More

    ಅನಗತ್ಯ ವಿಚಾರಗಳಿಗೆ ಮನಸ್ಸಿನಲ್ಲಿ ಆಸ್ಪದ ನೀಡಬೇಡಿ

    ಶಿಕಾರಿಪುರ: ಹದಿಹರೆಯದಲ್ಲಿ ಅನಗತ್ಯ ವಿಚಾರಗಳಿಂದ ಮನಸು ಮೈಲಿಗೆ ಆಗದಂತೆ ನೋಡಿಕೊಳ್ಳಿ. ಸುಂದರ ಬದುಕು ಕಟ್ಟುವ ಕನಸುಗಳಿಗಷ್ಟೇ ಜಾಗ ಕೊಡಿ ಎಂದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶುಭಾ ಮರವಂತೆ ಹೇಳಿದರು.

    ನಗರದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಬದುಕಿಗೆ ಬೆಳಕು ಕೊಡುತ್ತದೆ. ಆದರೆ ಅದನ್ನು ಪಡೆಯಲು ನಾವು ಅವಿರತವಾದ ಪರಿಶ್ರಮ ಹಾಕಬೇಕು. ಕಲಿತ ವಿದ್ಯೆಯನ್ನು ನಾವು ಯಾರಿಗೆ ಬೇಕಾದರೂ ಧಾರೆ ಎರೆಯಬಹುದು. ಆದರೆ ಯಾರೂ ಅದನ್ನು ಕದಿಯಲು ಆಗುವುದಿಲ್ಲ. ವಿದ್ಯೆಯು ವಿನಯ ಮತ್ತು ಗೌರವವನ್ನು ತಂದುಕೊಡುವಂತಿರಬೇಕು. ವಿದ್ಯೆಯ ಜತೆಗೆ ಮಾನವೀಯ ಮೌಲ್ಯಗಳಿದ್ದರೆ ಆ ವಿದ್ಯೆ ಸಾರ್ಥಕವಾಗುತ್ತದೆ ಎಂದರು.
    ಬಾಲ್ಯದಲ್ಲಿ ಕೆಲವು ಕನಸುಗಳು ಮತ್ತು ಗುರಿ ನಿಮ್ಮಲ್ಲಿ ಸೃಜಿಸಿರುತ್ತದೆ. ಅದಕ್ಕೆ ಸಾಧನೆಯ ನೀರೆರೆಯುತ್ತಾ ಸಾಕಿದರೆ ಅದು ಹೆಮ್ಮರವಾಗಿ ನಿಮಗೆ ನೆರಳು ಕೊಡಬಲ್ಲದು. ಕನ್ನಡ ಸಾರಸ್ವತ ಲೋಕದ ಧ್ರುವ ತಾರೆ ಆಗಬೇಕೆಂದರೆ ಕನ್ನಡ ಸಾಹಿತ್ಯ, ಬರಹ ಮತ್ತು ಕವಿಗಳ ಬಗ್ಗೆ ನೀವು ಆಸಕ್ತಿ ಬೆಳೆಸಿಕೊಳ್ಳಬೇಕು. ಸಾಮಾಜಿಕ ಕಳಕಳಿಯ ತುಡಿತ ನಿಮ್ಮ ಶಿಕ್ಷಣದಲ್ಲಿ ಗೋಚರಿಸಬೇಕು ಎಂದು ಹೇಳಿದರು.
    ಇಲ್ಲೊಂದು ಸಾಂಸ್ಕೃತಿಕ ಲೋಕ ತೆರೆದುಕೊಂಡಿದೆ. ಇಲ್ಲಿ ನಿಮ್ಮ ಪ್ರತಿಭೆಗಳ ಅನಾವರಣವಾಗುತ್ತದೆ. ಪ್ರತಿಭೆ ಯಾವತ್ತೂ ಸಾಧಕನ ಸ್ವತ್ತು. ಒಬ್ಬೊಬ್ಬರೂ ಒಂದೊಂದು ಕಲೆಯಲ್ಲಿ ಪ್ರಾವೀಣ್ಯತೆ ಪಡೆದಿರುತ್ತಾರೆ. ಅಂತಹ ಕಲೆಗಳಿಗೆ ಇದೊಂದು ವೇದಿಕೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ನಾವು ಆದ್ಯತೆ ನೀಡಬೇಕು ಎಂದು ಹೇಳಿದರು.
    ಪ್ರಾಚಾರ್ಯ ಸುರೇಶ್ ಲಮಾಣಿ ಮಾತನಾಡಿ, ವಿದ್ಯಾರ್ಥಿ ಜೀವನವೆಂದರೆ ಅದು ತಪಸ್ಸು ಇದ್ದಂತೆ. ಇದೊಂದು ಸವಾಲು ಹಾಗೂ ಅಗ್ನಿಪರೀಕ್ಷೆಯ ದಿನಗಳು. ಅವುಗಳನ್ನು ಎದುರಿಸಿ ಜಯಿಸಬೇಕು. ಆಗ ನೀವು ಯಶಸ್ವಿ ಪುರುಷರಾಗಬಲ್ಲಿರಿ ಎಂದರು.
    ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಭಾಷ್ ಚಂದ್ರ ಸ್ಥಾನಿಕ್, ಉಪನ್ಯಾಸಕರಾದ ಬಂಗಾರಪ್ಪ, ಮಂಜುನಾಥ್ ನಾಯಕ್, ಯತೀಶ್, ದಿನಕರ್, ಸುರೇಶ್, ಸಂತೋಷ್, ರಶ್ಮಿ, ಪಹಮಿದಾ, ಸೀತಾರಾಮ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts