More

    ರಾಜಕಾರಣಿಗಳು, ಪಕ್ಷಗಳ ಪರ ಪ್ರಚಾರ ಬೇಡ

    ತಿ.ನರಸೀಪುರ: ರಾಜಕಾರಣಿಗಳು, ರಾಜಕೀಯ ಪಕ್ಷಗಳು ನಡೆ ಬೇಸರ ತರಿಸುತ್ತಿರುವುದರಿಂದ ಪ್ರಸಕ್ತ ಚುನಾವಣೆಯಲ್ಲಿ ತಾಲೂಕಿನ ಪ್ರಗತಿಪರರು, ದಲಿತ ಸಂಘಟನೆಗಳು, ವಿಚಾರವಂತರು ತಟಸ್ಥ ನೀತಿ ಅನುಸರಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸೋಸಲೆ ಶಶಿಕಾಂತ್ ಕರೆ ನೀಡಿದರು.


    ಚುನಾವಣೆ ಪೂರ್ವ, ನಂತರದ ದಿನಮಾನಗಳಲ್ಲಿ ಬದಲಾಗುತ್ತಿರುವ ರಾಜಕಾರಣಿಗಳ ನಡೆಯಿಂದ ಹಾಗೂ ದಲಿತರು, ಶೋಷಿತರ ಹಿಂದುಳಿದವರಿಗೆ ಯಾವುದೇ ರಕ್ಷಣೆ ಇಲ್ಲದಿರುವ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕೇವಲ ಮತದಾನ ಮಾತ್ರ ಮಾಡಿ, ಯಾವುದೇ ಪಕ್ಷದ ಪರವಾಗಿ ಪ್ರಚಾರ ನಡೆಸದೆ ತಟಸ್ಥವಾಗಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷಗಳು, ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ ಕೆಲಸದಲ್ಲಿ ನಿರತವಾಗಿವೆ. ದಲಿತರು, ಅಲ್ಪ ಸಂಖ್ಯಾತರು,ಹಿಂದುಳಿದವರು ರಾಜಕೀಯ ಪಕ್ಷಗಳ ನಡೆಯಿಂದ ಸಾಕಷ್ಟು ನೋವು ಅನುಭವಿಸುವಂತಾಗಿದೆ. ಅದರಲ್ಲೂ ದಲಿತ ಸ್ಥಿತಿ ದಮನೀಯವಾಗಿದೆ. ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ದಲಿತರಿಗೆ ಸೌಲಭ್ಯ ಕೊಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ನಂತರ ಕಡೆಗಣಿಸಿ ಸ್ವಾರ್ಥದಿಂದ ಸ್ವಜಾತಿ, ಸ್ವಧರ್ಮ ಪ್ರೇಮದ ಮೂಲಕ ದಲಿತರ ಕಲ್ಯಾಣವನ್ನು ಮರೆಯುತ್ತಿದ್ದಾರೆ. ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನ ಎಲ್ಲ ಪ್ರಗತಿ ಪರ ಸಂಘಟನೆಗಳು, ದಲಿತ ಸಂಘಟನೆಗಳು, ವಿಚಾರವಂತರು ರಾಜ್ಯದಲ್ಲಿ ಉತ್ತಮವಾದ ಸರ್ಕಾರ ಬರಬೇಕೆಂಬ ಸಂಕಲ್ಪ ಮಾಡಿ ಕಾಂಗ್ರೆಸ್ ಸರ್ಕಾರಕ್ಕೆ ಸಾಥ್ ನೀಡಿದ್ದವು. ಸರ್ಕಾರ ಚುನಾವಣಾ ಪೂರ್ವದಲ್ಲಿ ದಲಿತರ ಪರವಾಗಿ ಹಲವಾರು ಯೋಜನೆ ಘೋಷಣೆ ಮಾಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ದಲಿತರನ್ನು ಸಂಪೂರ್ಣವಾಗಿ ಕಡೆಗಣಿಸಿ ಸ್ವಜನ ಪಕ್ಷಪಾತದಲ್ಲಿ ತೊಡಗಿತು ಎಂದು ಆರೋಪಿಸಿದರು.
    ರಾಜ್ಯದಲ್ಲಿ ಭ್ರಷ್ಟಾಚಾರ, ದಲಿತರ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆದಿದೆ. ಯಾವುದೇ ಸರ್ಕಾರ ಬಂದರೂ ದೌರ್ಜನ್ಯ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ದಲಿತರಿಗೆ ಮೀಸಲಾಗಿಟ್ಟ ಎಸ್‌ಸಿಪಿ, ಟಿಎಸ್‌ಪಿ ಅನುದಾನ 11 ಸಾವಿರ ಕೋಟಿ ರೂ.ಗಳನ್ನು ವಿವಿಧ ಯೋಜನೆಗಳಿಗೆ ಬಳಸಿಕೊಂಡಿದೆ. ಇದು ಸರ್ಕಾರ ದಲಿತ ಸಮುದಾಯಕ್ಕೆ ಮಾಡಿದ ಅತಿ ದೊಡ್ಡ ದ್ರೋಹ ಎಂದು ಕಿಡಿಕಾರಿದರು.

    ನಂಜುಂಡಯ್ಯ, ತಾಲೂಕು ಸಂಚಾಲಕ ಕೆ.ಎಂ.ಮಂಜುನಾಥ್, ಎಸ್.ಎನ್ ಧರ್ಮ ರತ್ನಕುಮಾರ್, ಮೂಗೂರು ಕೆ.ಶೇಷಣ್ಣ, ಆಲಗೂಡು ಸಿದ್ದಪ್ಪ, ಸೋಸಲೆ ಗಂಗಾಧರ್, ಮುಸುವಿನ ಕೊಪ್ಪಲು ನಾಗರಾಜು, ಮೂರ್ತಿ, ಅನ್ನದಾನಿ, ಪುರುಷೋತ್ತಮ್, ಕೃಷ್ಣಮೂರ್ತಿ, ಶಿವು, ರಂಗಸ್ವಾಮಿ, ನಾಗರಾಜಮೂರ್ತಿ, ಮಹೇಶ್, ಜೈರಾಮ್, ರಾಜಪ್ಪ, ಎಂ.ಮಹೇಶ್, ಪಿ.ನಾಗರಾಜು, ಸೋಸಲೆ ಶಿವು, ಸೋಮು, ಲಿಂಗರಾಜು, ಸುರೇಶ್, ಸಂಭ್ರಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts