More

    ರೈತರಿಗೆ ಬೆಳಕು ನೀಡದ ದೀಪಾವಳಿ

    ಕೊಡೇಕಲ್: ಬೆಳಕಿನ ಹಬ್ಬ ದೀಪಾವಳಿಗೆ ಈ ವರ್ಷ ಬರದ ಛಾಯೆ ಆವರಿಸಿದ್ದು, ಹೋಬಳಿ ವಲಯದ ಪ್ರಮುಖ ಗ್ರಾಮಗಳಾದ ಕೊಡೇಕಲ್, ನಾರಾಯಣಪುರ ಮತ್ತು ರಾಜನಕೋಳೂರಗಳಲ್ಲಿ ವ್ಯಾಪಾರ ನೀರಸವಾಗಿ ಸಾಗಿದೆ.

    ರೈತರಿಗೆ ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟ ಕಾರಣ ಎಲ್ಲೆಡೆ ಬರದ ಛಾಯೆ ಆವರಿಸಿದ್ದು, ಇದು ದೀಪದ ಹಬ್ಬವಾದ ದೀಪಾವಳಿ ಮೇಲೂ ಪ್ರಭಾವ ಬೀರಿದೆ.

    ಎಲ್ಲ ಅಂಗಡಿಗಳು ವಿವಿಧ ದೀಪಗಳಿಂದ ಅಲಂಕೃತಗೊಂಡು ಝಗಮಗಿಸುತ್ತಿವೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಬಾರದಿರುವುದರಿಂದ ವ್ಯಾಪಾರ ವಹಿವಾಟು ಇಲ್ಲದೆ ಬಿಕೋ ಎನ್ನುಂತಾಗಿವೆ.

    ಸೋಮವಾರ ವಲಯದ ವಿವಿಧ ಗ್ರಾಮಗಳ ಜನರು ಅಮವಾಸ್ಯೆ ನಿಮಿತ್ತ ಗ್ರಾಮಕ್ಕೆ ಆಗಮಿಸಿ ಬಸವೇಶ್ವರ ದೇವರಿಗೆ ಕಾಯಿ ಕರ್ಪೂರ ಅರ್ಪಿಸಿದರೆ ವಿನಃ ಮಾರುಕಟ್ಟೆ ಗೋಜಿಗೆ ಹೋಗದೆ ಇರುವ ಕಾರಣ ವ್ಯಾಪಾರ ನೀರಸವಾಗಿದೆ. ದೀಪಾವಳಿ ಹಬ್ಬದ ವ್ಯಾಪಾರಕ್ಕೆ ಲಕ್ಷಾಂತರ ರೂ. ಬಂಡವಾಳ ಹಾಕಿಗಿದ್ದ ವ್ಯಾಪಾರಸ್ಥರ ಮುಖದಲ್ಲಿಯೂ ನಿರಾಸೆ ತರಿಸಿದೆ.

    ಇನ್ನೂ ಅಧಿಕೃತ ಪರವಾನಿಗೆ ಹೊಂದಿದವರು ಮಾತ್ರ ಪಟಾಕಿ ಮಾರಾಟ ಮಾಡುವಂತೆ ತಹಸೀಲ್ದಾರ್ ಕಳೆದ ವಾರ ಗ್ರಾಮಕ್ಕೆ ಬಂದು ಕಟ್ಟುನಿಟ್ಟಿನ ಆದೇಶ ನೀಡಿದ್ದು, ಇದರಿಂದ ಪಟಾಕಿ ವ್ಯಾಪಾರ ಇಲ್ಲದ ಕಾರಣ ಮಕ್ಕಳು ನಿರಾಸೆಗೊಂಡಿದ್ದಾರೆ. ಹೀಗಾಗಿ ಪಾಲಕರು ದೂರದ ತಾಳಿಕೋಟಿಗೆ ಹೋಗಿ ಪಟಾಕಿ ಖರೀದಿ ಮಾಡಿದ್ದಾರೆ.

    ಒಟ್ಟಾರೆ ಈ ವರ್ಷ ಮಳೆಯಾಗದ ಕಾರಣ ವಲಯದಲ್ಲಿ ದೀಪಾವಳಿ ಹಬ್ಬ ಕಳೆಗುಂದಿದ್ದು ಗ್ರಾಮೀಣ ಭಾಗದ ಜನರು ಸರಳವಾಗಿ ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ.


    ಈ ವರ್ಷದ ಬೆಳಕಿನ ಹಬ್ಬ ದೀಪಾವಳಿ ರೈತರ ಪಾಲಿಕೆ ಕತ್ತಲು ಆವರಿಸಿದೆ. ಬೆಳೆದ ತೊಗರಿ, ಹತ್ತಿ ಒಣಗಿ ಹೋಗಿವೆ. ಮಾಡಿದ ಸಾಲ ತೀರಿಸುವುದು ಹೇಗೆ ? ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ.
    | ಶ್ರೀಶೈಲ ಸಜ್ಜನ್ ರೈತ ಕೋಡೇಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts