More

    ಯುಎಸ್​ನಲ್ಲಿ ಟ್ರಂಪ್​ ಮತ್ತು ಮಾಧ್ಯಮಗಳ ನಡುವೆ ಜಟಾಪಟಿ; ಬೆನ್ನತ್ತಿದ ಪತ್ರಕರ್ತರಿಗೆ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ ಅಧ್ಯಕ್ಷ

    ವಾಷಿಂಗ್ಟನ್​ ಡಿಸಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಮಾಧ್ಯಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನನ್ನಷ್ಟು ಶ್ರಮ ವಹಿಸಿ ಕೆಲಸ ಮಾಡುವ ಅಧ್ಯಕ್ಷ ಅಮೆರಿಕ ಇತಿಹಾಸದಲ್ಲಿಯೇ ಯಾರೂ ಇರಲಿಲ್ಲ ಎಂದು ಟ್ವೀಟ್​ ಮೂಲಕ ಹೇಳಿದ್ದಾರೆ. ಅಲ್ಲದೆ, ಮಾಧ್ಯಮಗಳಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಮಾತನಾಡುವ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಆದರೆ ಅವರು ಯಾವುದೇ ವಿಷಯಗಳ ಬಗ್ಗೆ ಸರಿಯಾಗಿ ಅನ್ವೇಷಣೆ ಮಾಡದೆ, ಅಳುಕಿಲ್ಲದೆ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅಧ್ಯಕ್ಷ ಟ್ರಂಪ್​ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಅಮೆರಿಕ ಜನರಿಗೆ ನನ್ನ ಬಗ್ಗೆ ಗೊತ್ತು. ಹಾಗೇ ಅವರಿಗೆ ಇಲ್ಲಿನ ಇತಿಹಾಸವೂ ತಿಳಿದಿದೆ. ನನ್ನಷ್ಟು ಕಠಿಣ ಶ್ರಮ ವಹಿಸಿ ಕೆಲಸ ಮಾಡುವ ಅಧ್ಯಕ್ಷ ಅಮರಿಕ ಇತಿಹಾಸದಲ್ಲಿಯೇ ಇಲ್ಲ. ಈ ಹಿಂದೆ ಆಡಳಿತ ನಡೆಸಿದ್ದ ಅಧ್ಯಕ್ಷರು ಮಾಡಿದ ಅಭಿವೃದ್ಧಿ ಕೆಲಸಗಳಿಗಿಂತ ಅತಿ ಹೆಚ್ಚು ಕೆಲಸವನ್ನು ನಾನು ಅಧಿಕಾರಕ್ಕೆ ಬಂದ ಮೊದಲ ಮೂರುವರೆ ವರ್ಷದ ಅವಧಿಯಲ್ಲೇ ಮಾಡಿದ್ದೇನೆ. ಆದರೆ ಕೆಲವು ಮಾಧ್ಯಮಗಳ ಸುಳ್ಳು ಸುದ್ದಿಗಳು ಈ ಸತ್ಯವನ್ನು ದ್ವೇಷಿಸಿ, ಮರೆಮಾಚುತ್ತಿವೆ ಎಂದಿದ್ದಾರೆ.

    ನಾನು ಮುಂಜಾನೆಯಿಂದ ರಾತ್ರಿಯವರೆಗೆ ಕೆಲಸ ಮಾಡುತ್ತಿದ್ದೇನೆ. ಆದರೆ ನನ್ನ ಶೆಡ್ಯೂಲ್​, ಊಟ-ತಿಂಡಿಯ ವಿಚಾರದ ಬಗ್ಗೆಗೆ ಕೆಲವು ಕಳಪೆ ಮಟ್ಟದ ವರದಿಗಾರರು ಸುಳ್ಳು ಬರೆಯುತ್ತಿದ್ದಾರೆ. ಅವರಿಗೆ ನನ್ನ ಬಗ್ಗೆ ಏನೇನೂ ಗೊತ್ತಿಲ್ಲದೆ ವರದಿ ಮಾಡುತ್ತಿದ್ದಾರೆ. ನನ್ನನ್ನು ಅವಮಾನ ಮಾಡಲು ಬರೆಯುತ್ತಿರುವ ವರದಿಗಳನ್ನು ನೋಡಿ, ನನ್ನ ಹತ್ತಿರದವರೇ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಟ್ರಂಪ್​ ಹೇಳಿದ್ದಾರೆ.

    ಇತ್ತೀಚೆಗೆ ಡೊನಾಲ್ಡ್​ ಟ್ರಂಪ್​ ಅವರು ಒಂದು ಹೇಳಿಕೆ ನೀಡಿದ್ದರು. ಕರೊನಾ ವೈರಸ್​ ಪೀಡಿತರಿಗೆ ಕ್ರಿಮಿನಾಶಕಗಳನ್ನು ಇಂಜೆಕ್ಟ್​ (ಚುಚ್ಚುಮದ್ದು) ಮಾಡಬಹುದು. ಅದರಿಂದ ಕರೊನಾವನ್ನು ಕೊಲ್ಲಬಹುದು ಎಂದು ಹೇಳಿದ್ದರು. ಈ ಹೇಳಿಕೆ ಸಿಕ್ಕಾಪಟೆ ವಿವಾದ ಸೃಷ್ಟಿಸಿತ್ತು. ಬಹುತೇಕ ಮಾಧ್ಯಮಗಳು ಡೊನಾಲ್ಡ್​ ಟ್ರಂಪ್​ ಅವರ ಬಗ್ಗೆ ವ್ಯಂಗ್ಯವಾಗಿ ವರದಿ ಮಾಡಿದ್ದವು. ಸಾಮಾಜಿಕ ಜಾಲತಾಣಗಳಲ್ಲೂ ಟ್ರಂಪ್​ ಟೀಕೆಗೆ ಗುರಿಯಾಗಿದ್ದರು.

    ಅದಾದ ಬಳಿಕ ವೈಟ್​ಹೌಸ್​​ನಿಂದ ಒಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ, ಡೊನಾಲ್ಡ್​ ಟ್ರಂಪ್​ ಅವರ ಹೇಳಿಕೆಯನ್ನು ತಿರುಚಲಾಗಿದೆ ಎನ್ನಲಾಗಿತ್ತು. ಹಾಗೇ ಟ್ರಂಪ್​ ಅವರೂ ಕೂಡ, ತಮ್ಮನ್ನು ಬೇಕೆಂದೇ ವ್ಯಂಗ್ಯ ಮಾಡಲಾಗುತ್ತದೆ ಎಂದು ಹೇಳಿದ್ದರು.

    ಆದರೂ ಅಮೆರಿಕದ ಹಲವು ಮಾಧ್ಯಮಗಳು ಡೊನಾಲ್ಡ್​ ಟ್ರಂಪ್​ ಅವರನ್ನು ತೀವ್ರ ಟೀಕೆ ಮಾಡಿ, ವರದಿ ಮಾಡುತ್ತಿವೆ. ಇದರಿಂದ ರೋಸಿ ಹೋದ ಟ್ರಂಪ್​ ಸರಣಿ ಟ್ವೀಟ್​ ಮೂಲಕ ಮಾಧ್ಯಮಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ.(ಏಜೆನ್ಸೀಸ್​)

    https://www.vijayavani.net/politician-locks-people-in-haunted-house-for-breaking-quarantine-rules/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts