More

    ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಬೇಸಿಗೆ ಶಿಬಿರಕ್ಕೆ ತೆರೆ: ಮೆಚ್ಚುಗೆ ಗಳಿಸಿದ ಚಟುವಟಿಕೆಗಳು…!

    ಮಂಡ್ಯ: ತಾಲೂಕಿನ ಉಮ್ಮಡಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರ ಮುಕ್ತಾಯವಾಯಿತು. ಉತ್ತಮ ಚಟುವಟಿಕೆ ಮೂಲಕ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
    ಮಂಡ್ಯ: ಹಲವು ವಿಶೇಷತೆಗಳ ಮೂಲಕವೇ ಗಮನಸೆಳೆದಿರುವ ತಾಲೂಕಿನ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಏ.12ರಿಂದ 24ರವರೆಗೆ ಆರರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು. ಆದರೆ ಎಲ್ಲರ ಒತ್ತಾಯದ ಮೇರೆಗೆ 30ರವರೆಗೂ ಮುಂದುವರೆಸಲಾಯಿತು.
    ಶಾಲೆ ಹಾಗೂ ಗ್ರಾಪಂ ಡಿಜಿಟಲ್ ಗ್ರಂಥಾಲಯದಲ್ಲಿ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅಬಾಕಸ್, ಚೆಸ್, ವಿಜ್ಞಾನಗಳ ಪ್ರಯೋಗ(ಆಕಾಶ ವೀಕ್ಷಣೆ), ಪ್ರಥಮ ಚಿಕಿತ್ಸೆ, ಸ್ಪೋಕನ್ ಇಂಗ್ಲೀಷ್, ಮಾನಸಿಕ ಸಾಮರ್ಥ್ಯ, ಚಿತ್ರಕಲೆ, ಪೇಪರ್ ಕ್ರಾಫ್ಟ್, ಈಜು, ಯೋಗ/ಧ್ಯಾನ, ಗ್ರಾಮೀಣ ಕ್ರೀಡೆ, ಪವಾಡ ರಹಸ್ಯ, ಜನಸ್ನೇಹಿ ಪೊಲೀಸ್, ವಿನೋದ ಗಣಿತ, ಕಂಪ್ಯೂಟರ್ ಶಿಕ್ಷಣ, ಕರಾಟೆ, ಅರ್ಚರಿ, ಸಂಗೀತ ಚಟುವಟಿಕೆ ಆಯೋಜಿಸಲಾಗಿತ್ತು.
    ಉಮ್ಮಡಹಳ್ಳಿ, ಕೀಲಾರ, ಆಲಕೆರೆ, ಬೆಳ್ಳುಂಡಗೆರೆ ಸೇರಿದಂತೆ ವಿವಿಧೆಡೆಯಿಂದ 180ಕ್ಕೂ ಹೆಚ್ಚು ಮಕ್ಕಳ ಪಾಲ್ಗೊಂಡರು. ಆದರೆ ಸ್ಥಳಾವಕಾಶದ ಕಾರಣ 130 ಮಕ್ಕಳಿಗೆ ಸೀಮಿತಗೊಳಿಸಲಾಯಿತು. ಖಾಸಗಿ ಶಾಲೆಯಿಂದಲೂ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಪ್ರತಿದಿನ ಬೆಳಗ್ಗೆ 9.30ರಿಂದ 10.30ರವರೆಗೆ ಸ್ಪೋಕನ್ ಇಂಗ್ಲೀಷ್, ನಂತರ 1.30ರವರೆಗೆ ವಿವಿಧ ಚಟುವಟಿಕೆ ನಡೆಯಿತು. ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

    ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಬೇಸಿಗೆ ಶಿಬಿರಕ್ಕೆ ತೆರೆ: ಮೆಚ್ಚುಗೆ ಗಳಿಸಿದ ಚಟುವಟಿಕೆಗಳು...!

    ಸಮಾರೋಪ ಸಮಾರಂಭ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಶಾಲೆಯಲ್ಲಿ ಸತತವಾಗಿ ನಡೆದ 2ನೇ ವರ್ಷ ಬೇಸಿಗೆ ಶಿಬಿರದಲ್ಲಿ ನಾನು ಪಾಲ್ಗೊಳ್ಳುತ್ತಿರುವುದು ಖುಷಿ ನೀಡಿದೆ. ಗ್ರಾಮೀಣ ಭಾಗ ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಬೇಸಿಗೆ ಶಿಬಿರ ನಡೆಸಿ ಮಕ್ಕಳಿಗೆ ವಿವಿಧ ಚಟುವಟಿಕೆಗಳ ಮೇಲೆ ಆಸಕ್ತಿ ಮೂಡಿಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಶಾಲೆಯ ಮುಖ್ಯಶಿಕ್ಷಕರು ವಿಶೇಷವಾಗಿ ಕಾಳಜಿ ವಹಿಸಿ ಬೇಸಿಗೆ ಶಿಬಿರ ಆಯೋಜನೆ ಮಾಡಿದ್ದಾರೆ. ಇಂತಹ ಪ್ರಯತ್ನವನ್ನು ಮಕ್ಕಳು ಸದುಪಯೋಗ ಮಾಡಿಕೊಂಡು ತಮ್ಮ ಬೆಳವಣಿಗೆಯತ್ತ ಗಮನಹರಿಸಬೇಕು. ಈ ಶಿಬಿರಕ್ಕೆ ಆಸಕ್ತಿಯಿಂದ ಹೆಚ್ಚಿನ ಮಕ್ಕಳು ಬಂದಿದ್ದಾರೆ. ಹೆಚ್ಚುವರಿ ಮಕ್ಕಳನ್ನು ವಾಪಸ್ ಕಳುಹಿಸಬೇಕಾಯಿತೆಂದು ಶಿಕ್ಷಕರು ತಿಳಿಸಿದ್ದಾರೆ. ಪ್ರಯತ್ನ ಯಶಸ್ವಿಯಾಗಿದ್ದು ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
    ಉಮ್ಮಡಹಳ್ಳಿ ಶಾಲೆಯ ಮಕ್ಕಳು ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳೂ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಮಕ್ಕಳು ಶಿಬಿರದಲ್ಲಿ ಕಲಿತ ವಿಚಾರವನ್ನು ತಮ್ಮ ಗಮನದಲ್ಲಿ ಇಟ್ಟುಕೊಳ್ಳಬೇಕು. ಆ ಮೂಲಕ ಉನ್ನತವಾದ ಕನಸುಗಳೊಂದಿಗೆ ಸಾಧನೆ ಮಾಡುವತ್ತ ಹೆಜ್ಜೆ ಇಡಬೇಕು. ಉತ್ತಮ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳು ಮುಂದಿನ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕು, ಮುಂದೆ ಯಾವುದೇ ಕೆಲಸ ಮಾಡಿದರೂ ಮೊದಲು ಉತ್ತಮ ವ್ಯಕ್ತಿಯಾಗಬೇಕು. ತಮ್ಮ ಸುತ್ತಮುತ್ತ ನಡೆಯುವ ಘಟನೆಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಪುಸ್ತಕ ಓದುವ ಮೂಲಕ ಹೆಚ್ಚೆಚ್ಚು ತಿಳಿದುಕೊಳ್ಳುವತ್ತ ಆಸಕ್ತಿ ವಹಿಸಬೇಕು. ಮೊಬೈಲ್‌ಗಳಿಗೆ ದಾಸರಾಗಬಾರದು, ಹೊರಗೆ ತೆರಳಿ ಆಟವಾಡಿ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಡಿಡಿಪಿಐ ಶಿವರಾಮೇಗೌಡ, ಬಿಇಒ ಮಹದೇವು, ಪಿಡಿಒ ಮಂಜುನಾಥ್, ಮುಖ್ಯಶಿಕ್ಷಕ ನಾಗರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts