More

    ಜಾತಿ ಜನಗಣತಿ ವರದಿ ಹೊರ‌ ಬಂದೀತೇ? ವಿಧಾನಪರಿಷತ್ತಲ್ಲಿ ಗಮನ ಸೆಳೆದ ಸದಸ್ಯರು

    ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಎಲ್ಲ ಸರ್ಕಾರಗಳು ಮುಂದೂಡುತ್ತ ಬಂದಿರುವ ಎಚ್. ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ ಜಾತಿ ಜನಗಣತಿ ವರದಿ ಇನ್ನಾದರೂ ಹೊರ ಬಂದೀತೇ?
    – ವಿಧಾನ ಪರಿಷತ್‌ನಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ಹಲವು ಸದಸ್ಯರು ಸರ್ಕಾರಕ್ಕೆ ಗುರುವಾರ ಪ್ರಶ್ನಿಸಿದ ಪರಿ ಇದು.

    ಅಧಿಕೃತ ಆದೇಶದ ಪ್ರಕಾರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷಾ ವರದಿ ಇದಾಗಿದ್ದು, ಜಾತಿ ಜನಗಣತಿ ವರದಿ ಎಂದೇ ಕರೆಯಲ್ಪಡುತ್ತಿದೆ. ಸರ್ಕಾರದ ಪರವಾಗಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನ ಖಾಲಿ ಇತ್ತು. ಹೊಸದಾಗಿ ನೇಮಕವಾಗಿರುವ ಕೆ. ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಚರ್ಚಿಸಿ ವರದಿ ತರಿಸಿಕೊಳ್ಳಲಾಗುವುದು ಎಂಬ ಭರವಸೆ ನೀಡಿದರು.

    ಇಷ್ಟೆಲ್ಲ ಆಗಿದೆ: ರಾಜ್ಯದ ಎಲ್ಲ ಜಾತಿ-ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲೆಂದು 54 ಮಾನದಂಡಗಳ ಅನ್ವಯ ಸಮೀಕ್ಷೆ ನಡೆಸಿದ್ದು, ಇದಕ್ಕಾಗಿ 1.6 ಲಕ್ಷ ಅಧಿಕಾರಿಗಳು ಮತ್ತು ನೌಕರರನ್ನು ಈ ಕಾರ್ಯದಲ್ಲಿ ತೊಡಗಿಸಲಾಗಿತ್ತು. ಪ್ರತಿಯೊಂದು ಕುಟುಂಬದ ಮಾಹಿತಿ, ದತ್ತಾಂಶ ಸಂಗ್ರಹಣೆ ಒಳಗೊಂಡು ವರದಿ ತಯಾರಿಸಲು 162 ಕೋಟಿ ರೂ. ಸರ್ಕಾರದ ಬೊಕ್ಕಸದಿಂದ ವೆಚ್ಚವಾಗಿದೆ.

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಚ್. ಕಾಂತರಾಜ್ ನೇತೃತ್ವದ ಆಯೋಗಕ್ಕೆ ವರದಿ ಸಲ್ಲಿಸುವ ಜವಾಬ್ದಾರಿ ಒಪ್ಪಿಸಲಾಗಿತ್ತು. 2019ರ ಸೆ. 21ಕ್ಕೆ ಎಚ್. ಕಾಂತರಾಜ್ ಅಧಿಕಾರದ ಅವಧಿ ಮುಕ್ತಾಯವಾಗಿದೆ. ಹೀಗಾಗಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಕಾಂಗ್ರೆಸ್ ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಅದರ ತಂಟೆಗೆ ಹೋಗಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದ್ದರೂ ವರದಿ ಸ್ವೀಕರಿಸಿ ಬಹಿರಂಗಪಡಿಸಲು ಮೀನ-ಮೇಷ ಎಣಿಸುತ್ತಿದೆ ಎಂದು ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದವು.

    ಗಮನಸೆಳೆಯುವ ಸೂಚನೆಯಡಿ ಆಡಳಿತ ಪಕ್ಷದ ಅಡಗೂರು ವಿಶ್ವನಾಥ್ ವಿಷಯ ಪ್ರಸ್ತಾಪಿಸಿ, ರಾಜ್ಯಾದ್ಯಂತ ಮೀಸಲು ಚಳವಳಿ ಕಿಚ್ಚು ಹೊತ್ತುಕೊಂಡಿದ್ದು, ಜಾತಿ ಜನಗಣತಿ ವರದಿಯೊಂದೇ ಈ ಸಮಸ್ಯೆಗೆ ಪರಿಹಾರವೆಂದು ಹೇಳಿದರೆ, ಕೆ.ಪಿ. ನಂಜುಂಡಿ ಅವರು ನಿರ್ಲಕ್ಷಿತ ಸಣ್ಣ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಲಭಿಸುತ್ತದೆ ಎಂದರು. ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಜೆಡಿಎಸ್‌ನ ಮರಿತಿಬ್ಬೇಗೌಡ ವರದಿ ಸ್ವೀಕರಿಸಿ ಸದನದ ಮುಂದಿಡಬೇಕು ಎಂದು ಒತ್ತಾಯಿಸಿದರು. ಬಿಜೆಪಿಯ ತೇಜಸ್ವಿನಿ ಗೌಡ ಅವರು ಈ ವರದಿಯಿಂದ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುವ ಆತಂಕವಿದ್ದು, ಲೋಪ-ದೋಷ ಸರಿಪಡಿಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts