More

    ಕೃಷಿ ಚಟುವಟಿಕೆಗೆ ಜೀವಕಳೆ

    20 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣ

    ಮಳೆ ಬಿಡುವಿನ ಬಳಿಕ ಚುರುಕು

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ವಾರದಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಮಳೆರಾಯ ಕೃಪೆ ತೋರಿದ್ದು, ಕೃಷಿ ಚಟುವಟಿಕೆಗಳಿಗೆ ಜೀವ ಕಳೆ ಬಂದಿದೆ.
    ಸಾಮಾನ್ಯವಾಗಿ ಜಿಲ್ಲೆಯಲ್ಲಿ ಜುಲೈ ಅಂತ್ಯದಲ್ಲೇ ಮಳೆಯಾಗುವ ವಾಡಿಕೆ ಇದ್ದು, ನಿರೀಕ್ಷೆಯಂತೆಯೇ ಕೆಲ ದಿನಗಳಿಂದ ಉತ್ತಮ ಮಳೆಯಾಗಿದೆ. ಈ ಸಾಲಿನಲ್ಲಿ 71246 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸುವ ನಿರೀಕ್ಷೆಯಿದ್ದು ಈಗಾಗಲೇ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. 15,602 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಹಾಗೂ 2,420 ಹೆಕ್ಟೇರ್ ಪ್ರದೇಶದಲ್ಲಿ ಜೋಳದ ಬಿತ್ತನೆ ಕಾರ್ಯ ಮುಗಿದಿದೆ.
    ಕಳೆದ ಸಾಲಿನಲ್ಲಿ ಕೃಷಿ ಇಲಾಖೆ ಗುರಿಯಂತೆ ಶೇ.98 ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿತ್ತು. ಈ ಬಾರಿ ಶೇ.100 ಬಿತ್ತನೆಯಾಗುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಕೃಷಿ ಚಟುವಟಿಕೆಗಳಲ್ಲಿ ಚುರುಕು ಪಡೆಯುತ್ತಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ಮತ್ತಷ್ಟು ಸಲು ಪಡೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆ ರೈತರೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿದ್ದು, ಕೃಷಿ ಚಟುವಟಕೆಗೆ ಅಗತ್ಯವಿರುವ ನೆರವು ನೀಡಲು ಅಧಿಕಾರಿಗಳ ತಂಡ ಶ್ರಮಿಸುತ್ತಿದೆ.
    ಆಗಸ್ಟ್ ವೇಳೆಗೆ ಸಂಪೂರ್ಣ ಬಿತ್ತನೆ: ಮುಖ್ಯವಾಗಿ ಈ ಬಾರಿ 71,246 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಅಂದಾಜಿಸಿದ್ದು, ಇದರಲ್ಲಿ ಜಿಲ್ಲೆಯ ಪ್ರಮುಖ ಬೆಳೆ ರಾಗಿಗೆ ಪ್ರಾಧಾನ್ಯತೆ ನೀಡಲಾಗಿದೆ. 59,100 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ನಿರೀಕ್ಷೆ ಇದ್ದು,ನಂತರದಲ್ಲಿ 8136 ಹೆಕ್ಟೇರ್ ಮುಸುಕಿನ ಜೋಳ, 948 ಹೆಕ್ಟೇರ್ ತೊಗರಿ ಹಾಗೂ 215 ಹೆಕ್ಟೇರ್ ನೆಲಗಡಲೆ ಬಿತ್ತನೆಯ ಗುರಿ ಹೊಂದಲಾಗಿದ್ದು, ಆಗಸ್ಟ್‌ನಲ್ಲಿ ಬಹುಪಾಲು ಬಿತ್ತನೆಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    7,791 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು: ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ಸೇರಿ ನಾಲ್ಕೂ ತಾಲೂಕುಗಳ ವ್ಯಾಪ್ತಿಯಲ್ಲಿ ಈ ಬಾರಿ 5316 ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕತೆ ಇದೆ ಎಂದು ಅಂದಾಜಿಲಾಗಿದೆ. ಪ್ರಸ್ತುತ 7,791 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಆದ್ದರಿಂದ ಜಿಲ್ಲೆಯ ಎಲ್ಲಿಯೂ ರಸಗೊಬ್ಬರ ಕೊರತೆ ಕಂಡುಬರುವುದಿಲ್ಲ ಎಂದು ಗ್ರಾಮಾಂತರ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಮಳೆ ಬಿಡುವಿಗೆ ಕಾದಿರುವ ರೈತರು ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು ಭೂಮಿ ಹದವಾಗಿದೆ, ಮಳೆ ಬಿಡುವು ನೀಡಿದರೆ ದೊಡ್ಡಮಟ್ಟದಲ್ಲಿ ಬಿತ್ತನೆ ಕಾರ್ಯ ಆರಂಭವಾಗಲಿದೆ, ಈ ನಿಟ್ಟಿನಲ್ಲಿ ರೈತಾಪಿ ಜನರು ಬಿತ್ತನೆ ಕಾರ್ಯಕ್ಕೆ ಸಿದ್ಧಗೊಳ್ಳುತ್ತಿದ್ದಾರೆ.

    ದರ ಹೆಚ್ಚಿಸಿದರೆ ಎಚ್ಚರ: ಇಲಾಖೆಯಿಂದ ವಿತರಣೆ ಮಾಡುವ ರಸಗೊಬ್ಬರ ದರದಲ್ಲಿ ಎಲ್ಲಿಯಾದರೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಕೃಷಿ ಇಲಾಖೆ ಅಧಿಕಾರಿಗಳು ನಿರಂತರ ಪರಿಶೀಲನೆಯಲ್ಲಿದ್ದಾರೆ.


    ಖಾಸಗಿಯಲ್ಲಿ ಕಳಪೆ ಬೀಜ: ಇತ್ತೀಚೆಗೆ ತೂಬಗೆರೆ ಭಾಗದಲ್ಲಿ ಖಾಸಗಿ ಮಳಿಗೆಯಲ್ಲಿ ಖರೀದಿಸಿದ ಕಳಪೆ ಬಿತ್ತನೆ ಬೀಜದ ಬಗ್ಗೆ ಸುದ್ದಿಯಾಗಿತ್ತು. ಈ ಸಂಬಂಧ ಜಿಕೆವಿಕೆ ವತಿಯಿಂದ ಪರಿಶೀಲನೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಸತ್ಯಾಂಶ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯಿಂದ ಕೊಡಮಾಡುವ ಬಿತ್ತನೆ ಬೀಜ ಹಲವು ಪರೀಕ್ಷೆಗಳಿಗೊಳಪಟ್ಟಿರುತ್ತದೆ ಆದ್ದರಿಂದ ರೈತರು ಯಾವುದೇ ಅನುಮಾನವಿಲ್ಲದೆ ಖರೀದಿಸಬಹುದು ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



    ಜಿಲ್ಲೆಯಲ್ಲಿ ಈ ಬಾರಿ 71246 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಗುರಿ ಹೊಂದಲಾಗಿದೆ. ಪ್ರಸ್ತುತ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ, ಉತ್ತಮ ಮಳೆಯಾಗುತ್ತಿದ್ದು ಮಳೆ ಬಿಡುವು ನೀಡಿದರೆ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ. ಜಿಲ್ಲೆಯಲ್ಲಿ ಬೇಡಿಕೆಗಿಂತ ಹೆಚ್ಚುವರಿಯಾಗಿ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಕೃಷಿ ಚಟುವಟಿಕೆಗೆ ಬೇಕಾದ ಎಲ್ಲ ನೆರವು ನೀಡಲು ಇಲಾಖೆ ಸನ್ನದ್ಧವಾಗಿದೆ.
    ವಿನುತಾ, ಉಪನಿರ್ದೇಶಕಿ ಕೃಷಿ ಇಲಾಖೆ ಬೆಂ.ಗ್ರಾಮಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts