More

    ದೊಡ್ಡಮಾವತ್ತೂರು ಕೆಶಿಪ್ ರಸ್ತೆಯಲ್ಲಿ ಅವೈಜ್ಞಾನಿಕ ಟೋಲ್‌ಗೆ ವಿರೋಧ

    ಕುಣಿಗಲ್: ದೊಡ್ಡಮಾವತ್ತೂರು ಬಳಿ ಕೆಶಿಪ್ ರಸ್ತೆಯಲ್ಲಿ ಅವೈಜ್ಞಾನಿಕ ಟೋಲ್ ನಿರ್ಮಾಣ ಕಾಮಗಾರಿ ವಿರೋಧಿಸಿ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಕುಣಿಗಲ್-ಮದ್ದೂರು ರಸ್ತೆ ತಡೆದು ಮಾಡಿ ಪ್ರತಿಭಟನೆ ನಡೆಸಿದರು.

    ಜಿಲ್ಲಾ ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್, ತಾಲೂಕು ಅಧ್ಯಕ್ಷ ಅನಿಲ್ ಗೌಡ ಹಾಗೂ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನೆ ವೇದಿಕೆ ಅಧ್ಯಕ್ಷ ನಿಡಸಾಲೆ ಸತೀಶ್ ನೇತೃತ್ವದಲ್ಲಿ ಹುಲಿಯೂರು ದುರ್ಗ ಪ್ರವಾಸಿ ಮಂದಿರ ಆವರಣದಲ್ಲಿ ಸಮಾವೇಶಗೊಂಡ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ದೊಡ್ಡಮಾವತ್ತೂರು ಟೋಲ್ ನಿರ್ಮಾಣ ಸ್ಥಳದಲ್ಲಿ ರಸ್ತೆಯಲ್ಲಿ ಕುಳಿತು ಕೆಶಿಪ್ ಹಾಗೂ ಕೆಅರ್‌ಡಿಸಿಎಲ್ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು.

    ಜಿಲ್ಲಾ ರೈತ ಸಂಘದ ಅನಂದ್‌ಪಟೇಲ್ ಮಾತನಾಡಿ, ಸರ್ವಿಸ್ ರಸ್ತೆ ಸೇರಿ ಯಾವುದೇ ಮೂಲಸೌಕರ್ಯ ಕಲ್ಪಿಸದೆ ಅಧಿಕಾರಿಗಳು ಅವೈಜ್ಞಾನಿಕ ಟೋಲ್ ನಿರ್ಮಾಣ ಮಾಡುತ್ತಿರುವುದು ಖಂಡನೀಯ, ರಸ್ತೆ ಕೆಶಿಪ್‌ಗೆ ಸೇರಿದೆ, ಆದರೆ ಇಲ್ಲಿ ಯಾವುದೇ ಅನುಮತಿ ಪಡೆಯದೇ ಕೆಆರ್‌ಡಿಸಿಎಲ್‌ನ ಅಧಿಕಾರಿಗಳು ಅಕ್ರಮವಾಗಿ ಟೋಲ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಭ್ರಷ್ಟಾಚಾರ ನಿರ್ಮೂಲನೆ ವೇದಿಕೆ ಅಧ್ಯಕ್ಷ ನಿಡಸಾಲೆ ಸತೀಶ್ ಮಾತನಾಡಿ, ಕೆಶಿಪ್ ರಸ್ತೆ ನಿರ್ಮಾಣ ಮಾಡಲು ನಮ್ಮದೇ ತೆರಿಗೆ ಹಣ ವೆಚ್ಚ ಮಾಡಲಾಗಿದೆ. ಜತೆಗೆ ಇಲ್ಲಿನ ನಮ್ಮ ಸುತಮುತ್ತಲಿನ ಬೆಟ್ಟ ಗುಡ್ಡ ಕಡಿದು ರಸ್ತೆಗೆ ಜೆಲ್ಲಿ ಹಾಕಿಲಾಗಿದೆ. ನಮ್ಮ ರೈತರ ಜಮೀನಿನ ಮಣ್ಣನ್ನೇ ಬಳಕೆ ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಎಲ್ಲವನ್ನು ನಮ್ಮಿಂದಲೇ ಪಡೆದುಕೊಂಡು ರಸ್ತೆ ನಿರ್ಮಾಣ ಮಾಡಿ ಈಗ ನಮ್ಮಿಂದಲೇ ಟೋಲ್ ವಸೂಲಿ ಮಾಡಲು ಮುಂದಾಗಿರುವ ಸರ್ಕಾರದ ಕ್ರಮ ಖಂಡನೀಯ ಎಂದರು.

    ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯದೆ ಅಕ್ರಮವಾಗಿ ಟೋಲ್ ಮಾಡುತ್ತಿದ್ದೀರಾ? ಈ ಅಧಿಕಾರ ನಿಮಗೆ ಕೊಟ್ಟವರು ಯಾರು ಎಂದು ಕೆಆರ್‌ಡಿಸಿಎಲ್‌ನ ಇಇ ಸಂಗಮೇಶ್, ಕೆಶಿಫ್ ಇಂಜಿನಿಯರ್ ಜಗದೀಶ್ ಅವರನ್ನು ರೈತ ಸಂಘದ ಪದಾಧಿಕಾರಿಗಳು ತರಾಟೆ ತೆಗೆದುಕೊಂಡರು. ಸಿಪಿಐ ನಿರಂಜನ ಕುಮಾರ್, ಪಿಎಸ್‌ಐ ಪುಟ್ಟೆಗೌಡ, ಮಂಜುನಾಥ್ ರಸ್ತೆ ತಡೆಯಿಂದ ಸಂಚಾರಕ್ಕೆ ತೊಂದರೆಯಾಗದಂತೆ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಅನಿಲ್‌ಗೌಡ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಲಕ್ಷ್ಮಣ್, ಕಾರ್ಯದರ್ಶಿ ವೆಂಕಟೇಶ್, ಮುಖಂಡರಾದ ನಿಡಸಾಲೆ ಪ್ರಸಾದ್ ಇದ್ದರು.

    ಭರವಸೆ ಬಳಿಕ ಹೋರಾಟಕ್ಕೆ ಬ್ರೇಕ್: ಕೆಶಿಫ್ ಅಧಿಕಾರಿಗಳ ಅನುಮತಿ ಇಲ್ಲದೆ ಟೋಲ್ ನಿರ್ಮಾಣ ಕಾಮಗಾರಿ ಮಾಡಿರುವ ಕೆಆರ್‌ಡಿಸಿಎಲ್‌ನ ಇಇ ಸಂಗಮೆಶ್ ವಿರುದ್ಧ ಕೆಶಿಫ್ ಇಇ ಜಗದೀಶ್ ಅವರಿಂದಲೇ ಪೊಲೀಸರಿಗೆ ದೂರು ಕೊಡಿಸುವಲ್ಲಿ ರೈತ ಮುಖಂಡರು ಯಶಸ್ವಿಯಾದರು. ನಿರ್ಮಾಣ ಮಾಡಿರುವ ಕಾಮಗಾರಿ ತೆರವುಗೊಳಿಸಬೇಕು, ಇಲ್ಲವಾದರೆ ನಾವೇ ತೆರವುಗೊಳಿಸಬೇಕಾಗುತ್ತದೆ ಎಂದು ಪಟ್ಟು ಹಿಡಿದು ತೆರವುಗೊಳಿಸಲು ರೈತ ಮುಖಂಡರು ಮುಂದಾದಾಗ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಕೆಅರ್‌ಡಿಸಿಎಲ್ ಅಧಿಕಾರಿಗಳೇ ಟೋಲ್ ನಿರ್ಮಾಣ ಕಾಮಗಾರಿ ತೆರವುಗೊಳಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts