More

    ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ, ಗ್ರಾಮವಾಸ್ತವ್ಯ

    ಹಾವೇರಿ: ಜಿಲ್ಲೆಯ ಗಡಿ ಗ್ರಾಮದಲ್ಲಿರುವ ಇವರಿಗೆ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಬಿಟ್ಟರೆ ಬೇರೆ ಸರ್ಕಾರಿ ಕಟ್ಟಡಗಳಿಲ್ಲ.ಅಧಿಕಾರಿಗಳು ಸಕಾಲಕ್ಕೆ ಸಿಗುತ್ತಿರಲಿಲ್ಲ. ಅಂತಹ ಗ್ರಾಮಕ್ಕೆ ಜಿಲ್ಲಾಧಿಕಾರಿ ಬಂದಿದ್ದು, ಹಬ್ಬದ ಸಡಗರ ತಂದಿತ್ತು. ಇದಕ್ಕಾಗಿ ಗ್ರಾಮದ ಹೊರವಲಯದಲ್ಲಿಯೇ ಹೂಮಳೆ ಸುರಿಸಿ, ಆರತಿ ಎತ್ತಿ, ಪೂರ್ಣಕುಂಭದೊಂದಿಗೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸಿದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಜಿಲ್ಲೆಯ ಸವಣೂರ ತಾಲೂಕಿನ ಹೊಸನೀರಲಗಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದಾಗ ಕಂಡುಬಂದ ದೃಶ್ಯಗಳಿವು.

    ಬೆಳಗ್ಗೆ 11ಕ್ಕೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಆಗಮಿಸಿದರು. ಆ ಸಮಯದಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಆರತಿ ಎತ್ತಿ, ಪುಷ್ಪವೃಷ್ಟಿ ಮಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗುಲಾಬಿ ಹೂ ನೀಡಿ ಸ್ವಾಗತಿಸಿದರು. ನಂತರ ಮಹಿಳೆಯರು ಕುಂಭಮೇಳದೊಂದಿಗೆ ಗ್ರಾಮದೊಳಗೆ ಜಿಲ್ಲಾಧಿಕಾರಿಯನ್ನು ಕರೆತಂದರು.

    ಗ್ರಾಮದ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿದರು. ಅಲ್ಲಿಂದ ಅಂಗನವಾಡಿಗೆ ಭೇಟಿ ನೀಡಿ ಸಸಿ ನೆಟ್ಟರು. ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ನಂತರ ದಲಿತಕೇರಿಗೆ ತೆರಳಿ ಅಹವಾಲು ಸ್ವೀಕರಿಸಿ, ಅಲ್ಲಿನ ಸಮಸ್ಯೆ ವೀಕ್ಷಿಸಿದರು. ಅಲ್ಲಿಂದ ನೇರವಾಗಿ ಸಾರ್ವಜನಿಕರಿಗಾಗಿ ಇಲಾಖಾವಾರು ಮಾಡಿದ್ದ ಅರ್ಜಿ ಸ್ವೀಕಾರ ಕೌಂಟರ್​ಗಳನ್ನು ವೀಕ್ಷಿಸಿ, ಅಹವಾಲು ಸ್ವೀಕಾರ ವೇದಿಕೆಗೆ ತೆರಳಿದರು.

    ಈ ಸಮಯದಲ್ಲಿ ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಸಿಇಒ ಮಹಮ್ಮದ್ ರೋಷನ್ ಅವರು, ಗ್ರಾಮವಾಸ್ತವ್ಯ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

    ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಪರಿಶೀಲಿಸಿ, ವೃದ್ಧಾಪ್ಯ, ವಿಧವಾ, ಅಂಗವಿಕಲ ಸೇರಿ ವಿವಿಧ ಮಾಸಾಶನ ಸೌಲಭ್ಯಗಳ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿದರು. 100ಕ್ಕೂ ಅಧಿಕ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ನೀಡಿ, ಕೂಡಲೆ ಈ ಆದೇಶಗಳನ್ನು ಖಜಾನೆಗೆ ತಹಸೀಲ್ದಾರ್ ಅವರೇ ಸಲ್ಲಿಸಿ ಫೆಬ್ರವರಿಯಿಂದಲೇ ಮಾಸಾಶನ ಬರುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

    ಗ್ರಾಪಂ ಕೇಂದ್ರ ಸ್ಥಾನಕ್ಕೆ ಮಾತ್ರ ಗ್ರಂಥಾಲಯದ ಸೌಲಭ್ಯವಿದ್ದು, ನಮ್ಮ ಗ್ರಾಮಕ್ಕಿಲ್ಲ. ನಮಗೂ ಒಂದು ಗ್ರಂಥಾಲಯ ಮಾಡಿಸಿಕೊಡಿ ಎಂದು ಮನವಿ ಸಲ್ಲಿಸಿದರು. ಸ್ಪಂದಿಸಿದ ಡಿಸಿ, ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯೊಂದರಲ್ಲಿ ಗ್ರಂಥಾಲಯಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸುವಂತೆ ಹಾಗೂ ಶಾಲಾ ಕೊಠಡಿಗಳು ದುರಸ್ತಿಯಲ್ಲಿದ್ದು, ಹೊಸದಾಗಿ ಕಟ್ಟಡ ಕಟ್ಟಿಸಿಕೊಡಿ ಎಂದು ಎಸ್​ಡಿಎಂಸಿ ಸದಸ್ಯರು ಮನವಿ ಮಾಡಿದರು. ಆಗ ಬಿಇಒ ಅವರಿಗೆ ಈ ಸಮಸ್ಯೆಗೆ ಪರಿಹಾರ ತಿಳಿಸಿ ಎಂದು ಡಿಸಿ ಸೂಚಿಸಿದರು. ಶಿಕ್ಷಕರ ಸಮಸ್ಯೆ ನಿವಾರಣೆಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗುವುದು ಎಂದರು.

    ಪರಿತ್ಯಕ್ತೆಯ ಗೋಳಿಗೆ ಸ್ಪಂದಿಸಿದ ಡಿಸಿ: ಲಲಿತವ್ವ ಬಂಕಾಪುರ ಎಂಬುವರು ವೇದಿಕೆಗೆ ಬಂದು, ‘ಪತಿ 12 ವರ್ಷದಿಂದ ನನ್ನನ್ನು ಕೈಬಿಟ್ಟಿದ್ದಾರೆ. 2 ಹೆಣ್ಣು 1 ಗಂಡು ಮಗುವಿದೆ. 1 ಹೆಣ್ಣು ಮಗುವಿಗೆ ಮಾತು ಬರಲ್ಲ. ಸಣ್ಣಮಕ್ಕಳನ್ನು ಕಟ್ಟಿಕೊಂಡು ಜೀವನ ನಿರ್ವಹಣೆ ಕಷ್ಟಕರವಾಗಿದೆ. ನನಗೆ ಕೆಲಸ ಕೊಡಿಸಿ’ ಎಂದು ಮನವಿ ಮಾಡಿದರು. ಪತಿಯಿಂದ ಪರಿತ್ಯಕ್ತವಾಗಿರುವ ಮಹಿಳೆಯರಿಗೆ ನೀಡುವ ಮಾಸಾಶನ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. ಅಲ್ಲದೆ, ಉದ್ಯೋಗಿನಿ ಯೋಜನೆಯಲ್ಲಿ ಒಂದು ತಿಂಗಳೊಳಗೆ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.

    ಹೂವಪ್ಪ ವಾಲ್ಮೀಕಿ ಎಂಬ ವೃದ್ಧ ಅಂಧರೊಬ್ಬರು ನನಗೆ ಸ್ಟಿಕ್ ಕೊಡಿಸಿ ಎಂದು ಮನವಿ ಮಾಡಿದರು. ಸ್ಟಿಕ್ ಕೊಡಿಸಿ ಎಂದು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಠದ ಅವರಿಗೆ ಸೂಚಿಸಿದರು.

    ಸವಣೂರ ಎಸಿ ಅನ್ನಪೂರ್ಣ ಮುದುಕಮ್ಮನವರ, ತಹಸೀಲ್ದಾರ್ ಸಿ.ಎಸ್. ಜಾಧವ ಸೇರಿ ಜಿಲ್ಲೆಯ ವಿವಿಧ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

    40 ವರ್ಷದ ಸಮಸ್ಯೆಗೆ ತಿಂಗಳಲ್ಲಿಯೇ ಪರಿಹಾರದ ಭರವಸೆ: ‘ಮಂತ್ರವಾಡಿ ಗ್ರಾಮದಲ್ಲಿ ಕಳೆದ 40 ವರ್ಷದಿಂದ ಮನೆಕಟ್ಟಿಕೊಂಡು ವಾಸವಾಗಿದ್ದೇವೆ. ಆದರೆ, ಈವರೆಗೂ ಪಟ್ಟಾ ಕೊಡದೇ ಇದ್ದರಿಂದ ಈ ಸ್ವತ್ತು ಉತಾರ ಸಿಗುತ್ತಿಲ್ಲ’ ಎಂದು ಅಲ್ಲಿನ ನಿವಾಸಿಯೊಬ್ಬರು ಮನವಿ ಸಲ್ಲಿಸಿದರು. ಪರಿಶೀಲಿಸಿದ ಜಿಲ್ಲಾಧಿಕಾರಿ, ಪಿಡಿಒ ಅವರಿಗೆ ಇಂತಹ ಎಷ್ಟು ಮನೆಗಳಿವೆ ಎಂಬ ಮಾಹಿತಿ ಪಡೆದರು. 40ರಿಂದ 60 ಕುಟುಂಬಗಳಿರುವ ವಿಷಯ ತಿಳಿಸಿದರು. ಒಂದು ತಿಂಗಳೊಳಗಾಗಿ ಇವರಿಗೆ ಪಟ್ಟಾ ನೀಡಲು ಗ್ರಾಪಂ ಹಾಗೂ ತಾಪಂನಲ್ಲಿ ಠರಾವು ಪಾಸು ಮಾಡಿ ಕಳಿಸಿ. ಅದನ್ನು ಜಿಪಂನಲ್ಲಿ ಅನುಮೋದಿಸಿ ಪಟ್ಟಾ ನೀಡಲು ಕ್ರಮ ವಹಿಸಲಾಗುವುದು. ಸದ್ಯ ಯಾರು ಮನೆಯಲ್ಲಿ ವಾಸವಾಗಿದ್ದಾರೋ ಅವರ ಹೆಸರಿಗೆ ಪಟ್ಟಾ ನೀಡಿ ಎಂದು ಸೂಚಿಸಿದರು.

    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ: ಗ್ರಾಮದಲ್ಲಿನ ಓವರ್​ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು, ಅದನ್ನು ಜಲ ಜೀವನ್ ಮಿಶನ್ ಯೋಜನೆಯಲ್ಲಿ ನಿರ್ವಿುಸಿಕೊಡಲು ನಿರ್ಧರಿಸಲಾಯಿತು. ಗ್ರಾಮದಿಂದ ಶಿಗ್ಗಾಂವಿ, ಸವಣೂರ, ಹಾವೇರಿಗೆ ವಿದ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯವಿಲ್ಲದೇ ಇರುವುದನ್ನು ವಿದ್ಯಾರ್ಥಿಗಳು ಡಿಸಿ ಗಮನಕ್ಕೆ ತಂದರು. ತಕ್ಷಣ ಸಾರಿಗೆ ಸಂಸ್ಥೆ ಡಿಸಿಗೆ ಕರೆ ಮಾಡಿ ಸೋಮವಾರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅವಧಿಗೆ ತಕ್ಕಂತೆ ಗ್ರಾಮಕ್ಕೆ ಬಸ್ ಓಡಿಸುವಂತೆ ಸೂಚಿಸಿದರು.

    ಕಂದಾಯ ದಾಖಲೆ ಸರಿಪಡಿಸಲು ನಿರ್ಧಾರ: ಹಲವು ವರ್ಷಗಳ ಹಿಂದೆ ಸವಣೂರ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಅಗ್ನಿ ಅನಾಹುತದಿಂದ ಕಂದಾಯ ದಾಖಲೆಗಳೆಲ್ಲ ಸುಟ್ಟು ಹೋಗಿವೆ. ಇದರಿಂದ ಹೊಸನೀರಲಗಿ ಮಾತ್ರವಲ್ಲ. ತಾಲೂಕಿನಾದ್ಯಂತ ಹಳೆಯ ದಾಖಲೆಗಳು ಸಿಗದೇ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರ ಬಳಿ ಹಳೆಯ ಕಂದಾಯ ದಾಖಲೆಗಳೇನಾದರೂ ಇದ್ದಲ್ಲಿ ಕೊಡಲು ಪ್ರಕಟಣೆ ಹೊರಡಿಸಿ, ತಿಂಗಳೊಳಗೆ ಜಿಲ್ಲಾಮಟ್ಟದ ಸಮಿತಿಯ ಸಭೆ ನಡೆಸಿ ಕಂದಾಯ ದಾಖಲೆಗಳನ್ನು ಸರಿಪಡಿಸಲು ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಭರವಸೆ ನೀಡಿದರು.

    ಸುಸ್ತಾಗಿ ಕಾರು ಹತ್ತಿದ ಡಿಸಿ: ಹೊಸನೀರಲಗಿ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಅವರನ್ನು ಒಂದು ಕಿಮೀ ದೂರದ ಪ್ರವೇಶ ದ್ವಾರದ ಬಳಿಯಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಸುಮಾರು ಅರ್ಧ ಕಿಮೀ ನಡೆದ ಅವರು ಸುಸ್ತಾಗಿ ಕಾರನ್ನು ತರಿಸಿ ಮೆರವಣಿಗೆಯಲ್ಲಿ ಸಾಗಿದರು. ಮಧ್ಯೆ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ, ದಲಿತ ಕೇರಿಗೆ ಭೇಟಿ ನೀಡಲು ಕಾರಿನಲ್ಲೇ ಸಾಗಿದರು.

    217 ಸ್ವೀಕಾರ, 130ಕ್ಕೆ ಪರಿಹಾರ: ಗ್ರಾಮವಾಸ್ತವ್ಯದ ವೇಳೆ ಸಂಜೆವರೆಗೆ ಕಂದಾಯ ಇಲಾಖೆಗೆ ಸೇರಿದ 144, ಭೂಮಾಪನ 4, ತಾಪಂನ 55, ಶಿಕ್ಷಣ ಇಲಾಖೆಯ 3, ಕನ್ನಡ ಸಂಸ್ಕೃತಿ ಇಲಾಖೆಯ 7 ಅರ್ಜಿ ಸೇರಿ 217 ಅರ್ಜಿಗಳನ್ನು ಸ್ವೀಕರಿಸಲಾಯಿತು. ಇದರಲ್ಲಿ 130 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts