More

    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆ

    ಬೆಳಗಾವಿ: ಜಿಲ್ಲೆಯಲ್ಲಿಯೂ ಕರೊನಾ ವೈರಸ್ ಸೋಂಕಿತರ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಳಗಾವಿ ತಾಲೂಕಿನ ಗ್ರಾಮವೊಂದರಲ್ಲಿ ಒಂದೇ ಕುಟುಂಬದ ಮೂವರಲ್ಲಿ ಕರೊನಾ ವೈರಸ್ ಸೋಂಕು ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಪ್ರಕಟಿಸಿರುವ ಹೆಲ್ತ್ ಬುಲೆಟಿನ್‌ನಲ್ಲಿ ಹಿರೇಬಾಗೇವಾಡಿಯ 50 ವರ್ಷದ ವ್ಯಕ್ತಿ, 40 ವರ್ಷದ ಮಹಿಳೆ ಹಾಗೂ 22 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದ್ದಾಗಿ ತಿಳಿಸಲಾಗಿದೆ. ಈಗಾಗಲೇ ಸೋಂಕಿತರಾಗಿರುವ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 20 ವರ್ಷದ ಯುವಕ (ಪಿ-128)ನ ತಂದೆ, ತಾಯಿ ಮತ್ತು ಸಹೋದರನಿಗೂ ಕರೊನಾ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

    ದೆಹಲಿಗೆ ತೆರಳಿ, ಮರಳಿದ್ದ ಯುವಕ: ಕರೊನಾ ವೈರಸ್ ಸೋಂಕಿತ (ಪಿ-128)ನು ಫೆ. 12ರಂದು ಬೆಳಗಾವಿಯಿಂದ ದೆಹಲಿಗೆ ರೈಲಿನಲ್ಲಿ ತೆರಳಿದ್ದ. ದೆಹಲಿಯಿಂದ ಖಾಸಗಿ ವಾಹನದಲ್ಲಿ ಉತ್ತರ ಪ್ರದೇಶದ ಚೇಕಡಾ ಗ್ರಾಮಕ್ಕೆ ಹೋಗಿ 36 ದಿನಗಳ ಕಾಲ ಗ್ರಾಮದ ಬಿಲಾಲ್ ಮಸೀದಿಯಲ್ಲಿ ವಾಸವಿದ್ದ. ಮಾರ್ಚ್ 21ರಂದು ಉತ್ತರ ಪ್ರದೇಶದಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ವಾಪಸಾಗಿದ್ದ. ಮಾ. 22ರಂದು ಬೆಳಗಾವಿಗೆ ಆಗಮಿಸಿದ್ದ ಯುವಕ ಟಾಟಾ ಏಸ್ ವಾಹನದಲ್ಲಿ ಸ್ವಗ್ರಾಮಕ್ಕೆ ಮರಳಿದ್ದ. ಅಲ್ಲದೆ, ಗ್ರಾಮದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ. ಈತನ ಜತೆಗೆ ತಂದೆ-ತಾಯಿ ಸೇರಿ 9 ಜನರಿಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಇದೀಗ ಆತನ ತಂದೆ-ತಾಯಿ, ಸಹೋದರನಲ್ಲಿಯೂ ಸೋಂಕು ಪತ್ತೆಯಾಗಿದೆ.

    ಗ್ರಾಮಸ್ಥರಲ್ಲಿ ಆತಂಕ: ಕರೊನಾ ಸೋಂಕಿತ ತಂದೆ ಹಾಗೂ ಮಕ್ಕಳು ತಮ್ಮ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಪ್ರತಿಯೊಂದು ಸಂತೆಯಲ್ಲಿ ಈರುಳ್ಳಿ ಹಾಗೂ ಆಲೂಗಡ್ಡೆ (ಬಟಾಟೆ) ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

    ಈಗಾಗಲೇ ಬೆಳಗಾವಿ ತಾಲೂಕಿನ ಬಾಗೇವಾಡಿ, ಬೆಳಗುಂದಿ, ಬೆಳಗಾವಿ ನಗರದ ಕಸಾಯಿ ಗಲ್ಲಿಯಲ್ಲಿ ತಲಾ ಒಂದು ಹಾಗೂ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಾಲ್ವರಿಗೆ ಕರೊನಾ ವೈರಸ್ ದೃಢವಾಗಿತ್ತು. ಈಗ ಬೆಳಗಾವಿ ತಾಲೂಕಿನಲ್ಲಿ ಮತ್ತೆ ಮೂರು ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಜನರಲ್ಲಿ ಆತಂಕ ಹೆಚ್ಚಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts