More

    ಶಿವಾಜಿಯ ದೇಶಭಕ್ತಿ ಅನುಕರಣೀಯ ಎಂದ ಬಸವಪ್ರಭು ಸ್ವಾಮೀಜಿ

    ದಾವಣಗೆರೆ: ಶಿವಾಜಿ ಮೂಲಕ ದೇಶಭಕ್ತಿ ಹಾಗೂ ಜನನಾಯಕನಾಗುವ ಪರಿಯನ್ನು ಕಲಿಯುವ ಅಗತ್ಯವಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

    ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕ್ಷತ್ರಿಯ ಮರಾಠ ಸಂಘ ಇಲ್ಲಿನ ಕೃಷ್ಣಭವಾನಿ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಶಿವಾಜಿ, ಮಾನವ ಕುಲದ ಸ್ಪೂರ್ತಿಯ ಮೂರ್ತಿ. ಮಹಿಳೆಯರನ್ನು ಮಾತೃಭಾವನೆಯಿಂದ ನೋಡುತ್ತಿದ್ದರು. ಸ್ಮರಿಸಿದ ಮಾತ್ರಕ್ಕೆ ಮೈ ರೋಮಾಂಚನ ಆಗುವಂತಹ ಚುಂಬಕ ವ್ಯಕ್ತಿತ್ವ ಅವರಲ್ಲಿತ್ತು. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಶಿವಾಜಿಯನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

    ಉಪನ್ಯಾಸ ನೀಡಿದ ಅಜಿತ್ ನಾಡಿಗರ್, ಶಿವಾಜಿ ಸರ್ವಧರ್ಮ ಪ್ರೇಮಿಯಾಗಿದ್ದ. ಯಾವುದೇ ಮಸೀದಿ-ಚರ್ಚ್‌ಗಳನ್ನು ಧ್ವಂಸ ಮಾಡಲಿಲ್ಲ. ನಿಸ್ವಾರ್ಥದಿಂದ ದೇಶಕ್ಕಾಗಿ ಹೋರಾಡಿದ ಶಿವಾಜಿ ಅವರಂಥ ಯೋಧರು ಪ್ರತಿಯೊಬ್ಬರ ಮನೆಯಲ್ಲೂ ಹುಟ್ಟಬೇಕು ಎಂದರು.

    ಕಲಾವಿದ ಅನಿಲ್ ಗಾಯಕವಾಡ್ ಮಣ್ಣಿನಿಂದ ಶಿವಾಜಿ ಪ್ರತಿಮೆಯನ್ನು ಚಿತ್ರಿಸಿದರು. ಸಾಧಕರಾದ ಲಕ್ಷ್ಮಣರಾವ್ ಸಾಳಂಕಿ, ಕೃಷ್ಣಮೂರ್ತಿ ಪವಾರ್, ಸಂತೋಷ್ ಕಾಟೆ, ರಾಘವೇಂದ್ರ ಚವ್ಹಾಣ್, ಭೂಮಿಕಾರನ್ನು ಸನ್ಮಾನಿಸಲಾಯಿತು.

    ಜಿಪಂ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಷಹಜಿ ರಾಜೆ ಬೋಸ್ಲೆ ಸ್ಮಾರಕ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಮಲ್ಲೇಶ್, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ. ಮಾಲತೇಶರಾವ್ ಜಾಧವ್, ಪದಾಧಿಕಾರಿಗಳಾದ ಎಂ.ಅಜ್ಜಪ್ಪ ಪವಾರ್, ಎಂ.ಗೋಪಾಲರಾವ್ ಮಾನೆ, ಜಿ.ಯಲ್ಲಪ್ಪ ಢಮಾಳೆ, ಪೂರ್ಣಿಮಾ ಮಂಜುನಾಥ್, ಹನುಮಂತರಾವ್ ಸಾಳಂಕಿ, ಅನಿತಾಬಾಯಿ ಮಾಲತೇಶ್, ಶಿವಶಂಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts