More

    ಸರ್ಕಾರಿ ಆಸ್ಪತ್ರೆಯಲ್ಲಿಲ್ಲ ಮಕ್ಕಳ ವೈದ್ಯರು!

    ಲಕ್ಷ್ಮೇಶ್ವರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಕೆಲವು ವರ್ಷಗಳಿಂದ ಮಕ್ಕಳ ವೈದ್ಯರಿಲ್ಲದೆ ತಾಲೂಕಿನ ಜನತೆ ಮಕ್ಕಳ ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ತಪ್ಪದಂತಾಗಿದೆ.
    ಲಕ್ಷ್ಮೇಶ್ವರ ಪಟ್ಟಣ ಸುಮಾರು 50 ಸಾವಿರ ಜನಸಂಖ್ಯೆ ಹೊಂದಿದೆ. ತಾಲೂಕಿನ 38 ಗ್ರಾಮಗಳ ಜನರಷ್ಟೇ ಅಲ್ಲದೆ, ನೆರೆಯ ಕುಂದಗೋಳ, ಸವಣೂರ, ಶಿಗ್ಗಾಂವಿ, ಶಿರಹಟ್ಟಿ ತಾಲೂಕಿನ ಜನತೆಗೆ ಲಕ್ಷ್ಮೇಶ್ವರ ಕೇಂದ್ರ ಸ್ಥಾನವಾಗಿದೆ. ತಾಲೂಕಿನಲ್ಲಿ ಶಿಗ್ಲಿ, ಸೂರಣಗಿ, ಬಾಲೆಹೊಸೂರ, ಯಳವತ್ತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿದ್ದು, ಅಲ್ಲಿಯೂ ಮಕ್ಕಳ ವೈದ್ಯರ ಕೊರತೆಯಿದೆ. ನಿತ್ಯ ಸರ್ಕಾರಿ ಆಸ್ಪತ್ರೆಗೆ ಬರುವ 300 ಕ್ಕೂ ಹೆಚ್ಚು ಹೊರ ರೋಗಿಗಳಲ್ಲಿ ಶೇ.30 ರಷ್ಟು ಮಕ್ಕಳೇ ಇರುತ್ತಾರೆ. ಪಟ್ಟಣ ಮತ್ತು 38 ಹಳ್ಳಿಗಳನ್ನೊಳಗೊಂಡು ಪಟ್ಟಣದಲ್ಲಿರುವ ಇಬ್ಬರು ಖಾಸಗಿ ಮಕ್ಕಳ ತಜ್ಞ ವೈದ್ಯರೇ ಆಧಾರವಾಗಿದ್ದಾರೆ. ಈ ಆಸ್ಪತ್ರೆಗಳ ಮುಂದೆ ಜನ ಉದ್ದುದ್ದ ಪಾಳಿ ನಿಂತಿರುತ್ತಾರೆ.
    ಮಳೆಗಾಲದಲ್ಲಿ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜ್ವರ, ನೆಗಡಿ, ಕೆಮ್ಮು ಸೇರಿ ಸಾಮಾನ್ಯ ರೋಗಗಳು ಬಾಧಿಸುತ್ತವೆ. ಅಲ್ಲದೆ, ಕೋವಿಡ್ 3ನೇ ಅಲೆ ಮಕ್ಕಳಿಗೆ ಹೆಚ್ಚು ಅಪಾಯ ಎಂಬ ಭೀತಿಯಲ್ಲಿರುವ ಪಾಲಕರಿಗೆ ಮಕ್ಕಳು ಖಾಯಿಲೆಗೊಳಗಾಗುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಲಕ್ಷ್ಮೇಶ್ವರ ವ್ಯಾಪ್ತಿಯಲ್ಲಿ 18 ವರ್ಷ ವಯೋಮಿತಿಯ 15087 ಮಕ್ಕಳು, ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 3938, ಬಾಲೆಹೊಸೂರ ಕೇಂದ್ರದ ವ್ಯಾಪ್ತಿಯಲ್ಲಿ 5042, ಯಳವತ್ತಿಯಲ್ಲಿ 5050, ಸೂರಣಗಿಯಲ್ಲಿ 4414 ಸೇರಿ ಒಟ್ಟು 33531 ಮಕ್ಕಳಿದ್ದಾರೆ.

    ತುರ್ತು ಸಂದರ್ಭದಲ್ಲಿ 55 ಕಿಮೀ ದೂರದ ಹುಬ್ಬಳ್ಳಿ ಅಥವಾ 35 ಕಿಮೀ ಗದಗಕ್ಕೆ ಹೋಗಬೇಕು. ಸಕಾಲಿಕವಾಗಿ ಸೂಕ್ತ ಚಿಕಿತ್ಸೆ ಸಿಗದೆ ಅನೇಕ ಸಾವು-ನೋವುಗಳು ಸಂಭವಿಸುತ್ತಿದೆ. ಖಾಸಗಿ ಆಸ್ಪತ್ರೆ ಶುಲ್ಕ ಬಡವರಿಗೆ ಗಗನ ಕುಸುಮವಾಗಿದೆ. ತಾಲೂಕಿನ ಜನರ ಗೋಳು ಕೇಳುವವರಿಲ್ಲದಂತಾಗಿದೆ. ಸಂಸದರು, ಶಾಸಕರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಒಂದು ವಾರದಲ್ಲಿ ಮಕ್ಕಳ ವೈದ್ಯರ ನೇಮಕ ಮಾಡಬೇಕು.
    | ನಿರ್ಮಲಾ ಉಮಚಗಿ, ಪಾಲಕರು
    | ಪ್ರವೀಣ ಬಾಳಿಕಾಯಿ, ಲಕ್ಷ್ಮೇಶ್ವರ
    ಪುರಸಭೆ ಸದಸ್ಯ

    ಕೇವಲ 1 ಗಂಟೆಯಲ್ಲಿ ನೇಮಕ ಆದೇಶ ನೀಡಿ ಪ್ರತಿ ತಿಂಗಳಿಗೆ 1 ಲಕ್ಷ 30 ಸಾವಿರ ರೂ. ವೇತನ ನೀಡಲು ಸಿದ್ಧವಿದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಮಾಡಲು ಮಕ್ಕಳು ವೈದ್ಯರು ಬರುತ್ತಿಲ್ಲ. ವಾರಕ್ಕೆ 2 ದಿನವಾದರೂ ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಕ್ಕಳ ವೈದ್ಯರ ಸೇವೆ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ.
    | ಡಾ.ಸತೀಶ ಬಸರೀಗಿಡದ, ಜಿಲ್ಲಾ ವೆದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts