More

    ಹಗಲಿನಲ್ಲೇ ಪೂರ್ಣ ವಿದ್ಯುತ್ ಕೊಡಿ: ದಿಶಾ ಸಭೆಯಲ್ಲಿ ಎಂಎಲ್‌ಸಿ ದಿನೇಶ್ ಗೂಳಿಗೌಡ ಸಲಹೆ

    ಮಂಡ್ಯ: ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ದಿಶಾ ಸಭೆಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿಯೇ ತ್ರಿಪೇಸ್ ವಿದ್ಯುತ್ ನೀಡುವ ಬಗ್ಗೆ ಗಂಭೀರ ಚರ್ಚೆ ನಡೆಯಿತು.
    ಸಂಸದೆ ಸುಮಲತಾ ಅಂಬರೀಷ್ ಅಧ್ಯಕ್ಷತೆ ಆಯೋಜಿಸಿದ್ದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಪ್ರಸ್ತುತ ಎಲ್ಲೆಡೆ ಚಿರತೆ ಹಾವಳಿ ಹೆಚ್ಚಾಗಿದೆ. ಹಗಲಿನಲ್ಲಿಯೇ ಓಡಾಡಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ರಾತ್ರಿ ಹೊತ್ತು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೊಟ್ಟರೆ ರೈತರು ಹೋಗುವುದಾದರೂ ಹೇಗೆ?. ಮಾತ್ರವಲ್ಲದೆ ಇದೀಗ ವಿಪರೀತ ಚಳಿ ಇರುವುದರಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಆದ್ದರಿಂದ ಹಗಲಿನಲ್ಲಿಯೇ ತ್ರಿಫೇಸ್ ಕೊಟ್ಟರೆ ರೈತರು ಆರಾಮಾಗಿರುತ್ತಾರೆ ಎಂದರು.
    ಸೆಸ್ಕ್‌ನ ಅಧೀಕ್ಷಕ ಇಂಜಿನಿಯರ್ ಕೃಷ್ಣಮೂರ್ತಿ ಮಾತನಾಡಿ, ಕೆಲ ದಿನದ ಹಿಂದೆ ಬೆಳಗ್ಗೆ 4 ಹಾಗೂ ರಾತ್ರಿ 3 ಗಂಟೆ ತ್ರಿಪೇಸ್ ಕೊಡಲಾಗುತ್ತಿತ್ತು. ಪ್ರಸ್ತುತ ರಾಜ್ಯದಲ್ಲಿಯೇ ಬೆಳಗ್ಗೆ ಹಾಗೂ ರಾತ್ರಿ ತಲಾ ಮೂರು ಗಂಟೆ ಪೂರೈಕೆಯಾಗುತ್ತಿದೆ. ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಯಲಿದೆ. ಇನ್ನು ಹಗಲಿನಲ್ಲಿಯೇ ತ್ರಿಪೇಸ್ ಕೊಡುವ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದ ಅವರು, ಪಾಂಡವಪುರ ತಾಲೂಕು ಲಕ್ಷ್ಮೀಸಾಗರ ಗ್ರಾಮದ ಮನೆಯೊಂದರಲ್ಲಿ ವಿದ್ಯುತ್ ಅವಘಡ ಸಂಭವಿಸಿ ವಸ್ತುಗಳಿಗೆ ಹಾನಿಯಾಗಿರುವುದಕ್ಕೆ ಸಂಬಂಧಿಸಿದಂತೆ ಮನೆಯೊಳಗೆ ಅವಘಡ ಸಂಭವಿಸಿದರೆ ಪರಿಹಾರವನ್ನು ಇಲಾಖೆಯಿಂದ ಕೊಡಲಾಗುವುದಿಲ್ಲ. ಒಂದು ವೇಳೆ ಹೊರಗೆ ಸಮಸ್ಯೆಯಾದರೆ ಮಾತ್ರ ಇಲಾಖೆಯಿಂದ ಪರಿಹಾರ ನೀಡಬಹುದು. ಆದರೂ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಕಚೇರಿಗೆ ಸಲ್ಲಿಸಲಾಗಿದೆ ಎಂದರು.
    ಸಂಪರ್ಕ ಕಲ್ಪಿಸಲು ಕ್ರಮ ವಹಿಸಿ: ಸುಮಲತಾ ಮಾತನಾಡಿ, ಜಿಲ್ಲೆಯ ಕುರಿಕೆಂಪನದೊಡ್ಡಿ ಸೇರಿದಂತೆ ನಾಗಮಂಗಲ ತಾಲೂಕಿನ ವಿವಿಧೆಡೆ ಗ್ರಾಮಠಾಣಾದಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ, ಗ್ರಾಮಠಾಣಾದಲ್ಲಿ ಅನಧಿಕೃತವಾಗಿ ಲೇಔಟ್ ಮಾಡಿ ಮಾರಾಟ ಮಾಡಿರುತ್ತಾರೆ. ಇಂತಹ ಪ್ರಕರಣಗಳನ್ನು ಗಮನಿಸಬೇಕು. ಅಂತೆಯೇ ವಿದ್ಯುತ್ ಸಂಪರ್ಕ ಹೊಂದಿಲ್ಲದ ಮನೆಗಳಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
    ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಮಾತನಾಡಿ, ಮಿಮ್ಸ್ ಪಕ್ಕದ ನಿವಾಸಿಗಳನ್ನು ಚಿಕ್ಕಮಂಡ್ಯದಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಸ್ಥಳಾಂತರ ಮಾಡಬೇಕಿದೆ. ಆದ್ದರಿಂದ ಅಲ್ಲಿನ ಮನೆಗಳಿಗೆ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಲಿಸಿ. ಅಂತೆಯೇ ಮಿಮ್ಸ್‌ನಲ್ಲಿ ಪ್ರಸ್ತುತ ಬಳಕೆಯಾಗುತ್ತಿರುವ 350 ಕೆವಿ ವಿದ್ಯುತ್ ಅನ್ನು 1500 ಕೆವಿ ಏರಿಕೆ ಮಾಡುವ ಸಂಬಂಧ ಪ್ರಸ್ತಾವನೆ ಬಂದಿದೆ. ಆ ಕೆಲಸವನ್ನು ಬೇಗ ಮುಗಿಸಿಕೊಡುವಂತೆ ತಿಳಿಸಿದರು. 1500 ಮನೆಗೆ ಕೇವಲ 98 ಅರ್ಜಿ: ಗೃಹಭಾಗ್ಯ ಯೋಜನೆಯಡಿ ಮಂಡ್ಯ, ಮಳವಳ್ಳಿ, ನಾಗಮಂಗಲ ಮತ್ತು ಮದ್ದೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ 1500 ಮನೆಗೆ ಕೇವಲ 98 ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಜಿಲ್ಲಾ ಕಾರ್ಮಿಕ ಅಧಿಕಾರಿ ಮಂಜುಳಾ ಮಾತನಾಡಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಸಲ್ಲಿಸಿರುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅರ್ಜಿ ಪರಿಶೀಲಿಸಿ ನಿಯಮಾನುಸಾರ ಮೊತ್ತ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
    ಇದಕ್ಕೆ ಆಕ್ಷೇಪಿಸಿದ ಸುಮಲತಾ, 1500 ಮನೆಗಳಿಗೆ 98 ಅರ್ಜಿಗಳಷ್ಟೇ ಬಂದಿದೆ ಎಂದರೆ ಸಾಮಾನ್ಯ ವಿಷಯವಲ್ಲ. ಎಷ್ಟೋ ಜನರು ಮನೆಯಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಿರುವಾಗ ಅರ್ಜಿಯೇ ಬಂದಿಲ್ಲದಿರುವುದರ ಬಗ್ಗೆ ಕಾರಣ ತಿಳಿದುಕೊಳ್ಳಬೇಕು. ಬಹುಶಃ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಿಲ್ಲ. ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಅವಕಾಶ ಇದ್ದಾಗ ಬಳಸಿಕೊಂಡು ಅರ್ಹರಿಗೆ ಮನೆ ಕೊಡಬೇಕು ಎಂದು ಸೂಚನೆ ನೀಡಿದರು.
    ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ದಿಶಾ ಸಮಿತಿ ಸದಸ್ಯರಾದ ಬೇಲೂರು ಸೋಮಶೇಖರ್, ಅರುಣಕುಮಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts