More

    ನಿಮ್ಮ ತ್ವಚೆಯ ಮೇಲೂ ಹೀಗೆ ಆಗಿದೆಯೇ? ಅದಕ್ಕೆ ಇಲ್ಲಿದೆ ನೋಡಿ ಪರಿಹಾರ…

    ತುಂಬಾ ಸಾಮಾನ್ಯವಾಗಿ ಕಂಡುಬರುವ, ಪ್ರಾಣ ತೆಗೆಯುವ ಕಾಯಿಲೆ ಅಲ್ಲದಿದ್ದರೂ ಪ್ರಾಣ ಹಿಂಡುವ ಸಮಸ್ಯೆಯಾದ ಫಂಗಲ್ ಇನ್ಫೆಕ್ಷನ್ ಬಗ್ಗೆ ಇಂದು ತಿಳಿದುಕೊಳ್ಳೋಣ. ಈ ಸಮಸ್ಯೆಯನ್ನು ದಿನಗಳು ಅಥವಾ ತಿಂಗಳುಗಳಿಂದ ಅನುಭವಿಸುತ್ತಿರುವವರಿಗಿಂತ ವರ್ಷಗಳಿಂದ ಅನುಭವಿಸುತ್ತಿರುವವರ ಸಂಖ್ಯೆಯೇ ಜಾಸ್ತಿ. ಏಕೆಂದರೆ ಈ ಸಮಸ್ಯೆ ಒಮ್ಮೆ ಹೋಯಿತೆಂದೆನಿಸಿದರೂ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಕೆಲವು ರೀತಿಯ ಫಂಗಸ್‌ಗಳಿಂದಾಗಿ ಚರ್ಮದ ಮೇಲೆ ವರ್ತುಲಾಕಾರವಾದ, ಸುತ್ತಲೂ ಸ್ವಲ್ಪ ಉಬ್ಬಿದಂತಿರುವ ಕಜ್ಜಿಗಳಾಗುತ್ತವೆ. ಇದಕ್ಕೆ ಡರ್ಮೆಟೋಫೈಟೋಸಿಸ್, ಟೀನಿಯಾ ಅಥವಾ ರಿಂಗ್ ವರ್ಮ್ ಎಂದು ಕರೆಯುತ್ತಾರೆ. ಬಹುತೇಕವಾಗಿ ಇದು ಅತಿಯಾದ ತುರಿಕೆಯನ್ನು ಉಂಟುಮಾಡುತ್ತದೆ. ಫಂಗಸ್ ನಿರೋಧಕ ಕ್ರೀಮುಗಳನ್ನು ಅಥವಾ ಔಷಧಗಳನ್ನು ಬಳಸಿದಾಗ ಆ ಕ್ಷಣಕ್ಕೆ ಕಡಿಮೆಯಾದಂತೆ ಎನಿಸಿದರೂ ಅವುಗಳನ್ನು ಬಳಸುವುದು ಬಿಟ್ಟ ತಕ್ಷಣ ಮತ್ತೆ ಸಮಸ್ಯೆ ಪ್ರಾರಂಭವಾಗುತ್ತದೆ.

    ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಮಸ್ಯೆಯಾಗಿದ್ದು ವಿಶೇಷವಾಗಿ ಇನ್ನೊಬ್ಬರ ಬಟ್ಟೆಗಳನ್ನು ಬಳಸುವುದರ ಮೂಲಕ ಹರಡುತ್ತದೆ. ಆದರೆ ಒಂದೇ ಮನೆಯ ಸದಸ್ಯರಲ್ಲಿಯೂ ಕೆಲವರಿಗೆ ಈ ಸಮಸ್ಯೆ ಕಾಡಿದರೆ ಇನ್ನು ಕೆಲವರಿಗೆ ಈ ತೊಂದರೆ ಇರುವುದಿಲ್ಲ. ಇದು ಹೇಗೆ ಸಾಧ್ಯವೆಂದರೆ ಯಾರಿಗೆ ಫಂಗಸ್ ವಿರುದ್ಧ ಚರ್ಮದ ಇಮ್ಯೂನಿಟಿ ಚೆನ್ನಾಗಿ ಇರುತ್ತ್ತದೆಯೋ ಅಂಥವರಿಗೆ ಈ ಸಮಸ್ಯೆ ಇರುವುದಿಲ್ಲ. ಹಾಗಾಗಿ ನಮ್ಮ ಚರ್ಮದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಏನೇನು ಮಾಡಲು ಸಾಧ್ಯವೊ ಅವೆಲ್ಲವನ್ನು ಅನುಸರಿಸಿದರೆ ಮಾತ್ರ ಈ ಸಮಸ್ಯೆಯಿಂದ ಶಾಶ್ವತ ಮುಕ್ತಿ ಸಾಧ್ಯ.

    ಕಾರಣಗಳು ಏನು?:
    ಪೌಷ್ಟಿಕಾಂಶದ ಕೊರತೆ, ಅತಿಯಾದ ಬೆವರುವಿಕೆ, ಚರ್ಮ ಒದ್ದೆಯಾಗಿಯೇ ಇರುವುದು, ರೋಗನಿರೋಧಕ ಶಕ್ತಿ ಕಡಿಮೆ ಇರುವುದು, ಸ್ವಚ್ಛತೆಯ ಕೊರತೆ, ಮಧುಮೇಹ ಮತ್ತು ಕೆಲವು ರೀತಿಯ ಔಷಧಗಳನ್ನು ಸೇವಿಸುತ್ತಿರುವವರಿಗೆ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆಯುರ್ವೇದದ ಪ್ರಕಾರ ಅತಿಯಾಗಿ ಕರಿದ ಪದಾರ್ಥಗಳನ್ನು ಸೇವಿಸುವುದು, ವಿರುದ್ಧ ಆಹಾರಗಳನ್ನು ಸೇವಿಸುವುದು. ಅತಿಯಾಗಿ ಉಪ್ಪು, ಹುಳಿ ಮತ್ತು ಖಾರದ ಆಹಾರ ಪದಾರ್ಥಗಳನ್ನು ಸೇವಿಸುವುದು, ಬದನೆಕಾಯಿ, ಉದ್ದು ಮುಂತಾದ ಕಫ ಮತ್ತು ಪಿತ್ತ ದೋಷಗಳನ್ನು ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸುವವರಿಗೆ ಈ ತೊಂದರೆ ಬರುವ ಸಾಧ್ಯತೆ ಜಾಸ್ತಿ ಮತ್ತು ಈ ಸಮಸ್ಯೆ ಇರುವವರಿಗೆ ಇದು ಹೆಚ್ಚಾಗಲು ಇವು ಕಾರಣವಾಗುತ್ತವೆ. ಹಾಗಾಗಿ ಮೇಲೆ ಹೇಳಿದ ಎಲ್ಲವನ್ನು ತ್ಯಜಿಸುವುದು ಅತ್ಯಂತ ಮುಖ್ಯವಾದದ್ದು.

    ಗುಣಪಡಿಸುವುದು ಹೇಗೆ?:
    ಈ ಸಮಸ್ಯೆಯನ್ನು ಗುಣಪಡಿಸುವ ಕೆಲವು ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ. ಅಮೃತ ಬಳ್ಳಿ, ಕಹಿಬೇವು, ನೆಲಬೇವು, ಸೊಗದೆ ಬೇರು, ಆಡುಮುಟ್ಟದ ಸೊಪ್ಪು, ಅರಿಶಿನಗಳನ್ನು ಎರಡೆರಡು ಗ್ರಾಂನಷ್ಟು ತೆಗೆದುಕೊಂಡು ನಾಲ್ಕು ಲೋಟ ನೀರಿಗೆ ಹಾಕಿ ಒಂದು ಲೋಟಕ್ಕೆ ಬತ್ತಿಸಿ ಸೇವಿಸುವುದರಿಂದ ಚರ್ಮದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೇ ಕಹಿ ಗುಣ ಹೊಂದಿರುವ ಈ ಪದಾರ್ಥಗಳ ಕಾರಣದಿಂದ ಫಂಗಸ್ ನಿವಾರಣೆ ಕೂಡ ಸಾಧ್ಯವಾಗುತ್ತದೆ. ಇವೆಲ್ಲ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತವೆ. ಇವುಗಳಲ್ಲಿ ಯಾವುದಾದರೂ ದೊರಕದಿದ್ದರೂ ಉಳಿದವುಗಳ ಕಷಾಯ ಮಾಡಿ ಸೇವಿಸಬಹುದು.

    ನೀವೇ ಪೇಸ್ಟ್ ತಯಾರಿಸಿ ಹಚ್ಚಿ:
    ಬೇವಿನ ಎಣ್ಣೆಗೆ ಅರಿಶಿನವನ್ನು ಸೇರಿಸಿ ಸಮಸ್ಯೆ ಆಗಿರುವ ಕಡೆ, ಸ್ನಾನದ ಕನಿಷ್ಠ ಅರ್ಧ ಗಂಟೆ ಮೊದಲು ಪ್ರತಿನಿತ್ಯ ಹಚ್ಚುವುದರಿಂದ ಸಮಸ್ಯೆ ತುಂಬಾ ಚೆನ್ನಾಗಿ ನಿವಾರಣೆ ಆಗುತ್ತದೆ. ತ್ರಿಫಲಾಚೂರ್ಣ, ಕಹಿಬೇವು, ಕಚೋರ, ಖದಿರ, ಅರಿಶಿನ, ಸೀಗೆಕಾಯಿ ಪುಡಿ, ಮಂಜಿಷ್ಟ ಮುಂತಾದವುಗಳ ಪುಡಿಗಳನ್ನು ಸೇರಿಸಿ ಸ್ನಾನಚೂರ್ಣ ಮಾಡಿಕೊಂಡು ಅದನ್ನು ಸ್ನಾನಕ್ಕೆ ಬಳಸುವುದರಿಂದಲೂ ತುಂಬಾ ಸಹಾಯವಾಗುತ್ತದೆ.
    ತುಳಸಿಗೆ ತುಂಬಾ ಅದ್ಭುತವಾದ ಫಂಗಸ್ ನಿರೋಧಕ ಗುಣವಿದೆ. ಅವಶ್ಯಕತೆಗೆ ಇದ್ದಷ್ಟು ತುಳಸಿ ರಸಕ್ಕೆ ಕಹಿಬೇವು ಮತ್ತು ಅರಿಶಿನದ ಪುಡಿ ಸೇರಿಸಿ ತಯಾರಿಸಿದ ಪೇಸ್ಟ್ ಅನ್ನು ಹಚ್ಚುವುದರಿಂದ ತುಂಬಾ ಸಹಾಯವಾಗುತ್ತದೆ.

    ದೀರ್ಘಾವಧಿಯಿಂದ ಮತ್ತು ತೀವ್ರವಾದ ಸಮಸ್ಯೆಯನ್ನು ಅನುಭವಿಸುತ್ತಿರುವವರಿಗೆ ಪಂಚಕರ್ಮ ಚಿಕಿತ್ಸೆಗಳು ಮತ್ತು ಪ್ರಕೃತಿ ಚಿಕಿತ್ಸೆಗಳ ಮೂಲಕವೇ ಸಮಸ್ಯೆಯನ್ನು ಗುಣಪಡಿಸಬೇಕಾಗುತ್ತದೆ. ಈ ಚಿಕಿತ್ಸೆಗಳಿಂದ ದೇಹ ಶುದ್ದಿಯಾಗಿ ಸಮಸ್ಯೆ ನಿವಾರಣೆಯಾಗುತ್ತದೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts