ಕೊಪ್ಪಳ: ಕನಕಗಿರಿ ಉತ್ಸವ ಅಂಗವಾಗಿ ಜಿಲ್ಲಾಡಳಿತ, ವಾರ್ತಾ ಇಲಾಖೆ, ಕ್ರೀಡಾ ಇಲಾಖೆಯಿಂದ ಮಂಗಳವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಕ್ರಿಕೆಟ್ ನಡೆಯಿತು. ಪತ್ರಕರ್ತ ಪ್ರಮೋದ್ ನೇತೃತ್ವದ ತಂಡ ಜಯ ಸಾಧಿಸಿತು.
ಜಿಲ್ಲಾಧಿಕಾರಿ ನಲಿನ್ ಅತುಲ್, ಎಸ್ಪಿ ಯಶೋದಾ ವಂಟಗೋಡಿ ಪತ್ರಕರ್ತರಿಗೆ ಶುಭ ಕೋರಿದರು. ಈ ವೇಳೆ ಮಾತನಾಡಿದ ಡಿಸಿ, ನಿತ್ಯ ಸುದ್ದಿ ಒತ್ತಡದಲ್ಲಿರುವ ಪತ್ರಕರ್ತರಿಗೆ ಕ್ರಿಕೆಟ್ ಆಯೋಜಿಸಲಾಗಿದೆ. ಕ್ರೀಡೆಯಿಂದ ಒತ್ತಡ ನಿವಾರಣೆ ಆಗಲಿದೆ. ಕ್ರೀಡಾ ಸ್ಪೂರ್ತಿಯಿಂದ ಆಡವಾಡಿ ಎಂದರು. ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡ್ರ, ವಾರ್ತಾ ಇಲಾಖೆ ನೌಕರರಾದ ಎಂ.ಅವಿನಾಶ, ತಿಪ್ಪಯ್ಯ ನಾಯ್ಡು ಇದ್ದರು.
ಮೊದಲು ಬ್ಯಾಟ್ ಮಾಡಿದ ಪತ್ರಕರ್ತರ ಸಿರಾಜ್ ಬಿಸರಳ್ಳಿ ನೇತೃತ್ವದ ತಂಡ 8 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 75ರನ್ ಸೇರಿಸಿತು. ನಂತರ್ ಬ್ಯಾಟ್ ಮಾಡಿದ ಪ್ರಮೋದ್ ನೇತೃತ್ವದ ತಂಡ 4 ವಿಕೆಟ್ ನಷ್ಟಕ್ಕೆ 76ರನ್ ಗಳಿಸಿ ಜಯಶಾಲಿಯಾಯಿತು. ಅಂತಿಮ ಕ್ಷಣದವರೆಗೂ ಪಂದ್ಯ ಮುಂದುವರೆದಿದ್ದು ರೋಚಕ ಹಣಾಹಣಿಗೆ ಸಾಯಾಯಿತು.
ಫೆ.28ರಂದು ವಿವಿಧ ಕ್ರೀಡೆಗಳು
ಉತ್ಸವ ಅಂಗವಾಗಿ ಫೆ.28ರಂದು ಬೆಳಗ್ಗೆ ಕನಕಗಿರಿ ಕಲ್ಮಠ ಪ್ರಾಥಮಿಕ ಮತ್ತು ಪ್ರೌಢಶಾಲೆ ಹೊಸ ಬಿಲ್ಡಿಂಗ್ ಆವರಣದಲ್ಲಿ ಪುರುಷ ಮತ್ತು ಮಹಿಳಾ ಮುಕ್ತ ಕುಸ್ತಿ ಹಾಗೂ ಜಿಲ್ಲಾ ಮಟ್ಟದ ಪುರುಷ ಮತ್ತು ಮಹಿಳಾ ಹ್ಯಾಂಡಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಕನಕಗಿರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಜಿಲ್ಲಾ ಮಟ್ಟದ ಪುರುಷ ಮತ್ತು ಮಹಿಳಾ ಬಾಲ್ ಬ್ಯಾಡ್ಮಿಂಟನ್ ಹಾಗೂ ಮಲ್ಲಕಂಬ ಪ್ರದರ್ಶನ ಇರಲಿದೆ. ಸಂಜೆ 5ಗಂಟೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಹ್ವಾನಿತ ನ್ಯಾಷನಲ್ ತಂಡದಿಂದ ವಾಲಿಬಾಲ್ ಪ್ರದರ್ಶನ, ಜಿಲ್ಲಾ ಮಟ್ಟದ ಪುರುಷ ಹಾಗೂ ಮಹಿಳಾ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಗಳಿರಲಿವೆ.