More

    ಕಾಂಗ್ರೆಸ್‌ಗೆ ಇವಿಎಂ ಮೇಲೆ ಅನುಮಾನ! ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ

    ಮಂಗಳೂರು: ಉಪ ಚುನಾವಣೆ ಸೋಲನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ. ಆದರೆ ಎಲ್ಲೆಲ್ಲಿ ಹಣ ಹಂಚಿಕೆಯಾಗಿದೆ, ಅಕ್ರಮ ನಡೆದಿದೆ ಎನ್ನುವ ಮಾಹಿತಿ ನಮ್ಮಲ್ಲಿ ಇದೆ. ಮತಯಂತ್ರದ ಬಗ್ಗೆಯೂ ಅನುಮಾನವಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆಗೆ ನಿರ್ಧರಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
    ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿದ್ಯಾವಂತರು, ಮಹಿಳೆಯರು, ಯುವಕರು ಕಾಂಗ್ರೆಸ್‌ಗೆ ಮತ ಹಾಕಿದ್ದೇವೆ ಎನ್ನುತ್ತಾರೆ. ಆರ್.ಆರ್.ನಗರದಲ್ಲಿ 50 ಸಾವಿರಕ್ಕೂ ಹೆಚ್ಚು ಮತ ನಮಗೆ ಬರಬೇಕಾಗಿತ್ತು. ನಾವು ಸೋಲು ನಿರೀಕ್ಷಿಸಿರಲಿಲ್ಲ ಎಂದರು.

    ಮತಯಂತ್ರದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದು, ತಜ್ಞರೊಂದಿಗೆ ಚರ್ಚಿಸುತ್ತೇವೆ. ಇದು ಚುನಾವಣೆಯಲ್ಲಿ ಸೋತ ಕಾರಣಕ್ಕೆ ಅಲ್ಲ, ಕಾಂಗ್ರೆಸ್ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಏರುಪೇರಾಗಿರುವ ಬೂತ್‌ಗಳಲ್ಲಿ ಮತಯಂತ್ರದ ಲೋಪ ಕಾರಣವೇ ಎಂಬುದನ್ನು ಅರಿಯಬೇಕಾಗಿದೆ ಎಂದು ಹೇಳಿದರು.

    ಹೊಸ ತಂತ್ರಗಾರಿಕೆ: ಆಡಳಿತ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಸಾಮಾನ್ಯ. ಉಪಚುನಾವಣೆ ಕಾಂಗ್ರೆಸ್ ಭವಿಷ್ಯಕ್ಕೆ ಮಾನದಂಡವಲ್ಲ. ಸೋಲಿನ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗಳಲ್ಲಿ ತಂತ್ರಗಾರಿಕೆ ಬದಲಾಯಿಸುತ್ತೇವೆ. ಉತ್ತಮ ಆಡಳಿತ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಶಿವಕುಮಾರ್ ಹೇಳಿದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಭಾಸ್ಕರ ಮೊಲಿ, ವಿಶ್ವಾಸ್‌ಕುಮಾರ್ ದಾಸ್, ಟಿ.ಕೆ.ಸುಧೀರ್, ಎ.ಸಿ.ವಿನಯರಾಜ್, ಪ್ರವೀಣ್‌ಚಂದ್ರ ಆಳ್ವ ಉಪಸ್ಥಿತರಿದ್ದರು.

    ಮತ್ತೆ ಬಂಧಿಸ್ತಾರಾ?
    ಡಿಜೆ ಹಳ್ಳಿ ಗಲಭೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿ ಸಂಪತ್‌ರಾಜ್‌ಗೆ ಕಾಂಗ್ರೆಸ್ ರಕ್ಷಣೆ ನೀಡಿದೆ ಎನ್ನುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಏನು ಹೋಂ ಮಿನಿಸ್ಟ್ರಾ ಎಂದು ಪ್ರಶ್ನಿಸಿದರು. ಹಾಗಾದರೆ ಡಿಕೆಶಿಯನ್ನು ಬಂಧಿಸಬಹುದಲ್ಲವೇ? ಮತ್ತೆ ಬಂಧಿಸುವುದಾದರೆ ಬಂಧಿಸಲಿ. ನನಗೆ ತೊಂದರೆ ಕೊಡಲು ಏನೇನು ಮಾಡುತ್ತಿದ್ದಾರೆ ಎಂದು ಗೊತ್ತಿದೆ ಎಂದರು.

    ನೂರು ವರ್ಷ ಬಿಜೆಪಿ ಇರಲಿ!
    ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಕಾರಣ ಎಂದು ನಳಿನ್ ಹೇಳುತ್ತಿರುವುದು ಸುಳ್ಳಿನ ಕಂತೆ. ರಾಜ್ಯ ಬಿಜೆಪಿಯಲ್ಲಿ ಬೆಂಕಿ ಬಿದ್ದಿದೆ. ಮೊದಲು ಅದನ್ನು ಆರಿಸಲಿ. ಬಳಿಕ ನಮ್ಮ ಬಗ್ಗೆ ಮಾತನಾಡಲಿ ಎಂದು ಡಿಕೆಶಿ ತಿರುಗೇಟು ನೀಡಿದರು. ಬಿಜೆಪಿಯವರು 10 ವರ್ಷಕ್ಕೆ ಮಾತ್ರ ಸೀಮಿತ ಆಗುವುದು ಬೇಡ. 100 ವರ್ಷ ಅವರೇ ಅಧಿಕಾರದಲ್ಲಿರಲಿ. ಮಾನವ ಜೀವಿ ಕೊನೆಯಾಗುವವರೆಗೂ ಇರಲಿ ಎಂದು ವ್ಯಂಗ್ಯವಾಡಿದರು.

    ಡಿಸಿಸಿ ಅಧ್ಯಕ್ಷರ ಬದಲಾವಣೆ: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸದ ಕೆಲವು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಬದಲಾಯಿಸಿ ಹೊಸಬರನ್ನು ನೇಮಕ ಮಾಡಲಾಗುವುದು. ಉತ್ತಮ ಕೆಲಸ ಮಾಡುವವರನ್ನು ಉಳಿಸಿಕೊಳ್ಳುತ್ತೇವೆ. ದ.ಕ. ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರು ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿಕೆಶಿ ಶ್ಲಾಘಿಸಿದರು.

    ತಡರಾತ್ರಿ ಮಂಗಳೂರಿಗೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಮಾತೃವಿಯೋಗ ಹಿನ್ನೆಲೆಯಲ್ಲಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕೇರಳದ ಕಣ್ಣೂರಿಗೆ ತೆರಳಿದ್ದರು. ಅಲ್ಲಿಂದ ತಡರಾತ್ರಿ ಮಂಗಳೂರಿಗೆ ಆಗಮಿಸಿ ತಂಗಿದ್ದ ಅವರು ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ನಿರ್ಗಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts