More

  ಬೆಂಗಳೂರು ಚಲೋಗೆ ಡಿ.ಕೆ.ಶಿವಕುಮಾರ್ ಕರೆ

  ಕುಣಿಗಲ್/ಹುಲಿಯೂರುದುರ್ಗ: ತಾಲೂಕಿನ ನೀರಾವರಿ ಯೋಜನೆಗಳಿಗೆ ಬಿಡುಗಡೆಯಾಗಿದ್ದ ಅನುದಾನ ತಡೆ ಹಿಡಿದಿರುವ ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರು ಚಲೋ ಚಳವಳಿಗೆ ಪಕ್ಷಭೇದ ಮರೆತು ಸಿದ್ಧರಾಗಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕರೆ ನೀಡಿದರು.

  ಉಜ್ಜನಿ ಚೌಡೇಶ್ವರಿ ದೇವಿ ದೇವಸ್ಥಾನ ಹಾಗೂ ಹಂಗರಹಳ್ಳಿ ಶ್ರೀವಿದ್ಯಾ ಚೌಡೇಶ್ವರಿ ದೇವಿ ಕ್ಷೇತ್ರದಲ್ಲಿ ಶುಕ್ರವಾರ ವಿಶೇಷ ಪೂಜೆ ಹಾಗೂ ಶತ ಚಂಡಿಕಾ ಮಹಾಯಾಗ ನೇರವೇರಿಸಿದ ನಂತರ ಮಾತನಾಡಿದರು. ಸಿಎಂ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ವೈ.ಕೆ.ರಾಮಯ್ಯ ಮಾದರಿಯಲ್ಲೇ ಹೋರಾಟ ನಡೆಸಿ ಕುಣಿಗಲ್ ತಾಲೂಕಿನ ಹಕ್ಕು ಪಡೆದುಕೊಳ್ಳಬೇಕು ಎಂದರು.

  30 ವರ್ಷದಿಂದ ತಾಲೂ ಕಿಗೆ ಹೇಮಾವತಿ ನೀರು ಹರಿಯದೇ ರೈತರಿಗೆ ಅನ್ಯಾಯವಾಗಿತ್ತು, ಹೀಗಾಗಿ ಲಿಂಕ್ ಕೆನಾಲ್ ಯೋಜನೆಗೆ ಅನು ದಾನ ಬಿಡುಗಡೆ ಮಾಡಿ ಟೆಂಡರ್ ಕೂಡ ಕರೆಯಲಾಗಿತ್ತು. ಆದರೆ ಕಾಮಗಾರಿ ಆರಂಭಿಸಬೇಕೆನ್ನುವಷ್ಟರಲ್ಲಿ ಯಡಿಯೂರಪ್ಪ ಅನುದಾನ ರದ್ದು ಮಾಡಿ ಬೇರೆ ಕಡೆ ನೀಡಿದ್ದಾರೆಂದು ಅಧಿಕಾರಿಗಳಿಂದ ಮಾಹಿತಿ ಸಿಕ್ಕಿದೆ. ಬೇರೆ ತಾಲೂಕಿಗೆ ಎಷ್ಟು ಬೇಕಾದರೂ ಕೊಡಲಿ, ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಕುಣಿಗಲ್ ತಾಲೂಕಿನ ಹಕ್ಕನ್ನು ಕಸಿದುಕೊಂಡಿರುವುದನ್ನು ಸುಲಭವಾಗಿ ಬಿಡಲು ಸಾಧ್ಯವಿಲ್ಲ ಎಂದು ಗುಡುಗಿದರು.

  ಹಂಗರಹಳ್ಳಿ ಮಠದ ಬಾಲಮಂಜುನಾಥ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಗಣ್ಣಗೌಡ, ವೆಂಕಟರಾಮು, ತಾಪಂ ಸದಸ್ಯ ಗಂಗರಂಗಯ್ಯ, ಪುರಸಭೆ ಸದಸ್ಯ ರಂಗಸ್ವಾಮಿ, ಉದಯ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಎಸ್.ಆರ್.ಚಿಕ್ಕಣ್ಣ, ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ವೈ.ವಿ.ಗೋವಿಂದರಾಜು, ನಿಲತ್ತಹಳ್ಳಿ ರವಿಕುಮಾರ್, ಉಜ್ಜನಿ ನಾಗೇಶ್, ರುದ್ರಯ್ಯ ಇದ್ದರು.

  ಸತತ 3 ಗಂಟೆ ಹೋಮದಲ್ಲಿ ಭಾಗಿ: ಮೊದಲಿಗೆ ಉಜ್ಜನಿ ಚೌಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಂತರ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಶತ ಚಂಡಿಕಾ ಮಹಾಯಾಗ ಹೋಮದಲ್ಲಿ ಸತತ ಮೂರು ಗಂಟೆ ಭಾಗವಹಿಸಿ ಸ್ವತಃ ತಾವೇ ಪೂರ್ಣಾಹುತಿಗೆ ಸೌದೆ, ದವಸ ಧಾನ್ಯ, ತುಪ್ಪ, ಬಟ್ಟೆ ಅರ್ಪಿಸಿ ಸಂಕಷ್ಟಗಳ ನಿವಾರಣೆಗೆ ಪ್ರಾರ್ಥಿಸಿದರು.

  ಹರಕೆ ತೀರಿಸಿದ ಡಿಕೆಶಿ: ಐಟಿ, ಇಡಿ ಸಂಕಷ್ಟಕ್ಕೆ ಡಿ.ಕೆ.ಶಿವಕುಮಾರ್ ಸಿಲುಕಿಕೊಂಡಿದ್ದಾಗ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠದ ಬಾಲ ಮಂಜುನಾಥ್ ಸ್ವಾಮೀಜಿ ಡಿ.ಕೆ.ಶಿವಕುಮಾರ್ ಅವರ ಕಷ್ಟಗಳ ನಿವಾರಣೆಗಾಗಿ 1008 ಈಡುಗಾಯಿ ಒಡೆಸುವುದಾಗಿ ಹರಕೆ ಕಟ್ಟಿಕೊಂಡಿದ್ದರು. ಹೀಗಾಗಿ ಶತ ಚಂಡಿಕಾ ಮಹಾಯಾಗ ಹೋಮದಲ್ಲಿ ಭಾಗಿಯಾದ ನಂತರ ವಿದ್ಯಾಚೌಡೇಶ್ವರಿ ದೇವಿಗೆ ಸ್ವತಃ ಡಿ.ಕೆ.ಶಿವಕುಮಾರ್ ಈಡುಗಾಯಿ ಒಡೆದು ಹರಕೆ ತೀರಿಸಿದರು. ಆಪ್ತ ಸಂಬಂಧಿ ಶಾಸಕ ಡಾ.ರಂಗನಾಥ್, ನಂಜಾವಧೂತ ಸ್ವಾಮೀಜಿ ಸಾಥ್ ನೀಡಿದರು.

  ಮುಖ್ಯಮಂತ್ರಿ ಆಗ್ತಾರೆ ಡಿಕೆಶಿ: ಡಿ.ಕೆ.ಶಿವಕುಮಾರ್ ವಿಷಕಂಠನಿದ್ದಂತೆ, ಎಲ್ಲ ಕಷ್ಟಗಳನ್ನು ನುಂಗಿ ಜೀರ್ಣಿಸಿಕೊಳ್ಳುವ ಶಕ್ತಿ ಅವರಿಗಿದೆ. ಅವರ ಎಲ್ಲ ಕಷ್ಟದ ದಿನಗಳು ಕಳೆದು ಒಳ್ಳೆಯ ಕಾಲ ಬಂದಿದೆ. ಡಿಕೆಶಿ ಮುಖ್ಯಮಂತ್ರಿ ಆಗುವುದು ಖಚಿತ. ಇದನ್ನು ತಡೆಯುತ್ತೇನೆಂದು ಯಾರಾದರೂ ಅಂದುಕೊಂಡರೆ ಅದು ಬಾಲಿಶವಾಗಲಿದೆ ಎಂದು ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಹೇಳಿದರು.

  ತಾಲೂಕಿಗೆ ಸಿಎಂ ಬಂದಿದ್ದಾಗ ಶಾಸಕ ರಂಗನಾಥ್ ಅಭಿವೃದ್ಧಿ ವಿಚಾರ ಪ್ರಸ್ತ್ತಾಪಿಸಿದಾಗ ಯಾವ ರೀತಿ ನಡೆಸಿಕೊಂಡಿದ್ದಾರೆ, ಯಾವ ರೀತಿಯ ಗೌರವ ನೀಡಿದ್ದಾರೆ ಎಂಬುದನ್ನು ನಾನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಎಲ್ಲಕ್ಕೂ ಉತ್ತರ ಸಿಗಲಿದೆ.
  ಡಿ.ಕೆ.ಶಿವಕುಮಾರ್ ಮಾಜಿ ಸಚಿವ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts