More

    ಅವೈಜ್ಞಾನಿಕ ಜಾತಿ ಗಣತಿ ವರದಿ ಸ್ವೀಕರಿಸಬೇಡಿ: ಸರ್ಕಾರಕ್ಕೆ ಒಕ್ಕಲಿಗ ಸಮುದಾಯದ ಶ್ರೀಗಳು ಒತ್ತಾಯ

    ಬೆಂಗಳೂರು: ಕಾಂತರಾಜು ಆಯೋಗ ತಯಾರಿಸಿರುವ ಅವೈಜ್ಞಾನಿಕ ಜಾತಿಗಣತಿ ವರದಿ ಹಾಗೂ ರಾಜ್ಯ ಸರ್ಕಾರ ವರದಿ ಸ್ವೀಕರಿಸಿದರೆ ಮುಂದೆ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಕುರಿತು ಕೆ.ಆರ್.ರಸ್ತೆಯಲ್ಲಿರುವ ರಾಜ್ಯ ಒಕ್ಕಲಿಗರ ಸಂಘ ಆವರಣದ ಕಿಮ್ಸ್ ಸಭಾಂಗಣದಲ್ಲಿ ಗುರುವಾರ ಚಿಂತನ-ಮಂಥನ ಸಭೆ ನಡೆಯಿತು.

    ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ, ತುಮಕೂರಿನ ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಡಿಸಿಎಂ ಡಿ.ಕೆ.ಶಿವಕುಮಾರ್,ಸಚಿವ ಚೆಲುವರಾಯಸ್ವಾಮಿ, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಶಾಸಕರು, ವಿಧಾನಪರಿಷತ್ತು ಸದಸ್ಯರು, ರಾಜ್ಯಸಭೆ ಮತ್ತು ಲೋಕಸಭೆ ಮಾಜಿ ಸದಸ್ಯರು, ಸಂಘದ ಗೌರವಾಧ್ಯಕ್ಷ ಕೆಂಚೇಗೌಡ, ಅಧ್ಯಕ್ಷ ಡಿ.ಹನುಮಂತಯ್ಯ ಉಪಾಧ್ಯಕ್ಷ ಸಿ.ದೇವರಾಜು, ಪ್ರಧಾನ ಕಾರ್ಯದರ್ಶಿ ಎಚ್.ಸಿ. ಜಯಮುತ್ತು, ಖಜಾಂಚಿ ಸಿ.ಎಂ. ಮಾರೇಗೌಡ, ನಿರ್ದೇಶಕರಾದ ನಲ್ಲಿಗೆರೆ ಬಾಲು,ಮಂಜೇಗೌಡ, ಸಿ.ಗಂಗಾಧರ್ ಮತ್ತಿತರರಿದ್ದರು.

    2015ರಲ್ಲಿ ಅವೈಜ್ಞಾನಿಕವಾಗಿ ತಯಾರಿಸಿರುವ ಜಾತಿಗಣತಿ ವರದಿಯನ್ನು ಅಂಗೀಕರಿಸುವುದಾಗಿ ಸಿಎಂ ಸಿದ್ದರಾಮಯ್ಯ ಪದೇಪದೆ ಹೇಳುತ್ತಿದ್ದಾರೆ. ಜತೆಗೆ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಗಡೆ ಸಹ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಈ ವರದಿ ಅಂಗೀಕಾರ ಮಾಡಬಾರದು. ರಾಜ್ಯದಲ್ಲಿ ನಿಮ್ಮ ಸರ್ಕಾರವಿದೆ. ಕಾಂಗ್ರೆಸ್‌ನಲ್ಲಿ ಮುಂಚೂಣಿ ನಾಯಕರಲ್ಲಿ ನೀವೇ ಅಗ್ರಗಣ್ಯರು. ಹೀಗಾಗಿ, ವರದಿ ಸ್ವೀಕಾರ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಉಪಮುಖ್ಯಮಂತ್ರಿಗೆ ಪಕ್ಷಾತೀತವಾಗಿ ಎಲ್ಲರೂ ಒತ್ತಾಯಿಸಿದ್ದರು. ಜಾತಿಗಣತಿ ವರದಿ ತಯಾರಿಸಿ 8 ವರ್ಷ ಕಳೆದಿದೆ. ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕೆಂಬ ನಿಯಮ ಇರುವುದರಿಂದ ಈ ವರದಿಯು ಅಪ್ರಸ್ತುತವಾಗಿದೆ. 8 ವರ್ಷದಲ್ಲಿ ಸಮಾಜದಲ್ಲಿ ಹಲವು ಬದಲಾವಣೆಗಳಾಗಿವೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯ ನೈಜ ಸ್ಥಿತಿಗತಿಯನ್ನು ವರದಿ ಬಿಂಬಿಸುವುದಿಲ್ಲ. ಆದ್ದರಿಂದ, ನಿಖರ ದತ್ತಾಂಶ ಪಡೆದು ಹೊಸದಾಗಿ ಜಾತಿಗಣತಿ ವರದಿ ತಯಾರಿಸುವುದು ಸೂಕ್ತ ಎಂದು ಸಭೆಯಲ್ಲಿದ್ದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

    ಸೌಜನ್ಯವಾಗಿ ಸರ್ಕಾರಕ್ಕೆ ಮನವಿ:
    ಕಾಂತರಾಜ ವರದಿಯನ್ನು ಜಾರಿ ಮಾಡಲು ರಾಜ್ಯ ಸರ್ಕಾರ ತಯಾರಿಯಲ್ಲಿದೆ ಎಂಬ ಮಾಹಿತಿ ಇದೆ. ಜಾತಿಗಣತಿ ವರದಿ ಸ್ವೀಕರಿಸದಂತೆ ಸರ್ಕಾರಕ್ಕೆ ಸೌಜನ್ಯಯುತವಾಗಿ ಮನವಿ ಮಾಡುತ್ತೇವೆ. ನಮಗೆ ನ್ಯಾಯಯುತವಾಗಿ ಸಿಗಬೇಕಿರುವ ಮೀಸಲಾತಿಯನ್ನು ಕೇಳುತ್ತಿದ್ದೇವೆ ಎಂದು ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ ಹೇಳಿದರು. ಸಭೆಯಲ್ಲಿ ಕಾಂತರಾಜು ವರದಿ ಬಗ್ಗೆ ಚರ್ಚೆ ನಡೆಸಲಾಯಿತು. ಆ ವರದಿಯನ್ನು ಅನುಷ್ಠಾನಕ್ಕೆ ತರುವ ಮುನ್ನ ನಮ್ಮ ಅಭಿಪ್ರಾಯ ಕೇಳಬೇಕು. ಸಮುದಾಯದ ಮೀಸಲಾತಿ ವಿಚಾರ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವು ಏನು ಎಂಬುದನ್ನು ಕೇಳಿದ್ದೇವೆ. ಶೇ.4ರಿಂದ ಶೇ.16ಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕೆಂದು ನಮ್ಮ ಆಗ್ರಹ. ಮುಂದಿನ ದಿನಗಳಲ್ಲಿ ಸಮುದಾಯದ ಎಲ್ಲರೂ ಒಟ್ಟಾಗಿ ಸಾಗುತ್ತೇವೆ ಎಂದು ನಂಜಾವಧೂತ ಸ್ವಾಮೀಜಿ ತಿಳಿಸಿದರು.

    ಇದನ್ನೂ ಓದಿ:ಬೌಲರ್​ಗಳ ಮಿಂಚಿನ ದಾಳಿಗೆ ತತ್ತರಿಸಿದ ಸಿಂಹಳಿಯರು; ಭಾರತಕ್ಕೆ ಶ್ರೀಲಂಕಾ ವಿರುದ್ಧ 302 ರನ್​ಗಳ ಭರ್ಜರಿ ಜಯ

    ಮುಖಂಡರ ಹೊರಗಿಟ್ಟು ಸಭೆ:
    ಒಕ್ಕಲಿಗ ಸಂಘದ ಆವರಣದ ಕಿಮ್ಸ್ ಆಸ್ಪತ್ರೆಯ ‘ಬಿ’ ಬ್ಲಾಕ್‌ನ 6ನೇ ಮಹಡಿಯಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆದ ‘ಚಿಂತನ-ಮಂಥನ’ ಹಾಗೂ ಗಣ್ಯರಿಗೆ ಅಭಿನಂದನಾ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಮುಖಂಡರನ್ನು ಹೊರಗಿಡಲಾಗಿತ್ತು. ಬರೀ ಅಭಿನಂದನೆ ಸಭೆ ಮಾತ್ರ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ರಾಜಕೀಯ ಪ್ರತಿನಿಧಿಗಳು ಬಿಟ್ಟು ಉಳಿದವರು ಹೊರಗಡೆ ಹೋಗುವಂತೆ ಸಂಘದ ಪದಾಧಿಕಾರಿಗಳು ಸೂಚಿಸಿದರು. ಇದರ ಬಗ್ಗೆ ಸಮುದಾಯದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಸಮುದಾಯದ ಬಗ್ಗೆ ಮುಖ್ಯ ಸಭೆ ನಡೆಯತ್ತಿದ್ದರೂ ಹಲವು ಮುಖಂಡರು ಹೊರಗೆ ಕಳುಹಿಸಿರುವುದು ಸರಿಯಲ್ಲ. ನಮ್ಮನ್ನು ಸಭೆಗೆ ಏಕೆ ಕರೆಯಬೇಕಿತ್ತು ಎಂದು ಹೆಸರಲೆಚ್ಚಿಸದ ಮುಖಂಡರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಜಾತಿಗಣತಿ ವರದಿ ಬಗ್ಗೆ ಸಮುದಾಯದ ಪ್ರಮುಖ ಮೂವರು ಶ್ರೀಗಳು ಸಮ್ಮುಖದಲ್ಲಿ ರಾಜಕೀಯ ಮುಖಂಡರು ಚರ್ಚೆ ಮಾಡಿದ್ದಾರೆ. ವರದಿ ತಯಾರಿಕೆಯಲ್ಲಿ ಕೆಲವೊಂದು ಲೋಪ ಇದೆ. ಸಭೆಯಲ್ಲಿ ನಡೆದಿರುವ ಸಮುದಾಯದ ಅಭಿಪ್ರಾಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು.
    | ಚೆಲುವರಾಯಸ್ವಾಮಿ, ಸಚಿವ

    ಕಾಂತರಾಜ ನೀಡಿರುವ ಜಾತಿಗಣತಿ ವರದಿ ವರದಿಯೇ ಅಲ್ಲ. ವರದಿ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ವರದಿ ಸ್ವೀಕರಿಸದಂತೆ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಐದು ವರ್ಷ ಸಿಎಂ ಆಗಿ ಮುಂದುವರಿಯುವುದಾಗಿ ಸಿದ್ದರಾಮಯ್ಯ ಹೇಳಿಕೆ ವಿಚಾರ ನಮಗೆ ಸಂಬಂಧಿಸಿದ್ದಲ್ಲ. ಅದು ಅವರ ಪಕ್ಷದ ಆಂತರಿಕ ವಿಚಾರ.
    | ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts