More

    ಎನ್‌ಇಪಿ ರದ್ದು ಮಾಡಬೇಡಿ: ಎಬಿವಿಪಿ ಅಭಿಯಾನ

    ಶಿವಮೊಗ್ಗ: ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮೂರು ಬಾರಿ ಜಾರಿಯಾಗಿದೆ. 1968 ಹಾಗೂ 1986ರಲ್ಲಿ ಎರಡು ಬಾರಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಾಗ ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ವಿದ್ಯಾರ್ಥಿಗಳ ಹಿತಕ್ಕಾಗಿ ಎಲ್ಲರೂ ಅದನ್ನು ಬೆಂಬಲಿಸಿದ್ದರು. 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂತು. ಈಗ ರಾಜ್ಯ ಸರ್ಕಾರ ಎನ್‌ಇಪಿ ರದ್ದತಿ ಬಗ್ಗೆ ಮಾತನಾಡುತ್ತಿದೆ. ಇದನ್ನು ರದ್ದು ಮಾಡಿದರೆ ನಮ್ಮ ಸಂಘಟನೆಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಬಿವಿಪಿ ವಿಭಾಗ ಸಂಚಾಲಕ ಎಚ್.ಕೆ.ಪ್ರವೀಣ್ ಎಚ್ಚರಿಸಿದ್ದಾರೆ.

    ಎನ್‌ಇಪಿ ಬೆಂಬಲಿಸಿ ಎಬಿವಿಪಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಹಿಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ, ಎನ್‌ಇಪಿ ಜಾರಿಗೂ ಮುನ್ನ ದೇಶದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಅದರ ಅನುಷ್ಠಾನಕ್ಕೆ ಹಿಂದಿನ ಸರ್ಕಾರ ಪ್ರಾಮಾಣಿಕ ಪ್ರಯತ್ನವನ್ನೂ ನಡೆಸಿತ್ತು. ಆದರೆ ಈಗ ಎನ್‌ಇಪಿ ರದ್ದತಿಯ ಮಾತುಗಳು ಕೇಳಿ ಬರುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
    ಕರ್ನಾಟಕ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮಿದೆ. ಮೊದಲು ಇಲ್ಲಿ ಎನ್‌ಇಪಿ ಅಳವಡಿಸಿಕೊಂಡು ಮಾದರಿಯಾಗದೆ ಇದ್ದರೆ ಹೇಗೆ? ಈಗ ಎನ್‌ಇಪಿ ರದ್ದು ಮಾಡುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಮುಂದೆ ಅವರು ರಾಜ್ಯ ಶಿಕ್ಷಣ ನೀತಿ ಜಾರಿಗೆ ತಂದು ಅದನ್ನು ಅವರು ಅನುಷ್ಠಾನ ಮಾಡಿಕೊಳ್ಳದೆ ಇದ್ದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
    ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶೇ.15 ಬದಲಿಸುವ ಅವಕಾಶ ರಾಜ್ಯ ಸರ್ಕಾರಕ್ಕೆ ಇದೆ. ಹೀಗಿರುವಾಗ ಸಂಪೂರ್ಣವಾಗಿ ಎನ್‌ಇಪಿ ವಿರೋಧಿಸಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಕೇವಲ ರಾಜಕೀಯ ಕಾರಣಗಳಿಗಾಗಿ ಶಿಕ್ಷಣ ಕ್ಷೇತ್ರದ ಹಿನ್ನಡೆಗೆ ಕಾರಣವಾಗುವುದನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ ಎಂದರು.
    ವಿದ್ಯಾರ್ಥಿಗಳ ಹಾಗೂ ಪಾಲಕರ ಹಿತಾಸಕ್ತಿಯನ್ನು ಕಡೆಗಣಿಸಿ ಎನ್‌ಇಪಿ ರದ್ದುಗೊಳಿಸುವ ನಿರ್ಧಾರ ಮಾಡಲಾಗಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ. ಎನ್‌ಇಪಿ ರದ್ದುಪಡಿಸುವ ಮುನ್ನ ಸಾರ್ವಜನಿಕವಾಗಿ ಚರ್ಚೆ ನಡೆಸಿಲ್ಲ. ಎನ್‌ಇಪಿಯಲ್ಲಿ ಪ್ರಾದೇಶಿಕ ಭಾಷೆಯನ್ನು ಕಡೆಗಣಿಸಿಲ್ಲ. ಸಹಬಾಳ್ವೆ, ಸಮಾನತೆ, ರಾಷ್ಟ್ರೀಯತೆಗೆ ಮಹತ್ವ ನೀಡಲಾಗಿದೆ ಎಂದು ಹೇಳಿದರು.
    ಎಬಿವಿಪಿ ನಗರ ಸಹ ಕಾರ್ಯದರ್ಶಿ ರವಿ, ಪ್ರಮುಖ ಕಾರ್ಯಕರ್ತರಾದ ಸಚಿನ್, ಲೋಕೇಶ್, ಧರಣಿ, ಪ್ರಜ್ಞಾ ಮುಂತಾದವರು ಪಾಲ್ಗೊಂಡಿದ್ದರು. ಎನ್‌ಇಪಿ ಬೆಂಬಲಿಸಿ ಶಿವಪ್ಪನಾಯಕ ವೃತ್ತದಲ್ಲಿ 500ಕ್ಕೂ ಹೆಚ್ಚು ಮಂದಿ ಸಹಿ ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts