More

    ಅನ್ಯರೋಗಗಳ ಔಷಧ ಪೂರೈಕೆಗೆ ಕ್ರಮ; ರಾಜ್ಯದಲ್ಲಿ ಒಮಿಕ್ರಾನ್ ಬಗ್ಗೆ ಆತಂಕ ಬೇಡ: ಆರೋಗ್ಯ ಸಚಿವ ಡಾ. ಸುಧಾಕರ್ ಅಭಯ

    ಬೆಂಗಳೂರು: ಕೋವಿಡ್ ಹೊರತುಪಡಿಸಿ ಇತರ ಕಾಯಿಲೆಗೆ ಔಷಧ ಕೊರತೆಯಾಗದಂತೆ ಕ್ರಮ ಕೈಗೊಂಡಿರುವುದಾಗಿ ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಔಷಧ ಖರೀದಿ ಕುರಿತು ಸಭೆ ನಡೆಸಲಾಗಿದೆ. ಔಷಧಕ್ಕಾಗಿ ಸುಮಾರು 38 ಕೋಟಿ ರೂ.ಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ. ಕೋವಿಡ್​ನಿಂದ ಜನರಲ್ ಔಷಧ ಖರೀದಿಸುವುದು ಈ ವರ್ಷ ಸ್ವಲ್ಪ ವಿಳಂಬವಾಗಿದೆ. ಕೋರ್ಟ್​ನಲ್ಲೂ ಪ್ರಕರಣ ಇದ್ದಿದ್ದರಿಂದ ಕೆಲ ಟೆಂಡರ್​ಗಳೂ ಆಗಿರಲಿಲ್ಲ. ಸ್ಥಳೀಯವಾಗಿಯೇ ಔಷಧ ಖರೀದಿಸಲು ಹಣ ನೀಡಲಾಗಿದೆ. ತಾಲೂಕು, ಜಿಲ್ಲಾ ಆಸ್ಪತ್ರೆ ಎಲ್ಲ ಆಸ್ಪತ್ರೆಗಳಲ್ಲಿ 2-3 ದಿನಗಳಲ್ಲಿ ಔಷಧ ದೊರೆಯಲಿದೆ. ಔಷಧ ಪೂರೈಕೆ ನಂತರ ಹೊರಗಡೆ ಚೀಟಿ ಬರೆದುಕೊಡುವಂತಿಲ್ಲ ಎಂದು ತಾಕೀತು ಮಾಡಿದರು.

    ಕೋವಿಡ್​ನ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣುವಿನ ಹರಡುವಿಕೆಗೆ ಸಂಬಂಧಿಸಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜನರು ಆತಂಕ ಪಡಬೇಕಿಲ್ಲ. ಕೋವಿಡ್ ಲಸಿಕೆಯನ್ನು ಎಲ್ಲರೂ ಪಡೆಯುವುದರೊಂದಿಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ರಾಜ್ಯದಲ್ಲಿ 45 ಲಕ್ಷ ಜನ 2ನೇ ಡೋಸ್ ಪಡೆಯಬೇಕಿದೆ. 3ನೇ ಅಲೆ ಬಂದಾಗ ಲಸಿಕೆ ಪಡೆಯದವರಿಗೆ ಸಮಸ್ಯೆಯಾಗಬಹುದು ಎಂದು ಹೇಳಿದರು.

    ಆರ್​ಟಿಪಿಸಿಆರ್ ಕಡ್ಡಾಯ: ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೋವಿಡ್ ವರದಿ ತಂದಿದ್ದರೂ ಆರ್​ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು. ಅವರಿಗೆ ನೆಗೆಟಿವ್ ಬಂದರೆ ಮನೆಯಲ್ಲೇ ಒಂದು ವಾರ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು ಎಂದು ಸುಧಾಕರ್ ತಿಳಿಸಿದರು.

    ಸ್ವಪಕ್ಷೀಯರಿಗೆ ತಿರುಗೇಟು: ಸಚಿವ ಸಂಪುಟ ಸಭೆಯಲ್ಲಿ ತಮ್ಮ ವಿರುದ್ಧ ಸಚಿವರು ಬೇಸರಗೊಂಡಿದ್ದಾರೆ ಎಂಬ ಮಾಧ್ಯಮಗಳ ವರದಿಗೆ ಪ್ರತಿಕ್ರಿಯೆ ನೀಡಿದ ಡಾ.ಕೆ.ಸುಧಾಕರ್, ಕ್ಯಾಬಿನೆಟ್​ನಲ್ಲಿ ನಡೆದದ್ದನ್ನು ಯಾರಾದರೂ ಹೊರಗಡೆ ಮಾತನಾಡಿದರೆ ಅನೈತಿಕ ಹಾಗೂ ಕಾನೂನು ಬಾಹಿರ. ಸಂಪುಟ ಸಭೆಯಲ್ಲಿ ನಡೆಯುವ ವಿಷಯಗಳನ್ನು ಹಾದಿಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಸ್ವಪಕ್ಷೀಯರಿಗೆ ತಿರುಗೇಟು ನೀಡಿದರು.

    ರಾಜ್ಯದಲ್ಲಿ 322 ಕೇಸ್, 3 ಸಾವು

    ರಾಜ್ಯದಲ್ಲಿ ಶನಿವಾರ 322 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ. 0.34 ಹಾಗೂ ಮರಣ ಪ್ರಮಾಣ ದರ ಶೇ.0.93 ತಲುಪಿದೆ. ಬೆಂಗಳೂರು ನಗರ 149, ಧಾರವಾಡ 76, ಮೈಸೂರು 27, ದಕ್ಷಿಣ ಕನ್ನಡ 13 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಚಿತ್ರದುರ್ಗ, ಧಾರವಾಡ ಮತ್ತು ತುಮಕೂರಿನಲ್ಲಿ ತಲಾ ಒಬ್ಬರಂತೆ ಮೂವರು ಮೃತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 176 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.50 ಲಕ್ಷ ದಾಟಿದೆ. ಸಕ್ರಿಯ ಪ್ರಕರಣ ಸಂಖ್ಯೆ 6,754ಕ್ಕೆ ತಲುಪಿದೆ. ಈವರೆಗೂ 38,196 ಮಂದಿ ಸಾವನ್ನಪ್ಪಿದ್ದು, 29.95 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts