ಶೃಂಗೇರಿ ಚುನಾವಣೆ ಅಕ್ರಮ ವಿವಾದ: ಒರಿಜಿನಲ್​ ವಿಡಿಯೋ ಕೊಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ! Sringeri MLA Election Dispute

ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠವು ಇಂದು ನಡೆಸಿತು. ಈ ವೇಳೆ ಕಡತಗಳ ಪರಿಶೀಲನೆ ನಡೆಸಿದಾಗ, ಮರುಮತ ಎಣಿಕೆಯ ವಿಡಿಯೋ ಲಭ್ಯವಿದ್ದರೂ 2023ರ ಮೂಲ (ಒರಿಜಿನಲ್) ಚುನಾವಣಾ ಫಲಿತಾಂಶದ ವಿಡಿಯೋ ಸಿಗದಿರುವುದನ್ನು ಕೋರ್ಟ್​ ಗಮನಿಸಿತು.
Sringeri MLA Election Dispute
ಶಾಸಕ ರಾಜೇಗೌಡ, ಸುಪ್ರೀಂಕೋರ್ಟ್​ ಹಾಗೂ ಡಿ.ಎನ್​. ದೇವರಾಜ್​
Published on: 

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಮತ ಎಣಿಕೆ ವಿವಾದದ ( Sringeri MLA Election Dispute ) ಕಾನೂನು ಸಮರವು ಸುಪ್ರೀಂ ಕೋರ್ಟ್‌ನಲ್ಲಿ ಸ್ಫೋಟಕ ತಿರುವು ಪಡೆದುಕೊಂಡಿದೆ. ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಚುನಾವಣಾ ಆಯೋಗವನ್ನು ದೇಶದ ಉನ್ನತ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠವು ಇಂದು ನಡೆಸಿತು. ಈ ವೇಳೆ ಕಡತಗಳ ಪರಿಶೀಲನೆ ನಡೆಸಿದಾಗ, ಮರುಮತ ಎಣಿಕೆಯ ವಿಡಿಯೋ ಲಭ್ಯವಿದ್ದರೂ 2023ರ ಮೂಲ (ಒರಿಜಿನಲ್) ಚುನಾವಣಾ ಫಲಿತಾಂಶದ ವಿಡಿಯೋ ಸಿಗದಿರುವುದನ್ನು ಕೋರ್ಟ್​ ಗಮನಿಸಿತು. ಈ ಬಗ್ಗೆ ಪ್ರಶ್ನಿಸಿದಾಗ ಚುನಾವಣಾ ಆಯೋಗದ ಪರ ವಕೀಲರು ನಮಗೆ ಆ ವಿಡಿಯೋ ಸಿಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಇದರಿಂದ ತೀವ್ರ ಆಕ್ರೋಶಗೊಂಡ ನ್ಯಾಯಪೀಠ, "ಅದು ಹೇಗೆ ಒರಿಜಿನಲ್ ವಿಡಿಯೋ ಸಿಗುವುದಿಲ್ಲ? ಇದು ಅಸಾಧ್ಯ, ಕೂಡಲೇ ಅದನ್ನು ಪ್ರೊಡ್ಯೂಸ್ ಮಾಡಿ" ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡಿತು.

Also Read
ಕಾಕ್​ಪಿಟ್​ನಿಂದ ಬಂದ 'ಹೈಜಾಕ್​' ಸಂಕೇತ; ಏರ್​ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ! ಪೈಲಟ್​ ಮಾಡಿದ 'ಆ' ತಪ್ಪೇನು? Air India Emergency Landing
Sringeri MLA Election Dispute

ಹಳೆಯ ಅಧಿಕಾರಿಗಳು ಈಗ ಬೇರೆಡೆಗೆ ವರ್ಗಾವಣೆಗೊಂಡಿದ್ದಾರೆ, ಹಾಗಾಗಿ ದಾಖಲೆ ನೀಡುವುದು ಸ್ವಲ್ಪ ಕಷ್ಟವಾಗಿದೆ ಎಂದು ಚುನಾವಣಾ ಆಯೋಗದ ಕಡೆಯಿಂದ ಸಮಜಾಯಿಷಿ ನೀಡಲು ಯತ್ನಿಸಲಾಯಿತು. ಆದರೆ, ಆಯೋಗದ ಈ ಬೇಜವಾಬ್ದಾರಿ ಉತ್ತರವನ್ನು ಆಲಿಸಲು ಸುಪ್ರೀಂ ಕೋರ್ಟ್ ಸಿದ್ಧವಿರಲಿಲ್ಲ. ಅಧಿಕಾರಿಗಳು ಬದಲಾದರೆ ದಾಖಲೆಗಳು ಮಾಯವಾಗುತ್ತವೆಯೇ? ಇದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಎಲ್ಲಾ ಮೂಲ ದಾಖಲೆಗಳನ್ನು ಕೂಡಲೇ ನ್ಯಾಯಾಲಯಕ್ಕೆ ಒದಗಿಸಿ, ಇಲ್ಲದಿದ್ದರೆ ನಿಮ್ಮ ಮೇಲೆಯೇ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಚುನಾವಣಾ ಆಯೋಗಕ್ಕೆ ಗಂಭೀರ ಎಚ್ಚರಿಕೆ ನೀಡಿತು.

ಚುನಾಹಣಾ ಆಯೋಗ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಈ ಬೇಜವಾಬ್ದಾರಿ ಧೋರಣೆಯಿಂದಾಗಿ ಪ್ರಕರಣದ ವಿಚಾರಣೆಯು ತೀವ್ರ ಕುತೂಹಲ ಮೂಡಿಸಿದೆ. ಒರಿಜಿನಲ್ ವಿಡಿಯೋ ಹಾಗೂ ಸಮಗ್ರ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ, ನ್ಯಾಯಪೀಠವು ಈ ಪ್ರಮುಖ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 15ಕ್ಕೆ ಮುಂದೂಡಿದೆ. ಈ ಹೈ-ವೋಲ್ಟೇಜ್ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಯಾವ ರೀತಿಯ ಐತಿಹಾಸಿಕ ತೀರ್ಪು ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

Also Read
ಹುಟ್ಟುಹಬ್ಬದಂದೇ ತಿಹಾರ್​ ಜೈಲು ಪಾಲಾದ ಕಾಕ್ರೋಚ್​ ಪಕ್ಷದ ನಾಯಕ ಅಶುತೋಷ್ ರಂಕಾ: ಅಭಿಜಿತ್​ ದೀಪ್ಕೆ ಭಾವುಕ! Ashutosh Ranka
Sringeri MLA Election Dispute

ಏನಿದು ಪ್ರಕರಣ?

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ 201 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು. ಈ ಫಲಿತಾಂಶವನ್ನು ಪ್ರಶ್ನಿಸಿ ಡಿ.ಎನ್. ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿ, ತಿರಸ್ಕೃತಗೊಂಡಿದ್ದ ಅಂಚೆ ಮತಗಳ ಮರು ಪರಿಶೀಲನೆ ಹಾಗೂ ಮರುಎಣಿಕೆಗೆ ಮನವಿ ಮಾಡಿದ್ದರು. ಹೈಕೋರ್ಟ್ ಆದೇಶದಂತೆ ಅಂಚೆ ಮತಗಳ ಮರುಎಣಿಕೆ ನಡೆದಾಗ, ರಾಜೇಗೌಡ ಅವರ ಮತಗಳ ಸಂಖ್ಯೆ ಕಡಿಮೆಯಾಗಿ ಜೀವರಾಜ್ ಅವರು ವಿಜೇತರಾಗಿದ್ದಾರೆಂದು ಘೋಷಿಸಲಾಯಿತು. ಬಳಿಕ ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಜೇಗೌಡ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿ ರಾಜೇಗೌಡ ಅವರ ಶಾಸಕ ಸ್ಥಾನವನ್ನು ಮರುಸ್ಥಾಪಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತು. ಇದೀಗ ಪ್ರಕರಣದ ವಿಚಾರಣೆ ವೇಳೆ ಚುನಾವಣಾ ಆಯೋಗವು 2023ರ ಮೂಲ ಫಲಿತಾಂಶದ ಒರಿಜಿನಲ್ ವಿಡಿಯೋ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net