More

    ಜಿಲ್ಲೆಯ ಸಮಸ್ಯೆ ಮರೆಮಾಚಿ ಜನರಿಗೆ ವಂಚನೆ

    ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ಕಸ್ತೂರಿರಂಗನ್ ವರದಿ, ಡೀಮ್ಡ್ ಅರಣ್ಯ, ಸೆಕ್ಷನ್ 4(1) ಇನಾಂ ಭೂಮಿ, ಸೊಪ್ಪಿನ ಬೆಟ್ಟ, ಅರಣ್ಯ, ಕಂದಾಯ ಭೂಮಿ ಸಮಸ್ಯೆಗಳನ್ನು ಲೋಕಸಭೆ ಚುನಾವಣೆಯಲ್ಲಿ ಮರೆಮಾಚಿ ಜನಪ್ರತಿನಿಧಿಗಳು ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್‌ಕುಮಾರ್ ಆರೋಪಿಸಿದರು.

    ಕಸ್ತೂರಿ ರಂಗನ್ ವರದಿ, ಡೀಮ್ಡ್ ಫಾರೆಸ್ಟ್ ವಿಚಾರಗಳು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚರ್ಚೆಗೆ ಬರಬೇಕಿತ್ತು. ಆದರೆ ಈ ವಿಚಾರಗಳಿಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಎರಡೂ ರಾಷ್ಟ್ರೀಯ ಪಕ್ಷಗಳು ನಡೆದುಕೊಂಡಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಅಕ್ರಮ-ಸಕ್ರಮ, ದರಕಾಸ್ತು ಮತ್ತಿತರ ರೈತರ ಭೂಮಿಗಳನ್ನು 50-60 ವರ್ಷದಿಂದ ಪೋಡಿ ಮಾಡುತ್ತಿಲ್ಲ. ಪೋಡಿಗೆ ಬೇಕಾಗುವ 1 ರಿಂದ 5 ನಮೂನೆ ತಯಾರಿಸಬೇಕಾದ ಕಂದಾಯ ಅಧಿಕಾರಿಗಳು ಈವರೆಗೆ ಒಂದೇ ಒಂದು ನಮೂನೆ ಮಾಡಿಸಲಿಲ್ಲ. ರೈತರಿಗೆ ನೀಡಿದ ಕಂದಾಯ ಭೂಮಿಯನ್ನು 1 ರಿಂದ 5 ನಮೂನೆ ಮಾಡಿಸಲು ಮೊದಲೇ ಅರಣ್ಯ ಇಲಾಖೆಗೆ ಅಭಿಪ್ರಾಯಕ್ಕಾಗಿ ಕಳುಹಿಸಿ ಸಮಸ್ಯೆಯನ್ನು ಜೀವಂತವಾಗಿ ಇಡುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.
    ಅರಣ್ಯ, ಕಂದಾಯ ಭೂಮಿ ಸಮಸ್ಯೆ ಇತ್ಯರ್ಥಪಡಿಸಬೇಕಿರುವ ಎಫ್‌ಎಸ್‌ಒಗಳು ಸಿವಿಲ್ ನ್ಯಾಯಾಧೀಶರಂತೆ ಕಾರ್ಯನಿರ್ವಹಿಸಬೇಕು ಎಂಬ ನಿಯಮವಿದೆ. ಆದರೆ ಇವರನ್ನು ಸ್ವ ಇಚ್ಛೆಯಿಂದ ಕೆಲಸ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಬಿಡುತ್ತಿಲ್ಲ. ಜಿಲ್ಲೆಯ 238 ಕಡತಗಳನ್ನು ಎಫ್‌ಎಸ್‌ಒ ಕಚೇರಿಯಲ್ಲಿ 3 ವರ್ಷದಿಂದ ಕೊಳೆಯುವಂತೆ ಮಾಡಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.
    ಜಿಲ್ಲೆಯ ಕೆಡಿಪಿ ಸಭೆ ನಿರ್ಣಯದಂತೆ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುವ ಸರ್ವೇ ನಂಬರ್‌ಗಳನ್ನು ಸೆಕ್ಷನ್ 4(1) ವ್ಯಾಪ್ತಿಯಿಂದ ಕೈಬಿಟ್ಟು ನಗರದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದಿದೆ. ಇದಕ್ಕೆ ಮನ್ನಣೆ ನೀಡಬೇಕು. ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಯೋಜನೆಯ ವರದಿಗೆ ಮತ್ತೊಮ್ಮೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಾಭಿಪ್ರಾಯ ಪಡೆಯಬೇಕು ಎಂದು ಒತ್ತಾಯಿಸಿದರು.
    ಎಲ್ಲ ಸಮಸ್ಯೆಗಳನ್ನು ಜೀವಂತವಾಗಿಟ್ಟಿರುವುದರಿಂದ ಜಿಲ್ಲೆಯ ನಿವೇಶನ ರಹಿತರಿಗೆ ನಿವೇಶನ ನೀಡಲು ಮತ್ತು ನಮೂನೆ 50,53, 57, 94 ಸಿ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಮತ್ತು ಕಂದಾಯ ಭೂಮಿ ಜಂಟಿ ಸರ್ವೇಗೆ ಬಂದವರು ಸರ್ವೇ ಯಾವ ರೀತಿ ಆಗಿದೆ? ಜನವಸತಿ ಪ್ರದೇಶ, ಸಾರ್ವಜನಿಕ ಪ್ರದೇಶಗಳಿಗೆ ಜಾಗ ಬಿಟ್ಟು ಸರ್ವೇ ಮಾಡಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಈವರೆಗೆ ಪ್ರಸ್ತಾಪಿಸದೆ ಜನರನ್ನು ಕತ್ತಲೆಯಲ್ಲಿಟ್ಟಿದ್ದಾರೆ. ಜಂಟಿ ಸರ್ವೇ ಎಂಬುದು ಕಣ್ಣೊರೆಸುವ ತಂತ್ರ ಎಂದು ಟೀಕಿಸಿದರು. ಸಮಿತಿ ಸಂಚಾಲಕ ಕೆ.ಕೆ ರಘು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts