More

    ಫಲಿತಾಂಶ ನಮ್ಮ ಪರವಾಗಿರಲಿದೆ: ಬಿಜೆಪಿ ಅಭ್ಯರ್ಥಿ ಯದುವೀರ್ ವಿಶ್ವಾಸ

    ಮೈಸೂರು: ಲೋಕಸಭೆ ಚುನಾವಣೆಯ ಮತದಾನ ಯಶಸ್ವಿಯಾಗಿ ನಡೆದಿದ್ದು, ಫಲಿತಾಂಶ ನಮ್ಮ ಪರವಾಗಿ ಬರಲಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದರು.
    ಹಲವು ಸವಾಲುಗಳೊಂದಿಗೆ ಚುನಾವಣೆ ಮುಗಿದಿದೆ. ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಸಹಕಾರ ನೀಡಿದ್ದು, ಫಲಿತಾಂಶ ನಮ್ಮ ಪರವಾಗಿ ಬರಲಿದೆ ಸುಲಭ ಗೆಲುವು ದೊರೆಯಲಿದೆ ಎಂದು ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
    ಬೇಸಿಗೆ ಹಿನ್ನೆಲೆಯಲ್ಲಿ ಜನರನ್ನು ಒಗ್ಗೂಡಿಸಿ ಪ್ರಚಾರ ಮಾಡುವುದು ಹಲವು ಸಂದರ್ಭದಲ್ಲಿ ಸವಾಲಾಗಿದ್ದರೂ, ಜನರು ಎಲ್ಲ ಕಡೆಗಳಲ್ಲಿ ಬಂದು ನಮ್ಮ ಮಾತುಗಳನ್ನು ಕೇಳುತ್ತಿದ್ದರು. ಇದು ವಿಸ್ತಾರವಾದ ಕ್ಷೇತ್ರವಾಗಿದ್ದರಿಂದ ಎಲ್ಲೆಡೆ ಬೇಟಿ ನೀಡುವುದು ಮತ್ತೊಂದು ಸವಾಲಾಗಿತ್ತು ಎಂದರು.
    ಇದು ಮೊದಲ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿರುವುದು ಒಂದು ಹೊಸ ಅನುಭವ ನೀಡಿದೆ. ಸರಿ-ತಪ್ಪುಗಳಿಂದ ಕೂಡಿದ ಒಳ್ಳೆಯ ಅನುಭವವಾಗಿದೆ. ಎಲ್ಲೆಲ್ಲಿ ಏನೇನು ಮಾಡಿದ್ದೇವೆ ಹಾಗೂ ಮುಂದೆ ಏನು ಮಾಡಬೇಕೆಂಬ ಬಗ್ಗೆ ಅಧ್ಯಯನ ಮಾಡಬೇಕಿದೆ ಎಂದು ಹೇಳಿದರು.
    ಅರಮನೆ ಹಾಗೂ ಜನರ ನಡುವೆ ಭಾವನಾತ್ಮ ಸಂಬಂಧ ಇರುವುದರಿಂದ ಕೆಲವು ಕಡೆಗಳಲ್ಲಿ ಜನರು ತೋರಿದ ಪ್ರೀತಿ, ಅಭಿಮಾನವೇ ಕಾರಣವಾಗಿದೆ. ಆದರೂ ವೈಯಕ್ತಿಕವಾಗಿ ಜನರು ನಮ್ಮ ಯೋಗ್ಯತೆ ನೋಡಿಯೇ ತೀರ್ಮಾನ ಮಾಡುತ್ತಾರೆ. ಜನರು ತೋರಿದ ಪ್ರೀತಿ ಶಾಶ್ವತವಾಗಿದ್ದು, ಅದಕ್ಕೆ ನಾನು ಸದಾ ಋಣಿ. ಜನರೊಂದಿಗಿನ ಸಂಬಂಧವನ್ನು ಹೀಗೆಯೇ ಕಾಪಾಡಿಕೊಂಡು ಮುನ್ನಡೆಯುತ್ತೇನೆ ಎಂದು ಭರವಸೆ ನೀಡಿದರು.
    ಚುನಾವಣೆಯಲ್ಲಿ ನನಗೆ ಸಹಕರಿಸಿದ ಪಕ್ಷದ ವರಿಷ್ಠರಾದ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಸೇರಿದಂತೆ ಶಾಸಕರು, ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸೇರಿದಂತೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
    ಇಡೀ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ನಡುವಿನ ಹೊಂದಾಣಿಕೆ ಉತ್ತಮವಾಗಿತ್ತು. ಎಲ್ಲರೂ ಒಟ್ಟುಗೂಡಿ ನನ್ನ ಪರ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.70ರಷ್ಟು ಮತದಾನ ಆಗಿರುವುದು ಸಂತಸದ ಸಂಗತಿಯಾಗಿದ್ದು, ಇನ್ನೂ ಹೆಚ್ಚಿನ ಮತದಾನ ಆಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
    ಪ್ರಜಾತಂತ್ರ ಎಂಬುದು ಉತ್ತಮ ವ್ಯವಸ್ಥೆಯಾಗಿದ್ದು, ನಮ್ಮ ಜವಾಬ್ದಾರಿ ಏನೆಂಬುದನ್ನು ತೋರಿಸಬೇಕಿದೆ. ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಕಾಂಕ್ಷೆಗಳು ಅಭಿಪ್ರಾಯವನ್ನು ಮಂಡಿಸಲು ಇದು ಒಳ್ಳೆಯ ವೇದಿಕೆ ಎಂದು ಹೇಳಿದರು.
    ಜನರು ತಮ್ಮ ಆಕಾಂಕ್ಷೆಗಳಿಗೆ ಅನುಗುಣವಾಗಿ ಮತ ಹಾಕುತ್ತಾರೆ. ಚುನಾವಣೆಯಲ್ಲಿ ಫಲಿತಾಂಶ ನಮ್ಮ ಪರವಾಗಿ ಬರಲಿದ್ದು, ಸುಲಭವಾಗಿ ಗೆಲ್ಲುತ್ತೇವೆ. ಗೆಲುವಿನ ಅಂತರ ಎಷ್ಟು ಎಂದು ಹೇಳಲು ಸಾಧ್ಯವಿಲ್ಲ. ಮುಂದೆ ರಾಜ್ಯದ ಬೇರೆಡೆ ನಡೆಯುವ ಚುನಾವಣೆಯ ಪ್ರಚಾರಕ್ಕೆ ಬರುವುದಾಗಿ ಮುಖಂಡರಿಗೆ ತಿಳಿಸಿದ್ದೇನೆ. ಆದರೆ ಎಲ್ಲಿ ಪ್ರಚಾರ ನಡೆಸಬೇಕು ಎನ್ನುವುದು ಇನ್ನೂ ಮಾಹಿತಿ ಬಂದಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts