ಕೊಪ್ಪಳ: ನಗರದ ಗವಿಮಠ ಆವರಣದಲ್ಲಿ 21 ವಿಶೇಷ ಚೇತನ ಜೋಡಿಗಳಿಗೆ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರೋತ್ಸವಕ್ಕೆ ಭಾನುವಾರ ಅಧಿಕೃತ ಚಾಲನೆ ದೊರೆಯಿತು.
ಪ್ರತಿ ವರ್ಷ ಒಂದೊಂದು ವಿನೂತನ, ಸಾಮಾಜಿಕ ಕಾರ್ಯಕ್ಕೆ ಹೆಸರಾದ ಗವಿಮಠ ಈ ಬಾರಿ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ದಿನದಂದು ಅಂಗವಿಕಲರ ಬಾಳಿಗೆ ಬೆಳಕಾಗುವ ಮೂಲಕ ವಿಶೇಷತೆ ಮೆರೆದಿದೆ. ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ, ಎಷ್ಟೋ ವರ್ಷಗಳಿಂದ ವಧು/ವರನಿಗಾಗಿ ಹುಡುಕಾಡಿ ಜೀವನೇ ಮುಗಿಯಿತು ಎಂದುಕೊಂಡಿದ್ದ ಅನೇಕರು ನವ ಜೀವನಕ್ಕೆ ಕಾಲಿಟ್ಟರು. ವಿಶೇಷ ಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ರಾಷ್ಟ್ರ ಪ್ರಶಸ್ತಿ ಪುರಸತ ಬಾಗಲಕೋಟೆಯ ನಶ್ಯಾಮ ಬಾಂಡಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ವಿಶೇಷವಾಗಿತ್ತು.
ಗವಿಶ್ರೀಗಳ ಕಾರ್ಯ ಶ್ಲಾಘಿಸಿದ ನಶ್ಯಾಮ್, ವಿಶೇಷ ಚೇತನ ಬಾಲಕಿಯೊಬ್ಬಳ ಜೀವನ ನೆನೆದು ವೇದಿಕೆ ಮೇಲೆ ಕಣ್ಣೀರಾದರು. ಈ ಸನ್ನಿವೇಶ ಕಂಡು ನವ ಜೀವನಕ್ಕೆ ಕಾಲಿಟ್ಟ ಜೋಡಿಗಳಲ್ಲಿ ಕೆಲವರು ಭಾವುಕರಾದರು. ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಗವಿಶ್ರೀಗಳು ಭಾವುಕರಾಗಿ ಕಣ್ಣು ಒರೆಸಿಕೊಂಡರು. ಮಹಿಳೆಯರು ಸೇರಿ ಸಭಿಕರು ಕೆಲ ಕ್ಷಣ ಮೌನವಾದರು. ವಿವಿಧ ವಿಕಲತೆ ಹೊಂದಿದ ರಾಜ್ಯದ ವಿವಿಧ ಜಿಲ್ಲೆಗಳ ವಧು&ವರರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಿಜಕಲ್ನ ಶಿವಕುಮಾರ ಮಹಾಸ್ವಾಮಿಗಳು ಗವಿಶ್ರೀಗಳ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನವ ಜೋಡಿಗಳಿಗೆ ಸೆಲ್ಕೊ ಸಂಸ್ಥೆ ಸಹಭಾಗಿತ್ವದಲ್ಲಿ ಅಂಗಡಿ, ಜೆರಾಕ್ಸ್ ಮಷೀನ್, ಹೊಲಿಗೆ ಯಂತ್ರ ಸೌಲಭ್ಯ ಕಲ್ಪಿಸುವ ಮೂಲಕ ಮುಂದಿನ ಜೀವನ ಸ್ವಾವಲಂಬನೆಯಿಂದ ನಡೆಸಲು ಅನುಕೂಲ ಕಲ್ಪಿಸಲಾಯಿತು.