಮೊದಲ ಹಂತದ ಸಮರದಲ್ಲಿ ಪರಿಣಾಮಕಾರಿ ಗೆಲವು ಕಂಡಿದ್ದು, ಎರಡನೇ ಹಂತದಲ್ಲೂ ಸುರಕ್ಷಾ ಕ್ರಮಗಳನ್ನೇ ಅಸ್ತ್ರವಾಗಿಸಿಕೊಳ್ಳುವ ಅಗತ್ಯ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts