More

    ವರುಣಾರ್ಭಟಕ್ಕೆ ಮಲೆನಾಡು ತತ್ತರ

    ಚಿಕ್ಕಮಗಳೂರು: ಕಾಫಿ ನಾಡಿನ ಮಲೆನಾಡು ಭಾಗದಲ್ಲಿ ಭಾರಿ ವರ್ಷಧಾರೆಯಾಗಿದ್ದರೆ, ಬಯಲುಸೀಮೆ ಕೆಲವೆಡೆ ಹದ ಮಳೆಯಾಗಿದೆ. ಮಳೆಯಿಂದ ಎರಡು ಮನೆಗಳು ಕುಸಿದಿವೆ. ಹಲವೆಡೆ ನದಿಗಳು ಉಕ್ಕಿ ಹರಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕೃಷಿ ಜಮೀನುಗಳು ಜಲಾವೃತಗೊಂಡಿದ್ದವು. ಮಳೆ ಮುಂದುವರಿದರೆ ಹೆಚ್ಚಿನ ಅನಾಹುತ ಆಗುವ ಸಾಧ್ಯತೆ ಇದೆ.

    ನಗರದ ಬಸವನಹಳ್ಳಿ, ರಾಮನಹಳ್ಳಿ, ಹಾಲೇನಹಳ್ಳಿ, ಕೆಂಪನಹಳ್ಳಿ, ಗೃಹಮಂಡಳಿ ಬಡಾವಣೆ, ಬೀಕನಹಳ್ಳಿ, ಕಣಿವೆಹಳ್ಳಿ, ಹಿರೇಮಗಳೂರು, ಕಲ್ಯಾಣನಗರ, ಕುರುವಂಗಿ, ಮೂಗ್ತೀಹಳ್ಳಿ, ಇತ್ತ ಅಲ್ಲಂಪುರ, ಜೋಳದಾಳ್ ಮತ್ತಿತರ ಸುತ್ತಮುತ್ತಲ ಕಡೆಗಳಲ್ಲಿ ಮಳೆಯಾಯಿತು.

    ಮೂಡಿಗೆರೆ ತಾಲೂಕಿನಲ್ಲಿ ಎರಡು ದಿನದಿಂದ ಮಳೆ ಆರ್ಭಟಿಸುತ್ತಿದೆ. 8 ದಿನದಿಂದ ಸಾಧಾರಣ ಮಳೆಯಾಗುತ್ತಿತ್ತು. ಶನಿವಾರ ಮಳೆ ಹೆಚ್ಚಾಗಿ ಹೇಮಾವತಿ, ಜಪಾವತಿ ಸೇರಿ ತಾಲೂಕಿನ 8 ನದಿಗಳು, ತೊರೆಗಳು ತುಂಬಿ ಹರಿಯುತ್ತಿವೆ.

    ಬೆಟ್ಟಗೆರೆ ಗ್ರಾಪಂ ವ್ಯಾಪ್ತಿಯ ಹೊರಟಿ ಗ್ರಾಮದಲ್ಲಿ ಕೊರಗಪ್ಪ ಪೂಜಾರಿ ಅವರ ಮನೆ ಒಂದು ಪಾರ್ಶ್ವ ಕುಸಿದಿದೆ. ಕಾಫಿ, ಕಾಳುಮೆಣಸು, ಅಡಕೆ, ಬಾಳೆ ಬೆಳೆಗಳಿಗೆ ಹಾನಿಯಾಗಿದ್ದು, ಮಳೆ ಹೆಚ್ಚಾಗಿದ್ದರಿಂದ ಇನ್ನಷ್ಟು ಹಾನಿಗೊಳಗಾಗುವ ಆತಂಕ ರೈತರಲ್ಲಿದೆ. ದೀಪಾವಳಿ ಹಬ್ಬಕ್ಕಿಂತ ಮೊದಲು ಭತ್ತದ ತೆನೆ ಕಟ್ಟಲು ತೊಡಗುತ್ತದೆ. ತೆನೆ ಮೂಡುವ ವೇಳೆ ಮಳೆಯಾದರೆ ಭತ್ತ ಜೊಳ್ಳಾಗಲಿದೆ.

    ಚಾರ್ವಡಿ ಘಾಟ್​ನಲ್ಲಿ ಗುಡ್ಡ ಕುಸಿತ: ಮಲೆನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೊಟ್ಟಿಗೆಹಾರದಲ್ಲಿ ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆಯವರೆಗೆ 110 ಮಿಮೀ ಮಳೆಯಾಗಿದೆ. ಜಾವಳಿ ಗ್ರಾಪಂ ಮೇಲ್ಕೊಡುಗೆಯ ರಾಜು ಅವರ ಮನೆ ಗೋಡೆ ಕುಸಿದಿದೆ. ಕೊಟ್ಟಿಗೆಹಾರ, ಬಾಳೂರು, ಜಾವಳಿ, ಸುಂಕಸಾಲೆ, ದೇವರಮನೆ, ಮೂಲರಹಳ್ಳಿ, ಹೆಸಗೋಡು, ಬೈರಾಪುರ, ಹೊಸಕೆರೆ, ಮೇಕನಗದ್ದೆ ಇನ್ನಿತರೆಡೆ ಭಾರಿ ಗಾಳಿ-ಮಳೆಯಾಗಿದೆ.

    ಭಾರಿ ಮಳೆಯಿಂದ ಬಣಕಲ್ ಸಮೀಪ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು ನದಿ ತೀರಗಳಲ್ಲಿ ಇರುವ ಭತ್ತದ ಗದ್ದೆಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ಕೆಲ ತಿಂಗಳ ಹಿಂದಷ್ಟೇ ನಾಟಿ ಮಾಡಲಾಗಿದ್ದು, ಭತ್ತದ ಸಸಿಗಳು ಕೊಚ್ಚಿಹೋಗುವ ಅಪಾಯವಿದೆ.

    ಚಾರ್ವಡಿ ಘಾಟ್​ನ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಜರಿದಿದ್ದು ಜೆಸಿಬಿಯಿಂದ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಭಾನುವಾರ ಚಾರ್ವಡಿ ಘಾಟ್​ನಲ್ಲಿ ವಾಹನದಟ್ಟಣೆ ಹೆಚ್ಚಾಗಿತ್ತು. ಭಾರಿ ಮಳೆಯಿಂದ ರಸ್ತೆ ಕಾಣದೆ ಹಗಲಲ್ಲೇ ವಾಹನಗಳ ಲೈಟ್ ಹಾಕಿಕೊಂಡು ಸಾಗುತ್ತಿದ್ದ ದೃಶ್ಯ ಕಂಡುಬಂತು. ಬೆಂಗಳೂರಿನಿಂದ ಹೊರನಾಡಿಗೆ ಸಾಗುತ್ತಿದ್ದ ಬೆಂಗಳೂರಿನ ದೇವನಹಳ್ಳಿ ಪ್ರವಾಸಿಗರ ಕಾರೊಂದು ಜಾವಳಿ ಸಮೀಪದ ಮೂಲೆಮನೆಯಲ್ಲಿ ಬಿರುಮಳೆಯಿಂದಾಗಿ ರಸ್ತೆ ಕಾಣದೆ ಪ್ರಪಾತಕ್ಕೆ ಉರುಳಿದೆ. ಈ ಸ್ಥಳದಲ್ಲಿ ತಡೆಗೋಡೆ ಇರಲಿಲ್ಲ. ವಾಹನದಲ್ಲಿದ್ದ 7 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಪ್ರಪಾತಕ್ಕೆ ಬಿದ್ದ ಕಾರನ್ನು ಎತ್ತಲಾಯಿತು.

    ಬಾಳೆಹೊನ್ನೂರಲ್ಲಿ ಜಮೀನು ಜಲಾವೃತ: ಕುದುರೆಮುಖ, ಕಳಸ ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಕಾರಣ ಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನದಿ ಆಸುಪಾಸಿನ ಕೆಲವು ತೋಟ, ಗದ್ದೆಗಳಿಗೆ ನೀರು ನುಗ್ಗಿದೆ.

    ಬಾಳೆಹೊನ್ನೂರಿನಿಂದ ಮಾಗುಂಡಿ ಮೂಲಕ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತುವೆ ಮೇಲೆ ನದಿ ನೀರು ಹರಿದು ಭಾನುವಾರ ಹಲವು ತಾಸು ವಾಹನ ಸಂಚಾರ ಕಡಿತಗೊಂಡಿತ್ತು. ನದಿಯಲ್ಲಿ ನೀರು ಏರಿಕೆ ಆಗುತ್ತಿರುವುದರಿಂದ ಕಳಸ ರಸ್ತೆಯ ಬೈರೇಗುಡ್ಡ, ಬನ್ನೂರು ಸಮೀಪದ ತೆಪ್ಪದಗಂಡಿ ಬಳಿ ನದಿ ನೀರು ರಸ್ತೆಯಂಚಿಗೆ ಬಂದಿತ್ತು.

    ಬನ್ನೂರು ಗ್ರಾಪಂನ ಬಂಡಿಮಠದ ಅಬ್ದುಲ್ ರೆಹಮಾನ್ ಎಂಬುವರ ಮನೆ ಗೋಡೆ ಅಲ್ಪ ಪ್ರಮಾಣದಲ್ಲಿ ಕುಸಿದಿದ್ದು, ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಪಂ ಕಾರ್ಯದರ್ಶಿ ಪಿ.ಕೆ.ಪ್ರಕಾಶ್ ಭೇಟಿ ನೀಡಿದ್ದರು. ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಾಫಿ, ಅಡಕೆ, ಕಾಳುಮೆಣಸು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಮಳೆ ಮುಂದುವರಿದರೆ ಎಲ್ಲ ಬೆಳೆಗಳಿಗೂ ಕೊಳೆ ರೋಗ ತಗುಲುವ ಆತಂಕವಿದೆ.

    ಕೊಪ್ಪದಲ್ಲಿ ಮುಳುಗಿದ ಗದ್ದೆ, ತೋಟ: ಶನಿವಾರ ಸಂಜೆ ಸುಮಾರಿಗೆ ಆರಂಭಗೊಂಡ ಮಳೆ ತಾಲೂಕಿನಾದ್ಯಂತ ಭಾನುವಾರವೂ ಧಾರಾಕಾರವಾಗಿ ಸುರಿಯಿತು. ತುಂಗಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ವಿವಿಧೆಡೆ ಅಡಕೆ, ಬಾಳೆ ತೋಟ, ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ನಾರ್ವೆ, ಜಮ್ಮಿಟ್ಟಿಗೆ, ಆರ್.ಡಿ.ಕೊಪ್ಪ, ಕಾರಂಗಿ ಭಾಗದಲ್ಲಿ ಅಡಕೆ ತೋಟ, ಭತ್ತದ ಗದ್ದೆಗಳು ಜಲಾವೃತವಾಗಿವೆ. ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆವರೆಗೆ ಕೊಪ್ಪ 96.8, ಹರಿಹರಪುರ 78, ಜಯಪುರ 78, ಬಸರೀಕಟ್ಟೆ 94.5, ಕಮ್ಮರಡಿಯಲ್ಲಿ 35.4 ಮಿಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts