More

    ಮನೆ ಮಗನಿಗೆ ವಿಷ ಕೊಡಬೇಡಿ, ಹಾಲು ಕೊಡಿ;  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ 

    ಹಾರೋಹಳ್ಳಿ: ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಯಾರೇ ಅಭ್ಯರ್ಥಿಯಾದರೂ ನಾನೇ ಅಭ್ಯರ್ಥಿ ಎಂದು ತಿಳಿದು ಆಶೀರ್ವಾದ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನವಿ ಮಾಡಿದರು.

    ಹಾರೋಹಳ್ಳಿ ತಾಲೂಕು ಮರಳವಾಡಿ ಹೋಬಳಿಯ ಪಡುವಣಗೆರೆ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಈ ತಾಲೂಕಿನ ಮನೆ ಮಗ ನಾನು. ನನಗೆ ವಿಷ ಕೊಡಬೇಡಿ, ಹಾಲು ಕೊಡಿ. ಎಲ್ಲಿಂದಲೋ ಬಂದವರನ್ನು ನಾವು ನೀವು ಗೆಲ್ಲಿಸಿ ಆಗಿದೆ. ನಮಗೂ ಒಂದು ಅವಕಾಶ ಕೊಡಿ ಎಂದರು.

    ಕನಕಪುರದಲ್ಲಾದ ಬದಲಾವಣೆ ಇಲ್ಲಿ ಆಗಲಿಲ್ಲ. ದೇವೇಗೌಡ ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದೀರಿ. ಕುಮಾರಸ್ವಾಮಿ ಅವರನ್ನು 2 ಬಾರಿ ಮುಖ್ಯಮಂತ್ರಿ ಮಾಡಿದ್ದೀರಿ. ದೇವೇಗೌಡ ಅವರ ಮಗ, ಸೊಸೆ ಶಾಸಕರಾಗಿ ಆಯ್ತು. ಈಗ ಅವರ ಮೊಮ್ಮಗ ಚುನಾವಣೆಗೆ ಅಣಿಯಾಗುತ್ತಿದ್ದಾರೆ. ನಾನೂ ನಿಮ್ಮ ಮನೆಮಗ, ನನಗೂ ಒಂದು ಅವಕಾಶ ಕೊಡಿ. ಯಾವುದೇ ಕಾರಣಕ್ಕೂ ನಿಮಗೆ ಅವಮಾನವಾಗುವ ಕೆಲಸ ಮಾಡುವುದಿಲ್ಲ ಎಂದರು.

    ಅಧಿಕಾರ ಇದ್ದಾಗ ನಾವೇನು ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಕರೊನಾ ಸಮಯದಲ್ಲಿ ಅಧಿಕಾರ ಇಲ್ಲದಿದ್ದರೂ ಜನರ ಪರವಾಗಿ ನಿಂತಿದ್ದೇವೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ ಅವರು ಅದನ್ನು ಉಳಿಸಿಕೊಳ್ಳಲಿಲ್ಲ ಎಂದರು.

    ಅಧಿಕಾರ ದುರುಪಯೋಗ ಮಾಡಿಲ್ಲ: ಎಂದಿಗೂ ಅಧಿಕಾರ ದುರುಪಯೋಗ ಮಾಡಿಕೊಂಡವನಲ್ಲ. ಒಂದು ವೇಳೆ ಹಾಗಾದಲ್ಲಿ ಶಿಕ್ಷೆ ಅನುಭವಿಸಲು ಸಿದ್ಧ. ಕನಕಪುರ, ಹಾರೋಹಳ್ಳಿ ಬೇರೆಯಲ್ಲ. ಹೊಸ ಜಿಲ್ಲೆ, ತಾಲೂಕು ಮಾಡಿಬಿಟ್ಟರೆ ಆದೀತೆ? ನಮ್ಮನ್ನು ಇಂದಿಗೂ ಬೆಂಗಳೂರು ಗ್ರಾಮಾಂತರ ಎಂದೇ ಪರಿಗಣಿಸಲಾಗುತ್ತದೆ. ಹಾರೋಹಳ್ಳಿ ಎಂದಿಗೂ ಕಾನಕಾನಹಳ್ಳಿಯಿಂದ ಬೇರ್ಪಡಲು ಸಾಧ್ಯವಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

    ಕಾರ್ಯಕ್ರಮಕ್ಕೂ ಮುನ್ನ ಕಾರ್ಯಕರ್ತರು ಹಾರೋಹಳ್ಳಿಯಿಂದ ಪಡುವಣಗೆರೆವರೆಗೆ ಬೈಕ್ ರ‌್ಯಾಲಿ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಕರೆತಂದರು. ಕಾರ್ಯಕ್ರಮದ ಬಳಿಕ ಬಳೆಚೆನ್ನವಲಸೆ ಗ್ರಾಮದ ದೇವಸ್ಥಾನಕ್ಕೆ ತೆರಳಿ ಡಿಕೆಶಿ ಪೂಜೆ ಸಲ್ಲಿಸಿದರು.

    ಮುಖಂಡರಾದ ಚಿಕ್ಕಸಾದೇನಹಳ್ಳಿ ಈಶ್ವರ್, ಜೆಸಿಬಿ ಅಶೋಕ್, ಎಚ್.ಸಿ.ಶೇಖರ್, ಹೊನ್ನಗಿರಿಗೌಡ, ಕೇಬಲ್ ರವಿ, ಬನವಾಸಿ ರವಿಕುಮಾರ್,ಕೋಟೆ ಕುಮಾರ್, ಬೆಣಚುಕಲ್ ದೊಡ್ಡಿ ರುದ್ರೇಶ್, ರೂಪಾಗೌಡ, ಭಾನುಪ್ರಿಯ, ಕವಿತಾ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts