More

    ಕೊಪ್ಪಳ‌ ವಿಭಾಗ ಅಂಚೆ ಕಚೇರಿ ಮಂಜೂರಾತಿಗೆ ಸಂಭ್ರಮ ಆಚರಣೆ

    ಕೊಪ್ಪಳ: ಕೊಪ್ಪಳಕ್ಕೆ ಅಂಚೆ ವಿಭಾಗ ಕಚೇರಿ ಮಂಜೂರಾಗಿರುವುದು ಒಂದು ಸಾರ್ಥಕ ಕ್ಷಣ. ಅನೇಕರ ಹೋರಾಟದ ಫಲವಾಗಿ ಇಂದು ವಿಭಾಗ ಕಚೇರಿ ಮಂಜೂರಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

    ವಿಭಾಗ ಕಚೇರಿ ಮಂಜೂರಾದ ಹಿನ್ನೆಲೆಯಲ್ಲಿ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿಭಾಗ ಕಚೇರಿ ಹೋರಾಟಕ್ಕೆ ಜಿ.ಎನ್.ಹಳ್ಳಿ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ವಿ.ಬಿ.ರಡ್ಡೇರ್, ಹನುಮಂತಪ್ಪ ಅಂಡಗಿ, ಎಂ.ಬಿ.ಅಳವಂಡಿ ಸೇರಿ ಅನೇಕರು ಹೋರಾಟ ಮಾಡಿದ್ದಾರೆ. ನಿಮ್ಮ ಹೋರಾಟ ಕಂಡಾಗ ನನಗೆ ಸಂಕಟ ಆಗುತ್ತಿತ್ತು. ಜನರ ಬೇಡಿಕೆ ಈಡೇರಿಸಲು ವಿಫಲ ಆಗುತ್ತೇನಾ ಎಂಬ ಅಳಕಿತ್ತು ಎಂದರು.

    ನನ್ನ ಆಪ್ತ ಸಹಾಯಕ ಶ್ರೀನಿವಾಸ ಜೋಶಿ, ಭೂಷಣ್ ಸೇರಿ ಅನೇಕರು ಸಹಕಾರ ನೀಡಿದ್ದಾರೆ. ನಿಮ್ಮಿಂದ ಬಂದ ಸಲಹೆಗಳನ್ನು ಪಡೆದು ನಾನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದೆ. ಪ್ರಸ್ತಾವನೆ ಸಲ್ಲಿಸಿದೆ. ಅಂಚೆ ಇಲಾಖೆ ಜನಪರ ಕೆಲಸ ಮಾಡುವ ಇಲಾಖೆ. ಭ್ರಷ್ಟಾಚಾರ ರಹಿತ ಇಲಾಖೆ. ಇಂಥವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಕ್ಕೆ ಖುಷಿ ಇದೆ. ಸುಕನ್ಯಾ ಸಮೃದ್ಧಿ ಯೋಜನೆ ಬಂದಾಗ ನಿಮ್ಮ ಶ್ರಮದ ಫಲವಾಗಿ ಕೊಪ್ಪಳ ನಂ.1 ಸ್ಥಾನ ಪಡೆದಿದೆ ಎಂದರು.

    ಸಾಹಿತಿಗಳಾದ ಅಲ್ಲಮ ಪ್ರಭು ಬೆಟ್ಟದೂರು, ವಿ.ಬಿ.ರಡ್ಡೇರ್, ಡಾ.ಹನುಮಂತಪ್ಪ ಅಂಡಗಿ, ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ, ಭೀಮಸೇನ, ಜಿ.ಎನ್.ಹಳ್ಳಿ ಅಭಿಪ್ರಾಯ ಹಂಚಿಕೊಂಡರು.

    ಪ್ರಮುಖರಾದ ಎಂ.ಬಿ.ಅಳವಂಡಿ, ರವಿ ಕಾಂತನವರ ಇತರರು ಇದ್ದರು.

    ಜನಪ್ರತಿನಿಧಿಗಳು ಅಭಿವೃದ್ಧಿಗಾಗಿ ಕೆಲಸ ಮಾಡಲಿ : ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು. ನಾನು ಅಭಿವೃದ್ಧಿ ಪರ ಇರುವೆ. ಆದರೆ, ಕೊಪ್ಪಳದಲ್ಲಿ ಅದು ಆಗುತ್ತಿಲ್ಲ. ನೀವೆಲ್ಲ ನನಗೆ ಶಾಸಕ ರಾಘವೇಂದ್ರಗೆ ಆಶೀರ್ವಾದ ಮಾಡಿದ್ದೀರಿ. ನಮಗೆ ಜವಾಬ್ದಾರಿ ಇರಬೇಕು. ದುರ್ದೈವ ಎಂದರೆ ಕೊಪ್ಪಳ ಜಿಲ್ಲಾ ಕೇಂದ್ರದವರು ಮಂತ್ರಿ ಆಗುವ ಭಾಗ್ಯ ಬಂದಿಲ್ಲ. ಇತರ ತಾಲೂಕಿನವರು ಆದರೂ ಅವರು ತಮ್ಮ ತಾಲೂಕಿಗೆ ಸೀಮಿತರಾಗಿದ್ದಾರೆ. ಹಾಲಪ್ಪ, ತಂಗಡಗಿ ಯಾರೇ ಆದರೂ ಅಷ್ಟೇ ಆಗಿದೆ ಎಂದು ಸಂಗಣ್ಣ ಬೇಸರ ವ್ಯಕ್ತಪಡಿಸಿದರು.

    ಶಾಸಕ ಹಿಟ್ನಾಳ್ ಗೆ ಚಾಟಿ ಬೀಸಿದ ಕರಡಿ: ನಾನು ಶಾಸಕನಾಗಿದ್ದಾಗ ಸಿಂದೋಗಿ ರಸ್ತೆಯಲ್ಲಿ ಆಶ್ರಯ ಮನೆ ಮಂಜೂರಾದವು. ಈವರೆಗೂ ಅಭಿವೃದ್ಧಿ ಆಗಿಲ್ಲ. ಸಿಂಗಟಾಲೂರು ಏತ ನೀರಾವರಿ ಯೋಜನೆ ದಶಕಗಳೇ ಕಳೆದವು. ಬಯಲು ರಂಗ ಮಂದಿರ ಕಾಮಗಾರಿ ನನೆಗುದಿಗೆ ಬಿದ್ದಿದೆ. ಶಾಸಕ ರಾಘವೇಂದ್ರ ಹಿಟ್ನಾಳ್ ಮೂರು ಬಾರಿ ಶಾಸಕರಾಗಿದ್ದಾರೆ. ಅವುಗಳನ್ನು ಮುಂದುವರೆಸುತ್ತಿಲ್ಲ. ನೀರಾವರಿ ಮಾಡಿದರೆ ಜನರು ಅವರ ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ಸಂಗಣ್ಣನ ಅವಧಿಯಲ್ಲಿನ ಯೋಜನೆ ಮಾಡಬಾರದು ಎನ್ನುತ್ತಾರೆ. ಅದು ಜನರ ಕೆಲಸ. ನನ್ನದಲ್ಲ. ಜಾವಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಚಾಟಿ ಬೀಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts