More

    ಗ್ಯಾರಂಟಿ ಯೋಜನೆಗಳೇ ನನಗೆ ಶ್ರೀರಕ್ಷೆ: ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ

    ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆನಂದಸ್ವಾಮಿ ಗಡ್ಡದೇವರಮಠ ಅವರು ಈ ಬಾರಿ ಕಣಕ್ಕೆ ಇಳಿದಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿದೆ. ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ನನಗೆ ಆನೆಬಲ ತಂದಿವೆ. ಈ ಮೂಲಕ ಅಭೂತಪೂರ್ವ ಗೆಲುವು ನನ್ನದಾಗಲಿದೆ ಎಂದು ಗಡ್ಡದೇವರಮಠ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣೆ ಪ್ರಚಾರ ಸೇರಿದಂತೆ ಹಲವು ವಿಚಾರಗಳ ಕುರಿತು ಅವರು ‘ವಿಜಯವಾಣಿ’ ಹಾವೇರಿ ಜಿಲ್ಲಾ ವರದಿಗಾರ ಕೇಶವಮೂರ್ತಿ ವಿ.ಬಿ. ಅವರೊಂದಿಗೆ ಮಾತನಾಡಿರುವುದು ಇಲ್ಲಿದೆ.

    *ಮತದಾರರು ನಿಮಗೆ ಏಕೆ ಮತ ಹಾಕಬೇಕು ?

    ನನಗೆ ಮತ ಹಾಕಬೇಕು ಎನ್ನುವುದಕ್ಕಿಂತ ಜನರು ಕಾಂಗ್ರೆಸ್ ಮಾಡಿದ ಅಭಿವೃದ್ಧಿಗೆ, ಬಡವರ ಆರ್ಥಿಕ ಶಕ್ತಿ ಹೆಚ್ಚಿಸುತ್ತಿರುವುದಕ್ಕೆ, ಗ್ಯಾರಂಟಿ ಯೋಜನೆ ಕೊಟ್ಟಿದ್ದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಮತ ಹಾಕಬೇಕು. ಹೆಚ್ಚಿನ ಸೇವೆ ಮಾಡುವ ಅವಕಾಶ ಕೊಡಬೇಕು. ಜನರ ಸಮಸ್ಯೆಗಳಿಗೆ ಕಿವಿಯಾಗಿ ಜನರೊಂದಿಗೆ ಸದಾ ನಿಲ್ಲುತ್ತೇನೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತದಂತೆ ಎಲ್ಲ ಜಾತಿ, ಧರ್ಮದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ನಮ್ಮ ಪಕ್ಷ ಆಶ್ವಾಸನೆ ಕೊಡುವುದಿಲ್ಲ. ಗ್ಯಾರಂಟಿಗಳನ್ನು ಕೊಡುತ್ತದೆ.

    *ನಿಮ್ಮ ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ ? ಜನರ ಪ್ರತಿಕ್ರಿಯೆ ಹೇಗಿದೆ ?

    ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ಮುಟ್ಟಿವೆ. ಜತೆಗೆ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಏಳು ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳು ನನಗೆ ಸಹಕಾರಿಯಾಗಲಿವೆ. ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ನನ್ನ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈಗಾಗಲೇ ಮತಯಾಚನೆ ಮಾಡಿದ್ದೇನೆ. ದೇಶದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ನಿಮ್ಮಂಥ ಯುವಕರು ನಮ್ಮ ಕ್ಷೇತ್ರಕ್ಕೆ ಬೇಕಾಗಿದ್ದಾರೆ. ನಿಮ್ಮ ಮೇಲೆ ಭರವಸೆ ಇದೆ ಎಂದು ಜನರೇ ಹೇಳುತ್ತಿದ್ದಾರೆ.

    *ನಿಮಗೆ ರಾಜಕೀಯ ನಂಟು ಹೇಗೆ ಬೆಳೆಯಿತು? ಮೊದಲ ಬಾರಿ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೀರಿ. ಹೇಗಿದೆ ಅನುಭವ?

    ನಾನು ಹುಟ್ಟಿದಾಗಲೇ ನಮ್ಮ ತಂದೆ ಜಿ.ಎಸ್. ಗಡ್ಡದೇವರಮಠ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಬೆಳಗಾವಿಯ ಆರ್​ಎಲ್​ಎಸ್ ಕಾಲೇಜ್​ನಲ್ಲಿ ಡಿಗ್ರಿ ಓದುವಾಗ ಜನರಲ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದೆ. 1999ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಎಬಿವಿಪಿ ಅಭ್ಯರ್ಥಿಯನ್ನು ಸೋಲಿಸಿ ಯುನಿವರ್ಸಿಟಿಯ ಸೆನೆಟ್ ಸದಸ್ಯನಾಗಿ ಆಯ್ಕೆಯಾಗಿದ್ದೆ. ವಿದ್ಯಾಭ್ಯಾಸದ ನಂತರ ಲಕ್ಷೆ್ಮೕಶ್ವರದಲ್ಲಿ ಕೃಷಿಕನಾಗಿ, ತೋಟ ಮತ್ತು ಹೊಲ ಮಾಡಿಕೊಂಡಿದ್ದೆ. ತಂದೆಯವರು ಶಾಸಕರಾದ ನಂತರ ಅವರ ಮಾರ್ಗದರ್ಶನದಲ್ಲಿ ಸಾಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೆ. ದೊಡ್ಡಪ್ಪ ಲಿಂಬಯ್ಯಸ್ವಾಮಿ ಮಠ ಅವರ ಪ್ರತಿಷ್ಠಾನದ ಅಡಿಯಲ್ಲಿ ಗ್ರಾಮಗಳನ್ನು ದತ್ತು ಪಡೆದು ಕೆರೆಗಳ ನಿರ್ವಣ, ಬೋರ್​ವೆಲ್ ಕೊರೆಸುವುದು ಮತ್ತಿತರ ರೈತಪರ ಕೆಲಸಗಳನ್ನು ಮಾಡುತ್ತಿದ್ದೆ. ಕೃಷ್ಣ ಭೈರೇಗೌಡ ಅವರು 2008ರಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದ ವೇಳೆ ನನ್ನನ್ನು ಗುರುತಿಸಿ ಯುವ ಕಾಂಗ್ರೆಸ್​ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದರು.

    *ಹಾವೇರಿ- ಗದಗ ಕ್ಷೇತ್ರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

    ಈ ಕ್ಷೇತ್ರದಲ್ಲಿ ಕೃಷಿಕರು, ಶ್ರಮಿಕರು, ವ್ಯಾಪಾರಸ್ಥರು ಹೆಚ್ಚು ಇದ್ದಾರೆ. ಎಲ್ಲ ಸಮಾಜದವರು ಭಾವೈಕ್ಯದ ಸಂಕೇತದಂತೆ ಬದುಕುತ್ತಿದ್ದಾರೆ. ಜಿಲ್ಲೆಯಾಗಿ 26 ವರ್ಷವಾದರೂ ಹಾವೇರಿ ಜಿಲ್ಲೆ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಂಡಿಲ್ಲ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಆಗಿಲ್ಲ. ಕೈಗಾರಿಕೆಗಳ ಸ್ಥಾಪನೆಯಾಗಿಲ್ಲ. ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ಇಲ್ಲಿ ಆಗಬೇಕಿವೆ.

    *ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಮ್ಮ ಪ್ರತಿಸ್ಪರ್ಧಿ. ಅವರನ್ನು ಹೇಗೆ ಎದುರಿಸುತ್ತೀರಿ?

    ಎದುರಾಳಿ ಬಗ್ಗೆ ಹೆಚ್ಚೇನೂ ಹೇಳಲು ಬಯಸುವುದಿಲ್ಲ. ಎದುರಾಳಿ ಬಗ್ಗೆ ನಾನು ಹೇಳಿದರೆ ರಾಜಕೀಯ ಆಗುತ್ತದೆ. ಯಾರು ಏನು ಮಾಡಿದ್ದಾರೆ. ಯಾರ ಕೊಡುಗೆ ಏನು ಎಂಬುದು ಜನರಿಗೆ ಗೊತ್ತಿದೆ. ಜನರ ನಿರ್ಧಾರವೇ ಅಂತಿಮ.

    *ನೀವು ಗೆಲುವು ಸಾಧಿಸಿದರೆ ಕ್ಷೇತ್ರಕ್ಕೆ ಏನೇನು ಮಾಡುವ ಕನಸು ಕಂಡಿದ್ದೀರಿ?

    ಕ್ಷೇತ್ರದ ಜನರು ಆಶೀರ್ವದಿಸಿದರೆ ಗದಗ- ಯಲವಗಿ, ಮುಂಡರಗಿ- ಹರಪನಹಳ್ಳಿ, ಗದಗ- ವಾಡಿ, ರಾಣೆಬೆನ್ನೂರ- ಶಿಕಾರಿಪುರ ರೈಲು ಮಾರ್ಗಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವ ನಿರ್ಧಾರ ಮಾಡಿದ್ದೇನೆ. ಕೈಗಾರಿಕೆಗಳ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತೇನೆ. ಉತ್ತರ ಕರ್ನಾಟಕದ ಕನಸಾದ ಮಹದಾಯಿ ಯೋಜನೆ ಜಾರಿಗಾಗಿ ಹೋರಾಡುವೆ. ರಾಜ್ಯಕ್ಕೆ ಬರಬೇಕಾದ ಅನುದಾನಕ್ಕಾಗಿ ಗಟ್ಟಿ ಧ್ವನಿಯಾಗುತ್ತೇನೆ.

    *ಕಾಂಗ್ರೆಸ್ ಗ್ಯಾರಂಟಿ ಕೊಟ್ಟಿರುವಂತೆ ಮೋದಿ ಗ್ಯಾರಂಟಿ ಸಹ ಸದ್ದು ಮಾಡುತ್ತಿದೆಯಲ್ಲ?

    ಯಾರ ಗ್ಯಾರಂಟಿ ಏನು ಎಂಬುದು ಜನರಿಗೆ ಗೊತ್ತಿದೆ. ತಳಪಾಯ ಗಟ್ಟಿ ಇರಬೇಕು. ಬದಲಾಗಿ ಮೇಲಿನ ಛಾವಣಿ ಮಾತ್ರ ತೋರಿಸಿದರೆ ಕುಸಿದು ಬೀಳುವ ಸಾಧ್ಯತೆ ಹೆಚ್ಚು. ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮೂಲಕ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಮುಂದೆ ಯಾವ ಗ್ಯಾರಂಟಿಯೂ ನಡೆಯುವುದಿಲ್ಲ.

    *ನೀವು ಮತದಾರರಿಗೆ ಏನು ಹೇಳಲು ಇಚ್ಛಿಸುತ್ತೀರಿ ?

    ನಾನು ನಿಮ್ಮೆಲ್ಲರ ಜತೆ ನಿಮ್ಮೆಲ್ಲರ ಪ್ರಗತಿಯ ಹೆಜ್ಜೆಯಲ್ಲಿ ನಾನೂ ನಡೆಯುತ್ತೇನೆ. ಪ್ರಾಮಾಣಿಕವಾಗಿ ನಿಮ್ಮೆಲ್ಲರ ಸೇವೆ ಮಾಡುತ್ತೇನೆ. ನಿಮ್ಮ ಜತೆ ಒಬ್ಬ ಸಹೋದರ, ಸ್ನೇಹಿತನಾಗಿ ಇರುತ್ತೇನೆ. ಒಂದು ಅವಕಾಶ ಕೊಟ್ಟು ಆಶೀರ್ವದಿಸಿ ಎಂದು ಕಳಕಳಿಯಿಂದ ಪ್ರಾರ್ಥಿಸುತ್ತೇನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts