More

    ಸಂಕ್ರಾಂತಿ ಆಚರಣೆಗೆ ಜಿಲ್ಲೆ ಸಜ್ಜು

    ಹಾಸನ: ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಜಿಲ್ಲೆಯ ಜನತೆ ಸಜ್ಜಾಗಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

    ಹಬ್ಬದ ಅಂಗವಾಗಿ ಮಂಗಳವಾರ ನಗರದ ಕಟ್ಟಿನಕೆರೆ, ಕಸ್ತೂರ ಬಾ ರಸ್ತೆ, ಮಹಾವೀರ ವೃತ್ತ, ಸ್ಲೇಟರ್ಸ್‌ ಹಾಲ್, ಸಂತೆ ಪೇಟೆಗಳಲ್ಲಿ ಸಾರ್ವಜನಿಕರಿಂದ ಪೂಜಾ ಸಾಮಗ್ರಿ ಖರೀದಿ ಜೋರಾಗಿತ್ತು. ಪೂಜೆಗೆ ಬಳಸಲಾಗುವ ಕಬ್ಬು, ಹೂವು, ಹಣ್ಣು, ಎಳ್ಳು- ಬೆಲ್ಲ ಮತ್ತಿತರ ವಸ್ತುಗಳ ಮಾರಾಟ ಜೋರಾಗಿಯೇ ನಡೆಯಿತು.

    ಬೆಲೆ ಏರಿಕೆ ಬಿಸಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಜೋಡಿ ಕಬ್ಬು ಈ ಬಾರಿ 40 ರೂ. ತಲುಪಿದೆ. ಒಂದು ಮಾರು ಹೂವಿನ ಬೆಲೆ 40 ರಿಂದ 60 ರೂ., ಸೇಬು ಕೆ.ಜಿ.ಗೆ 100 ರಿಂದ 120ರಂತೆ ಮಾರಾಟವಾಯಿತು. ಎಳ್ಳು-ಬೆಲ್ಲ ಕೆಜಿಗೆ 120 ರೂ.ಗೆ ಲಭ್ಯವಾಯಿತು. ಅವರೆಕಾಯಿ 100 ರೂ.ಗೆ 3 ಕೆ.ಜಿ. ದೊರೆಯಿತು. ಬಿಳಿ ಎಳ್ಳು ಕೆ.ಜಿ.ಗೆ 200 ರೂ.ಗಳ ಗಡಿ ದಾಟಿದೆ. ಕಡ್ಲೆ ಬೀಜ 90 ರಿಂದ 100 ರೂ.ಗೆ ಸಾರ್ವಜನಿಕರಿಗೆ ಲಭ್ಯವಾಯಿತು.

    ಹಳದಿ ಸೇವಂತಿಗೆ, ಬಣ್ಣದ ಸೇವಂತಿಗೆ, ಮಲ್ಲಿಗೆ ಹೂವು, ಕಾಕಡ ಹೂವು, ಕನಕಾಂಬರ ಹೂವಿನ ಬೆಲೆ ಗಗನಕ್ಕೇರಿದೆ. ಒಂದು ಕಟ್ಟು ಮಾವಿನ ಸೊಪ್ಪು 10 ರೂ. ಇತ್ತು. ದ್ರಾಕ್ಷಿ, ಸಪೋಟ, ಮೋಸಂಬಿ, ಕಿತ್ತಲೆ, ಕಲ್ಲಂಗಡಿ ಹಣ್ಣಿನ ದರಗಳು ಏರಿಕೆಯಾಗಿದೆ. ಸಾಮಗ್ರಿ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರಣ ಕಸ್ತೂರ ಬಾ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಯಿತು.

    ಹಳ್ಳಿಗಳಲ್ಲಿ ಜೋರು: ಸಂಕ್ರಾಂತಿ ಹಬ್ಬಕ್ಕೆ ಗ್ರಾಮಾಂತರ ಪ್ರದೇಶಗಳಲ್ಲೂ ಸಿದ್ಧತೆ ಜೋರಾಗಿದೆ. ರೈತರು ತಮ್ಮ ದನ, ಕರುಗಳನ್ನು ಶುಚಿಗೊಳಿಸುವಲ್ಲಿ ನಿರತರಾಗಿದ್ದಾರೆ. ಮನೆಗಳಿಗೆ ತಳಿರು-ತೋರಣ ಕಟ್ಟಲಾಗುತ್ತಿದೆ. ಬೀದಿಗಳು ಬಣ್ಣ ಬಣ್ಣದ ರಂಗೋಲಿಗಳಿಂದ ಕಂಗೊಳಿಸಲಿವೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts